ದುಬೈ: ಇಂಗ್ಲೆಂಡ್(IND vs ENG) ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ಕಳೆದುಕೊಂಡಿರುವ ಭಾರತಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕಪಟ್ಟಿಯಲ್ಲಿಯೂ(WTC Points Table) ಆಘಾತ ಉಂಟಾಗಿದೆ. ಈ ಸೋಲಿನಿಂದ ಮೂರು ಸ್ಥಾನಗಳ ಕುಸಿತ ಕಂಡಿದೆ. ಹೈದರಾಬಾದ್ನಲ್ಲಿ ಭಾನುವಾರ ಮುಕ್ತಾಯ ಕಂಡ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮ ಪಡೆ 28 ರನ್ಗಳ ಸೋಲಿಗೆ ತುತ್ತಾಗಿತ್ತು.
ಐಸಿಸಿ ಪ್ರತಿ ಟೆಸ್ಟ್ ಪಂದ್ಯ ಮುಗಿದ ತಕ್ಷಣ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕಪಟ್ಟಿಯನ್ನು ಪರಿಷ್ಕರಿಸಿ ಪ್ರಕಟ ಮಾಡುತ್ತದೆ. ಇಂಗ್ಲೆಂಡ್ ವಿರುದ್ಧದ ಸೋಲುವ ಮುನ್ನ 2ನೇ ಸ್ಥಾನದಲ್ಲಿದ್ದ ಭಾರತ ಇದೀಗ ನೂತನ ಅಂಕಪಟ್ಟಿಯಲ್ಲಿ ಮೂರು ಸ್ಥಾನಗಳ ಕುಸಿತ ಕಂಡು 5ನೇ ಸ್ಥಾನಕ್ಕೆ ಜಾರಿದೆ. ಗೆಲುವು ದಾಖಲಿಸಿದ ಇಂಗ್ಲೆಂಡ್ 21 ಪಾಯಿಂಟ್ಸ್ ಕಲೆಹಾಕುವಲ್ಲಿ ಯಶಸ್ವಿಯಾಗಿದೆ. ಆದರೆ, ಸ್ಥಾನಗಳ ಏರಿಕೆ ಕಂಡಿಲ್ಲ. ಈ ಹಿಂದೆ ಇದ್ದ 8ನೇ ಸ್ಥಾನದಲ್ಲೇ ಕಾಣಿಸಿಕೊಂಡಿದೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಭಾರತ ಇದುವರೆಗೆ 5 ಪಂದ್ಯಗಳನ್ನಾಡಿ ತಲಾ 2 ಗೆಲುವು ಮತ್ತು ಸೋಲು 1 ಡ್ರಾ ಮಾಡಿಕೊಂಡಿದೆ. ಆಸ್ಟ್ರೇಲಿಯಾ ತಂಡ (55%) ಅಗ್ರಸ್ಥಾನದಲ್ಲಿದ್ದರೆ, ದಕ್ಷಿಣ ಆಫ್ರಿಕಾ ತಂಡ (50%) ದ್ವಿತೀಯ ಸ್ಥಾನದಲ್ಲಿದೆ. ನ್ಯೂಜಿಲ್ಯಾಂಡ್ (50%) ಹಾಗೂ ಬಾಂಗ್ಲಾದೇಶ (50%) ತಂಡಗಳು ಕ್ರಮವಾಗಿ 3ನೇ ಮತ್ತು 4ನೇ ಸ್ಥಾನಗಳಲ್ಲಿದೆ.
ಹೈದರಾಬಾದ್ನ ರಾಜೀವ್ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ 6 ವಿಕೆಟ್ ನಷ್ಟಕ್ಕೆ 316 ರನ್ ಗಳಿಸಿದ್ದಲ್ಲಿಂದ 4ನೇ ದಿನದಾಟ ಆರಂಭಿಸಿದ ಇಂಗ್ಲೆಂಡ್ ತಂಡ 102.1 ಓವರ್ ಬ್ಯಾಟಿಂಗ್ ನಡೆಸಿ 420 ರನ್ಗೆ ಆಲೌಟ್ ಆಗುವ ಮೂಲಕ ಭಾರತಕ್ಕೆ 231 ರನ್ಗಳ ಗೆಲುವಿನ ಗುರಿ ನೀಡಿತು.
ಇದನ್ನೂ ಓದಿ IND vs ENG: ಟೀಮ್ ಇಂಡಿಯಾವನ್ನು ಮಣಿಸಿ ವಿಶೇಷ ದಾಖಲೆ ಬರೆದ ಇಂಗ್ಲೆಂಡ್
ಸಾಧಾರಣ ಮೊತ್ತದ ಗುರಿ ಬೆನ್ನಟ್ಟಿದ ಭಾರತಕ್ಕೆ ಆಂಗ್ಲರು ಸ್ಪಿನ್ ಅಸ್ತ್ರದ ಮೂಲಕ ಶಾಕ್ ನೀಡಿದರು. ಪಂದ್ಯವನ್ನು 28 ರನ್ಗಳಿಂದ ಗೆದ್ದು ಬೀಗಿದರು. ಭಾರತ 202 ರನ್ಗೆ ಸರ್ವಪತನ ಕಂಡಿತು. ಉತ್ಕೃಷ್ಟ ಮಟ್ಟದ ಸ್ಪಿನ್ ದಾಳಿ ನಡೆಸಿದ ಟಾಮ್ ಹಾರ್ಟ್ಲಿ 26.2 ಓವರ್ ಎಸೆದು ಕೇವಲ 62 ರನ್ ಬಿಟ್ಟುಕೊಟ್ಟು ಭಾರತದ ಕುಸಿತಕ್ಕೆ ಕಾರಣರಾದರು. ಒಟ್ಟು 7 ವಿಕೆಟ್ ಕಿತ್ತು ಮಿಂಚಿದರು. ಇವರ ಸ್ನಿನ್ ದಾಳಿಗೆ ತಡೆಯೊಡ್ಡುವಲ್ಲಿ ವಿಫಲವಾದ ಭಾರತೀಯ ಬ್ಯಾಟರ್ಗಳು ತರಗೆಲೆಯಂತೆ ಉದುರಿ ಹೋದರು.
ಶ್ರೀಕರ್ ಭರತ್ ಮತ್ತು ಆರ್. ಅಶ್ವಿನ್ ಸೇರಿಕೊಂಡು 8ನೇ ವಿಕೆಟ್ಗೆ ಉತ್ತಮ ಜತೆಯಾಟ ನಿಭಾಯಿಸಿ ಭಾರತಕ್ಕೆ ಗೆಲುವಿನ ಸಣ್ಣ ಆಸೆಯೊಂದನ್ನು ಚಿಗುರೊಡೆಯುವಂತೆ ಮಾಡಿದರು. ಆದರೆ, 4ನೇ ದಿನದಾಟ ಮುಗಿಯಲು ಮೂರು ಓವರ್ ಇರುವಾಗ ಉಭಯ ಆಟಗಾರರ ವಿಕೆಟ್ ಕೂಡ ಪತನಗೊಂಡಿತು. ಉಭಯ ಆಟಗಾರರು ಕೂಡ ತಲಾ 28 ರನ್ ಗಳಿಸಿ ಟಾಮ್ ಹಾರ್ಟ್ಲಿಗೆ ವಿಕೆಟ್ ಒಪ್ಪಿಸಿದರು. ಇಲ್ಲಿಗೆ ಭಾರತದ ಸೋಲು ಕೂಡ ಖಚಿತವಾಯಿತು. ಅಂತಿಮವಾಗಿ ಸಿರಾಜ್ ವಿಕೆಟ್ ಪತನದ ಮೂಲಕ ಇನ್ನೊಂದು ದಿನ ಬಾಕಿ ಇರುವಂತೆಯೇ ಪಂದ್ಯ ಮುಕ್ತಾಯ ಕಂಡಿತು.