ಬೆಂಗಳೂರು: ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಟೆಸ್ಟ್ ಸರಣಿಗೆ (Border- Gavaskar Trophy) ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ನಾಗ್ಪುರದಲ್ಲಿ ಫೆಬ್ರವರಿ 9ರಂದು ಮೊದಲ ಪಂದ್ಯ ಆರಂಭವಾಗಲಿದೆ. ಏತನ್ಯಧ್ಯೆ ಎರಡೂ ದೇಶಗಳ ಮಾಜಿ ಆಟಗಾರರು ಭಾರತದಲ್ಲಿ ಟೆಸ್ಟ್ ಪಂದ್ಯಕ್ಕೆ ಸಿದ್ಧಪಡಿಸುವ ಪಿಚ್ಗಳ ಕುರಿತು ಚರ್ಚೆ ನಡೆಸುತ್ತಿದ್ದಾರೆ. ಅದರಲ್ಲಿ ಕೆಲವೊಂದು ಅತಿರೇಕ್ಕೂ ಹೋಗುತ್ತಿವೆ. ಆಸ್ಟ್ರೇಲಿಯಾದ ಮಾಜಿ ಆಟಗಾರರಂತೂ ಭಾರತದಲ್ಲಿ ಅನ್ಯಾಯದ ಪಿಚ್ ಮಾಡುತ್ತಾರೆ ಎಂದೇ ದೂರುತ್ತಿದ್ದಾರೆ. ಇದೇ ರೀತಿ ಕಾಮೆಂಟ್ ಮಾಡಿದ ಅಲ್ಲಿನ ಮಾಜಿ ಆಟಗಾರರೊಬ್ಬರಿಗೆ ಭಾರತ ತಂಡದ ಮಾಜಿ ವೇಗದ ಬೌಲರ್ ಭರ್ಜರಿ ತಿರುಗೇಟು ಕೊಟ್ಟಿದ್ದಾರೆ.
ಆಸ್ಟ್ರೇಲಿಯಾ ತಂಡ ಮಾಜಿ ಆಟಗಾರರಾಗಿರುವ ಇಯಾನ್ ಹೀಲಿ ಕ್ರಿಕೆಟ್ ವೆಬ್ಸೈಟ್ ಒಂದರ ಜತೆ ಮಾತನಾಡುತ್ತಾ, ಒಂದು ವೇಳೆ ಭಾರತ ಸೂಕ್ತ ರೀತಿಯ ಪಿಚ್ ಸಿದ್ಧಪಡಿಸಿದರೆ ಪ್ರವಾಸಿ ಆಸ್ಟ್ರೇಲಿಯಾ ತಂಡವೇ ಸರಣಿಯನ್ನು ಗೆಲ್ಲಲಿದೆ ಎಂದು ಹೇಳಿಕೆ ನೀಡಿದ್ದಾರೆ. ಇದು ವೆಂಕಟೇಶ್ ಪ್ರಸಾದ್ ಅವರನ್ನು ಕೆರಳಿಸಿದೆ. ಅದಕ್ಕೆ ಉತ್ತರ ನೀಡಿದ ಅವರು, 2018 ಮತ್ತು 2021ರಲ್ಲಿ ಭಾರತ ತಂಡ ಆಸ್ಟ್ರೇಲಿಯಾಗೆ ಪ್ರವಾಸ ಮಾಡಿದ್ದ ವೇಳೆ ಅಲ್ಲಿ ಅನ್ಯಾಯದ ಪಿಚ್ ತಯಾರಿಸಲಾಗಿತ್ತು. ಆದರೆ, ಎರಡು ಬಾರಿಯೂ ಭಾರತ ತಂಡವೇ ಸರಣಿ ಗೆದ್ದಿದೆ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ : Border Gavaskar Trophy: ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಗರಿಷ್ಠ ರನ್ರೇಟ್ ಹೊಂದಿರುವ ಬ್ಯಾಟರ್ಗಳು
ಈ ಎಲ್ಲ ಚರ್ಚೆಗಳ ನಡುವೆ ಭಾರತ ತಂಡದ ಆಟಗಾರರು ನಾಗ್ಪುರದಲ್ಲಿ ಪಂದ್ಯಕ್ಕಾಗಿ ಅಭ್ಯಾಸ ನಡೆಸುತ್ತಿದ್ದಾರೆ. ಈ ಸರಣಿಯನ್ನು ಗೆಲ್ಲುವ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನ ಫೈನಲ್ನಲ್ಲಿ ಅವಕಾಶ ಪಡೆಯುವ ನಿಟ್ಟಿನಲ್ಲಿ ಯೋಜನೆ ರೂಪಿಸಿಕೊಂಡಿದ್ದಾರೆ. ನಾಯಕ ರೋಹಿತ್ ಶರ್ಮ ಅವರಿಗೂ ಇದು ಪೂರ್ಣ ಪ್ರಮಾಣದ ನಾಯಕತ್ವ ವಹಿಸಿಕೊಂಡ ಬಳಿಕ ಎದುರಾದ ದೊಡ್ಡ ಟಾಸ್ಕ್ ಎನಿಸಿಕೊಂಡಿದೆ.