Site icon Vistara News

Yuvraj Singh: ಐಪಿಎಲ್​ ಕೋಚಿಂಗ್​ ನಡೆಸಲಿದ್ದಾರೆ ಯುವರಾಜ್​ ಸಿಂಗ್; ಯಾವ ತಂಡ?

Yuvraj Singh

Yuvraj Singh: Yuvraj Singh To Join Delhi Capitals Coaching Staff For IPL 2025

ನವದೆಹಲಿ: ಟೀಮ್​ ಇಂಡಿಯಾದ(Team India) ಮಾಜಿ ಸ್ಟಾರ್​ ಆಲ್​ರೌಂಡರ್​ ಯುವರಾಜ್​ ಸಿಂಗ್(Yuvraj Singh)​ ಅವರು ಇದೀಗ ಕೋಚಿಂಗ್​ ನಡೆಸಲು ಮುಂದಾಗಿದ್ದಾರೆ. ಮುಂದಿನ ಆವೃತ್ತಿಯ ಐಪಿಎಲ್​ನಲ್ಲಿ(IPL 2025) ಡೆಲ್ಲಿ ಕ್ಯಾಪಿಟಲ್ಸ್(Delhi Capitals)​ ತಂಡದ ಕೋಚ್​ ಆಗಿ ನೇಮಕಗೊಳ್ಳುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಈಗಾಗಲೇ ಡೆಲ್ಲಿ ಕ್ಯಾಪಿಟಲ್ಸ್​ ಫ್ರಾಂಚೈಸಿ ಕೋಚ್​ ಆಗಿದ್ದ, ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್​ ಅವರನ್ನು ಕೋಚಿಂಗ್​ ಹುದ್ದೆಯಿಂದ ಕೆಳಗಿಳಿಸಿದೆ. ನೂತನ ಕೋಚ್​ ಹುಡುಕಾಟದಲ್ಲಿದ್ದ ಡೆಲ್ಲಿ ಇದೀಗ ಯುವರಾಜ್​ ಅವರನ್ನು ಕೋಚ್​ ಮಾಡಲು ಮುಂದಾಗಿದೆ ಎನ್ನಲಾಗಿದೆ. 2015ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡ ಯುವರಾಜ್​ ಸಿಂಗ್​ ಅವರನ್ನು ಹರಾಜಿನಲ್ಲಿ 16 ಕೋಟಿ ರೂ. ನೀಡಿ ಖರೀದಿಸಿತ್ತು. ಇದೀಗ ತಾವು ಆಡಿದ್ದ ತಂಡಕ್ಕೇ ಕೋಚ್​ ಆಗಲು ಯುವಿ ಸಿದ್ಧವಾದಂತಿದೆ. ಮೂಲಗಳ ಪ್ರಕಾರ ಯುವರಾಜ್​ ಜತೆ ಫ್ರಾಂಚೈಸಿ ಈಗಾಗಲೇ ಮಾತುಕತೆ ನಡೆಸಿದ್ದು ಕೋಚಿಂಗ್​ ನಡೆಸಲು ಯುವಿ ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗಿದೆ. ಆದರೆ, ಅಧಿಕೃತ ಮಾಹಿತಿ ಇನ್ನಷ್ಟೇ ಬರಬೇಕಿದೆ.

ಈ ಹಿಂದೆ ಯುವರಾಜ್​ ಗುಜರಾತ್‌ ಟೈಟಾನ್ಸ್‌ (Gujarat Titans) ತಂಡಕ್ಕೆ ಕೋಚ್‌ ಆಗಲಿದ್ದಾರೆ ಎಂಬ ಸುದ್ದಿಯೊಂದು ಹರಿದಾಡಿತ್ತು. ಆದರೆ ಯುವಿ ಡೆಲ್ಲಿ ತಂಡದ ಕೋಚ್​ ಆಗುವ ಸಾಧ್ಯತೆ ಕಂಡುಬಂದಿದೆ. ಯುವರಾಜ್​ ಸಿಂಗ್​ 132 ಐಪಿಎಲ್​ ಪಂದ್ಯವನ್ನಾಡಿ 2750 ರನ್ ಬಾರಿಸಿದ್ದಾರೆ. 83 ರನ್​ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ. 36 ವಿಕೆಟ್​ ಕೂಡ ಕಬಳಿಸಿದ ಸಾಧನೆ ಇವರದ್ದಾಗಿದೆ. ಭಾರತ ತಂಡ 2007ರ ಟಿ20 ವಿಶ್ವಕಪ್​ ಮತ್ತು 2011ರ ಏಕದಿನ ವಿಶ್ವಕಪ್​ ಗೆಲ್ಲುವಲ್ಲಿ ಯುವರಾಜ್​ ಅವರ ಆಲ್​ರೌಂಡರ್​ ಪ್ರದರ್ಶನ ಪ್ರಮುಖ ಪಾತ್ರವಹಿಸಿತ್ತು.

ಯುವರಾಜ್ ಸಿಂಗ್ ಅವರ ಬಯೋಪಿಕ್ ಕೂಡ ನಿರ್ಮಾಣವಾಗುತ್ತಿದೆ. ಯುವರಾಜ್ ಅವರ ಪ್ರಯಾಣವು ಸ್ಫೂರ್ತಿದಾಯಕವಾಗಿದ್ದು ಅದು ಈ ಸಿನಿಮಾ ಕತೆಯಾಗಲಿದೆ. ವೆರೈಟಿ ವರದಿಯ ಪ್ರಕಾರ, ಟಿ-ಸೀರೀಸ್‌‌‌ನ ಭೂಷಣ್ ಕುಮಾರ್ ಮತ್ತು 200 ನಾಟ್ ಔಟ್ ಸಿನೆಮಾದ ರವಿ ಭಾಗ್‌ಚಂದ್ಕಾ ಈ ಬಯೋಪಿಕ್‌‌ಗೆ ಜೀವ ತುಂಬಲಿದ್ದಾರೆ. ಸಿನಿಮಾ ತಂಡ ಪಾತ್ರವರ್ಗವನ್ನು ಇನ್ನೂ ಅಂತಿಮಗೊಳಿಸಿಲ್ಲ.

ಇದನ್ನೂ ಓದಿ Yuvraj Singh : ಅಂಗವಿಕಲರಂತೆ ರೀಲ್ಸ್​ ಮಾಡಿದ ಯುವರಾಜ್​, ಹರ್ಭಜನ್​ ಸಿಂಗ್ ವಿರುದ್ಧ ದೂರು ದಾಖಲು

ಯುವರಾಜ್ ಸಿಂಗ್ ಅವರ ಜೀವನವು ಗೆಲುವು ಮತ್ತು ಉತ್ಸಾಹದ ಕತೆಯಾಗಿದೆ. ಭರವಸೆಯ ಕ್ರಿಕೆಟಿಗನಿಂದ ಹಿಡಿದು ಕ್ರಿಕೆಟ್ ನಾಯಕನಾಗಿ ನಂತರ ನಿಜ ಜೀವನದಲ್ಲಿ ನಾಯಕನಾಗಿ ಸಾಗಿದ ಅವರ ಪ್ರಯಾಣವು ನಿಜವಾಗಿಯೂ ಸ್ಪೂರ್ತಿದಾಯಕವಾಗಿದೆ. ಹೇಳಬೇಕಾದ ಮತ್ತು ಕೇಳಬೇಕಾದ ಕಥೆಯನ್ನು ದೊಡ್ಡ ಪರದೆಗೆ ತರಲು ಮತ್ತು ಅವರ ಅಸಾಧಾರಣ ಸಾಧನೆಗಳನ್ನು ತೋರಿಸಲು ನಮಗೆ ಖುಷಿಯಿದೆ ಎಂದು ಸಿನಿಮಾ ತಂಡ ಹೇಳಿದೆ.

ರವಿ ಭಾಗ್ಚಂದ್ಕಾ ಯುವರಾಜ್ ಸಿಂಗ್ ಅವರನ್ನು “ಎಲ್ಲಾ ಅರ್ಥದಲ್ಲೂ ನಿಜವಾದ ದಂತಕಥೆ” ಎಂದು ಕರೆದಿದ್ದಾರೆ. ಯುವರಾಜ್ ಹಲವು ವರ್ಷಗಳಿಂದ ನನ್ನ ಆತ್ಮೀಯ ಸ್ನೇಹಿತ. ಅವರ ನಂಬಲಾಗದ ಕ್ರಿಕೆಟ್ ಪ್ರಯಾಣವನ್ನು ಸಿನಿಮೀಯ ಅನುಭವವಾಗಿ ಪರಿವರ್ತಿಸಲು ಮುಂದಾಗಿದ್ದು, ನಮ್ಮ ಬಗ್ಗೆ ನಂಬಿಕೆ ಹೊಂದಿರುವುದಕ್ಕೆ ಖುಷಿಯಿದೆ ಎಂದು ಹೇಳಿದ್ದಾರೆ. . ಯುವಿ ಕೇವಲ ವಿಶ್ವ ಚಾಂಪಿಯನ್ ಮಾತ್ರವಲ್ಲ, ಪ್ರತಿಯೊಂದು ಅರ್ಥದಲ್ಲೂ ನಿಜವಾದ ದಂತಕಥೆ ಎಂದು ಅವರು ಹೇಳಿದ್ದಾರೆ.

Exit mobile version