Site icon Vistara News

Yo-Yo Test: 5 ಆಟಗಾರರನ್ನು ಹೊರತುಪಡಿಸಿ ಉಳಿದೆಲ್ಲರೂ ಪಾಸ್; ಕೊಹ್ಲಿಯನ್ನು ಮೀರಿಸಿದ ಯುವ ಬ್ಯಾಟರ್​

rohit sharma, rahul dravid and virat kohli at practice session

ಬೆಂಗಳೂರು: ಏಷ್ಯಾಕಪ್​ಗೆ(Asia Cup 2023) ಆಯ್ಕೆಯಾದ ಟೀಮ್​ ಇಂಡಿಯಾದ ಆಟಗಾರರು ಬೆಂಗಳೂರಿನ ಆಲೂರಿನಲ್ಲಿ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ಬುಧವಾರದಿಂದ ಈ ಶಿಬಿರ ಆರಂಭವಾಗಿದೆ. ಈ ಶಿಬಿರದಲ್ಲಿ ಎಲ್ಲ ಆಟಗಾರರು ಯೋ-ಯೋ ಟೆಸ್ಟ್(Yo-Yo Test)​ ಮತ್ತು ಡೆಕ್ಸಾ ಪರೀಕ್ಷೆಗೆ(Dexa scan) ಒಳಪಟ್ಟಿದ್ದಾರೆ. ಸದ್ಯದ ಪಿಟಿಐ(PTI) ಮಾಹಿತಿ ಪ್ರಕಾರ 17 ಆಟಗಾರರ ಪೈಕಿ ಯದು ಆಟಗಾರರು ಈ ಟೆಸ್ಟ್​ಗೆ ಒಳಪಟ್ಟಿಲ್ಲ ಎಂದು ವರದಿಯಾಗಿದೆ.

ಕೊಹ್ಲಿಯನ್ನು ಮೀರಿಸಿದ ಗಿಲ್​

ಕ್ರಿಕೆಟ್​ ಲೋಕದ ಮಿಸ್ಟರ್​ ಪರ್ಫೆಕ್ಟ್​, ಫಿಟ್​ನೆಸ್​ ಮಾಸ್ಟರ್​ ಎಂದು ಕರೆಸಿಕೊಳ್ಳುವ ವಿರಾಟ್​ ಕೊಹ್ಲಿಯೂ(virat kohli) ಹಲವು ವರ್ಷಗಳ ಬಳಿಕ ಯೋ-ಯೋ ಟೆಸ್ಟ್​ಗೆ ಒಳಪಟ್ಟಿದ್ದರು. ಅವರು ಈ ಟೆಸ್ಟ್​ನಲ್ಲಿ 17.2 ಅಂಕದೊಂದಿಗೆ ತೇರ್ಗಡೆಯಾದರೂ ಅವರನ್ನು ಶುಭಮನ್​ ಗಿಲ್(shubman gill)​ ಮೀರಿಸಿದ್ದಾರೆ. ಭಾರತದ ಭರವಸೆಯ ಆಟಗಾರ ಎಂದು ಕರೆಸಿಕೊಳ್ಳುವ ಗಿಲ್​ ಅವರು ಈ ಟೆಸ್ಟ್​ನಲ್ಲಿ 18.7 ಸ್ಕೋರ್ ಮಾಡುವ ಮೂಲಕ ಟಾಪರ್ ಆಗಿ ಹೊರಹೊಮ್ಮಿದ್ದಾರೆ ಎಂದು ವರದಿ ಹೇಳಿದೆ. ನಾಯಕ ರೋಹಿತ್​ ಶರ್ಮ, ಉಪನಾಯಕ ಹಾರ್ದಿಕ್​ ಪಾಂಡ್ಯ ಸೇರಿ ಉಳಿದ ಆಟಗಾರರು 16.5 ರಿಂದ 17ರ ಮಧ್ಯೆ ಅಂಕಗಳಿಸಿ ಪಾಸ್​ ಆಗಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.

5 ಆಟಗಾರರು ಭಾಗಿಯಾಗಿಲ್ಲ

17 ಮಂದಿ ಆಟಗಾರರ ಪೈಕಿ ಗಾಯದಿಂದ ಚೇತರಿಕೆ ಕಂಡಿರುವ ಕೆ.ಎಲ್​ ರಾಹುಲ್​, ಶ್ರೇಯಸ್ ಅಯ್ಯರ್​ ಹಾಗೂ ಐರ್ಲೆಂಡ್​ ಟಿ20 ಸರಣಿ ಮುಗಿಸಿ ಬಂದ ಜಸ್​ಪ್ರೀತ್​ ಬುಮ್ರಾ, ಪ್ರಸಿದ್ಧ್ ಕೃಷ್ಣ, ತಿಲಕ್ ವರ್ಮಾ ಮತ್ತು ಸಂಜು ಸ್ಯಾಮ್ಸನ್ ಅವರು ಯೋ-ಯೋ ಟೆಸ್ಟ್​ನಲ್ಲಿ ಪಾಲ್ಗೊಂಡಿಲ್ಲ ಎಂದು ವರದಿ ತಿಳಿಸಿದೆ. ಕ್ರಿಕ್​ಇನ್ಫೊ ವರದಿಯ ಪ್ರಕಾರ ಈ ಆಟಗಾರರು ಈಗಾಗಲೇ ಈ ಟೆಸ್ಟ್​ಗೆ ಒಳಪಟ್ಟು ತಮ್ಮ ಫಿಟ್​ನೆಸ್​ ಸಾಬೀತುಪಡಿಸಿದ ಬಳಿಕವೇ ಐರ್ಲೆಂಡ್​ ಸರಣಿಗೆ ಆಯ್ಕೆಯಾಗಿದ್ದು, ಹೀಗಾಗಿ ಅವರಿಗೆ ಮತ್ತೆ ಈ ಟೆಸ್ಟ್​ನ ಅಗತ್ಯವಿಲ್ಲ ಎಂದು ತಿಳಿಸಿದೆ. ಆದರೆ ಪಿಟಿಐ ವರದಿಯಲ್ಲಿ ಈ ಎಲ್ಲ ಆಟಗಾರರನ್ನು ಕೂಡ ಸೋಮವಾರದ ಒಳಗಡೆ ಟೆಸ್ಟ್​ಗೆ ಕಡ್ಡಾಯವಾಗಿ ಒಳಪಡಿಸಲಾಗುತ್ತದೆ ಎಂದು ತಿಳಿಸಿದೆ. ಒಟ್ಟಾರೆ ಬಿಸಿಸಿಐ ಏಕದಿನ ವಿಶ್ವಕಪ್ ನಿಟ್ಟಿನಲ್ಲಿ ಎಲ್ಲ ಆಟಗಾರರ ಫಿಟ್​ನೆಸ್​ ಮೇಲೆ ಈ ಬಾರಿ ಹದ್ದಿನ ಕಣ್ಣಿಟ್ಟಿದೆ.

ಇದನ್ನೂ ಓದಿ Asia Cup 2023: ಪಾಕ್ ಕ್ರಿಕೆಟ್​ ಮಂಡಳಿಯ​ ಆಹ್ವಾನವನ್ನು ತಿರಸ್ಕರಿಸಿದ ಬಿಸಿಸಿಐ

ಕೊಹ್ಲಿಗೆ ಎಚ್ಚರಿಕೆ ನೀಡಿದ ಬಿಸಿಸಿಐ

ಆಟಗಾರರು ತಮ್ಮ ಫಿಟ್‌ನೆಸ್ ಅಂಕಗಳನ್ನು ಎಲ್ಲೂ ಬಹಿರಂಗವಾಗಿ ಹೇಳಿಕೊಳ್ಳಬಾರದು ಎಂಬ ನಿಯಮ ಈ ಮೊದಲಿನಿಂದಲೇ ಜಾರಿಯಲ್ಲಿತ್ತು. ತಂಡದ ಗೌಪ್ಯ ವಿಷಯವನ್ನು ಸಾಮಾಜಿಕ ಮಾಧ್ಯಮದಲ್ಲಿ ಯಾವುದೇ ಕಾರಣಕ್ಕೂ ಹಂಚಿಕೊಳ್ಳಬಾರದು ಎಂಬ ನಿಯಮವಿದ್ದರೂ ವಿರಾಟ್​ ಕೊಹ್ಲಿ ಅವರು ತಮ್ಮ ಯೋ-ಯೋ ಟೆಸ್ಟ್​ನ ಅಂಕವನ್ನು ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದರು. ಇದು ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿತ್ತು. ನಿಯಮ ಉಲ್ಲಂಘಿಸಿದ ವಿರಾಟ್​ ಕೊಹ್ಲಿಗೆ ಬಿಸಿಸಿಐ ಎಚ್ಚರಿಕೆಯನ್ನು ನೀಡಿದೆ ಎಂದು ಪಿಟಿಐ ವರದಿ ಮಾಡಿತ್ತು. ಜತೆಗೆ ಎಲ್ಲ ಆಟಗಾರರಿಗೂ ಟೀಮ್​ ಮ್ಯಾನೆಜ್​ಮೆಂಟ್​ ಖಡಕ್​ ಎಚ್ಚರಿಕೆ ನೀಡಿರುವುದಾಗಿ ತಿಳಿಸಿತ್ತು. 6 ​​ದಿನಗಳ ಶಿಬಿರವನ್ನು ಏರ್ಪಡಿಸಿದೆ. ಈ ವೇಳೆ ಎಲ್ಲ ಆಟಗಾರರು ಯೋ-ಯೋ ಟೆಸ್ಟ್‌ ಮತ್ತು ಡೆಕ್ಸಾ ಪರೀಕ್ಷೆಗೆ (ಮೂಳೆಗಳ ಸಾಂದ್ರತೆಯನ್ನು ಅಳೆಯುವ ವಿಶೇಷ ರೀತಿಯ ಎಕ್ಸ್‌-ರೇ, ಡ್ಯುಯೆಲ್‌ ಎನರ್ಜಿ ಎಕ್ಸ್‌-ರೇ ಎಬಾಪ್ಟಿಮೆಟ್ರಿ) ಒಳಪಡೆಸಲಾಗುತ್ತದೆ.

ಭಾರತ ತಂಡ

ರೋಹಿತ್‌ ಶರ್ಮಾ (ನಾಯಕ), ಶುಭಮನ್‌ ಗಿಲ್‌, ವಿರಾಟ್‌ ಕೊಹ್ಲಿ, ಶ್ರೇಯಸ್‌ ಅಯ್ಯರ್, ಕೆ.ಎಲ್‌.ರಾಹುಲ್‌, ಹಾರ್ದಿಕ್‌ ಪಾಂಡ್ಯ (ಉಪ ನಾಯಕ), ರವೀಂದ್ರ ಜಡೇಜಾ, ಜಸ್‌ಪ್ರಿತ್‌ ಬುಮ್ರಾ, ಕುಲದೀಪ್‌ ಯಾದವ್‌, ಮೊಹಮ್ಮದ್‌ ಸಿರಾಜ್‌, ಮೊಹಮ್ಮದ್‌ ಶಮಿ, ಇಶಾನ್‌ ಕಿಶನ್‌, ಶಾರ್ದೂಲ್‌ ಠಾಕೂರ್‌, ಅಕ್ಷರ್​ ಪಟೇಲ್‌, ಸೂರ್ಯಕುಮಾರ್‌ ಯಾದವ್‌, ತಿಲಕ್‌ ವರ್ಮಾ, ಪ್ರಸಿದ್ಧ್‌ ಕೃಷ್ಣ, ಸಂಜು ಸ್ಯಾಮ್ಸನ್‌ (ಮೀಸಲು ಆಟಗಾರ).

Exit mobile version