Site icon Vistara News

Heath Streak: ಜಿಂಬಾಬ್ವೆಯ ಕ್ರಿಕೆಟ್ ದಂತಕಥೆ ಹೀತ್ ಸ್ಟ್ರೀಕ್ ʼನಾಟೌಟ್‌ʼ! ಮರಳಿ ಕರೆಸಿದ ಥರ್ಡ್‌ ಅಂಪೈರ್‌!

heath streak

ಜಿಂಬಾಬ್ವೆ: ಜಿಂಬಾಬ್ವೆಯ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗರಲ್ಲಿ (Zimbabwe cricketer) ಒಬ್ಬರೆಂದು ಪರಿಗಣಿಸಲ್ಪಟ್ಟಿರುವ ಹೀತ್ ಸ್ಟ್ರೀಕ್ (49) (Heath Streak) ಅವರು ಮೃತಪಟ್ಟಿದ್ದಾರೆ ಎಂದು ಇಂದು ಮುಂಜಾನೆ ಸುದ್ದಿಯಾಗಿದ್ದು, ಇದು ಸುಳ್ಳು ಸುದ್ದಿಯೆಂದು ನಂತರ ತಿಳಿದುಬಂತು.

ಹೀತ್‌ ಸ್ಟ್ರೀಕ್‌ ಲಿವರ್‌ ಹಾಗೂ ಕರುಳಿನ ಕ್ಯಾನ್ಸರ್‌ ಕಾಯಿಲೆಯಿಂದ (liver cancer) ಬಳಲುತ್ತಿದ್ದಾರೆ. ಮೊದಲಿಗೆ ಇವರ ʼಮರಣದ ಸುದ್ದಿʼಯನ್ನು ಸ್ಟ್ರೀಕ್‌ ಅವರ ಜತೆ ಆಟಗಾರರಾಗಿದ್ದ ಬೌಲರ್‌ ಹೆನ್ರಿ ಒಲೊಂಗಾ ಟ್ವೀಟ್‌ ಮಾಡಿದ್ದರು. ʼಹೀತ್ ಸ್ಟ್ರೀಕ್ ನಮ್ಮನ್ನು ಅಗಲಿದ್ದಾರೆ ಎಂಬುದು ದುಃಖದ ಸುದ್ದಿʼ ಎಂದು ಟ್ವೀಟ್‌ ಮಾಡಿದ್ದರಲ್ಲದೆ, ಸ್ಟ್ರೀಕ್‌ ಜಿಂಬಾಬ್ವೆ ಕಂಡ ʼಶ್ರೇಷ್ಠ ಆಲ್‌ರೌಂಡರ್ʼ ಎಂದು ತನ್ನ ಒಡನಾಡಿಯನ್ನು ಶ್ಲಾಘಿಸಿದ್ದರು.

ನಂತರ ಮಧ್ಯಾಹ್ನ ಮತ್ತೆ ಟ್ವೀಟ್‌ ಮಾಡಿದ್ದ ಒಲೊಂಗಾ, ಸ್ಟ್ರೀಕ್‌ ಮರಣದ ಸುದ್ದಿ ಸುಳ್ಳು ಎಂದು ಖಚಿಡಪಡಿಸಿದರು. ತಾನು ಸ್ಟ್ರೀಕ್‌ ಜತೆ ಮಾತನಾಡಿದ್ದಾಗಿ, ʼʼಮೂರನೇ ಅಂಪೈರ್‌ ಅವರನ್ನು ವಾಪಸ್‌ ಕರೆಸಿಕೊಂಡಿರುವುದಾಗಿʼʼ ಘೋಷಿಸಿದರು!

ಹೀತ್‌ ಸ್ಟ್ರೀಕ್‌ 2000 ಮತ್ತು 2004 ಇಸವಿಗಳ ನಡುವೆ ಅವರು ತಮ್ಮ ದೇಶದ ಕ್ರಿಕೆಟ್‌ ತಂಡದ ಕ್ಯಾಪ್ಟನ್‌ ಆಗಿದ್ದರು. 12 ವರ್ಷಗಳ ಕಾಲದ ತಮ್ಮ ವೃತ್ತಿಜೀವನದಲ್ಲಿ ಅವರು 65 ಟೆಸ್ಟ್ ಪಂದ್ಯಗಳನ್ನು ಮತ್ತು 189 ODIಗಳನ್ನು ಆಡಿದ್ದಾರೆ. ಜಿಂಬಾಬ್ವೆಯ ಕ್ರಿಕೆಟ್ ಪ್ರತಿಷ್ಠೆಯನ್ನು ಎತ್ತಿಹಿಡಿದ ಅವರು 100 ಟೆಸ್ಟ್ ವಿಕೆಟ್‌ಗಳನ್ನು ಪಡೆದ ಜಿಂಬಾಬ್ವೆ ಏಕೈಕ ಕ್ರಿಕೆಟಿಗರಾಗಿದ್ದಾರೆ. ಸ್ಟ್ರೀಕ್ ಅವರನ್ನು ಬೌಲರ್‌ ಎಂದೇ ಪರಿಗಣಿಸಲಾಗುತ್ತದೆ. ಆದರೆ ಬ್ಯಾಟಿಂಗ್‌ನಲ್ಲೂ ಮಿಂಚಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಅವರು ತಮ್ಮ ವೃತ್ತಿಜೀವನದಲ್ಲಿ 1990 ಟೆಸ್ಟ್ ರನ್ ಮತ್ತು 2943 ODI ರನ್‌ಗಳನ್ನು ಗಳಿಸಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಹರಾರೆಯಲ್ಲಿ ಅವರು ಔಟಾಗದೆ ಗಳಿಸಿದ 127 ರನ್ ಅವರ ಏಕೈಕ ಟೆಸ್ಟ್ ಶತಕವಾಗಿದೆ.

ಸ್ಟ್ರೀಕ್ ಅವರ ವೃತ್ತಿಜೀವನ 1993ರಲ್ಲಿ ಪಾಕಿಸ್ತಾನದ ವಿರುದ್ಧ ಚೊಚ್ಚಲ ಪ್ರವೇಶದೊಂದಿಗೆ ಪ್ರಾರಂಭವಾಯಿತು. ಅಲ್ಲಿ ಅವರು ರಾವಲ್ಪಿಂಡಿಯಲ್ಲಿನ ತಮ್ಮ ಎರಡನೇ ಟೆಸ್ಟ್‌ನಲ್ಲಿ ಎಂಟು ವಿಕೆಟ್‌ಗಳನ್ನು ಪಡೆಯುವ ಮೂಲಕ ತಮ್ಮ ಪ್ರತಿಭೆಯನ್ನು ಘೋಷಿಸಿದರು. 2005ರಲ್ಲಿ ನಿವೃತ್ತಿ ಘೋಷಿಸಿದ್ದರು. 2007ರಲ್ಲಿ ಇಂಡಿಯನ್ ಕ್ರಿಕೆಟ್ ಲೀಗ್ (ICL) ಗೆ ಸಹಿ ಹಾಕಿದ್ದರು.

ಇದನ್ನೂ ಓದಿ: Virat Kohli : 15 ವರ್ಷಗಳ ಕ್ರಿಕೆಟ್​ ಪಯಣದಲ್ಲಿ ಕೊಹ್ಲಿಯ ಸಾಧನೆಗಳನ್ನು ವಿವರಿಸಿದಷ್ಟೂ ಮುಗಿಯದು

Exit mobile version