ಮುಂಬಯಿ: ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ತೋರಿ ಹಲವು ದಾಖಲೆ ಬರೆದ ಆರ್.ಅಶ್ವಿನ್ಗೆ(Ravichandran Ashwin) ಟೀಮ್ ಇಂಡಿಯಾದ ಸ್ಪಿನ್ನರ್ ಯಜುವೇಂದ್ರ ಚಹಲ್(Yuzvendra Chahal) ಟ್ವೀಟ್ ಮೂಲಕ ಶ್ಲಾಘಿಸಿದ್ದಾರೆ. ಈ ಮೂಲಕ ಆಯ್ಕೆ ಸಮಿತಿಗೆ ಟಾಂಗ್ ನೀಡಿದ್ದಾರೆ.
ಆರ್.ಅಶ್ವಿನ್ ಮತ್ತು ಯಜುವೇಂದ್ರ ಚಹಲ್ ಅವರು ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದರು. ಆಸೀಸ್ ವಿರುದ್ಧದ ದ್ವಿತೀಯ ಪಂದ್ಯದಲ್ಲಿ ಅಶ್ವಿನ್ ಅವರು ಮೂರು ವಿಕೆಟ್ ಪಡೆಯುತ್ತಿದ್ದಂತೆ ಟ್ವಿಟ್ ಮಾಡಿದ ಚಹಲ್ ಲೆಜೆಂಡರಿ ಆಟಗಾರ ಎಂದು ಹೇಳಬೇಕಿಲ್ಲ. ಅಶ್ವಿನ್ ಅವರ ಹೆಸರು ಕೇಳಿದರೆ ಸಾಕಾಗುತ್ತದೆ ಎಂದು ಬರೆದು ಆಯ್ಕೆ ಸಮಿತಿಗೆ ಪರೋಕ್ಷವಾಗಿ ಕುಟುಕಿದ್ದಾರೆ. ಈ ಟ್ವೀಟ್ನ ಹಿಂದಿರುವ ಅರ್ಥವೆಂದರೆ, ಉತ್ತಮ ಆಟಗಾರರನ್ನು ಆಯ್ಕೆ ಸಮಿತಿ ಈ ಬಾರಿ ವಿಶ್ವಕಪ್ ಟೂರ್ನಿಗೆ ಕಡೆಗಣಿಸಿದಂತಿದೆ ಎನ್ನುವಂತಿದೆ.
ದಾಖಲೆ ಬರೆದ ಅಶ್ವಿನ್
ಆಸ್ಟ್ರೇಲಿಯಾ ವಿರುದ್ಧ ಅತಿ ಹೆಚ್ಚು ವಿಕೆಟ್ ಕಿತ್ತ ಸಾಧನೆಗೆ ಆರ್.ಅಶ್ವಿನ್(Ravichandran Ashwin) ಪಾತ್ರರಾದರು. ಅವರು 144 ಕಿತ್ತು ಅನಿಲ್ ಕುಂಬ್ಳೆ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದರು. ಕುಂಬ್ಳೆ ಆಸೀಸ್ ವಿರುದ್ಧ 142 ವಿಕೆಟ್ ಕಿತ್ತದ್ದು ಇದುವರೆಗಿನ ದಾಖಲೆಯಾಗಿತ್ತು. ಅಶ್ವಿನ್ ಈ ಪಂದ್ಯದಲ್ಲಿ 41 ರನ್ ನೀಡಿ 3 ವಿಕೆಟ್ ಪಡೆದರು.
Ravichandran Ashwin name is enough @ashwinravi99 #Legend 🇮🇳 #INDvsAUS
— Yuzvendra Chahal (@yuzi_chahal) September 24, 2023
ಕೆಲ ದಿನಗಳ ಹಿಂದೆ ಚಹಲ್ ಅವರು ವಿಶ್ವಕಪ್ಗೆ ಆಯ್ಕೆಯಾಗದ ಕುರಿತು, “ಕೆಲವು ವಿಷಯಗಳು ನಮ್ಮ ಕೈಯಲ್ಲಿಲ್ಲ, ಆದ್ದರಿಂದ ನಾನು ಅದರ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ. ನನ್ನ ಗಮನವು ಅತ್ಯುತ್ತಮ ಪ್ರದರ್ಶನವನ್ನು ನೀಡುವುದು ಮತ್ತು ನಾನು ಆಟವನ್ನು ಆಡುವವರೆಗೂ ಉತ್ತಮ ಪ್ರದರ್ಶನ ನೀಡುವುದು. ಯಾವುದೇ ಪಂದ್ಯವಾಗಿರಲಿ, ನನ್ನ ಗುರಿ ಶೇಕಡಾ 100 ಉತ್ತಮ ಪ್ರದರ್ಶನ ನೀಡುವುದು. ಆಯ್ಕೆ ನಮ್ಮ ಕೈಯಲ್ಲಿಲ್ಲ “ಎಂದು ಹೇಳಿದ್ದರು.
ಇದನ್ನೂ ಓದಿ Yuzvendra Chahal : ವಿಶ್ವ ಕಪ್ನಲ್ಲಿ ಸಿಗದ ಸ್ಥಾನ, ಟೆಸ್ಟ್ ಕ್ರಿಕೆಟ್ನತ್ತ ಗಮನಹರಿಸಿದ ಲೆಗ್ ಸ್ಪಿನ್ನರ್
ಸರಣಿ ಗೆದ್ದ ಭಾರತ
ಭಾರತ ತಂಡ ಡಕ್ವರ್ತ್ ನಿಯಮದ ಅನ್ವಯ 99 ರನ್ಗಳ ಗೆಲುವು ಸಾಧಿಸಿ ಸರಣಿಯನ್ನು ವಶಪಡಿಸಿಕೊಂಡಿತು. ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಭಾರತ ಶ್ರೇಯಸ್ ಅಯ್ಯರ್(105) ಮತ್ತು ಶುಭಮನ್ ಗಿಲ್(104) ಅವರ ಆಕರ್ಷಕ ಶತಕ, ಆ ಬಳಿಕ ನಾಯಕ ಕೆ.ಎಲ್ ರಾಹುಲ್(52) ಹಾಗೂ ಸೂರ್ಯಕುಮಾರ್ ಯಾದವ್(72*) ಅವರ ಅರ್ಧಶತಕದ ನೆರವಿನಿಂದ ನಿಗದಿತ 50 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 399 ರನ್ ಪೇರಿಸಿ ಸವಾಲೊಡ್ಡಿತು. ಆಸೀಸ್ ಬೃಹತ್ ಮೊತ್ತವನ್ನು ಬೆನ್ನಟ್ಟುವ ವೇಳೆ ಪಂದ್ಯಕ್ಕೆ ಮಳೆಯಿಂದ ಹಲವು ಬಾರಿ ಅಡಚಣೆಯಾಗಿತು. ಹೀಗಾಗಿ ಡಕ್ವರ್ತ್-ಲೂಯಿಸ್ ನಿಯಮವನ್ನು ಜಾರಿಗೆ ತರಲಾಯಿತು. ಅದರಂತೆ ಈ ನಿಯಮದನ್ವಯ ಆಸೀಸ್ ತಂಡಕ್ಕೆ 33 ಓವರ್ಗಳಲ್ಲಿ 317 ರನ್ಗಳ ಗುರಿ ನೀಡಲಾಯಿತು. ಆದರೆ ಆಸೀಸ್ 28.2 ಓವರ್ಗಳಲ್ಲಿ 217 ರನ್ಗಳಿಗೆ ಸರ್ವ ಪತನ ಕಂಡು ಹೀನಾಯ ಸೋಲು ಅನುಭವಿಸಿತು.