Site icon Vistara News

‘ಘನತೆಗೆ ತಕ್ಕಂತೆ ನಡೆದುಕೊಳ್ಳಿ’ ಪಾಕ್​ ಕ್ರಿಕೆಟ್​ ಮಂಡಳಿ ಅಧ್ಯಕ್ಷರ ವಿರುದ್ಧ ಹರಿಹಾಯ್ದ ಅಫ್ರಿದಿ

Afridi

ಕರಾಚಿ: ಪಾಕ್​ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಂ (Babar Azam) ಮತ್ತು ಪಾಕ್ ಕ್ರಿಕೆಟ್ ಮಂಡಳಿ ಅಧ್ಯಕ್ಷ ಝಾಕಾ ಅಶ್ರಫ್ (Zaka Ashraf) ನಡುವಿನ ವಾಟ್ಸ್​ ಅಪ್ ಚಾಟ್ ಸೋರಿಕೆ ಪ್ರಕರಣದ ಕುರಿತು, ಪಾಕ್​ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ (Shahid Afridi) ಅವರು ಝಾಕಾ ಅಶ್ರಫ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ನಿಮ್ಮ ಘನತೆಗೆ ತಕ್ಕಂತೆ ನಡೆದುಕೊಳ್ಳಿ ಎಂದು ಬಹಿರಂಗವಾಗಿಯೇ ಎಚ್ಚರಿಕೆ ನೀಡಿದ್ದಾರೆ.

ಏನಿದು ವಿವಾದ

ಅಫ್ರಿದಿ ಅವರು ಝಾಕಾ ಅಶ್ರಫ್ ಮೇಲೆ ಸಿಡಿಮಿಡಿಗೊಳ್ಳಲು ಪ್ರಮುಖ ಕಾರಣವೆಂದರೆ, ಅಫಘಾನಿಸ್ತಾನ ವಿರುದ್ಧ ಪಾಕಿಸ್ತಾನ ತಂಡ ಸೋಲು ಕಂಡಿತ್ತು. ಈ ಸೋಲಿನ ಬಳಿಕ ಬಾಬರ್ ಹಾಗೂ ಪಿಸಿಬಿ ಅಧ್ಯಕ್ಷ ಝಾಕಾ ಅಶ್ರಫ್ ಅವರ ನಡುವೆ ಎಲ್ಲವೂ ಸರಿ ಇಲ್ಲ. ಪಿಸಿಬಿ ಮುಖ್ಯಸ್ಥ ಝಾಕಾ ಅಶ್ರಫ್, ನಾಯಕ ಬಾಬರ್‌ ಅವರ ಯಾವುದೇ ಕರೆಗಳನ್ನು ಸ್ವೀಕರಿಸುತ್ತಿಲ್ಲ ಎಂದು ಮಾಜಿ ಕ್ರಿಕೆಟಿಗ ರಶೀದ್‌ ಲತೀಫ್‌ ಟಿವಿ ಚರ್ಚೆಯೊಂದರಲ್ಲಿ ಹೇಳಿದ್ದರು. ಈ ಹೇಳಿಕೆ ನಂತರ ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಚರ್ಚೆ ಆರಂಭವಾಗಿತ್ತು.

ರಶೀದ್‌ ಲತೀಫ್‌ ಅವರ ಈ ಆರೋಪಕ್ಕೆ ಪ್ರತಿಕ್ರಿಯಿಸಿದ್ದ ಅಶ್ರಫ್ ಪಾಕಿಸ್ತಾನದ ವಾಹಿನಿಯೊಂದರ ಸಂದರ್ಶನದಲ್ಲಿ ಈ ಸುದ್ದಿಯನ್ನು ತಳ್ಳಿ ಹಾಕಿದ್ದರು. ಮಾತ್ರವಲ್ಲದೆ ಬಾಬರ್ ಎಂದಿಗೂ ನನ್ನನ್ನು ನೇರವಾಗಿ ಸಂಪರ್ಕಿಸಿಲ್ಲ. ಏನೇ ವಿಚಾರವಿದ್ದರೂ ಅವರು ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜತೆ ಮಾತ್ರ ಮಾತುಕತೆ ನಡೆಸುತ್ತಾರೆ ಎಂದು ಅಶ್ರಫ್ ಹೇಳಿದ್ದರು. ಅಲ್ಲದೆ ತನ್ನ ಹೇಳಿಕೆಗೆ ಪೂರಕವಾಗಿ, ಬಾಬರ್ ಮತ್ತು ಪಿಸಿಬಿ ಸಿಒಒ ನಡುವಿನ ವಾಟ್ಸಾಪ್ ಚಾಟ್​ಗಳನ್ನು ಮಾಧ್ಯಮದ ಮುಂದೆ ಬಹಿರಂಗಪಡಿಸಿದ್ದರು. ಇದು ತಂಡ ಗೌಪ್ಯತೆಗೆ ಧಕ್ಕೆ ಉಂಡು ಮಾಡುತ್ತದೆ ಎಂಬುದು ಅಫ್ರಿದಿಯ ತರ್ಕವಾಗಿದೆ. ಇದೇ ಕಾರಣಕ್ಕೆ ಅವರು ಪಿಸಿಬಿ ಅಧ್ಯಕ್ಷರಿಗೆ ಬಾಯಿಗೆ ಬಂದಂತೆ ಬೈದಿದ್ದಾರೆ.

ಕ್ಲಬ್ ಅಧ್ಯಕ್ಷರಲ್ಲ

ಪಾಕಿಸ್ತಾನದ ಟಿವಿ ಕಾರ್ಯಕ್ರಮದಲ್ಲಿ ಈ ಬಗ್ಗೆ ಮಾತನಾಡಿದ ಅಫ್ರಿದಿ, ‘ಝಾಕಾ ಅಶ್ರಫ್ ಅವರೇ ನಿಮ್ಮ ಮಾತಿನ ಮತ್ತು ನಡತೆಯ ಮೇಲೆ ಹಿಡಿತವಿರಲಿ. ನೀವು ಯಾವುದೇ ಕ್ಲಬ್ ಅಧ್ಯಕ್ಷರಲ್ಲ. ನೀವು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷರು. ಈ ಸ್ಥಾನದಲ್ಲಿರುವ ನೀವು ಅನೇಕ ವಿಷಯಗಳನ್ನು ಗಮನಿಸಬೇಕು. ತಂಡದ ಆಂತರಿಕ ವಿಚಾರವನ್ನು ಮಾಧ್ಯಮ ಸಂಸ್ಥೆಗಳ ಮಾಲೀಕರಿಗೆ ಫೋನ್ ಮಾಡಿ ಇದನ್ನು ಪ್ರಸಾರ ಮಾಡುವಂತೆ ನೀವು ಹೇಳಿರುವು ನಿಜಕ್ಕೂ ಆಶ್ಚರ್ಯ ತರಿಸಿದೆ. ನಿಮ್ಮ ಈ ರೀತಿಯ ವರ್ತನೆಯಿಂದ ತಂಡದ ಸಾಮರ್ಥ್ಯ ಕುಸಿಯುತ್ತದೆ. ಇಂದು ಜನರು ನಿಮ್ಮ ಬಗ್ಗೆ ಟೀಕೆ ಮಾಡುತ್ತಿದ್ದಾರೆ ಎಂದರೆ ಅದಕ್ಕೆ ನೀವು ಮಾಡಿದ ಈ ಕೆಲವೇ ಕಾರಣ. ಮೊದಲು ನಿಮ್ಮ ಕೆಲಸ ಏನಿದೆಯೋ ಅದನ್ನು ನೋಡಿಕೊಳ್ಳಿ” ಎಂದು ನೇರ ಸಂದರ್ಶನದಲ್ಲಿ ಈ ಮಾತನ್ನು ಹೇಳಿದ್ದಾರೆ.

“ತಂಡವೊಂದು ಸೋತಾಗ ತಂಡದ ನಾಯಕನ ಮತ್ತು ಆಟಗಾರರ ಬೆಂಬಲಕ್ಕೆ ನಿಲ್ಲಬೇಕೆ ಹೊರತು ಅವರ ವಿರುದ್ದ ಸರಣಿ ಆರೋಪಗಳನ್ನು ಮಾಡಿ, ಅವರ ಬಗ್ಗೆ ಇಲ್ಲ ಸಲ್ಲದ ಮಾತುಗಳನಾಡುತ್ತಿದ್ದರೆ, ಅವರ ಆತ್ಮವಿಶ್ವಾಸ ಮತ್ತಷ್ಟು ಕುಸಿಯುತ್ತದೆ. ತಂಡದ ಪರ ಆಡುವವರು ಪಾಕಿಸ್ತಾನದ ಆಟಗಾರರು ಬೇರೆ ಯಾವುದೋ ದೇಶದಿಂದ ವಲಸೆ ಬಂದು ಇಲ್ಲಿ ಹಣಕ್ಕಾಗಿ ಆಡುವವರಲ್ಲ. ಇನ್ನಾದರೂ ಆಟಗಾರರ ಬಗ್ಗೆ ಹೇಳಿಕೆಗಳನ್ನು ನೀಡುವಾಗ ನಿಮ್ಮ ಘನತೆಗೆ ತಕ್ಕಂತೆ ನೆಡೆದುಕೊಳ್ಳಿ” ಎಂದು ಅಫ್ರಿದಿ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ Jasprit Bumrah : ಬುಮ್ರಾನನ್ನು ಟೀಕೆ ಮಾಡಿದ್ದ ಪಾಕ್​ ಕ್ರಿಕೆಟಿಗ ಈಗ ನಾನವನಲ್ಲ ಎನ್ನುತ್ತಿದ್ದಾರೆ! ​

ಬಾಬರ್​ ಚಾಟ್​ನಲ್ಲಿ ಏನಿದೆ?

ಝಾಕಾ ಅಶ್ರಫ್ ಅವರು ಬಹಿರಂಗಪಡಿಸಿರುವ ಬಾಬರ್​ ಮತ್ತು ಪಿಸಿಬಿ ಸಿಒಒ ಸಲ್ಮಾನ್ ನಸೀರ್ ನಡುವಿನ ಚಾಟ್​ನಲ್ಲಿ ‘ಬಾಬರ್ ನೀವು ಫೋನ್ ಮಾಡಿದರೂ, ಮೆಸೇಜ್ ಮಾಡಿದರೂ ಅಶ್ರಫ್ ಅವರು ನಿಮಗೆ ಸ್ಪಂದಿಸುತ್ತಿಲ್ಲ ಎಂದು ಟಿವಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವರದಿಯಾಗಿದೆ. ಇದು ನಿಜವೇ? ಎಂದು ನಾಸಿರ್ ಅವರು ಬಾಬರ್​ಗೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಬಾಬರ್, ‘ಸಲ್ಮಾನ್ ಭಾಯ್, ನಾನು ಅಶ್ರಫ್ ಅವರಿಗೆ ಕರೆ ಮಾಡಿಲ್ಲ’ ಎಂದು ಉತ್ತರಿಸಿದ್ದಾರೆ ಎನ್ನಲಾಗಿರಯವ ಚಾಟ್​ ವೈರಲ್​ ಆಗಿತ್ತು. ಸದ್ಯ ಪಾಕಿಸ್ತಾನ ತಂಡ ಮಂಗಳವಾರದ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಮಣಿಸಿ ಸೆಮಿ ಫೈನಲ್​ ಆಸೆಯನ್ನು ಜೀವಂತವಿರಿಸಿದೆ.

Exit mobile version