ರಾಜ್ಕೋಟ್ : ಹಾರ್ದಿಕ್ ಪಾಂಡ್ಯ ನೇತೃತ್ವದ ಭಾರತ ತಂಡ ಶ್ರೀಲಂಕಾ ವಿರುದ್ಧದ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ 91 ರನ್ಗಳ ಅಧಿಕಾರಯುತ ಜಯ ಸಾಧಿಸಿದೆ. ಇದರೊಂದಿಗೆ ಸರಣಿಯೂ 2-1 ಅಂತರದಿಂದ ಭಾರತ ತಂಡದ ಪಾಲಾಗಿದೆ. ಪಂದ್ಯ ಹಾಗೂ ಸರಣಿ ಗೆಲುವಿಗಿಂತಲೂ ದಿನದ ಹೈಲೈಟ್ ಎನಿಸಿದ್ದು 32 ವರ್ಷದ ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ (Suryakumar Yadav). ಅವರು 51 ಎಸೆತಗಳಲ್ಲಿ 112 ರನ್ ಬಾರಿಸಿ ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ 3ನೇ ಶತಕದ ಸಾಧನೆ ಮಾಡಿದು. ಇದರೊಂದಿಗೆ ರೋಹಿತ್ ಶರ್ಮ ಅವರ ದಾಖಲೆಯನ್ನೂ ಸರಿಗಟ್ಟಿದ್ದಾರೆ. ಹೀಗಾಗಿ ಶನಿವಾರದ ಪಂದ್ಯದಲ್ಲಿ ಸೂರ್ಯಕುಮಾರ್ ಅವರೇ ಡಾನ್. ಇವೆಲ್ಲದರ ನಡುವೆ ಟೀಮ್ ಇಂಡಿಯಾದ ಸದಸ್ಯ ಯಜ್ವೇಂದ್ರ ಚಹಲ್ ಅವರ ಕೈಗೆ ಮುತ್ತಿಡುವ ಮೂಲಕ ಅಭಿನಂದನೆ ಸಲ್ಲಿಸಿದ್ದು ವಿಶೇಷ ಎನಿಸಿತು.
ಭಾರತ ತಂಡ 228 ರನ್ಗಳ ಬೃಹತ್ ಮೊತ್ತ ಪೇರಿಸಿದ ಬಳಿಕ ಎದುರಾಳಿ ತಂಡವನ್ನು 16.4 ಓವರ್ಗಳಲ್ಲಿ 137 ರನ್ಗಳಿಗೆ ಕಟ್ಟಿ ಹಾಕುವ ಮೂಲಕ 91 ರನ್ಗಳ ಬೃಹತ್ ಜಯ ದಾಖಲಿಸಿತು. ಈ ವೇಳೆ ಯಜ್ವೇಂದ್ರ ಚಹಲ್ ಕೂಡ ತಮ್ಮ ಕೈಚಳಕ ತೋರಿ 2 ವಿಕೆಟ್ ಕಬಳಿಸಿದ್ದರು. ವಿಕೆಟ್ ಪಡೆದ ಸಂಭ್ರಮದಲ್ಲಿದ್ದ ಯಜ್ವೇಂದ್ರ ಚಹಲ್ ಬ್ಯಾಟಿಂಗ್ನಲ್ಲಿ ಅಬ್ಬರಿಸಿದ್ದ ಸೂರ್ಯಕುಮಾರ್ ಯಾದವ್ ಅವರ ಕೈಗೆ ಮುತ್ತಿಟ್ಟರು. ಈ ದೃಶ್ಯ ನೇರ ಪ್ರಸಾರದ ಟಿವಿ ಕ್ಯಾಮೆರಾಗಳ ಗಮನ ಸೆಳೆಯಿತು.
ಯಜ್ವೇಂದ್ರ ಚಹಲ್ ಅವರು ಟೀಮ್ ಇಂಡಿಯಾದಲ್ಲಿ ಹೆಚ್ಚು ವಿನೋದ ಭಾವ ಹೊಂದಿರುವ ಸದಸ್ಯ. ತಮಾಷೆ ಮೂಲಕ ಆಗಾಗ ಎಲ್ಲರ ಗಮನ ಸೆಳೆಯುವವರು. ಅವರು ಸೂರ್ಯಕುಮಾರ್ ಯಾದವ್ ಅವರ ಕೈಗೆ ಡಾನ್ಗಳ ಕೈಗೆ ಮುತ್ತಿಡುವ ರೀತಿಯಲ್ಲಿ ಕಿಸ್ ಕೊಟ್ಟು ಗಮನ ಸೆಳೆದರು.
ಸಾಮಾನ್ಯವಾಗಿ ಅಂಡರ್ವರ್ಲ್ಡ್ ಡಾನ್ಗಳಿಗೆ ಅವರ ಚೇಲಾಗಳು ಕೈಗೆ ಮುತ್ತಿಟ್ಟು ಗೌರವ ಸೂಚಿಸುತ್ತಾರೆ. ಅಂತೆಯೇ ಸೂರ್ಯಕುಮಾರ್ ಡಾನ್ ಎಂಬರ್ಥದಲ್ಲಿ ಯಜ್ವೇಂದ್ರ ಮುತ್ತು ಕೊಟ್ಟಿದ್ದಾರೆ ಎಂದು ನೆಟ್ಟಿಗರು ವಿಶ್ಲೇಷಣೆ ನೀಡಿದ್ದಾರೆ.
ಇದನ್ನೂ ಓದಿ | IND VS SL | ಲಂಕಾ ವಿರುದ್ಧ ಶತಕ ಬಾರಿಸಿ ದಾಖಲೆ ಬರೆದ ಸೂರ್ಯಕುಮಾರ್ ಯಾದವ್