ನವದೆಹಲಿ: ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧದ ಬಹುನಿರೀಕ್ಷಿತ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಈಗಾಗಲೇ ಭಾರತದ ಮೊದಲ ಬ್ಯಾಚ್ ಲಂಡನ್ ತಲುಪಿದ್ದು ಅಭ್ಯಾಸದಲ್ಲಿ ನಿರತವಾಗಿದೆ. ಈ ಮಧ್ಯೆ ಭಾರತ ತಂಡದಲ್ಲಿ ಮಹತ್ವದ ಬದಲಾವಣೆಯೊಂದನ್ನು ಮಾಡಲಾಗಿದೆ. ಮೀಸಲು ಆಟಗಾರನಾಗಿ ಆಯ್ಕೆಯಾಗಿದ್ದ ಋತುರಾಜ್ ಗಾಯಕ್ವಾಡ್ ಬದಲಿಗೆ ಇದೀಗ ಯಶಸ್ವಿ ಜೈಸ್ವಾಲ್ ಅವರನ್ನು ಆಯ್ಕೆ ಮಾಡಲಾಗಿದೆ.
ಈ ಹಿಂದೆ ಸ್ಟ್ಯಾಂಡ್ ಬೈ ಆಟಗಾರರಾಗಿ ಋತುರಾಜ್ ಗಾಯಕ್ವಾಡ್, ಮುಖೇಶ್ ಕುಮಾರ್, ಸೂರ್ಯಕುಮಾರ್ ಯಾದವ್ ಅವರು ಪ್ರಧಾನ ತಂಡದೊಂದಿಗೆ ಆಯ್ಕೆಯಾಗಿದ್ದರು. ಆದರೆ ಇದೀಗ ಗಾಯಕ್ವಾಡ್ ಅವರು ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಈ ಹಿನ್ನಲೆ ಅವರು ಫೈನಲ್ ಪಂದ್ಯದಿಂದ ಹಿಂದೆ ಸರಿದಿದ್ದಾರೆ. ಗಾಯಕ್ವಾಡ್ ಅವರ ಮದುವೆ ಕಾರ್ಯಕ್ರಮ ಜೂನ್ 2-3 ತಾರಿಕಿಗೆ ನಡೆಯಲಿದೆ. ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧದ ಈ ಪ್ರಶಸ್ತಿ ಸಮರ ಜೂನ್ 7 ರಿಂದ 11ರವರೆಗೆ ಲಂಡನ್ನ ದಿ ಓವಲ್ ಮೈದಾನದಲ್ಲಿ ನಡೆಯಲಿದೆ.
ಗಾಯಕ್ವಾಡ್ ಅವರು ಈ ಪಂದ್ಯದಿಂದ ಹಿಂದೆ ಸರಿದ ಕಾರಣ ಅವರ ಬದಲಿಗೆ ಮುಂಬೈ ರಣಜಿ ತಂಡದ ಯುವ ಎಡಗೈ ಆಟಗಾರ ಯಶಸ್ವಿ ಜೈಸ್ವಾಲ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಾಗಿದೆ ಎಂದು ಬಿಸಿಸಿಐ ತಿಳಿಸಿದೆ. ಐಪಿಎಲ್ನಲ್ಲಿ ಅಮೋಘ ಪ್ರದರ್ಶನ ತೋರಿದ ಜೈಸ್ವಾಲ್ ಈ ಆವೃತ್ತಿಯಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನದ ಜತೆಗೆ ಶತಕವನ್ನು ಬಾರಿಸಿ ಮಿಂಚಿದ್ದರು. ರಣಜಿ ಕ್ರಿಕೆಟ್ನಲ್ಲಿಯೂ ಹಲವು ಶತಕ ಮತ್ತು ದ್ವಿಶತಕ ಬಾರಿಸಿ ಮಿಂಚಿದ್ದರು. ಇದು ಅವರಿಗೆ ಚೊಚ್ಚಲ ರಾಷ್ಟ್ರೀಯ ತಂಡದ ಕರೆಯಾಗಿದೆ.
ಇದನ್ನೂ ಓದಿ WTC Final 2023: ಲಂಡನ್ನಲ್ಲಿ ಕಠಿಣ ಫೀಲ್ಡಿಂಗ್ ಅಭ್ಯಾಸ ನಡೆಸಿದ ಟೀಮ್ ಇಂಡಿಯಾ; ವಿಡಿಯೊ ವೈರಲ್
ವಿರಾಟ್ ಕೊಹ್ಲಿ, ಮೊಹಮ್ಮದ್ ಸಿರಾಜ್, ಇತರ ಐಪಿಎಲ್ ತಂಡಗಳ ಆಟಗಾರರಾದ ಆರ್. ಅಶ್ವಿನ್, ಅಕ್ಷರ್ ಟೇಲ್, ಶಾರ್ದೂಲ್ ಠಾಕೂರ್, ಉಮೇಶ್ ಯಾದವ್, ಜೈದೇವ್ ಉನಾದ್ಕತ್ ಮತ್ತು ಚೇತೇಶ್ವರ್ ಪೂಜಾರ ಅವರು ಮೊದಲ ಬ್ಯಾಚ್ನಲ್ಲಿ ಲಂಡನ್ಗೆ ಆಗಮಿಸಿ ಅಭ್ಯಾಸ ನಡೆಸುತ್ತಿದ್ದಾರೆ. ಅಂತಿಮ ಬ್ಯಾಚ್ನಲ್ಲಿ ನಾಯಕ ರೋಹಿತ್ ಶರ್ಮ, ರವೀಂದ್ರ ಜಡೇಜ, ಇಶಾನ್ ಕಿಶನ್, ಶುಭಮನ್ ಗಿಲ್, ಮೊಹಮ್ಮದ್ ಶಮಿ, ಕೆ.ಎಸ್. ಭರತ್ ಮತ್ತು ಅಜಿಂಕ್ಯ ರಹಾನೆ ಐಪಿಎಲ್ ಫೈನಲ್ ಮುಗಿದ ತಕ್ಷಣವೇ ಲಂಡನ್ಗೆ ವಿಮಾನ ಏರಲಿದ್ದಾರೆ. ಇವರ ಜತೆಗೆ ಯಶಸ್ವಿ ಜೈಸ್ವಾಲ್ ಕೂಡ ಇರಲಿದ್ದಾರೆ.
ಪರಿಷ್ಕೃತ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆ.ಎಸ್ ಭರತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯ್ದೇವ್ ಉನಾದ್ಕತ್, ಇಶಾನ್ ಕಿಶನ್ (ವಿಕೆಟ್ ಕೀಪರ್). ಸ್ಟ್ಯಾಂಡ್ ಬೈ ಆಟಗಾರರು: ಯಶಸ್ವಿ ಜೈಸ್ವಾಲ್, ಮುಖೇಶ್ ಕುಮಾರ್, ಸೂರ್ಯಕುಮಾರ್ ಯಾದವ್.