ಮುಂಬಯಿ: ಟೀಮ್ ಇಂಡಿಯಾದ ಮಾಜಿ ಆಟಗಾರ, ವಿಶ್ವಕಪ್ ಹೀರೊ, ಸಿಕ್ಸರ್ ಸಿಂಗ್ ಯುವರಾಜ್ ಸಿಂಗ್(Yuvraj Singh) ಅವರು ಈ ಬಾರಿ ಭಾರತ ತಂಡ ವಿಶ್ವಕಪ್ನಲ್ಲಿ(world cup 2023) ಚಾಂಪಿಯನ್ ಪಟ್ಟ ಅಲಂಕರಿಸುವುದು ಕಷ್ಟಸಾಧ್ಯ ಎಂದು ಭವಿಷ್ಯ ನುಡಿದ್ದಾರೆ. ತವರಿನ ಅಂಗಣದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಮಧ್ಯಮ ಕ್ರಮಾಂಕವನ್ನು ಬಲಿಷ್ಠಗೊಳಿಸದಿದ್ದರೆ ಕಪ್ ಗೆಲ್ಲಲು ಸಾಧ್ಯವಿಲ್ಲ ಎಂದು ಯುವಿ ಹೇಳಿದ್ದಾರೆ.
ಅಕ್ಟೋಬರ್ 5 ರಿಂದ ನವೆಂಬರ್ 19 ರವರೆಗೆ ಭಾರತದ ಆತಿಥ್ಯದಲ್ಲಿ ಏಕದಿನ ವಿಶ್ವಕಪ್ ಟೂರ್ನಿ ನಡೆಯಲಿದೆ. ಆಸ್ಟ್ರೇಲಿಯಾ ವಿರುದ್ಧ ಆಡುವ ಮೂಲಕ ಭಾರತ ತನ್ನ ವಿಶ್ವ ಕಪ್ ಅಭಿಯಾನ ಆರಂಭಿಸಲಿದೆ. ಈ ಪಂದ್ಯ ಅಕ್ಟೋಬರ್ 8 ರಂದು ನಡೆಯಲಿದೆ. ಇದಾದ ಬಳಿಕ ಅಕ್ಟೋಬರ್ 15ರಂದು ಸಾಂಪ್ರದಾಯಿಕ ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತ ಆಡಲಿದೆ.
ಯುಟ್ಯೂಬ್ ವಾಹಿನಿಯ ‘ಕ್ರಿಕೆಟ್ ಬಾಸು’ ಚಾನಲ್‌ನಲ್ಲಿ ಮಾತನಾಡಿದ ಯುವರಾಜ್ ಸಿಂಗ್, “ಒಬ್ಬ ಅಪ್ಪಟ ದೇಶಪ್ರೇಮಿಯಾಗಿ ನಾನು ಕೂಡ ಭಾರತ ತಂಡ ಕಪ್ ಗೆಲ್ಲುವುದನ್ನು ನೋಡಲು ಬಯಸುತ್ತೇನೆ. ಆದರೆ ಭಾರತ ತಂಡ ಟ್ರೋಫಿ ಗೆದ್ದೇ ಗೆಲ್ಲುತ್ತದೆ ಎಂದು ಹೇಳಲು ಕಷ್ಟಕರ. ಏಕೆಂದರೆ ಭಾರತ ತಂಡದಲ್ಲಿ ಹಲವು ಸಮಸ್ಯೆಗಳು ಕಾಣುತ್ತಿದೆ, ಇದು ಪರಿಹಾರ ಕಾಣುವವರೆಗೆ ಕಪ್ ಗೆಲ್ಲುವುದು ಕಷ್ಟ” ಎಂದು ಹೇಳಿದ್ದಾರೆ.
“ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಸಮಸ್ಯೆ ಎದ್ದು ಕಾಣುತ್ತಿದೆ. 4 ಮತ್ತು 5 ಕ್ರಮಾಂಕದ ಬ್ಯಾಟರ್‌ಗಳ ಪ್ರದರ್ಶನ ತಂಡದ ಗೆಲುವನನ್ನು ನಿರ್ಧರಿಸಿತ್ತದೆ. ಆದರೆ ಸದ್ಯ ಭಾರತ ತಂಡದಲ್ಲಿ ಈ ಸ್ಥಾನಕ್ಕೆ ಸೂಕ್ತ ಆಟಗಾರ ಇಲ್ಲ. ಕಳೆದ ಕೆಲ ವರ್ಷಗಳಿಂದಲೂ ತಂಡಕ್ಕೆ ಇದುವೇ ಹಿನ್ನಡೆಯಾಗಿದೆ. 2011 ವಿಶ್ವ ಕಪ್ನಲ್ಲಿ ತಂಡ ಮಧ್ಯಮ ಕ್ರಮಾಂಕದಲ್ಲಿ ಬಲಿಷ್ಠವಾಗಿತ್ತು. ಹೀಗಾಗಿ ತಂಡ ಕಪ್ ಗೆಲ್ಲುವಲ್ಲಿ ಸಹಕಾರಿಯಾಯಿತು. ಇನ್ನು ಗಾಯದ ಸಮಸ್ಯೆಯೂ ಭಾರತಕ್ಕೆ ಹಿನ್ನಡೆಯಾಗಿದೆ” ಹೀಗಾಗಿ ಭಾರತ ಕಪ್ ಗೆಲ್ಲುವುದು ಅನುಮಾನ ಎಂದು ಯುವರಾಜ್ ಹೇಳಿದ್ದಾರೆ.
ಇದನ್ನೂ ಓದಿ Rishabh Pant: ರಿಷಭ್ ಪಂತ್ ಭೇಟಿಯಾದ ಟೀಮ್ ಇಂಡಿಯಾದ ಮಾಜಿ ಆಟಗಾರ ಯುವರಾಜ್ ಸಿಂಗ್
2011ರ ವಿಶ್ವಕಪ್ ನಲ್ಲಿ ಭಾರತದ ವಿಜಯಕ್ಕೆ ಯುವಿ ಪ್ರಮುಖ ಕಾರಣರಾಗಿದ್ದರು. ಆ ವಿಶ್ವಕಪ್ ನಲ್ಲಿ 90.50ರ ಸರಾಸರಿಯಲ್ಲಿ 362 ರನ್ ಗಳಿಸಿದ್ದ ಯುವಿ, 15 ವಿಕೆಟ್ ಗಳನ್ನೂ ಕಬಳಿಸಿದ್ದರು. ಆದರೆ ಈ ಕೂಟದ ಬಳಿಕ ಯುವಿ ಕ್ಯಾನ್ಸರ್ ಗೆ ತುತ್ತಾಗಿದ್ದರು. 2019ರ ಜೂನ್ 10 ರಂದು ಅವರು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಘೋಷಿಸಿದ್ದರು.