Site icon Vistara News

Yashasvi Jaiswal: ಶತಕ ಬಾರಿಸಿ ಐಪಿಎಲ್​ನಲ್ಲಿ ನೂತನ ದಾಖಲೆ ಬರೆದ ಯಶಸ್ವಿ ಜೈಸ್ವಾಲ್​

Yashasvi Jaiswal

ಜೈಪುರ: ಈ ಬಾರಿಯ ಐಪಿಎಲ್(IPL 2024)​ ಟೂರ್ನಿಯ ಆರಂಭಿಕ 7 ಪಂದ್ಯಗಳಲ್ಲಿ ಸತತ ಬ್ಯಾಟಿಂಗ್​ ವೈಫಲ್ಯ ಕಂಡಿದ್ದ ರಾಜಸ್ಥಾನ್(Rajasthan Royals)​ ತಂಡದ ಯುವ ಎಡಗೈ ಬ್ಯಾಟರ್ ಯಶಸಸ್ವಿ ಜೈಸ್ವಾಲ್(Yashasvi Jaiswal)​ ತಮ್ಮ ಬ್ಯಾಟಿಂಗ್​ ಫಾರ್ಮ್​ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಮುಂಬೈ ಇಂಡಿಯನ್ಸ್(Mumbai Indians)​ ವಿರುದ್ಧ ಸೋಮವಾರ ರಾತ್ರಿ ನಡೆದ ಪಂದ್ಯದಲ್ಲಿ ಭರ್ಜರಿ ಶತ ಬಾರಿಸುವ ಮೂಲಕ ಹಿಂದಿನ ಬ್ಯಾಟಿಂಗ್ ಫಾರ್ಮ್​ಗೆ ಮರಳಿದ್ದಾರೆ. ಜತೆಗೆ ಐಪಿಎಲ್​ನಲ್ಲಿ ನೂತನ ದಾಖಲೆಯೊಂದನ್ನು ಕೂಡ ಬರೆದಿದ್ದಾರೆ.

ಜೈಸ್ವಾಲ್ ಅವರು ಮುಂಬೈ ವಿರುದ್ಧ ಶತಕ ಬಾರಿಸುವ ಮೂಲಕ ಅತಿ ಕಿರಿಯ ವಯಸ್ಸಿನಲ್ಲಿ ಐಪಿಎಲ್​ನಲ್ಲಿ 2 ಶತಕ ಬಾರಿಸಿದ ಮೊದಲ ಆಟಗಾರ ಎನಿಸಿಕೊಂಡರು. ಅಚ್ಚರಿ ಎಂದರೆ ಜೈಸ್ವಾಲ್​ ಬಾರಿಸಿದ ಎರಡೂ ಶತಕಗಳು ಕೂಡ ಮುಂಬೈ ಇಂಡಿಯನ್ಸ್​ ವಿರುದ್ಧವೇ. ಮೊದಲ ಶತಕ ಕಳೆದ ವರ್ಷ ವಾಂಖಡೆಯಲ್ಲಿ ನಡೆದಿದ್ದ ಪಂದ್ಯದಲ್ಲಿ 124 ರನ್​ ಬಾರಿಸಿದ್ದರು. ಆಗ ಅವರಿಗೆ 21 ವರ್ಷ 123 ದಿನಗಳು. ಇದೀಗ 2024ರಲ್ಲಿ ಜೈಪುರದಲ್ಲಿ ಅಜೇಯ 104 ರನ್​ ಬಾರಿಸಿದರು (22 ವರ್ಷ, 116 ದಿನಗಳು).

ಇಲ್ಲಿನ ಸವಾಯ್​ ಮಾನ್​ಸಿಂಗ್ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಮುಂಬೈ ತಂಡ ಮೊದಲು ಬ್ಯಾಟ್​ ಮಾಡಿತು. ಅಂತೆಯೇ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 179 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ರಾಜಸ್ಥಾನ್ ತಂಡ ಇನ್ನೂ 8 ಎಸೆತಗಳು ಉಳಿದಿರುವಂತೆಯೇ 1 ವಿಕೆಟ್ ನಷ್ಟಕ್ಕೆ 183 ರನ್ ಬಾರಿಸಿ ಗೆಲುವು ಕಂಡಿತು.

ಇದನ್ನೂ ಓದಿ IPL 2024 Points Table: ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ರಾಜಸ್ಥಾನ್​

ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿದ ಆರ್​ಆರ್​ ತಂಡಕ್ಕೆ ಯಶಸ್ವಿ ಜೈಸ್ವಾಲ್ ಹಾಗೂ ಜೋಸ್ ಬಟ್ಲರ್ ನೆರವಾದರು. ಬಟ್ಲರ್​ 25 ಎಸೆತಕ್ಕೆ 35 ರನ್ ಬಾರಿಸ ಔಟಾದರೆ ಜೈಸ್ವಾಲ್ ಅಮೋಘ ಪ್ರದರ್ಶನ ನೀಡಿ 60 ಎಸೆತಕ್ಕೆ ಅಜೇಯ 104 ರನ್ ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ನಾಯಕ ಸಂಜು ಸ್ಯಾಮ್ಸನ್​ 28 ಎಸೆತಕ್ಕೆ 38 ರನ್​ ಬಾರಿಸಿ ಕೊನೇ ತನಕ ಉಳಿದರು.

ಇಂಪ್ಯಾಕ್ಟ್​ ಆಟಗಾರನಾಗಿ ಕಣಕ್ಕಿಳಿದ​ ಸಂದೀಪ್​ ಶರ್ಮಾ ಮಾರಕ ಬೌಲಿಂಗ್ ದಾಳಿ ಸಂಘಟಿಸಿದರು. ಈ ದಾಳಿಗೆ ಬೆಚ್ಚಿ ಬಿದ್ದ ಮುಂಬೈ ತಂಡ ಆರಂಭದಲ್ಲಿಯೇ ಸತತವಾಗಿ ವಿಕೆಟ್​ ಕಳೆದುಕೊಂಡಿತು. ರೋಹಿತ್ ಶರ್ಮಾ 6 ರನ್ ಬಾರಿಸಿದರೆ, ಇಶಾನ್ ಕಿಶನ್​ ಶೂನ್ಯಕ್ಕೆ ಔಟಾದರು. ಸೂರ್ಯಕುಮಾರ್ ಯಾದವ್​ 10 ರನ್​ಗೆ ಔಟಾಗಿ ನಿರ್ಗಮಿಸಿದರು. ಒಟ್ಟು 4 ಓವರ್​ ಬೌಲಿಂಗ್​ ದಾಳಿ ನಡೆಸಿದ ಸಂದೀಪ್​ 18 ರನ್​ಗೆ 5 ವಿಕೆಟ್​ ಕೆಡವಿದರು. ಈ ಸಾಧನೆಗಾಗಿ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿಯೂ ಲಭಿಸಿತು.

Exit mobile version