ಧರ್ಮಶಾಲಾ: ಇಂಗ್ಲೆಂಡ್ ವಿರುದ್ಧದ ತವರಿನ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 3-1 ಮುನ್ನಡೆ ಸಾಧಿಸಿ ಸರಣಿಯನ್ನು ವಶಪಡಿಸಿಕೊಂಡಿರುವ ಭಾರತ ತನ್ನ ಅಂತಿಮ ಪಂದ್ಯವನ್ನು(India vs England 5th Test) ಧರ್ಮಶಾಲಾದಲ್ಲಿ(Dharamsala) ಆಡಲಿದೆ. ಈ ಪಂದ್ಯ ಮಾರ್ಚ್ 7ರಿಂದ ಆರಂಭಗೊಳ್ಳಲಿದೆ. ಭಾರತದ ಭವಿಷ್ಯದ ಕ್ರಿಕೆಟ್ ತಾರೆ ಎಂದು ಗುರುತಿಸಲ್ಪಟ್ಟಿರುವ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್(Yashasvi Jaiswal) ಅವರಿಗೆ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ(virat kohli) ಮತ್ತು ದಿಗ್ಗಜ ಸುನೀಲ್ ಗವಾಸ್ಕರ್(Sunil Gavaskar) ದಾಖಲೆಯನ್ನು ಮುರಿಯುವ ಅವಕಾಶವಿದೆ.
ಸತತ 2 ದ್ವಿಶತಕ ಬಾರಿಸಿ ಸದ್ಯ ಭರ್ಜರಿ ಬ್ಯಾಟಿಂಗ್ ಫಾರ್ಮ್ನಲ್ಲಿರುವ ಜೈಸ್ವಾಲ್ ಅವರು ಕೊನೆಯ ಟೆಸ್ಟ್ ಪಂದ್ಯದಲ್ಲಿ 120 ರನ್ ಬಾರಿಸಿದರೆ ಗವಾಸ್ಕರ್ ಅವರ ಸಾರ್ವಕಾಲಿಕ ದಾಖಲೆಯೊಂದು ಪತನಗೊಳ್ಳಲಿದೆ. ಟೆಸ್ಟ್ ಸರಣಿಯೊಂದರಲ್ಲಿ ಅತ್ಯಧಿಕ ರನ್ ಗಳಿಸಿದ ಭಾರತೀಯ ದಾಖಲೆ ಸುನೀಲ್ ಗವಾಸ್ಕರ್ ಹೆಸರಿನಲ್ಲಿದೆ. ಗವಾಸ್ಕರ್ ಅವರು 1970ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ 774 ರನ್ ಬಾರಿಸಿದ್ದರು. ಇದು ಸದ್ಯ ದಾಖಲೆಯಾಗಿಯೇ ಉಳಿದಿದೆ. ಈ ದಾಖಲೆಯನ್ನು ಮುರಿಯಲು ಜೈಸ್ವಾಲ್ಗೆ ಸುವರ್ಣಾವಕಾಶವಿದೆ.
ವಿರಾಟ್ ಕೊಹ್ಲಿ 2014ರಲ್ಲಿ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ 692 ರನ್ ಬಾರಿಸಿದ್ದರು. ಅವರಿಗೆ 2ನೇ ಸ್ಥಾನ. ಜೈಸ್ವಾಲ್ 38 ರನ್ ಬಾರಿಸಿದರೆ ಕೊಹ್ಲಿಯ ದಾಖಲೆ ಪತನಗೊಳ್ಳಲಿದೆ. ಸದ್ಯ ಜೈಸ್ವಾಲ್ ನಾಲ್ಕು ಟೆಸ್ಟ್ ಪಂದ್ಯ ಆಡಿ 655*ರನ್ ಬಾರಿಸಿದ್ದಾರೆ.
ಇದನ್ನೂ ಓದಿ ICC Test Rankings: ಮತ್ತೆ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಮೇಲೇರಿದ ಯಶಸ್ವಿ ಜೈಸ್ವಾಲ್
ಬ್ಯಾಟಿಂಗ್ ಶ್ರೇಯಾಂಕದಲ್ಲಿ ಪ್ರಗತಿ ಸಾಧಿಸಿದ ಜೈಸ್ವಾಲ್
ಐಸಿಸಿ ನೂತನ ಟೆಸ್ಟ್ ಬ್ಯಾಟಿಂಗ್(ICC Test Rankings) ಶ್ರೇಯಾಂಕದಲ್ಲಿ ಜೈಸ್ವಾಲ್ ಮತ್ತೆ ಮೂರು ಸ್ಥಾನಗಳ ಜಿಗಿತ ಕಂಡು 12ನೇ ಸ್ಥಾನ ಪಡೆದಿದ್ದಾರೆ. ಕಳೆದ ವಾರ 14 ಸ್ಥಾನಗಳ ಪ್ರಗತಿ ಸಾಧಿಸಿ 15ನೇ ಸ್ಥಾನ ಅಲಂಕರಿಸಿದ್ದರು. 727 ರೇಟಿಂಗ್ ಅಂಕದೊಂದಿಗೆ 12ನೇ ಸ್ಥಾನ ಪಡೆದಿದ್ದಾರೆ. ಅಂತಿಮ ಟೆಸ್ಟ್ನಲ್ಲಿಯೂ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದರೆ ಅಗ್ರ 10ರೊಳಗೆ ಸ್ಥಾನ ಪಡೆಯುವ ಅವಕಾಶವಿದೆ.
Yashasvi Jaiswal moves to number 12 in ICC Test batters ranking.
— Johns. (@CricCrazyJohns) February 28, 2024
– He is 2nd behind Virat Kohli among Indians, What a growth. 🫡 pic.twitter.com/Bo46JttI0C
ಅಂತಿಮ ಟೆಸ್ಟ್ಗೆ 2 ಬದಲಾವಣೆ
ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ ತನ್ನ ಆಡುವ ಬಳಗದಲ್ಲಿ 2 ಬದಲಾವಣೆ ಮಾಡುವುದು ಖಚಿತ. 4ನೇ ಟೆಸ್ಟ್ನಿಂದ ವಿಶ್ರಾಂತಿ ಪಡೆದಿದ್ದ ಜಸ್ಪ್ರೀತ್ ಬುಮ್ರಾ ತಂಡಕ್ಕೆ ಮರಳಿದ ಕಾರಣ ಅವರಿಗಾಗಿ ಸಿರಾಜ್ ಅಥವಾ ಚೊಚ್ಚಲ ಪಂದ್ಯವನ್ನಾಡಿದ ಆಕಾಶ್ ದೀಪ್ ಇಬ್ಬರಲ್ಲಿ ಒಬ್ಬರು ಸ್ಥಾನ ಬಿಡಬೇಕಾಗುತ್ತದೆ. ಬ್ಯಾಟಿಂಗ್ ವಿಭಾಗದಲ್ಲಿ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳುವಲ್ಲಿ ಎಡವಿದ ರಜತ್ ಪಾಟಿದಾರ್ ಬದಲು ದೇವದತ್ತ ಪಡಿಕ್ಕಲ್ ಆಡುವ ಸಾಧ್ಯತೆ ಅಧಿಕವಾಗಿದೆ.