ಲಂಡನ್: ಬಹುನಿರೀಕ್ಷಿತ ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್(WTC Final 2023) ಸಮರಕ್ಕೆ ದಿನಗಣನೆ ಆರಂಭವಾಗಿದೆ. ಉಭಯ ತಂಡಗಳ ಈ ಪ್ರಶಸ್ತಿ ಸಮರ ಜೂನ್ 7 ರಿಂದ 11ರವರೆಗೆ ಲಂಡನ್ನ ದಿ ಓವಲ್ ಮೈದಾನದಲ್ಲಿ ನಡೆಯಲಿದೆ. ಇದೀಗ ಈ ಪಂದ್ಯಕ್ಕೆ ಯಾವ ಚೆಂಡನ್ನು ಬಳಸುವುದಾಗಿ ಐಸಿಸಿ ಮಹತ್ವದ ತೀರ್ಮನ ಕೈಗೊಂಡಿದೆ. ಈ ಬಾರಿ ಡ್ಯೂಕ್ಸ್(Dukes Ball) ಸಂಸ್ಥೆಯ ಚೆಂಡಿನ ಬದಲು ಕೂಕಾಬುರಾ ಚೆಂಡು(Kookaburra balls) ಬಳಕೆ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.
ಕೆಲ ದಿನಗಳ ಹಿಂದಷ್ಟೇ ಈ ಪಂದ್ಯಕ್ಕೆ ಸಿದ್ಧವಾಗುತ್ತಿರುವ ಪಿಚ್ನ ಫೋಟೊಗಳನ್ನು ಐಸಿಸಿ ಪ್ರಕಟಿಸಿತ್ತು. ಇದೀಗ ಈ ಪಂದ್ಯಕ್ಕೆ ಬಳಕೆಯಾಗುವ ಚೆಂಡಿನ ಬಗ್ಗೆ ಮಾಹಿತಿಯೊಂದು ಹೊರಬಿದ್ದಿದೆ. ಮೊದಲ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾರತ ಮತ್ತು ನ್ಯೂಜಿಲ್ಯಾಂಡ್ ಪ್ರಶಸ್ತಿಗಾಗಿ ಕಾದಾಟ ನಡೆಸಿತ್ತು. ಇಲ್ಲಿ ಕಿವೀಸ್ ಚೊಚ್ಚಲ ಟ್ರೋಫಿ ಎತ್ತಿ ಸಂಭ್ರಮಿಸಿತ್ತು. ಈ ಪಂದ್ಯದಲ್ಲಿ ಡ್ಯೂಕ್ಸ್ ಸಂಸ್ಥೆಯ ಚೆಂಡನ್ನು ಬಳಸಲಾಗಿತ್ತು. ಆದರೆ ಈ ಬಾರಿ ಕೂಕಾಬುರಾ ಚೆಂಡು ಬಳಸಲಾಗುತ್ತದೆ ಎಂದು ತಿಳಿದುಬಂದಿದೆ.
ಡ್ಯೂಕ್ಸ್ ಚೆಂಡಿನ ಗುಣಮಟ್ಟದ ಬಗ್ಗೆ ಇತ್ತೀಚೆಗೆ ಇಂಗ್ಲೆಂಡ್‌ನ ಕೌಂಟಿ ತಂಡಗಳು ಅಸಮಾಧನ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಐಸಿಸಿ ಈ ಮಹತ್ವದ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ. ಒಂದೊಮ್ಮೆ ಕೂಕಾಬುರಾ ಚೆಂಡು ಬಳಕೆಯಾದಲ್ಲಿ ಇಂಗ್ಲೆಂಡ್ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿ ಈ ಚೆಂಡನ್ನು ಬದಲಾಯಿಸಿದಂತಾಗಲಿದೆ.
ಆಸ್ಟ್ರೇಲಿಯಾ, ಕಿವೀಸ್, ದಕ್ಷಿಣ ಆಫ್ರಿಕಾ, ಪಾಕಿಸ್ತಾನ ಸೇರಿದಂತೆ ಹೆಚ್ಚಿನ ತಂಡಗಳು ತಮ್ಮ ತಮ್ಮ ದೇಶದಲ್ಲಿ ಟೆಸ್ಟ್ ಕ್ರಿಕೆಟ್ ಆಡಲು ಕೂಕಬುರಾ ಕಂಪನಿಯ ಚೆಂಡನ್ನು ಬಳಸುತ್ತಾರೆ. ಈ ಚೆಂಡಿನ ಒಳಗಿನ ಎರಡು ಪದರಗಳನ್ನು ಕೈಯಲ್ಲೇ ಹೊಲಿದಿರುತ್ತಾರೆ. ಕೂಕಾಬುರಾ ಚೆಂಡು ಹೊಳಪು ಕಳೆದುಕೊಂಡಂತೆ ಎತ್ತರಕ್ಕೆ ಪುಟಿಯಬಲ್ಲದು. ಹೀಗಾಗಿ ವೇಗಿಗಳಿಗೆ ಇದು ಬೌನ್ಸರ್ ಎಸೆಯಲು ನೆರವಾಗಲಿದೆ.
ಫೈನಲ್ ಪಂದ್ಯಕ್ಕೆ ಉಭಯ ತಂಡಗಳು
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆ.ಎಸ್ ಭರತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯ್ದೇವ್ ಉನಾದ್ಕತ್, ಇಶಾನ್ ಕಿಶನ್ (ವಿಕೆಟ್ ಕೀಪರ್). ಸ್ಟ್ಯಾಂಡ್ ಬೈ ಆಟಗಾರರು: ಋತುರಾಜ್ ಗಾಯಕ್ವಾಡ್, ಮುಖೇಶ್ ಕುಮಾರ್, ಸೂರ್ಯಕುಮಾರ್ ಯಾದವ್.
ಆಸ್ಟ್ರೇಲಿಯಾ ಟೆಸ್ಟ್ ತಂಡ: ಪ್ಯಾಟ್ ಕಮಿನ್ಸ್ (ನಾಯಕ), ಸ್ಕಾಟ್ ಬೊಲೆಂಡ್, ಅಲೆಕ್ಸ್ ಕೇರಿ, ಕ್ಯಾಮರೂನ್ ಗ್ರೀನ್, ಮಾರ್ಕಸ್ ಹ್ಯಾರಿಸ್, ಜೋಶ್ ಹ್ಯಾಝಲ್ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಉಸ್ಮಾನ್ ಖವಾಜ, ಮಾರ್ನಸ್ ಲಾಬುಶೇನ್, ನಥಾನ್ ಲಿಯೋನ್, ಮಿಚೆಲ್ ಮಾರ್ಷ್, ಟಾಡ್ ಮರ್ಫಿ, ಮ್ಯಾಟ್ ರೆನ್‌ಶಾ, ಸ್ಟೀವನ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಡೇವಿಡ್ ವಾರ್ನರ್.