ಪಣಜಿ: ಮೋರ್ಜಿಮ್‌ನಲ್ಲಿರುವ ವಿಲ್ಲಾ ನೋಂದಣಿ ಮಾಡದ ಆರೋಪದ ಮೇಲೆ ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್(Yuvraj Singh) ಅವರಿಗೆ ಗೋವಾ ಸರ್ಕಾರ ನೋಟಿಸ್ ನೀಡಿದ್ದು, ಡಿಸೆಂಬರ್ 8ರಂದು ಬೆಳಿಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.
ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಗೋವಾದ ಮೊರ್ಜಿಮ್ನಲ್ಲಿ ಐಷಾರಾಮಿ ಕಟ್ಟಡ ಹೊಂದಿದ್ದಾರೆ. ಕಾಸಾ ಸಿಂಗ್ ಹೆಸರಿನ ಈ ಐಷಾರಾಮಿ ವಿಲ್ಲಾವನ್ನು ಪ್ರವಾಸಿಗರಿಗೆ ಬಾಡಿಗೆಗೆ ನೀಡುವುದಾಗಿ ಯುವರಾಜ್ ಸಿಂಗ್ ಆನ್‌ಲೈನ್‌ನಲ್ಲಿ ಪ್ರಕಟಣೆ ನೀಡಿದ್ದರು. ಆದರೆ ಗೋವಾ ಕಾನೂನಿನ ಪ್ರಕಾರ ಮನೆಯನ್ನು ಬಾಡಿಗೆ ನೀಡುವುದಕ್ಕೂ ಮೊದಲು ಗೋವಾ ಸರ್ಕಾರದ ಅನುಮತಿಯನ್ನು ತೆಗೆದುಕೊಳ್ಳಬೇಕು. ಟೂರಿಸ್ಟ್ ಟ್ರೇಡ್ ಆಕ್ಟ್-1982ರ ಪ್ರಕಾರ ನೋಂದಣಿ ಮಾಡಬೇಕು. ಆದರೆ ಮನೆಯನ್ನು ನೋಂದಣಿ ಮಾಡದೆ ಪ್ರವಾಸಿಗರಿಗೆ ಬಾಡಿಗೆಗೆ ನೀಡುವುದಾಗಿ ಯುವರಾಜ್ ಆನ್‌ಲೈನ್‌ನಲ್ಲಿ ಜಾಹೀರಾತು ನೀಡಿದ್ದರು.
ಇದೀಗ ಯುವರಾಜ್ ಸಿಂಗ್ ಅವರ ಈ ಜಾಹೀರಾತಿಗೆ ಗೋವಾ ಅಧಿಕಾರಿಗಳು ಪ್ರತಿಕ್ರಿಯಿಸಿದ್ದು, ಪ್ರವಾಸೋದ್ಯಮ ಇಲಾಖೆಯ ನಿಯಮಗಳ ಪ್ರಕಾರ ನೋಂದಣಿ ಮಾಡದೆ ಬಾಡಿಗೆಗೆ ಜಾಹೀರಾತು ನೀಡುವುದು ನಿಯಮಗಳಿಗೆ ವಿರುದ್ಧವಾಗಿದೆ ಎಂದು ಗೋವಾ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಹೇಳಿಕೆ ನೀಡಿ ನೋಟಿಸ್ ನೀಡಿದ್ದಾರೆ.
“ಈ ನೋಟಿಸ್ನಲ್ಲಿ ಉಲ್ಲೇಖಿಸಲಾದ ದಿನಾಂಕದೊಳಗೆ ಯಾವುದೇ ಉತ್ತರವನ್ನು ನೀಡದಿದ್ದರೆ, ಮತ್ತು ನೋಟಿಸ್ ನಲ್ಲಿ ಉಲ್ಲೇಖಿಸಲಾದ ಆಧಾರಗಳು ಉಲ್ಲಂಘಿಸಿದ್ದು ಕಂಡುಬಂದರೆ ಸೆಕ್ಷನ್ 22ರ ಅಡಿಯಲ್ಲಿ ಶಿಕ್ಷೆಯ ಜತೆಗೆ 1 ಲಕ್ಷದವರೆಗೆ ದಂಡ ವಿಧಿಸಲಾಗುತ್ತದೆ” ಎಂದು ನೋಟಿಸ್ನಲ್ಲಿ ಹೇಳಲಾಗಿದೆ.
ಇದನ್ನೂ ಓದಿ | IND VS NZ | ಭಾರತ ಮತ್ತು ನ್ಯೂಜಿಲ್ಯಾಂಡ್ ವಿರುದ್ಧದ ಅಂತಿಮ ಟಿ20 ಪಂದ್ಯ ಟೈನಲ್ಲಿ ಅಂತ್ಯ; ಸರಣಿ ಗೆದ್ದ ಭಾರತ