ಲಕ್ನೋ: ಸೋಮವಾರ ನಡೆದ ವಿಶ್ವಕಪ್ನ 14ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ(Australia vs Sri Lanka) ತಂಡ ಶ್ರೀಲಂಕಾವನ್ನು ಮಣಿಸಿ ಕೂಟದಲ್ಲಿ ಗೆಲುವಿನ ಖಾತೆ ತೆರೆದಿದೆ. ಈ ಪಂದ್ಯದಲ್ಲಿ ಶ್ರೇಷ್ಠ ಬೌಲಿಂಗ್ ಪ್ರದರ್ಶನ ತೋರುವ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಸ್ಪಿನ್ನರ್ ಆ್ಯಡಂ ಜಾಂಪ(Adam Zampa) ಅವರು ತಮ್ಮ ಕರುಣಾಜನಕ ಕತೆಯೊಂದನ್ನು ಹೇಳಿದ್ದಾರೆ.
ಪಂದ್ಯ ಗೆಲುವಿನ ಬಳಿಕ ಮಾತನಾಡಿದ ಜಾಂಪ, “ಪ್ರಾಮಾಣಿಕವಾಗಿ ಹೇಳಬೇಕೆಂದರೆ ನನಗೆ ಈ ಪಂದ್ಯ ಆಡುವಾಗ ಬೆನ್ನು ನೋವಿನ ಸಮಸ್ಯೆ ಕಾಡುತ್ತಿತ್ತು. ನಾನು ಈ ನೋವನ್ನು ನುಂಗಿಕೊಂಡು ಇಷ್ಟು ಉತ್ತಮ ಪ್ರದರ್ಶನ ತೋರುತ್ತೇನೆ ಎಂಬ ಭಾವನೆ ಹೊಂದಿರಲಿಲ್ಲ. ಕಳೆದೆರಡು ದಿನಗಳಿಂದ ನಾನು ಇದೇ ಭಾವನೆಯಲ್ಲಿ ಅಭ್ಯಾಸ ಮಾಡುತ್ತಿದ್ದೆ. ಆದರೆ ಅಂತಿಮ ಕ್ಷಣದಲ್ಲಿ ದೇಶಕ್ಕಾಗಿ ಆಡಬೇಕೆಂಬ ದೃಢ ನಿರ್ಧಾರ ನನ್ನ ನೋವನ್ನು ಹೋಗಲಾಡಿಸಿತು” ಎಂದು ಹೇಳಿದರು.
ಮಧ್ಯಮ ಕ್ರಮಾಂಕದಲ್ಲಿ ವಿಕೆಟ್ ಬೇಟೆಯಾಡುವುದು ನನ್ನ ಪ್ರಮುಖ ಗುರಿ. ಹಿಂದಿನ ಪಂದ್ಯದಲ್ಲಿ ನನ್ನ ಪ್ರದರ್ಶನ ಅಷ್ಟಾಗಿ ಉತ್ತಮವಾಗಿರಲಿಲ್ಲ. ಇದಕ್ಕೆ ಒಂದು ರೀತಿಯಲ್ಲಿ ನನ್ನ ಬೆನ್ನು ನೋವು ಕೂಡ ಕಾರಣವಾಗಿರಬಹುದು ಎಂದು ಹೇಳಿದರು. ಜಂಪಾ ಅವರು ಈ ಪಂದ್ಯದಲ್ಲಿ 8 ಓವರ್ ಬೌಲಿಂಗ್ ನಡೆಸಿ 47 ರನ್ ವೆಚ್ಚದಲ್ಲಿ ಪ್ರಮುಖ 4 ವಿಕೆಟ್ ಕಬಳಿಸಿ ಮಿಂಚಿದರು.
Adam Zampa!#AUSvSL #ODIWorldCup2023 #ICCWorldCup2023 #AUSvsSL pic.twitter.com/t1Xzxbe0tb
— RVCJ Media (@RVCJ_FB) October 17, 2023
ಸದ್ಯ ಆಸ್ಟ್ರೇಲಿಯಾ ತಂಡ ಲಂಕಾ ವಿರುದ್ಧ ಗೆದ್ದು 2 ಅಂಕ ಪಡೆದು ಅಂಕಪಟ್ಟಿಯಲ್ಲಿ 8ನೇ ಸ್ಥಾನ ಪಡೆದಿದೆ. ಮುಂದಿನ 7 ಪಂದ್ಯಗಳಲ್ಲಿ ಕನಿಷ್ಠ 5 ಪಂದ್ಯ ಗೆದ್ದರೆ ಸೆಮಿಫೈನಲ್ ಪ್ರವೇಶ ಪಡೆಯಬಹುದು. ಇಲ್ಲದಿದ್ದರೆ ಲೀಗ್ನಿಂದಲೇ ಹೊರಬೀಳಬಹುದು. ಆಸ್ಟ್ರೇಲಿಯಾ ಮುಂದಿನ ಪಂದ್ಯವನ್ನು ಪಾಕಿಸ್ತಾನ ವಿರುದ್ಧ ಆಡಲಿದೆ. ಈ ಪಂದ್ಯ ಶುಕ್ರವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.
5 ವಿಕೆಟ್ ಗೆಲುವು
ಸತತ ಎರಡು ಸೋಲು ಕಂಡಿದ್ದ 5 ಬಾರಿಯ ವಿಶ್ವ ಚಾಂಪಿಯನ್ ಕೊನೆಗೂ ಲಂಕಾ ವಿರುದ್ಧದ ಗೆದ್ದು ಗೆಲುವಿನ ಖಾತೆ ತೆರೆಯುವಲ್ಲಿ ಯಶಸ್ವಿಯಾಯಿತು. ಇಲ್ಲಿನ ಭಾರತ ರತ್ನ ಶ್ರೀ ಅಟಲ್ಬಿಹಾರಿ ವಾಜಪೇಯಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಲಂಕಾ ತಂಡ 43.3 ಓವರ್ಗಳಲ್ಲಿ 209 ರನ್ಗಳಿಗೆ ಆಲ್ಔಟ್ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 35.2 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 215 ರನ್ ಬಾರಿಸಿ ಗೆಲುವು ಕಂಡಿತು.
ಇದನ್ನೂ ಓದಿ SL vs AUS: ಅಂಪೈರ್ ವಿವಾದಾತ್ಮಕ ತೀರ್ಪಿಗೆ ವಿಕೆಟ್ ಕೈಚೆಲ್ಲಿದ ಡೇವಿಡ್ ವಾರ್ನರ್
ಸಾಧಾರಣ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿದ್ದ ಆಸ್ಟ್ರೇಲಿಯಾ ತಂಡ ಉತ್ತಮ ಆರಂಭ ಕಾಣಲಿಲ್ಲ. ಡೇವಿಡ್ ವಾರ್ನರ್ (11ರನ್) ಹಾಗೂ ಸ್ಟೀವ್ ಸ್ಮಿತ್ (0) ಬೇಗ ಔಟಾಗುವ ಮೂಲಕ 24 ರನ್ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಬಿತ್ತು. ಈ ವೇಳೆ ಜತೆಯಾದ ಮರ್ನಸ್ ಲಾಬುಶೇನ್ (40) ಹಾಗೂ ಆರಂಭಿಕ ಬ್ಯಾಟರ್ ಮಿಚೆಲ್ ಮಾರ್ಷ್ (52) ಚೇತರಿಕೆ ತಂದರು. ಮಾರ್ಷ್ ಅರ್ಧ ಶತಕ ಬಾರಿಸುವ ಮೂಲಕ ಮಿಂಚಿದರು. ಬಳಿಕ ಆಡಲು ಇಳಿದ ವಿಕೆಟ್ಕೀಪರ್ ಬ್ಯಾಟರ್ ಜೋಶ್ ಇಂಗ್ಲಿಸ್ (58) ಕೂಡ ಅರ್ಧ ಶತಕ ಬಾರಿಸಿ ಗೆಲುವಿನ ಹಾದಿಗೆ ತಂಡವನ್ನು ಕೊಂಡೊಯ್ದರು. ಕೊನೆಯಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ 21 ಎಸೆತಗಳಲ್ಲಿ 31 ರನ್ ಬಾರಿಸಿದರೆ, ಮಾರ್ಕಸ್ ಸ್ಟೊಯ್ನಿಸ್ 10 ಎಸೆತಗಳಲ್ಲಿ 20 ರನ್ ಬಾರಿಸಿ ಜಯ ತಂದುಕೊಟ್ಟರು. ಲಂಕಾ ಪರ ಬೌಲಿಂಗ್ನಲ್ಲಿ ಮದುಶಂಕ 38 ರನ್ಗಳಿಗೆ 3 ವಿಕೆಟ್ ಕಿತ್ತು ಮಿಂಚಿದರು.