ಮುಂಬಯಿ: ಭಾರತ ತಂಡದ ಮಾಜಿ ಆಲ್ರೌಂಡರ್ ಏಕದಿನ ಮತ್ತು ಟಿ20 ವಿಶ್ವಕಪ್ನ ಹೀರೊ, ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್(Yuvraj Singh) ಅವರು ಹೆಣ್ಣು ಮಗುವಿನ ತಂದೆಯಾಗಿದ್ದಾರೆ. ವರಮಹಾಲಕ್ಷ್ಮೀ ಹಬ್ಬದ ಶುಭದಿನದಂದೇ ಅವರ ಪತ್ನಿ ಹೇಜಲ್ ಕೀಚ್(hazel keech) ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ಈ ಸಂತಸದ ವಿಚಾರವನ್ನು ಸ್ವತಃ ಯುವರಾಜ್ ಸಿಂಗ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ತಿಳಿಸಿದ್ದಾರೆ.
“ನಮ್ಮ ರಾಜಕುಮಾರಿ ಔರಾ(Aura) ಅವರನ್ನು ಸ್ವಾಗತಿಸಿ ನಮ್ಮ ಕುಟುಂಬವನ್ನು ಪೂರ್ಣಗೊಳಿಸುವುದರೊಂದಿಗೆ ನಮ್ಮ ನಿದ್ದೆಯಿಲ್ಲದ ರಾತ್ರಿಗಳು ಹೆಚ್ಚು ಸಂತೋಷದಾಯಕವಾಗಿವೆ. ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ” ಎಂದು ಯುವರಾಜ್ ಸಿಂಗ್ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಜತೆಗೆ ಮುದ್ದಾದ ಪುಟ್ಟ ಮಗುವನ್ನು ಎತ್ತಿಕೊಂಡಿರುವ ಫೋಟೊವನ್ನು ಹಂಚಿಕೊಂಡಿದ್ದಾರೆ. ಯುವರಾಜ್ ಸಿಂಗ್ ಅವರಿಗೆ ಒಬ್ಬ ಮಗ ಕೂಡ ಇದ್ದಾನೆ. ಈ ಫೋಟೊದಲ್ಲಿ ಆತನು ಕೂಡ ಕಾಣಿಸಿಕೊಂಡಿದ್ದಾನೆ. ಆತನ ಹೆಸರು ಒರಿಯಾನ್ ಕೀಚ್ ಸಿಂಗ್(Orion Keech Singh). ಅವನಿಗೆ ತಾಯಿ ಹೇಜಲ್ ಕೀಚ್ ಹಾಲು ಕುಡಿಸುತ್ತಿರುವುದನ್ನು ಈ ಫೋಟೊದಲ್ಲಿ ಕಾಣಬಹುದಾಗಿದೆ. ಯುವರಾಜ್ ಸಿಂಗ್ ತಂದೆಯಾದ ವಿಚಾರ ಕೇಳಿ ಅನೇಕ ಮಾಜಿ ಆಟಗಾರರು ಶುಭಕೋರಿದ್ದು, ನಿಮ್ಮ ಮುಂದಿನ ದಿನಗಳು ಮತ್ತಷ್ಟು ಖುಷಿ ಖುಷಿಯಾಗಿರಲಿ ಎಂದು ಹಾರೈಸಿದ್ದಾರೆ.
2016ರಲ್ಲಿ ಯುವರಾಜ್ ಸಿಂಗ್ ಹಾಗೂ ಹೇಕಲ್ ಕೀಚ್ ವಿವಾಹವಾಗಿದ್ದರು. ಬ್ರಿಟನ್ ಮೂಲದ ಹೇಜಲ್ ಕೀಚ್ ಯುವಿ ಅವರನ್ನು ಮದುವೆಯಾದ ಬಳಿಕ ಭಾರತದಲ್ಲೇ ನೆಲೆಸಿದ್ದಾರೆ. ಸಂಪೂರ್ಣವಾಗಿ ಭಾರತೀಯ ಸಂಸ್ಕೃತಿಯನ್ನು ಅನುಸರಿಸುತ್ತಿರುವ ಹೇಜಲ್ ಕೀಚ್ ಅವರನ್ನು ಯಾವುದೇ ತಪ್ಪಲ್ಲದೆ ಹಿಂದಿ ಮಾತನಾಡುತ್ತಾರೆ. ಅನೇಕ ಟಿವಿ ಶೋಗಳಲ್ಲಿ ಅವರು ಭಾಗವಹಿಸಿ ಅಚ್ಚುಕಟ್ಟಾಗಿ ಹಿಂದಿಯಲ್ಲೇ ಮಾತನಾಡಿದ್ದಾರೆ. ಜತೆಗೆ ಭಾರತೀಯ ಸಂಸ್ಕೃತಿ ನನಗೆ ಅಚ್ಚು ಮೆಚ್ಚು ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದರು.
ಇದನ್ನೂ ಓದಿ Stuart Broad: ಸ್ಟುವರ್ಟ್ ಬ್ರಾಡ್ಗೆ ಅಭಿನಂದನೆ ಸಲ್ಲಿಸಿದ ಯುವರಾಜ್ ಸಿಂಗ್
ಮಗುವಿನ ಹೆಸರು ಔರಾ
ಯುವರಾಜ್ ಸಿಂಗ್ ಅವರು ತಮ್ಮ ಮಗುವಿಗೆ ಔರಾ ಎಂದು ಹೆಸರಿಟ್ಟಿದ್ದಾರೆ. ಕಳೆದ ವರ್ಷದ ಅಪ್ಪಂದಿರ ದಿನ ಹೇಜಲ್ ಕೀಚ್ ಪುತ್ರ ಒರಿಯಾನ್ ಕೀಚ್ ಸಿಂಗ್ಗೆ ಜನ್ಮ ನೀಡಿದ್ದರು. ಯುವಿ ದಂಪತಿಗೆ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಾರೈಸಿದ್ದು. ‘ಅಭಿನಂದನೆಗಳು ಯುವಿ, ನಿಮಗೆ ದೇವರ ಹಾರೈಕೆಯಿರಲಿ’, ‘ದೇವರು ನಿಮ್ಮ ಕುಟುಂಬವನ್ನು ಹರಸಲಿ’ ಹೀಗೆ ಹಲವರು ಶುಭಹಾರೈಸಿದ್ದಾರೆ. ಇದಲ್ಲದೆ ಟೆನಿಸ್ ತಾರೆ ಸಾನಿಯಾ ಮಿರ್ಜಾ, ನಟಿ ರಿಚಾ ಚಡ್ಡಾ ಸೇರಿದಂತೆ ಹಲವರು ಶುಭ ಹಾರೈಸಿದ್ದಾರೆ.