Site icon Vistara News

Yashasvi Jaiswal: ವಿರಾಟ್​ ಕೊಹ್ಲಿ, ಸಚಿನ್​ ತೆಂಡೂಲ್ಕರ್​ ದಾಖಲೆ ಮುರಿದ ಯಶಸ್ವಿ ಜೈಸ್ವಾಲ್​

Yashasvi Jaiswal

ಧರ್ಮಶಾಲಾ: ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಈಗಾಗಲೇ 2 ದ್ವಿಶತಕಗಳೊಂದಿಗೆ ರನ್‌ ಪ್ರವಾಹವನ್ನೇ ಹರಿಸಿರುವ ಯಶಸ್ವಿ ಜೈಸ್ವಾಲ್‌(Yashasvi Jaiswal) ಅವರು ಧರ್ಮಶಾಲಾದಲ್ಲಿ ಸಾಗುತ್ತಿರುವ ಅಂತಿಮ ಟೆಸ್ಟ್​ನಲ್ಲಿ ವಿರಾಟ್​ ಕೊಹ್ಲಿಯ 2 ದಾಖಲೆ ಹಾಗೂ ಸಚಿನ್​ ಅವರ ಸಿಕ್ಸರ್​ ದಾಖಲೆಯನ್ನು ಮುರಿದಿದ್ದಾರೆ.

ಜೈಸ್ವಾಲ್ ಅವರು​ 38 ರನ್​ ಬಾರಿಸುತ್ತಿದ್ದಂತೆ ಟೆಸ್ಟ್​ ಸರಣಿಯೊಂದರಲ್ಲಿ ಅತ್ಯಧಿಕ ರನ್​ ಗಳಿಸಿದ ಭಾರತೀಯ ಸಾಧಕರ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರುವ ಮೂಲಕ ಕೊಹ್ಲಿಯನ್ನು ಹಿಂದಿಕ್ಕಿದರು. ವಿರಾಟ್​ ಕೊಹ್ಲಿ 2014ರಲ್ಲಿ ಇಂಗ್ಲೆಂಡ್​ ವಿರುದ್ಧದ ಸರಣಿಯಲ್ಲಿ 692 ರನ್​ ಬಾರಿಸಿದ್ದರು. ಇದೀಗ ಈ ಮೊತ್ತವನ್ನು ಜೈಸ್ವಾಲ್​ ಮೀರಿ ನಿಂತಿದ್ದಾರೆ.

ಇದೇ ಪಂದ್ಯದಲ್ಲಿ ಜೈಸ್ವಾಲ್​ 120 ರನ್​ ಬಾರಿಸಿದರೆ. ಸುನೀಲ್‌ ಗಾವಸ್ಕರ್‌ ಅವರ ಸಾರ್ವಕಾಲಿಕ ದಾಖಲೆ ಪತನಗೊಳ್ಳಲಿದೆ. ಟೆಸ್ಟ್​ ಸರಣಿಯೊಂದರಲ್ಲಿ 700 ರನ್‌ ಬಾರಿಸಿದ ದಾಖಲೆ ಸದ್ಯ ಸುನೀಲ್‌ ಗಾವಸ್ಕರ್‌ ಹೆಸರಿನಲ್ಲಿದೆ. 1971ರ ವೆಸ್ಟ್‌ ಇಂಡೀಸ್‌ ವಿರುದ್ಧದ ತಮ್ಮ ಚೊಚ್ಚಲ ಸರಣಿಯಲ್ಲೇ ಗಾವಸ್ಕರ್‌ 774 ರನ್‌ ಪೇರಿಸಿದ್ದರು.

ಭಾರತ ಮತ್ತು ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ರನ್ ಬಾರಿಸಿ ದಾಖಲೆಯಲ್ಲಿಯೂ ವಿರಾಟ್​ ಕೊಹ್ಲಿಯನ್ನು ಜೈಸ್ವಾಲ್​ ಹಿಂದಿಕ್ಕಿದ್ದಾರೆ. 2016ರಲ್ಲಿ ನಡೆದಿದ್ದ ತವರಿನ ಟೆಸ್ಟ್​ ಸರಣಿಯಲ್ಲಿ ಕೊಹ್ಲಿ 655 ರನ್​ ಬಾರಿಸಿದ್ದರು. ಇದೀಗ ಜೈಸ್ವಾಲ್​ 681* ರನ್​ ಬಾರಿಸಿ ಈ ದಾಖಲೆಯನ್ನು ಮುರಿದಿದ್ದಾರೆ.

ಸಚಿನ್ ಸಿಕ್ಸರ್​​ ದಾಖಲೆ ಪತನ


ಜೈಸ್ವಾಲ್​ ಅವರು ಶೋಯೆಬ್ ಬಶೀರ್ ಅವರ ಓವರ್​ನಲ್ಲಿ ಮೂರು ಸಿಕ್ಸರ್​ ಬಾರಿಸುತ್ತಿದ್ದಂತೆ ಕ್ರಿಕೆಟ್​ ದೇವರು, ದಿಗ್ಗಜ ಸಚಿನ್​ ತೆಂಡೂಲ್ಕರ್​ ಅವರ ಸಿಕ್ಸರ್​ ದಾಖಲೆಯೊಂದು ಪತನಗೊಂಡಿತು. ತಂಡವೊಂದರ ವಿರುದ್ಧ ಅತಿ ಹೆಚ್ಚು ಟೆಸ್ಟ್​ ಸಿಕ್ಸರ್​ ಬಾರಿಸಿದ ಭಾರತೀಯ ದಾಖಲೆ ಇದುವರೆಗೆ ಸಚಿನ್​ ಹೆಸರಿನಲ್ಲಿತ್ತು. ಸಚಿನ್​ ಅವರು ಆಸ್ಟ್ರೇಲಿಯಾ ವಿರುದ್ಧ 74 ಇನಿಂಗ್ಸ್​ ಆಡಿ ​25 ಸಿಕ್ಸರ್​ ಬಾರಿಸಿದ್ದರು. ಆದರೆ ಜೈಸ್ವಾಲ್​ ಕೇವಲ 9 ಇನಿಂಗ್ಸ್​ ಮೂಲಕ ಇಂಗ್ಲೆಂಡ್​ ವಿರುದ್ಧ 26* ಸಿಕ್ಸರ್​ ಬಾರಿಸಿ ಸಚಿನ್​ ದಾಖಲೆಯನ್ನು ಮುರಿದಿದ್ದಾರೆ. ರೋಹಿತ್​ ಶರ್ಮ ಅವರು 22* ಸಿಕ್ಸರ್​ ಬಾರಿಸಿ ಮೂರನೇ ಸ್ಥಾನದಲ್ಲಿದ್ದಾರೆ. ಒಂದೊಮ್ಮೆ ರೋಹಿತ್​ ನಾಲ್ಕು ಸಿಕ್ಸರ್​ ಬಾರಿಸಿದರೆ ಸಚಿನ್​ ಹಿಂದಿಕ್ಕಿ ದ್ವಿತೀಯ ಸ್ಥಾನಕೇರಲಿದ್ದಾರೆ.

ಜೈಸ್ವಾಲ್​ ಟೆಸ್ಟ್​ನಲ್ಲಿ ಅತಿ ವೇಗವಾಗಿ ಸಾವಿರ ರನ್​ ಗಡಿ ದಾಟಿದ ಆಟಗಾರ ಎಂಬ ಹಿರಿಮೆಗೂ ಪಾತ್ರರಾಗಿದ್ದಾರೆ. ಯುವ ಆಟಗಾರನಾಗಿರುವ ಯಶಸ್ವಿ ಜೈಸ್ವಾಲ್ ಅವರು ಬುಧವಾರ ಪ್ರಕಟಗೊಂಡ ನೂತನ ಐಸಿಸಿ ಟೆಸ್ಟ್ ಬ್ಯಾಟರ್‌ಗಳ ಶ್ರೇಯಾಂಕದಲ್ಲಿ 2 ಸ್ಥಾನ ಪ್ರಗತಿ ಸಾಧಿಸಿ ಜೀವನಶ್ರೇಷ್ಠ ಅಗ್ರ 10ರಲ್ಲಿ ಸ್ಥಾನ ಪಡೆದಿದ್ದಾರೆ. ಸದ್ಯ ಅವರು 727 ರೇಟಿಂಗ್​ ಅಂಕದೊಂದಿಗೆ 10ನೇ ಸ್ಥಾನ ಪಡೆದಿದ್ದಾರೆ.

Exit mobile version