Site icon Vistara News

Heath Streak: ಜಿಂಬಾಬ್ವೆ ಕ್ರಿಕೆಟ್‌ ದಂತಕತೆ ಹೀತ್‌ ಸ್ಟ್ರೀಕ್‌ ಇನ್ನಿಲ್ಲ; ಪತ್ನಿ ಭಾವುಕ ಪೋಸ್ಟ್

Heath Streak Passes Away

Zimbabwe cricket legend Heath Streak Passes Away; Wife Confirms

ಹರಾರೆ: ಜಿಂಬಾಬ್ವೆ ಕ್ರಿಕೆಟ್‌ ದಂತಕತೆ, ಕ್ರಿಕೆಟ್‌ ತಂಡದ ಮಾಜಿ ನಾಯಕ ಹೀತ್‌ ಸ್ಟ್ರೀಕ್‌ (Heath Streak) ನಿಧನರಾಗಿದ್ದಾರೆ. ಭಾನುವಾರ ಬೆಳಗಿನ ಜಾವ ಮಟಬೆಲೆಲ್ಯಾಂಡ್‌ನಲ್ಲಿ 49 ವರ್ಷದ ಹಿತ್‌ ಸ್ಟ್ರೀಕ್‌ ಮೃತಪಟ್ಟಿದ್ದಾರೆ. ನಿಧನದ ಸುದ್ದಿಯನ್ನು ಅವರ ಪತ್ನಿ ನಡೈನ್‌ ಸ್ಟ್ರೀಕ್‌ ದೃಢಪಡಿಸಿದ್ದಾರೆ. ಲಿವರ್‌ ಹಾಗೂ ಕರುಳಿನ ಕ್ಯಾನ್ಸರ್‌ ಕಾಯಿಲೆಯಿಂದ ಬಳಲುತ್ತಿದ್ದ ಹೀತ್‌ ಸ್ಟ್ರೀಕ್‌ ಅವರು ಕೆಲ ದಿನಗಳ ಹಿಂದೆಯೇ ಮೃತಪಟ್ಟಿದ್ದಾರೆ ಎಂದು ಸುದ್ದಿಯಾಗಿತ್ತು. ಇದಾದ ಬಳಿಕ ನಿಧನದ ಸುದ್ದಿಯು ಕೇವಲ ವದಂತಿ ಎಂದು ತಿಳಿದುಬಂದಿತ್ತು. ಈಗ ಅವರ ಪತ್ನಿಯೇ ನಿಧನದ ಸುದ್ದಿಯನ್ನು ದೃಢಪಡಿಸಿದ್ದಾರೆ.

“ನನ್ನ ಜೀವನದ ಅತ್ಯಮೂಲ್ಯ ಪ್ರೀತಿ, ನನ್ನ ಮುದ್ದು ಮಕ್ಕಳ ತಂದೆಯು ಸೆಪ್ಟೆಂಬರ್‌ 3ರಂದು ಬೆಳಗಿನ ಜಾವ ಅಗಲಿದ್ದಾರೆ. ಅವರು ಏಕಾಂಗಿಯಾಗಿ ತೆರಳದೆ ನೆನಪುಗಳನ್ನು, ಮನೆಯಲ್ಲಿ ಕಳೆದ ಕ್ಷಣಗಳನ್ನು ಹೊತ್ತುಕೊಂಡು ಹೋಗಿದ್ದಾರೆ. ಕೊನೆಯ ದಿನಗಳನ್ನು ಅವರು ಮನೆಯಲ್ಲಿಯೇ, ಕುಟುಂಬಸ್ಥರ ಮಧ್ಯೆಯೇ ಕಳೆಯಬೇಕು ಎಂದುಕೊಂಡಿದ್ದರು. ಅದರಂತೆ, ನೆನಪುಗಳನ್ನು ಹೊತ್ತುಕೊಂಡು ಅವರು ದೇವತೆಗಳ ಬಳಿ ತೆರಳಿದ್ದಾರೆ” ಎಂದು ನಡೈನ್‌ ಸ್ಟ್ರೀಕ್‌ ಫೇಸ್‌ಬುಕ್‌ನಲ್ಲಿ ಭಾವುಕರಾಗಿ ಬರೆದುಕೊಂಡಿದ್ದಾರೆ. ಅಲ್ಲದೆ, ಹೀತ್‌ ಸ್ಟ್ರೀಕ್‌ ಜತೆಗಿನ ಹಲವು ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಜಿಂಬಾಬ್ವೆ ಕ್ರಿಕೆಟ್‌ ದಂತಕತೆಯ ಅಗಲಿಕೆಗೆ ಜಗತ್ತಿನ ಹಲವು ಕ್ರಿಕೆಟಿಗರು ಕಂಬನಿ ಮಿಡಿದಿದ್ದಾರೆ.

ಜಿಂಬಾಬ್ವೆ ಕಂಡ ಶ್ರೇಷ್ಠ ಕ್ರಿಕೆಟಿಗ

ಹೀತ್‌ ಸ್ಟ್ರೀಕ್‌ ಅವರು 2000-2004ರ ಅವಧಿಯಲ್ಲಿ ತಮ್ಮ ದೇಶದ ಕ್ರಿಕೆಟ್‌ ತಂಡದ ಕ್ಯಾಪ್ಟನ್‌ ಆಗಿದ್ದರು. 12 ವರ್ಷಗಳ ಕಾಲದ ತಮ್ಮ ವೃತ್ತಿಜೀವನದಲ್ಲಿ ಅವರು 65 ಟೆಸ್ಟ್ ಪಂದ್ಯಗಳನ್ನು ಮತ್ತು 189 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಜಿಂಬಾಬ್ವೆಯ ಕ್ರಿಕೆಟ್ ಪ್ರತಿಷ್ಠೆಯನ್ನು ಎತ್ತಿಹಿಡಿದ ಅವರು 100 ಟೆಸ್ಟ್ ವಿಕೆಟ್‌ಗಳನ್ನು ಪಡೆದ ಜಿಂಬಾಬ್ವೆ ಏಕೈಕ ಕ್ರಿಕೆಟಿಗರಾಗಿದ್ದಾರೆ.

ಸ್ಟ್ರೀಕ್ ಅವರನ್ನು ಬೌಲರ್‌ ಎಂದೇ ಪರಿಗಣಿಸಲಾಗುತ್ತದೆ. ಆದರೆ ಬ್ಯಾಟಿಂಗ್‌ನಲ್ಲೂ ಮಿಂಚಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಅವರು ತಮ್ಮ ವೃತ್ತಿಜೀವನದಲ್ಲಿ 1990 ಟೆಸ್ಟ್ ರನ್ ಮತ್ತು 2943 ODI ರನ್‌ಗಳನ್ನು ಗಳಿಸಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಹರಾರೆಯಲ್ಲಿ ಅವರು ಔಟಾಗದೆ ಗಳಿಸಿದ 127 ರನ್ ಅವರ ಏಕೈಕ ಟೆಸ್ಟ್ ಶತಕವಾಗಿದೆ.

ಇದನ್ನೂ ಓದಿ: Heath Streak: ಜಿಂಬಾಬ್ವೆಯ ಕ್ರಿಕೆಟ್ ದಂತಕಥೆ ಹೀತ್ ಸ್ಟ್ರೀಕ್ ʼನಾಟೌಟ್‌ʼ! ಮರಳಿ ಕರೆಸಿದ ಥರ್ಡ್‌ ಅಂಪೈರ್‌!

ಸ್ಟ್ರೀಕ್ ಅವರ ವೃತ್ತಿಜೀವನ 1993ರಲ್ಲಿ ಪಾಕಿಸ್ತಾನದ ವಿರುದ್ಧ ಚೊಚ್ಚಲ ಪ್ರವೇಶದೊಂದಿಗೆ ಪ್ರಾರಂಭವಾಯಿತು. ಅಲ್ಲಿ ಅವರು ರಾವಲ್ಪಿಂಡಿಯಲ್ಲಿನ ತಮ್ಮ ಎರಡನೇ ಟೆಸ್ಟ್‌ನಲ್ಲಿ ಎಂಟು ವಿಕೆಟ್‌ಗಳನ್ನು ಪಡೆಯುವ ಮೂಲಕ ತಮ್ಮ ಪ್ರತಿಭೆಯನ್ನು ಘೋಷಿಸಿದರು. 2005ರಲ್ಲಿ ನಿವೃತ್ತಿ ಘೋಷಿಸಿದ್ದರು. 2007ರಲ್ಲಿ ಇಂಡಿಯನ್ ಕ್ರಿಕೆಟ್ ಲೀಗ್ (ICL) ಗೆ ಸಹಿ ಹಾಕಿದ್ದರು.

Exit mobile version