ಬೆಂಗಳೂರು: ಭಾರತ ತಂಡದ ಸ್ಪಿನ್ನರ್ ಯಜುವೇಂದ್ರ ಚಹಲ್ (Yuzvendra Chahal) ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ತಂಡದಿಂದ ಕೈಬಿಟ್ಟಾಗ ಆದ ನೋವಿನ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಆರ್‌ಸಿಬಿ(RCB) ನನ್ನನ್ನು ತಂಡದಿಂದ ಬಿಡುಗಡೆಗೊಳಿಸಿದಾಗ ಅದು ನನಗೆ ತುಂಬಾ ಆಶ್ಚರ್ಯಕರ ಮತ್ತು ನೋವಿನ ಸಂಗತಿಯಾಗಿತ್ತು, ನಾನು ಆರ್‌ಸಿಬಿ ಪರ 8 ವರ್ಷ ಆಡಿದ್ದೇನೆ, ಆದರೆ ತಂಡದಿಂದ ರಿಲೀಸ್ ಮಾಡುವ ಮುನ್ನ ಒಂದು ಫೋನ್ ಕೂಡ ಮಾಡಿಲ್ಲ ಈ ವೇಳೆ ನನಗೆ ಬಹಳ ಸಿಟ್ಟು ಬಂದಿತ್ತು ಎಂದು ಚಹಲ್ ತಮಗಾದ ನೋವನ್ನು ತಿಳಿಸಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಯಜುವೇಂದ್ರ ಚಹಲ್ ಆರ್‌ಸಿಬಿ ತಂಡದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಜತೆಗೆ ಫ್ರಾಂಚೈಸಿಯ ನಿರ್ಧಾರದಿಂದ ತಮಗಾದ ನೋವನ್ನು ತಿಳಿಸಿದ್ದು, “ಆರ್‌ಸಿಬಿ ತಂಡ ನನ್ನನ್ನು ಬಿಡುಗಡೆ ಮಾಡಿದಾಗ ನಾನು ತುಂಬಾ ಕೋಪಗೊಂಡಿದ್ದೆ. ನನ್ನ ಪ್ರಯಾಣವು 2014ರಲ್ಲಿ ಈ ತಂಡದೊಂದಿಗೆ ಪ್ರಾರಂಭವಾಯಿತು. 8 ವರ್ಷಗಳ ಕಾಲ ತಂಡ ಪ್ರಗತಿಗಾಗಿ ನಾನು ಶ್ರಮಪಟ್ಟಿದ್ದೆ. ಆದರೆ ಒಂದು ಸುಳಿವನ್ನು ನೀಡದೆ ತಂಡಿದ ಕೈಬಿಟ್ಟಿದ್ದು ನಿಜಕ್ಕೂ ಬೇಸರ ತಂದಿತ್ತು. ಇದಲ್ಲದೆ ನಾನು ತಂಡದಲ್ಲಿ ಉಳಿದುಕೊಳ್ಳಬೇಕಾದರೆ ಹೆಚ್ಚಿನ ಹಣವನ್ನು ಬೇಡಿಕೆ ಇಟ್ಟಿದ್ದೇನೆ ಎಂದು ಹೇಳಲಾಗಿತ್ತು. ನಿಜ ಹೇಳಬೇಕೆಂದರೆ ನಾನು ಯಾವುದೇ ಹಣದ ಬೇಡಿಕೆಯನ್ನು ಇಟ್ಟಿರಲಿಲ್ಲ. ನನ್ನ ಜೀವನದ 8 ವರ್ಷಗಳನ್ನು ತಂಡಕ್ಕಾಗಿ ಮುಡಿಪಾಗಿಟ್ಟರೂ ಒಂದು ಮಾತು ಸಹ ಹೇಳದೆ ಕೊರಳ ಪಟ್ಟಿ ಹಿಡಿದು ಹೊರಹಾಕಿದ ರೀತಿಯಲ್ಲಿ ಫ್ರಾಂಚೈಸಿ ನಡೆದುಕೊಂಡಿದೆ. ಇದು ನನ್ನ ಮನಸ್ಸಿಗೆ ಬೇಸರ ತಂದಿದೆ” ಎಂದರು.
ಇದನ್ನೂ ಓದಿ IPL 2023: ಟ್ರಾಲಿ ಬ್ಯಾಗ್ನಲ್ಲಿ ಜಾಲಿ ರೈಡ್ ಮಾಡಿದ ಚಹಲ್; ವಿಡಿಯೊ ವೈರಲ್
We lost this guy 💔
— Daksh (@82MCG_) July 15, 2023
What a mismanaged franchise @RCBTweets 🤬 pic.twitter.com/dXRavm8taB
“ಆರ್‌ಸಿಬಿ ತಂಡಕ್ಕಾಗಿ ಸುಮಾರು 140 ಪಂದ್ಯಗಳನ್ನು ಆಡಿದ್ದೇನೆ, ಆದರೆ ತಂಡದಿಂದ ಕೈಬಿಡುವ ವೇಳೆ ಫ್ರಾಂಚೈಸಿ ಒಂದು ಮಾತು ಕೂಡ ಹೇಳಿಲ್ಲ. ಇದಕ್ಕೂ ಮುನ್ನ ಹರಾಜಿನಲ್ಲಿ ನನ್ನನು ಉಳಿಸಿಕೊಳ್ಳುವುದಾಗಿ ಭರವಸೆ ನೀಡಿದ್ದರು. ಒಂದೊಮ್ಮೆ ತಂಡದಿಂದ ಕೈ ಬಿಡುವ ವಿಚಾರವನ್ನು ಹೇಳುತ್ತಿದ್ದರೆ ನನಗೆ ಯಾವುದೇ ಕೋಪ ಅಥವಾ ಬೇಸರವಾಗುತ್ತಿರಲಿಲ್ಲ. 8 ವರ್ಷಗಳ ಕಾಲ ಅವರಿಗಾಗಿ ಆಡಿ ಈ ರೀತಿ ಮಾಡಿದ್ದು ನಿಜಕ್ಕೂ ಬೇಸರ ತಂದಿತ್ತು” ಎಂದು ಚಹಲ್ ರಣವೀರ್ ಅಲ್ಲಾಬಾಡಿಯಾ ಶೋನಲ್ಲಿ ಹೇಳಿಕೊಂಡಿದ್ದಾರೆ.
ಆರ್‌ಸಿಬಿಯ ಪ್ರಮುಖ ಆಟಗಾರರಲ್ಲಿ ಒಬ್ಬರಾಗಿದ್ದ ಚಹಲ್ ಅವರನ್ನು 2022ರಲ್ಲಿ ತಂಡದಿಂದ ಕೈಬಿಡಲಾಗಿತ್ತು. 2022ರ ಹರಾಜಿನಲ್ಲಿ ಅವರನ್ನು ರಾಜಸ್ಥಾನ್ ರಾಯಲ್ಸ್ ತಂಡ 6.40 ಕೋಟಿ ರೂ. ನೀಡಿ ಖರೀದಿಸಿತು. ಇದೇ ವರ್ಷ ಅವರು ಅದ್ಭುತ ಪ್ರದರ್ಶನ ತೋರುವ ಮೂಲಕ ಅತ್ಯಧಿಕ ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ಪ್ರಶಸ್ತಿಗೆ ಭಾಜನರಾಗಿದ್ದರು. ಈ ಬಾರಿಯ ಆವೃತ್ತಿಯಲ್ಲಿಯೂ ಅವರು 14 ಪಂದ್ಯಗಳಲ್ಲಿ 21 ವಿಕೆಟ್ ಉರುಳಿಸಿದ್ದರು.