ಹೋಬರ್ಟ್: ಸಂಘಟಿತ ಬೌಲಿಂಗ್ ದಾಳಿ ನಡೆಸಿದ ವೆಸ್ಟ್ ಇಂಡೀಸ್ ತಂಡ ಟಿ20 ವಿಶ್ವ ಕಪ್ (T20 World Cup) ಟೂರ್ನಿಯ ಬಿ ಗುಂಪಿನ ಅರ್ಹತಾ ಸುತ್ತಿನ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ 31 ರನ್‌ಗಳ ಅಂತರದ ಜಯ ಸಾಧಿಸಿದೆ.
ಬೆಲ್ಲೆರಿವ್ ಓವಲ್ ಮೈದಾನದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ವೆಸ್ಟ್ ಇಂಡೀಸ್, ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿ ಸವಾಲೊಡ್ಡಿತು. ಸಾಧಾರಣ ಮೊತ್ತ ಬೆನ್ನಟ್ಟಿದ ಜಿಂಬಾಬ್ವೆ 18.2 ಓವರ್ಗಳಲ್ಲಿ 122 ರನ್ಗಳಿಗೆ ಸರ್ವಪತನ ಕಂಡಿತು.
ಮೊದಲು ಬ್ಯಾಟಿಂಗ್ ನಡೆಸಿದ ವೆಸ್ಟ್ ಇಂಡೀಸ್ ತಂಡದ ಆರಂಭ ಉತ್ತಮವಾಗಿರಲಿಲ್ಲ. ಆರಂಭಿಕ ಆಟಗಾರ ಕೈಲ್ ಮೇಯರ್ಸ್ (13) ಬೇಗನೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲೇ ಎವಿನ್ ಲೆವಿಸ್ (15) ಕೂಡ ಪೆವಿಲಿಯನ್ ಸೇರಿದರು. 2 ವಿಕೆಟ್ ಬೇಗನೆ ಕಳೆದುಕೊಂಡ ವಿಂಡೀಸ್ ಸಂಷ್ಟಕ್ಕೆ ಸಿಲುಕಿತು. ಈ ಹಂತದಲ್ಲಿ ಜಾನ್ಸನ್ ಚಾರ್ಲ್ಸ್ 36 ಎಸೆತಗಳಲ್ಲಿ 45 ರನ್ ಮತ್ತು ರೋವ್‌ಮನ್ ಪೊವೆಲ್ 21 ಎಸೆತಗಳಲ್ಲಿ 28 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಅಂತಿಮವಾಗಿ ಅಕೇಲ್ ಹೊಸೈನ್ 18 ಎಸೆತಗಳಲ್ಲಿ 23 ರನ್ ಗಳಿಸುವ ಮೂಲಕ ವೆಸ್ಟ್ ಇಂಡೀಸ್ ಉತ್ತಮ ಮೊತ್ತ ಕಲೆಹಾಕುವಲ್ಲಿ ಯಶಸ್ವಿಯಾಯಿತು. ಜಿಂಬಾಬ್ವೆ ಪರ ಸಿಕಂದರ್ ರಾಜಾ 19 ರನ್ ಬಿಟ್ಟುಕೊಟ್ಟು 3 ವಿಕೆಟ್ ಕಿತ್ತು ಮಿಂಚಿದರು.
ಗುರಿ ಬೆನ್ನತ್ತಿದ ಜಿಂಬಾಬ್ವೆ ಉತ್ತಮ ಆರಂಭ ಪಡೆಯಿತು. ವೆಸ್ಲಿ ಮಾಧೆವೆರೆ 19 ಎಸೆತಗಳಲ್ಲಿ 27 ರನ್ ಗಳಿಸಿ ತಂಡಕ್ಕೆ ಉತ್ತಮ ಆರಂಭ ನೀಡಿದರು. 2.2 ಓವರ್ ಗಳಲ್ಲಿ 29 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿದ್ದ ಜಿಂಬಾಬ್ವೆ ತಂಡಕ್ಕೆ ಅಲ್ಜಾರಿ ಜೋಸೆಫ್ ಶಾಕ್ ನೀಡಿದರು. 9 ಎಸೆತಗಳಲ್ಲಿ 13 ರನ್ ಗಳಿಸಿದ್ದ ಜಿಂಬಾಬ್ವೆ ನಾಯಕ ರೆಗಿಸ್ ಚಕಬ್ವಾ ಅವರನ್ನು ಬೌಲ್ಡ್ ಮಾಡುವ ಮೂಲಕ ವಿಂಡೀಸ್ಗೆ ಮುನ್ನಡೆ ತಂದು ಕೊಟ್ಟರು. ಇದಾದ ಬಳಿಕ ಮಾರಕ ದಾಳಿ ಸಂಘಟಿಸಿದ ವಿಂಡೀಸ್ ಬೌಲರ್ಗಳು ಜಿಂಬಾಬ್ವೆ ಆಟಗಾರರ ಮೇಲೆ ಸವಾರಿ ಮಾಡಿ 122 ರನ್ಗಳಿಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು. ಜಿಂಬಾಬ್ವೆ ಪರ ಲ್ಯೂಕ್ ಜೊಂಗ್ವೆ 29 ರನ್ ಗಳಿಸಿ ಅತ್ಯಧಿಕ ಸ್ಕೋರರ್ ಎನಿಸಿದರು. ವಿಂಡೀಸ್ ಪರ ಅಲ್ಜಾರಿ ಜೋಸೆಫ್ 16ಕ್ಕೆ 4 ವಿಕೆಟ್ ಕಿತ್ತು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.
ಸ್ಕೋರ್ ವಿವರ:
ವೆಸ್ಟ್ ಇಂಡೀಸ್: 7 ವಿಕೆಟಿಗೆ 137 (ಜಾನ್ಸನ್ ಚಾರ್ಲ್ಸ್ 45, ರೋವ್‌ಮನ್ ಪೊವೆಲ್ 28, ಸಿಕಂದರ್ ರಾಜಾ 19ಕ್ಕೆ 3).
ಜಿಂಬಾಬ್ವೆ: 18.2 ಓವರ್ಗಳಲ್ಲಿ 122ಕ್ಕೆ ಆಲೌಟ್ ( ವೆಸ್ಲಿ ಮಾಧೆವೆರೆ 27, ಲ್ಯೂಕ್ ಜೊಂಗ್ವೆ 29, ಅಲ್ಜಾರಿ ಜೋಸೆಫ್ 16ಕ್ಕೆ 4 ಜಾಸನ್ ಹೋಲ್ಡರ್ 12ಕ್ಕೆ 3). ಪಂದ್ಯಶ್ರೇಷ್ಠ: ಅಲ್ಜಾರಿ ಜೋಸೆಫ್
ಇದನ್ನೂ ಓದಿ | T20 World Cup | ಸ್ಕಾಟ್ಲೆಂಡ್ ವಿರುದ್ಧ 6 ವಿಕೆಟ್ ಗೆಲುವು ಸಾಧಿಸಿದ ಐರ್ಲೆಂಡ್