Site icon Vistara News

WTC Final 2023: ಆಸ್ಟ್ರೇಲಿಯಾ ವಿರುದ್ಧ ಹೊಸ ಮೈಲುಗಲ್ಲು ತಲುಪಿದ ವಿರಾಟ್​ ಕೊಹ್ಲಿ

WTC Final 2023

ಲಂಡನ್​: ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​(WTC Final 2023) ಪಂದ್ಯ ರೋಚಕ ಘಟ್ಟ ತಲುಪಿದ್ದು ಭಾರತ ತಂಡದ ಗೆಲುವಿಗೆ 280 ರನ್‌ ಅಗತ್ಯವಿದೆ. ಸದ್ಯ ಭಾರತ 3 ವಿಕೆಟ್‌ ಕಳೆದುಕೊಂಡು 164 ರನ್‌ ಮಾಡಿದೆ. ಭಾನುವಾರ ಅಂತಿಮ ದಿನವಾಗಿದೆ. ವಿರಾಟ್‌ ಕೊಹ್ಲಿ-ಅಜಿಂಕ್ಯ ರಹಾನೆ(Ajinkya Rahane) ಬ್ಯಾಟಿಂಗ್​ ಕಾಯ್ದುಕೊಂಡಿದ್ದಾರೆ. ಇದೇ ಪಂದ್ಯದಲ್ಲಿ ವಿರಾಟ್​ ಕೊಹ್ಲಿ(Virat Kohli) ನೂತನ ಮೈಲುಗಲ್ಲೊಂದನ್ನು ತಲುಪಿದ್ದಾರೆ.

60 ಎಸೆತಗಳಲ್ಲಿ 44 ರನ್​ಗಳಿಸಿ ಬ್ಯಾಟಿಂಗ್​ ಕಾಯ್ದುಕೊಂಡಿರುವ ವಿರಾಟ್​ ಕೊಹ್ಲಿ ಈ ಮೊತ್ತ ದಾಖಲಿಸುತ್ತಿದ್ದಂತೆ ಟೆಸ್ಟ್ ಕ್ರಿಕೆಟ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ 2 ಸಾವಿರ ರನ್ ಪೂರೈಸಿದ್ದಾರೆ. ಈ ಮೂಲಕ ಈ ಸಾಧನೆಗೈದ ಭಾರತದ 5ನೇ ಬ್ಯಾಟರ್​ ಎನಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ಈ ಸಾಧನೆ ಮಾಡಿದ ಭಾರತೀಯರ ಆಟಗಾರರೆಂದರೆ ಸಚಿನ್ ತೆಂಡೂಲ್ಕರ್(sachin tendulkar) (74 ಟೆಸ್ಟ್ 3630 ರನ್),​ ವಿವಿಎಸ್ ಲಕ್ಷ್ಮಣ್ (54 ಪಂದ್ಯ 2434 ರನ್)​, ರಾಹುಲ್ ದ್ರಾವಿಡ್ (60 ಪಂದ್ಯ 2143 ರನ್) ಮತ್ತು ಚೇತೇಶ್ವರ ಪೂಜಾರ (45 ಪಂದ್ಯ, 2074 ರನ್)​ ಕ್ರಮವಾಗಿ ಆಸೀಸ್​ ವಿರುದ್ಧ ಈ ಮೊತ್ತವನ್ನು ದಾಖಲಿಸಿದ್ದಾರೆ.

ಸದ್ಯ ಕೊಹ್ಲಿ 2037* ರನ್​ ಕಲೆಹಾಕಿದ್ದಾರೆ. ಅಂತಿಮ ದಿನವಾರ ಭಾನುವಾರ ಕೊಹ್ಲಿ ಅವರು ಈಗ ಬಾರಿಸಿರುವ 44 ರನ್​ ಹೊರತುಪಡಿಸಿ 106 ರನ್ ಬಾರಿಸಿದರೆ ದ್ರಾವಿಡ್ ಮತ್ತು ಪೂಜಾರ ದಾಖಲೆಯನ್ನು ಮುರಿಯಲಿದ್ದಾರೆ. ಈ ಮೂಲಕ ತೃತೀಯ ಸ್ಥಾನಕ್ಕೆ ಏರಲಿದ್ದಾರೆ.

ಇದನ್ನೂ ಓದಿ WTC Final 2023: ವಿಶ್ವ ಟೆಸ್ಟ್​ ಡ್ರಾ ಗೊಂಡರೆ ಯಾರಾಗಲಿದ್ದಾರೆ ವಿಜೇತರು?

ಈ ಟೆಸ್ಟ್‌ ಪಂದ್ಯವನ್ನು ಯಾರೇ ಗೆದ್ದರೂ ಇತಿಹಾಸವೊಂದು ಸೃಷ್ಟಿಯಾಗಲಿದೆ. ಈಗಾಗಲೇ ಭಾರತ ಮತ್ತು ಆಸ್ಟ್ರೇಲಿಯ ತಂಡಗಳೆರಡೂ ಏಕದಿನ ವಿಶ್ವಕಪ್‌ ಹಾಗೂ ಟಿ20 ವಿಶ್ವಕಪ್‌ ಗೆದ್ದಿವೆ. ಹೀಗಾಗಿ ಟೆಸ್ಟ್‌ ವಿಶ್ವಕಪ್‌ ಗೆದ್ದರೆ ಈ ಮೂರು ಮಾದರಿಯ ವಿಶ್ವ ಕಪ್​ ಗೆದ್ದ ಮೊದಲ ತಂಡ ಎಂಬ ಹಿರಿಮೆಗೆ ಪಾತ್ರವಾಗಲಿದೆ.

Exit mobile version