Site icon Vistara News

Cricket Rules : ಹೆಲ್ಮೆಟ್​ ಇಲ್ಲದೇ ಕ್ರಿಕೆಟ್​ ಆಡುವಂತಿಲ್ಲ; ಐಸಿಸಿಯಿಂದ ಹೊಸ ರೂಲ್ಸ್​​!

Cricket Helmet ICC Rules

#image_title

ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಅವರ ಕ್ರಿಕೆಟ್​ ಆಟದ ಪರಿಸ್ಥಿತಿಗಳಲ್ಲಿ ಕೆಲವು ಬದಲಾವಣೆಗಳನ್ನು ತಂದಿದೆ. ಹೊಸ ನಿಯಮದ (Cricket Rules) ಪ್ರಕಾರ ಕ್ರಿಕೆಟ್ ಆಡುವ ವೇಳೆಯಲ್ಲಿ ಅಪಾಯಕಾರಿ ಎನಿಸಿದ ಸ್ಥಳದಲ್ಲಿ ನಿಂತಿರುವಾಗ ಹೆಲ್ಮೆಟ್​ ಕಡ್ಡಾಯ. ಪ್ರಮುಖವಾಗಿ ವೇಗದ ಬೌಲರ್​ಗಳ ವಿರುದ್ಧ ಆಡುವಾಗ ಬ್ಯಾಟ್ಸ್​ಮನ್​​ಗಳು, ಸ್ಟಂಪ್​ ಬಳಿ ನಿಲ್ಲುವ ವಿಕೆಟ್​ಕೀಪರ್​​ಗಳು ಹಾಗೂ ವಿಕೆಟ್ ಮುಂದೆ ಬ್ಯಾಟರ್​​ಗಳಿಗೆ ಸನಿಯ ನಿಲ್ಲುವ ಫೀಲ್ಡರ್​​ಗಳು ಹೆಲ್ಮೆಟ್​ ಧರಿಸಲೇಬೇಕು ಎಂದು ಹೇಳಲಾಗಿದೆ. ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರನ್ನು ಒಳಗೊಂಡ ಐಸಿಸಿಯ ಕ್ರಿಕೆಟ್​ ಸಮಿತಿಯ ಈ ಶಿಫಾರಸು ಮಾಡಿತ್ತು. ಅದನ್ನು ಐಸಿಸಿ ಒಪ್ಪಿದೆ.

ನಾವು ಆಟಗಾರರ ಸುರಕ್ಷತೆಯ ಬಗ್ಗೆ ಚರ್ಚೆ ನಡೆಸಿದ್ದೇವೆ. ಅದು ನಮ್ಮ ಆದ್ಯತೆಯ ವಿಷಯವಾಗಿತ್ತು. ಆಟಗಾರರ ಸುರಕ್ಷತೆ ಖಚಿತಪಡಿಸಿಕೊಳ್ಳಲು ಕೆಲವು ಸ್ಥಾನಗಳಲ್ಲಿ ಆಟಗಾರರಿಗೆ ಹೆಲ್ಮೆಟ್ ಬಳಕೆಯನ್ನು ಕಡ್ಡಾಯಗೊಳಿಸುವುದು ಉತ್ತಮ ಎಂದು ಸಮಿತಿ ನಿರ್ಧರಿಸಿದೆ ಎಂದು ಸೌರವ್ ಗಂಗೂಲಿ ಐಸಿಸಿಗೆ ತಿಳಿಸಿದ್ದಾರೆ.

ಹೆಲ್ಮೆಟ್ ನಿಯಮದ ಹೊರತಾಗಿ, ಜೂನ್ 1 ರಿಂದ ಜಾರಿಗೆ ಬರುವಂತೆ ಆನ್​ಫೀಲ್ಡ್​ ಅಂಪೈರ್​​ಗಳು ಕೊಡುವ ‘ಸಾಫ್ಟ್ ಸಿಗ್ನಲ್’ ಅನ್ನು ರದ್ದುಗೊಳಿಸಲಾಗಿದೆ ಐಸಿಸಿ ಪತ್ರಿಕಾ ಪ್ರಕಟಣೆಯ ಮೂಲಕ ಬದಲಾವಣೆಗಳನ್ನು ಘೋಷಿಸಿದೆ. ಅಂಪೈರ್ ನಿರ್ಧಾರ ತೆಗೆದುಕೊಳ್ಳುವ ವೇಳೆ ಉಂಟಾಗುತ್ತಿದ್ದ ಗೊಂದಲ ತಪ್ಪಿಸಲು ಕೆಲವೊಂದು ಬದಲಾವಣೆ ಮಾಡಲಾಗಿದೆ ಎಂದು ಹೇಳಿದೆ.

ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಆನ್​ಫೀಲ್ಡ್​ ಅಂಪೈರ್​ಗಳು ಟಿವಿ ಅಂಪೈರ್​​ಗಳ ಚರ್ಚೆ ನಡೆಸಬೇಕು ಎಂದು ಎಂದು ಐಸಿಸಿ ಹೇಳಿದೆ.

ಕಳೆದ ಎರಡು ವರ್ಷಗಳಿಂದ ಚರ್ಚೆ ಆರಂಭಗೊಂಡಿದ್ದವು. ಸಾಫ್ಟ್​ ಸಿಗ್ನಲ್​ ಉಂಟು ಮಾಡುತ್ತಿದ್ದ ಗೊಂದಲಗಳನ್ನು ನಿವಾರಣೆ ಮಾಡುವು ಉದ್ದೇಶ ಹೊಂದಲಾಗಿತ್ತು. ಇದೀಗ ಸಮಸ್ಯೆಯನ್ನು ಪರಿಹರಿಸಲಾಗಿದೆ ಎಂದು ಗಂಗೂಲಿ ಹೇಳಿದ್ದಾರೆ ಎಂದು ಐಸಿಸಿ ತಿಳಿಸಿದೆ.

ಇದನ್ನೂ ಓದಿ : WTC Final 2023 : ಭಾರತ, ಆಸ್ಟ್ರೇಲಿಯಾ ನಡುವಿನ ಡಬ್ಲ್ಯುಟಿಸಿ ಫೈನಲ್​ ಪಂದ್ಯದಿಂದ ಹೊಸ ನಿಯಮ ಜಾರಿ

ಸಾಫ್ಟ್​ ಸಿಗ್ನಲ್​ ಬಗ್ಗೆ ಸಮಿತಿಯು ಸುದೀರ್ಘ ಚರ್ಚೆ ನಡೆಸಿದೆ. ಕ್ಯಾಚ್​​ಗಳು ಹಿಡಿದ ಸಂದರ್ಭದಲ್ಲಿ ಅಸ್ಪಷ್ಟತೆ ಇದ್ದರೆ ಸಾಫ್ಟ್​ ಸಿಗ್ನಲ್ ಅಗತ್ಯ ಇರುವುದಿಲ್ಲ ಎಂದು ಹೇಳಲಾಯಿತು. ಕೆಲವೊಂದು ಬಾರಿ ಟಿವಿ ಅಂಪೈರ್​​ಗಳು ಈ ತೀರ್ಮಾನಕ್ಕೆ ಅಂಟಿಕೊಳ್ಳುವ ಸಾಧ್ಯತೆಗಳು ಇರುತ್ತಿದ್ದವು. ಇದು ಚರ್ಚೆಗೆ ಕಾರಣವಾಗಿದ್ದವು ಎಂದು ಸೌರವ್​ ಗಂಗೂಲಿ ಹೇಳಿದ್ದಾರೆ ಎಂದು ಐಸಿಸಿ ಉಲ್ಲೇಖಿಸಿದೆ.

ಫ್ರಿ ಹಿಟ್​ ವೇಳೆ ರನ್​

ನೊ ಬಾಲ್​ ಎಸೆದ ಬಳಿಕದ ಎಸೆತವನ್ನು ಫ್ರಿ ಹಿಟ್​ ಎಂದು ಪರಿಗಣಿಸಲಾಗುತ್ತದೆ. ಈ ಅವಧಿಯಲ್ಲಿ ಬೌಲ್ಡ್ ಅಥವಾ ಕ್ಯಾಚ್ ಹಿಡಿದರೆ ಬ್ಯಾಟರ್​​ಗಳು ಔಟ್​ ಆಗುವುದಿಲ್ಲ. ಆದರೆ, ಚೆಂಡು ವಿಕೆಟ್​ಗೆ ಬಿದ್ದು ದೂರಕ್ಕೆ ಹೋದಾಗ ರನ್​ಗಾಗಿ ಓಡಬಹುದು ಎಂದು ಹೊಸ ನಿಯಮ ಹೇಳುತ್ತದೆ.

2022ರ ವಿಶ್ವ ಕಪ್​ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಪಂದ್ಯದ ವೇಳೆ ಈ ಗೊಂದಲ ಉಂಟಾಗಿತ್ತು. ಕೊನೇ ಓವರ್​ನಲ್ಲಿ ವಿರಾಟ್​ ಕೊಹ್ಲಿ ನೊ ಬಾಲ್​​​ಗೆ ಬೌಲ್ಡ್ ಆಗಿದ್ದರು. ಈ ವೇಳೆ ಕೊಹ್ಲಿ ಹಾಗೂ ದಿನೇಶ್​ ಕಾರ್ತಿಕ್​ ಮೂರು ರನ್ ಕಬಳಿಸಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು. ಈ ಗೊಂದಲಗಳಿಗೆ ಈಗ ತೆರೆ ಎಳೆಯಲಾಗಿದೆ.

Exit mobile version