Site icon Vistara News

Aus vs Zim ODI | ಕಾಂಗಾರೂಗಳ ನಾಡಲ್ಲಿ ಅವರದ್ದೇ ತಂಡವನ್ನು ಹೀನಾಯವಾಗಿ ಸೋಲಿಸಿದ ಜಿಂಬಾಬ್ವೆ

ZIM vs AUS ODI

ಟೌನ್ಸ್‌ವಿಲ್ಲೆ : ಅನುಭವಿ ಆಟಗಾರರೇ ಇಲ್ಲದ ಜಿಂಬಾಬ್ವೆ ತಂಡ, ಬಲಿಷ್ಟ ಆಸ್ಟ್ರೇಲಿಯಾ ತಂಡವನ್ನು ಅವರದ್ದೇ ದೇಶದಲ್ಲಿ ಹೀನಾಯವಾಗಿ ಸೋಲಿಸುವ ಮೂಲಕ ದಾಖಲೆ ಮಾಡಿದೆ. ಜಿಂಬಾಬ್ವೆ ಕ್ರಿಕೆಟ್‌ ಇತಿಹಾಸದಲ್ಲೇ ಆಸ್ಟ್ರೇಲಿಯಾ ಪ್ರವಾಸದಲ್ಲಿ ದೊರಕುತ್ತಿರುವ ಮೊದಲ ಜಯ ಇದಾಗಿದೆ. ಏಕ ದಿನ ಸರಣಿಯ ಈ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಆಸ್ಟ್ರೇಲಿಯಾ ತಂಡ ೧೪೧ ರನ್‌ಗಳಿಗೆ ಆಲ್‌ಔಟ್‌ ಆಯಿತು. ಗುರಿ ಬೆನ್ನಟ್ಟಿದ ಪ್ರವಾಸಿ ಜಿಂಬಾಬ್ವೆ ತಂಡ ೭ ವಿಕೆಟ್‌ ನಷ್ಟಕ್ಕೆ ೧೪೨ ರನ್‌ ಬಾರಿಸಿ ಜಯ ಸಾಧಿಸಿದೆ. ಅಚ್ಚರಿಯೆಂದರೆ ಆಸ್ಟ್ರೇಲಿಯಾ ಗಳಿಸಿದ ಒಟ್ಟಾರೆ ೧೪೧ ರನ್‌ಗಳಲ್ಲಿ ಡೇವಿಡ್‌ ವಾರ್ನರ್‌ ಒಬ್ಬರೇ ೯೪ ರನ್‌ ಬಾರಿಸಿದ್ದರು.

ಪ್ರವಾಸಿ ಜಿಂಬಾಬ್ವೆ ವಿರುದ್ಧದ ಏಕ ದಿನ ಸರಣಿಯ ಕೊನೇ ಪಂದ್ಯ ಇದಾಗಿದೆ. ಮೊದಲೆರಡು ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡ ಜಯ ಸಾಧಿಸಿದ್ದ ಕಾರಣ ಸರಣಿ ಆತಿಥೇಯ ತಂಡದ ಪಾಲಾಗಿದೆ. ಆದರೆ, ಜಿಂಬಾಬ್ವೆ ತಂಡ ತಮಗೆ ದೊರೆತ ಕೊನೇ ಪಂದ್ಯದ ಜಯದ ಸಂಭ್ರಮದಲ್ಲಿ ತೇಲಾಡುತ್ತಿದೆ.

ಟಾಸ್‌ ಸೋತ ಆಸ್ಟ್ರೇಲಿಯಾ ತಂಡಕ್ಕೆ ಬ್ಯಾಟ್‌ ಮಾಡುವಂತೆ ಜಿಂಬಾಬ್ವೆ ನಾಯಕ ರೆಗಿಸ್‌ ಚೆಕಬ್ವಾ ಆಹ್ವಾನ ಕೊಟ್ಟರು. ಆದರೆ, ಆರಂಭದಿಂದಲೇ ವಿಕೆಟ್‌ ಕಳೆದುಕೊಳ್ಳುತ್ತಲೇ ಸಾಗಿದ ಆರೋನ್‌ ಫಿಂಚ್‌ ಪಡೆ ೩೧ ಓವರ್‌ಗಳಲ್ಲಿ ೧೪೧ ರನ್‌ಗಳಿಗೆ ಸರ್ವಪತನ ಕಂಡಿತು. ಡೇವಿಡ್‌ ವಾರ್ನರ್‌ ಅವರ ೯೪ ರನ್‌ ಬಿಟ್ಟರೆ ಗ್ಲೆನ್‌ ಮ್ಯಾಕ್ಸ್‌ವೆಲ್‌(೧೯) ಮಾತ್ರ ಎರಡಂಕಿ ಮೊತ್ತ ದಾಖಲಿಸಿದವರು. ಉಳಿದವರೆಲ್ಲರೂ ಒಂದಂಕಿ ರನ್‌ನೊಂದಿಗೆ ಪೆವಿಲಿಯನ್ ಹಾದಿ ಹಿಡಿದರು. ಜಿಂಬಾಬ್ವೆಯ ರಿಯಾನ್‌ ಬರ್ಲ್‌ ೧೦ ರನ್‌ಗಳ ವೆಚ್ಚದಲ್ಲಿ ೫ ವಿಕೆಟ್‌ ಕಬಳಿಸಿ ಆಸೀಸ್‌ ತಂಡದ ಬ್ಯಾಟಿಂಗ್ ಬೆನ್ನೆಲುಬು ಮುರಿದರು.

ಗುರಿ ಬೆನ್ನಟ್ಟಿದ ಜಿಂಬಾಬ್ವೆ ತಂಡದ ಪರಿಸ್ಥಿತಿಯೂ ವಿಭಿನ್ನವಾಗಿರಲಿಲ್ಲ. ಆದರೆ, ಟಡಿವಾನ್ಶೆ ಮರುಮನಿ (೩೫), ನಾಯಕ ರೆಗಿಸ್‌ ಚೆಕೆಬ್ವಾ (೩೭) ತಂಡಕ್ಕೆ ಅಪರೂಪದ ಜಯ ತಂದುಕೊಟ್ಟರು. ಜೋಶ್‌ ಹೇಜಲ್‌ವುಡ್‌ ೩೦ ರನ್‌ಗಳಿಗೆ ೩ ವಿಕೆಟ್‌ ಪಡೆದರು.

ಇದನ್ನೂ ಓದಿ | ICC ODI Ranking | ಜಿಂಬಾಬ್ವೆ ಸರಣಿ ಕ್ಲೀನ್‌ ಸ್ವೀಪ್‌ ಬಳಿಕ ಭಾರತದ ಒಡಿಐ Rank ಎಷ್ಟು?

Exit mobile version