Site icon Vistara News

WTC Final 2023: ಟೆಸ್ಟ್ ವಿಶ್ವಕಪ್​ಗೆ ಆಯ್ಕೆಯಾದ ಅಂಪೈರ್​ಗಳು ಯಾರು? ಇಲ್ಲಿದೆ ಮಾಹಿತಿ

ICC World Test Championship umpires

ಲಂಡನ್​: ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್​ ಪಂದ್ಯಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್​ ಸಂಸ್ಥೆ (ಐಸಿಸಿ) ಅಂಪೈರ್​ಗಳನ್ನು ನೇಮಕ ಮಾಡಿದೆ. ಇಂಗ್ಲೆಂಡ್‌ನ‌ ರಿಚರ್ಡ್‌ ಇಲ್ಲಿಂಗ್‌ವರ್ತ್‌ ಮತ್ತು ನ್ಯೂಜಿಲ್ಯಾಂಡ್‌ನ‌ ಕ್ರಿಸ್‌ ಗಫಾನಿ ಅವರು ಫೈನಲ್‌ ಪಂದ್ಯದ ಫೀಲ್ಡ್‌ ಅಂಪೈರ್​ಗಳಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.

ವೆಸ್ಟ್‌ ಇಂಡೀಸ್‌ನ ರಿಚಿ ರಿಚರ್ಡ್‌ಸನ್‌ ಮ್ಯಾಚ್‌ ರೆಫ್ರಿ ಆಗಿ ಆಯ್ಕೆಯಾಗಿದ್ದಾರೆ. 59 ವರ್ಷಗಳ ಅನುಭವಿ ರಿಚರ್ಡ್‌ ಇಲ್ಲಿಂಗ್‌ವರ್ತ್‌ ಅವರಿಗೆ ಇದು 64ನೇ ಟೆಸ್ಟ್​ ಪಂದ್ಯವಾಗಿದೆ. ಹಾಗೆಯೇ 48 ವರ್ಷದ ಕ್ರಿಸ್‌ ಗಫಾನಿ ಪಾಲಿಗೆ 49ನೇ ಟೆಸ್ಟ್‌ ಪಂದ್ಯವಾಗಲಿದೆ. ಇಲ್ಲಿಂಗ್‌ವರ್ತ್‌ ಪಾಲಿಗೆ ಇದು ಸತತ 2ನೇ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಆಗಿದೆ. ಚೊಚ್ಚಲ ಆವೃತ್ತಿಯ ಭಾರತ ಮತ್ತು ನ್ಯೂಜಿಲ್ಯಾಂಡ್‌ ನಡುವಿನ ಫೈನಲ್‌ನಲ್ಲಿಯೂ ಅವರು ಕರ್ತವ್ಯ ನಿಭಾಯಿಸಿದ್ದರು.

ಇದನ್ನೂ ಓದಿ WTC Final 2023: ಜೈಸ್ವಾಲ್​ಗೆ ಉಪಯುಕ್ತ ಬ್ಯಾಟಿಂಗ್ ಸಲಹೆ ನೀಡಿದ ಕೊಹ್ಲಿ; ವಿಡಿಯೊ ವೈರಲ್​

ಹೌಸ್​ ಫುಲ್ ನಿರೀಕ್ಷೆ

ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧದ ಈ ಪ್ರಶಸ್ತಿ ಸಮರಕ್ಕೆ ಕನಿಷ್ಠ ಮೊದಲ 4 ದಿನಗಳ ಆಟದ ವೇಳೆ ಸ್ಟೇಡಿಯಂ ಫುಲ್​ ಆಗುವ ಸಾಧ್ಯತೆ ಇದೆ ಎಂದು ಇಸಿಬಿ ತಿಳಿಸಿದೆ. “ವಿಶ್ವದ ಎರಡು ಬಲಿಷ್ಠ ಟೆಸ್ಟ್‌ ತಂಡಗಳು ಇಲ್ಲಿ ಸ್ಪರ್ಧೆಗೆ ಇಳಿಯಲಿವೆ. ಸಹಜವಾಗಿಯೇ ಇಂಗ್ಲೆಂಡ್‌ನ‌ ಕ್ರಿಕೆಟ್‌ ಪ್ರೇಮಿಗಳಿಗೆ ಈ ಪಂದ್ಯದ ಬಗ್ಗೆ ವಿಶೇಷ ಕುತೂಹಲ ಮೂಡಿದೆ. ಈಗಾಗಲೇ ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೀಗಾಗಿ ಮೊದಲ 4 ದಿನ ಓವಲ್‌ ಸ್ಟೇಡಿಯಂ ಭರ್ತಿ ಆಗುವ ಎಲ್ಲ ಸಾಧ್ಯತೆ ಇದೆ” ಎಂಬುದಾಗಿ ಐಸಿಸಿ ಜಿಎಂ ವಾಸಿಮ್‌ ಖಾನ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇತ್ತಂಡಗಳ ಈ ಈ ಫೈನಲ್‌ ಪಂದ್ಯ ಜೂನ್‌ 7ರಿಂದ 11ರ ತನಕ ಸಾಗಲಿದೆ. ಒಂದೊಮ್ಮೆ ಮಳೆ ಬಂದು ಈ 5 ದಿನಗಳ ಆಟಕ್ಕೆ ಹಿನ್ನಡೆಯಾದರೆ ಒಂದು ಹೆಚ್ಚುವರಿ ದಿನವನ್ನು ನಿಗದಿಪಡಿಸಲಾಗಿದೆ. ಜೂನ್​ 12 ಮೀಸಲು ದಿನವಾಗಿದೆ.

Exit mobile version