ಮುಂಬಯಿ: 2028ರಲ್ಲಿ ಲಾಸ್ ಏಂಜಲಿಸ್ನಲ್ಲಿ(los angeles 2028 olympics) ನಡೆಯುವ ಒಲಿಂಪಿಕ್ಸ್ಗೆ(olympics) ಕ್ರಿಕೆಟ್ ಸೇರ್ಪಡೆಯಾಗಿರುವುದು ಈಗಾಗಲೇ ತಿಳಿದ ವಿಚಾರ. ಇದೀಗ 2030ರ ಯೂತ್ ಒಲಿಂಪಿಕ್ಸ್ಗೂ(Youth Olympic 2030) ಕ್ರಿಕೆಟ್ ಸೇರ್ಪಡೆಗೊಳಿಸಲು ಪ್ರಯತ್ನಿಸಲಾಗುತ್ತಿದೆ ಎಂದು ತಿಳಿದುಬಂದಿದೆ. ಕಳೆದ ವರ್ಷ ಮುಂಬೈನಲ್ಲಿ ನಡೆದ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಸಭೆಯಲ್ಲಿ ಕ್ರಿಕೆಟ್ ಆಟವನ್ನು ಮತ್ತೆ ಒಲಿಂಪಿಕ್ಸ್ಗೆ ಸೇರ್ಪಡೆಗೊಳಿಸಲಾಗಿತ್ತು. ಇದೀಗ ಯೂತ್ ಒಲಿಂಪಿಕ್ಸ್ ಕ್ರಿಕೆಟ್(olympics cricket) ಸೇರ್ಪಡೆಯ ಸಂಬಂಧ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ (ಐಒಸಿ) ಜತೆಗೆ ಚರ್ಚಿಸಲಾಗುವುದು ಎಂದು ಐಸಿಸಿ(ICC) ಹೇಳಿದೆ.
2030ರ ಯೂತ್ ಒಲಿಂಪಿಕ್ ಗೇಮ್ಸ್ ಆತಿಥ್ಯಕ್ಕೆ ಭಾರತ ಬಿಡ್ ಸಲ್ಲಿಸಲು ಮುಂದಾಗಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ ಯೂತ್ ಒಲಿಂಪಿಕ್ಸ್ಅನ್ನು ಮುಂಬೈನಲ್ಲಿ ನಡೆಸಲು ಯೋಜನೆ ರೂಪಿಸಿಕೊಂಡಿದೆ ಎನ್ನಲಾಗಿದೆ. ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯ ಸದಸ್ಯೆಯಾಗಿರುವ ನೀತಾ ಅಂಬಾನಿ ಅವರು ಈಗಾಗಲೇ ಒಲಿಂಪಿಕ್ಸ್ ವಿಚಾರದಲ್ಲಿ ಹಲವು ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಹೀಗಾಗಿ ಯೂತ್ ಒಲಿಂಪಿಕ್ಸ್ಗೆ ಭಾರತ ಆತಿಥ್ಯ ವಹಿಸಿಕೊಳ್ಳುವಲ್ಲಿ ಮಹತ್ವದ ಪಾತ್ರವಹಿಸುವ ಸಾಧ್ಯತೆ ಇದೆ.
ಒಂದು ವೇಳೆ ಭಾರತಕ್ಕೆ ಯೂತ್ ಒಲಿಂಪಿಕ್ಸ್ ಆತಿಥ್ಯ ಲಭಿಸಿದರೆ, ಬಿಸಿಸಿಐ ಮಧ್ಯವಸ್ಥಿಕೆಯಿಂದ ಕ್ರಿಕೆಟ್ ಸೇರ್ಪಡೆಗೊಳ್ಳುವುದು ಬಹುತೇಕ ಖಚಿತ. ಯೂತ್ ಒಲಿಂಪಿಕ್ಸ್ಗೆ ಕ್ರಿಕೆಟ್ ಸೇರ್ಪಡೆಗೊಂಡರೆ, ಜಾಗತಿಕವಾಗಿ ತಳಮಟ್ಟದಿಂದ ಕ್ರಿಕೆಟ್ ಅಭಿವೃದ್ಧಿಗೂ ನೆರವಾಗಲಿದೆ. ಯೂತ್ ಒಲಿಂಪಿಕ್ಸ್ 15ರಿಂದ 18 ವಯೋಮಿತಿ ಕ್ರೀಡಾಪಟುಗಳಿಗೆ ಸೀಮಿತವಾಗಿದೆ. ಇದಕ್ಕೆ ಕ್ರಿಕೆಟ್ ಸೇರ್ಪಡೆಯಾದರೆ, ಯುವ ಕ್ರಿಕೆಟಿಗರಿಗೆ ಜಾಗತಿಕ ಮಟ್ಟದ ವೇದಿಕೆ ಲಭಿಸಿದಂತಾಗುತ್ತದೆ.
ಇದನ್ನೂ ಓದಿ Virat Kohli: ಕೊಹ್ಲಿಯ ಮೊದಲ ಅಂತಾರಾಷ್ಟ್ರೀಯ ಪಂದ್ಯಕ್ಕೆ ತುಂಬಿತು 16 ವರ್ಷ
ಕಳೆದ ವರ್ಷ ಚೀನದ ಹ್ಯಾಂಗ್‌ಝೂನಲ್ಲಿ ನಡೆದಿದ್ದ 19ನೇ ಏಷ್ಯನ್ ಗೇಮ್ಸ್‌ನಲ್ಲಿ ಮಹಿಳಾ ಮತ್ತು ಪುರುಷರ ಕ್ರಿಕೆಟ್ ಟೂರ್ನಿ ನಡೆಸಿ ಯುಶಸ್ಸು ಕಂಡಿತ್ತು. ಟಿ20 ಮಾದರಲ್ಲಿ ಪಂದ್ಯಾವಳಿ ನಡೆದಿತ್ತು. ಲಾಸ್ ಏಂಜಲಿಸ್ ಒಲಿಂಪಿಕ್ಸ್ನಲ್ಲಿಯೂ ಟಿ20 ಮಾದರಿಯಲ್ಲೇ ಟೂರ್ನಿ ನಡೆಯಲಿದೆ.
ಒಲಿಂಪಿಕ್ಸ್‌ನಲ್ಲಿ ಒಂದು ಬಾರಿ ನಡೆದಿತ್ತು ಕ್ರಿಕೆಟ್
ಒಲಿಂಪಿಕ್ಸ್‌ನಲ್ಲಿ ಇಷ್ಟರವರೆಗೆ ಒಮ್ಮೆ ಮಾತ್ರ ಕ್ರಿಕೆಟ್ ಸ್ಪರ್ಧೆ ನಡೆದಿದೆ. 1896ರ ಉದ್ಘಾಟನ ಏಥೆನ್ಸ್ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸ್ಪರ್ಧೆಯನ್ನು ಸೇರ್ಪಡೆಗೊಳಿಸಲು ಯೋಜನೆ ಹಾಕಿಕೊಳ್ಳಲಾಗಿತ್ತು. ಆದರೆ ಭಾಗವಹಿಸುವ ತಂಡಗಳ ಕೊರತೆಯಿಂದ ರದ್ದು ಮಾಡಲಾಗಿತ್ತು. ಆದರೆ ನಾಲ್ಕು ವರ್ಷಗಳ ಬಳಿಕ 1900ರ ಪ್ಯಾರಿಸ್ ಒಲಿಪಿಕ್ಸ್‌ನಲ್ಲಿ ಕ್ರಿಕೆಟ್ ಸ್ಪರ್ಧೆ ಮೊದಲ ಬಾರಿ ಜರಗಿದೆ. ಗ್ರೇಟ್ ಬ್ರಿಟನ್ ಮತ್ತು ಆತಿಥೇಯ ಫ್ರಾನ್ಸ್ ಮಾತ್ರ ಸ್ಪರ್ಧಿಸಿದ್ದು, ಬ್ರಿಟನ್ ಚಿನ್ನ ಜಯಿಸಿತ್ತು.ಸೈಂಟ್ ಲೂಯಿಸ್‌ನಲ್ಲಿ 1904ರಲ್ಲಿ ನಡೆದ ಒಲಿಂಪಿಕ್ಸನಲ್ಲಿ ಕ್ರಿಕೆಟ್ ಸ್ಪರ್ಧೆಗೆ ಸಿದ್ಧಥೆ ನಡೆಸಲಾಗಿದ್ದರೂ ಅಂತಿಮವಾಗಿ ರದ್ದುಗೊಂಡಿತ್ತು. ಆ ಬಳಿಕ ಯಾವುದೇ ಒಲಿಂಪಿಕ್ಸ್‌ನಲ್ಲೂ ಕ್ರಿಕೆಟ್ ಸ್ಪರ್ಧೆ ನಡೆದಿಲ್ಲ.