Site icon Vistara News

Ranji Trophy ಫೈನಲ್‌: ಸುಸ್ಥಿತಿಯಲ್ಲಿ ಮಧ್ಯ ಪ್ರದೇಶ

ranji trophy

ಬೆಂಗಳೂರು: ರಣಜಿ ಟ್ರೋಫಿ-೨೦೨೨ (Ranji Trophy) ಫೈನಲ್ ಪಂದ್ಯದಲ್ಲಿ ಸಮಬಲದ ಹೋರಾಟ ನಡೆಯುತ್ತಿದ್ದು, ಶುಕ್ರವಾರ ಮೂರನೇ ದಿನದಾಟದ ಅಂತ್ಯಕ್ಕೆ ೧೨೩ ಓವರ್‌ಗಳಲ್ಲಿ ೩ ವಿಕೆಟ್‌ ನಷ್ಟಕ್ಕೆ ೩೬೮ ರನ್‌ ಬಾರಿಸಿ ಸುಸ್ಥಿತಿಯಲ್ಲಿದೆ. ಆರಂಭಿಕ ಬ್ಯಾಟರ್‌ ಯಶ್ ದುಬೆ (೧೩೩) ಶತಕ ಬಾರಿಸುವ ಮೂಲಕ ಪ್ರಮುಖ ಪಂದ್ಯದಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದರೆ, ಶುಭಂ ಶರ್ಮ (೧೧೬) ಶತಕದ ಮೂಲಕ ಅವರಿಗೆ ಸಾಥ್‌ ನೀಡಿದರು.

ಎಮ್‌ ಚಿನ್ನಸ್ವಾಮಿ ಸ್ಟೇಡಿಯಮ್‌ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮುಂಬಯಿ ತಂಡ ಮೊದಲ ಇನಿಂಗ್ಸ್‌ನಲ್ಲಿ ಪೇರಿಸಿದ್ದ ೩೭೪ ರನ್‌ಗಳಿಗೆ ಪ್ರತಿಯಾಗಿ ಗುರುವಾರ ಬ್ಯಾಟಿಂಗ್‌ ಆರಂಭಿಸಿದ್ದ ಮಧ್ಯ ಪ್ರದೇಶ ತಂಡ ೧ ವಿಕೆಟ್‌ ನಷ್ಟಕ್ಕೆ ೧೨೩ ರನ್‌ ಬಾರಿಸಿತ್ತು. ಅಂತೆಯೇ ಮೂರನೇ ದಿನ ಬ್ಯಾಟಿಂಗ್‌ ಮುಂದುವರಿಸಿದ ಆದಿತ್ಯ ಶ್ರೀವಾಸ್ತವ ನೇತೃತ್ವದ ಮಧ್ಯಪ್ರದೇಶ ತಂಡದ ಪರ ಯಶ್‌ ದುಬೆ ಹಾಗೂ ಶುಭಂ ಶರ್ಮ ಜೋಡಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಈ ಜೋಡಿ ಎರಡನೇ ವಿಕೆಟ್‌ಗೆ ೨೨೨ ರನ್‌ ಗಳಿಸುವ ಮೂಲಕ ಪ್ರತಿ ಹೋರಾಟಕ್ಕೆ ಇಂಬು ಕೊಟ್ಟರು. ಇವರಿಬ್ಬರ ಉತ್ತಮ ಬ್ಯಾಟಿಂಗ್‌ ಪ್ರದರ್ಶನದಿಂದ ಮಧ್ಯ ಪ್ರದೇಶ ತಂಡ ಉತ್ತಮ ಸ್ಥಿತಿಯಲ್ಲಿದ್ದು, ಕೇವಲ ೬ ರನ್‌ಗಳ ಹಿನ್ನಡೆ ಹೊಂದಿದೆ.

ಮೋಹಿತ್‌ ಅವಸ್ತಿಯ ಎಸೆತಕ್ಕೆ ತಾಮೋರೆಗೆ ಕ್ಯಾಚ್‌ ನೀಡಿದ ಶುಭಂ ಶರ್ಮ ಪೆವಿಲಿಯನ್‌ ಸೇರಿಕೊಂಡರು. ಈ ಮೂಲಕ ಮುಂಬಯಿ ತಂಡಕ್ಕೆ ದಿನದಾಟದಲ್ಲಿ ಮೊದಲ ಯಶಸ್ಸು ಲಭಿಸಿತು. ಇದಾದ ಬಳಿಕ ಬ್ಯಾಟ್‌ ಮಾಡಲು ಬಂದ ರಜತ್‌ ಪಾಟೀದಾರ್‌ (೬೭) ಮುಂಬೈ ಬೌಲರ್‌ಗಳಿಗೆ ಸೆಡ್ಡು ಹೊಡೆದರು. ಏತನ್ಮಧ್ಯೆ, ಶಮ್ಸ್‌ ಮುಲಾನಿ ಎಸೆತದಲ್ಲಿ ತಾಮೋರೆಗೆ ಕ್ಯಾಚಿತ್ತ ಯಶ್‌ ದುಬೆ ತಮ್ಮ ಸುದೀರ್ಘ ಇನಿಂಗ್ಸ್‌ ಕೊನೆಗೊಳಿಸಿದರು. ಪಾಟೀದಾರ್‌ ಹಾಗೂ ಯಶ್‌ ದುಬೆ ಜೋಡಿಯೂ ಮೂರನೇ ವಿಕೆಟ್‌ಗೆ ೭೨ ರನ್‌ ಬಾರಿಸಿ ತಂಡದ ಮೊತ್ತ ಹೆಚ್ಚಳಕ್ಕೆ ಕಾರಣರಾದರು. ದಿನದಾಟದಂತ್ಯಕ್ಕೆ ನಾಯಕ ಆದಿತ್ಯ ಶ್ರೀವಾಸ್ತವ (೧೧) ಹಾಗೂ ಪಾಟೀದಾರ್‌ ಮೂರನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ಶುಭಂ ಅಬ್ಬರ

ಶುಭಂ ಶರ್ಮ ಹಾಲಿ ಆವೃತ್ತಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದು, ಫೈನಲ್‌ ಸೇರಿದಂತೆ ಒಟ್ಟಾರೆ ನಾಲ್ಕನೇ ಶತಕ ಬಾರಿಸಿದರು. ಪಂಜಾಬ್ ವಿರುದ್ಧದ ಕ್ವಾರ್ಟರ್‌ ಫೈನಲ್‌ಪಂದ್ಯದಲ್ಲಿ ಶುಭಂ ೧೦೨ ರನ್‌ ಬಾರಿಸಿದ್ದರೆ, ಅದಕ್ಕಿಂತ ಹಿಂದೆ ಮೇಘಾಲಯ ವಿರುದ್ಧ ೧೧೧ ಬಾರಿಸಿದ್ದರು. ಅಂತೆಯೇ ಗುಜರಾತ್ ವಿರುದ್ಧವೂ ಅಜೇಯ ೧೦೩ ರನ್‌ ಬಾರಿಸಿದ್ದರು. ೨೮ ವರ್ಷದ ಶುಭಂ ಶರ್ಮ ೨೦೧೩ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಅಲ್ಲಿಂದ ಇಲ್ಲಿಯವರೆಗೆ ಕೇವಲ ಎರಡು ಶತಕ ಬಾರಿಸಿದ್ದರೆ, ಹಾಲಿ ಒಂದೇ ಆವೃತ್ತಿಯಲ್ಲಿ ನಾಲ್ಕು ಶತಕಗಳನ್ನು ಬಾರಿಸಿದ್ದಾರೆ.

ರಾಹುಲ್‌ ನೆನಪಿಸಿದ ಯಶ್‌ ದುಬೆ

ಮುಂಬೈ ತಂಡದ ಮತ್ತೊಬ್ಬ ಶತಕವೀರ ಯಶ್‌ ದುಬೆ ಅವರ ಸಂಭ್ರಮದ ಶೈಲಿ ಟೀಮ್‌ ಇಂಡಿಯಾದ ಪ್ರಮುಖ ಆಟಗಾರ ಕೆ. ಎಲ್‌ ರಾಹುಲ್ ಅವರನ್ನು ನೆನಪಿಸಿತು. ರಾಹುಲ್‌ ಶತಕ ಬಾರಿಸಿದ ಬಳಿಕ ಹೆಲ್ಮೆಟ್‌, ಗ್ಲವ್ಸ್‌ ಹಾಗೂ ಹೆಲ್ಮೆಟ್‌ ಕಳಚಿಟ್ಟು ಎರಡೂ ಕಿವಿಗಳನ್ನು ಕೈ ಬೆರಳಿನಿಂದ ಮುಚ್ಚಿ ಸಂಭ್ರಮಿಸುತ್ತಾರೆ. ಟೀಕೆಗಳಿಗೆ ಇದೇ ನನ್ನ ಉತ್ತರ ಎಂಬುದು ಅದರರ್ಥ. ಯಶ್‌ ಕೂಡ ಅದೇ ಮಾದರಿಯಲ್ಲಿ ಸಂಭ್ರಮಿಸಿದರು.

ಸಂಕ್ಷಿಪ್ತ ಸ್ಕೋರ್‌

ಮುಂಬಯಿ ಮೊದಲ ಇನಿಂಗ್ಸ್: ೧೨೭.೪ ಓವರ್‌ಗಳಲ್ಲಿ ೩೭೪

ಮಧ್ಯ ಪ್ರದೇಶ ಮೊದಲ ಇನಿಂಗ್ಸ್‌: ೧೨೩ ಓವರ್‌ಗಳಲ್ಲಿ ೩ ವಿಕೆಟ್‌ಗೆ ೩೬೮ (ಯಶ್‌ ದುಬೆ ೧೩೩, ಶುಭಮ್‌ ಶರ್ಮ ೧೧೬, ರಜತ್‌ ಪಾಟೀದಾರ್‌ ೬೭; ತುಷಾರ್‌ ದೇಶಪಾಂಡೆ ೭೩ಕ್ಕೆ೧; ಶಮ್ಸ್‌ ಮುಲಾನಿ ೧೧೭ಕ್ಕೆ೧, ಮೋಹಿತ್‌ ಅವಸ್ತಿ ೫೩ಕ್ಕೆ೧).

ಇದನ್ನೂ ಓದಿ| Ranji Trophy Final: ಶತಕ ಸಿಡಿಸಿ 900+ ರನ್‌ಗಳ ಎಲೈಟ್‌ ಗುಂಪು ಸೇರಿದ ಮುಂಬೈ ತಂಡದ ಸರ್ಫರಾಜ್‌ ಖಾನ್‌

Exit mobile version