Site icon Vistara News

IND vs ZIM ODI | ಭಾರತ ವಿರುದ್ಧ ಸರಣಿಗೆ ಜಿಂಬಾಬ್ವೆ ತಂಡ ಪ್ರಕಟ

ind VS zim odi

ಹರಾರೆ : ಪ್ರವಾಸಿ ಭಾರತ ತಂಡದ ವಿರುದ್ಧ ಆಡಲಿರುವ ಜಿಂಬಾಬ್ವೆ (IND vs ZIM ODI) ಏಕದಿನ ತಂಡವನ್ನು ಗುರುವಾರ ಪ್ರಕಟಿಸಲಾಗಿದ್ದು, ಕಾಯಂ ನಾಯಕ ಕ್ರೇಗ್‌ ಇರ್ವಿನ್‌ ಸೇರಿದಂತೆ ಪ್ರಮುಖ ಆಟಗಾರರು ಟೂರ್ನಿಗೆ ಅಲಭ್ಯರಾಗಿದ್ದಾರೆ. ಹೀಗಾಗಿ ರೆಗಿಸ್‌ ಚಕಬ್ವಾ ಅವರು ತಂಡವನ್ನು ಮುನ್ನಡೆಸಲಿದ್ದಾರೆ. ಜಿಂಬಾಬ್ವೆ ಕ್ರಿಕೆಟ್‌ ಸಂಸ್ಥೆಯು ಒಟ್ಟು ೧೭ ಸದಸ್ಯರನ್ನು ಒಳಗೊಂಡಿರುವ ಬಲಿಷ್ಠ ತಂಡವನ್ನು ಪ್ರಕಟಿಸಿದ್ದು, ಬಾಂಗ್ಲಾದೇಶದ ರೀತಿಯಲ್ಲೇ ಭಾರತಕ್ಕೂ ಸೆಡ್ಡು ಹೊಡೆಯುವ ಉದ್ದೇಶವನ್ನು ಇಟ್ಟುಕೊಂಡಿದೆ.

ನಾಯಕ ಇರ್ವಿನ್‌ ಅವರಲ್ಲದೆ, ಗಾಯದ ಸಮಸ್ಯೆಗೆ ಒಳಗಾಗಿರುವ ವೇಗದ ಬೌಲರ್‌ ಬ್ಲೆಸ್ಸಿಂಗ್‌ ಮುಜರ್ಬಾನಿ ಕೂಡ ಅವರೂ ಅಲಭ್ಯರಾಗಿದ್ದಾರೆ. ಅವರಲ್ಲದೆ, ವೆಲ್ಲಿಂಗ್ಟನ್‌ ಮಸಕಡ್ಜಾ ಹಾಗೂ ಟೆಂಡೈ ಚಟಾರಾ ಕೂಡ ಗಾಯದ ಕಾರಣಕ್ಕೆ ಭಾರತ ವಿರುದ್ಧದ ಸರಣಿಯಿಂದ ಹೊರಕ್ಕುಳಿದಿದ್ದಾರೆ.

ವಿಶ್ವದ ಬಲಿಷ್ಠ ತಂಡವಾಗಿರುವ ಭಾರತದ ವಿರುದ್ಧ ಆಡಿ ಸಾಮರ್ಥ್ಯ ವೃದ್ಧಿಸಲು ಚಕಬ್ವಾ ನೇತೃತ್ವದ ಜಿಂಬಾಬ್ವೆ ತಂಡಕ್ಕೆ ಇದು ಉತ್ತಮ ಅವಕಾಶ ಎಂದು ಹೇಳಲಾಗುತ್ತಿದೆ. ಜತೆಗೆ ಆ ತಂಡದ ಯುವ ಕ್ರಿಕೆಟಿಗರಿಗೂ ಭಾರತವನ್ನು ಎದುರಿಸುವ ಅತ್ತಯುಮ್ಮ ಅವಕಾಶ ಲಭಿಸಲಿದೆ.

ವಾರಗಳ ಹಿಂದೆ ಜಿಂಬಾಬ್ವೆಗೆ ಪ್ರವಾಸ ಬಂದಿದ್ದ ಬಾಂಗ್ಲಾದೇಶ ತಂಡವನ್ನು ಆತಿಥೇಯರು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ೨-೧ ಅಂತರದಿಂದ ಸೋಲಿಸಿದ್ದರು. ಅದರಲ್ಲೂ ಜಿಂಬಾಬ್ವೆ ಬಳಗದ ಬಾಟರ್‌ ಸಿಕಂದರ್‌ ರಾಜಾ ಸತತ ಎರಡು ಶತಕಗಳನ್ನು ಬಾರಿಸುವ ಮೂಲಕ ಆತಿಥೇಯರ ಗೌರವ ಇಮ್ಮಡಿಸಲು ನೆರವಾಗಿದ್ದರು.

ರಾಹುಲ್ ನಾಯಕ

ಮೂರು ಪಂದ್ಯಗಳ ಏಕದಿನ ಸರಣಿ ಆಗಸ್ಟ್‌ ೧೮ರಂದು ಆರಂಭವಾಗಲಿದೆ. ಮುಂದಿನ ಪಂದ್ಯ ೨೦ರಂದು ನಡೆದರೆ ಮೂರನೇ ಹಣಾಹಣಿ ೨೨ಕ್ಕೆ ಆಯೋಜನೆಗೊಂಡಿದೆ. ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಶಿಖರ್‌ ಧವನ್‌ಗೆ ಆರಂಭದಲ್ಲಿ ಭಾರತ ತಂಡದ ನೇತೃತ್ವ ವಹಿಸಲಾಗಿತ್ತು. ಆದರೆ, ಕನ್ನಡಿಗ ಕೆ. ಎಲ್ ರಾಹುಲ್‌ ಫಿಟ್‌ ಆದ ಬಳಿಕ ಅವರನ್ನು ಜಿಂಬಾಬ್ವೆಗೆ ಕಳುಹಿಸಲು ನಿರ್ಧರಿಸಲಾಗಿದ್ದು, ನಾಯಕತ್ವವನ್ನೂ ಅವರಿಗೆ ವಹಿಸಲಾಗಿದೆ. ರಾಹುಲ್‌ ಫಿಟ್‌ ಆಗಿರುವುದು ಭಾರತ ತಂಡದ ಪಾಲಿಗೆ ಶುಭ ಸುದ್ದಿಯಾಗಿದ್ದು, ಏಷ್ಯಾ ಕಪ್‌ ಟಿ೨೦ ಟೂರ್ನಿಗೆ ಅಯ್ಕೆಯಾಗಿರುವ ಅವರು ಜಿಂಬಾಬ್ವೆ ವಿರುದ್ಧ ಆಡುವ ಮೂಲಕ ಪೂರ್ಣ ಪ್ರಮಾಣದಲ್ಲಿ ಫಾರ್ಮ್‌ಗೆ ಮರಳುವ ನಿರೀಕ್ಷೆಯಿದೆ.

ಕೆ.ಎಲ್‌ ರಾಹುಲ್‌ ಕಳೆದ ಫೆಬ್ರವರಿಯಲ್ಲಿ ಕೊನೇ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದರು. ಆ ಬಳಿಕ ಗಾಯದ ಸಮಸ್ಯೆಯಿಂದಾಗಿ ಹಲವು ಅವಕಾಶಗಳನ್ನು ಕಳೆದುಕೊಂಡಿದ್ದರು. ಇದೀಗ ಅವರ ಬ್ಯಾಟ್‌ನಲ್ಲಿ ಮತ್ತೊಮ್ಮೆ ರನ್‌ ಹೊಳೆ ಹರಿಯುವ ನಿರೀಕ್ಷೆಯಿದೆ.

ಜಿಂಬಾಬ್ವೆ ತಂಡ

ರೆಗಿನ್‌ ಚಕಬ್ವಾ (ನಾಯಕ), ರಿಯಾನ್‌ ಬರ್ಲ್‌, ಟನಕಾ, ಬ್ರಾಡ್ಲಿ ಎವಾನ್ಸ್‌, ಲೂಜ್‌ ಜಾಂಗ್ವೆ, ಇನೋಸೆಂಟ್‌ ಕೈಯಾ, ತುಕಾಡ್ಜ್‌ವಾನೆಶ್‌ ಕೈತಾನೊ, ಕ್ಲೈವ್‌ ಮದಂಡೆ, ವೆಸ್ಸೆಲಿ ಮಾಧೆವೆರೆ, ತಡಿವಾನಾಶೆ ಮರುಮಣಿ, ಜಾನ್ ಮಸಾರಾ, ಟೋನಿ ಮುನಿಯೋಂಗಾ, ರಿಚರ್ಡ್ ಎನ್‌ಗರವ, ವಿಕ್ಟರ್ ನ್ಯುಚಿ, ಸಿಕಂದರ್‌ ರಾಜಾ, ಮಿಲ್ಟನ್‌ ಶುಂಭಾ, ಡೊನಾಲ್ಡ್ ತಿರಿಪಾನೊ.

ಭಾರತ ತಂಡ

ಕೆ. ಎಲ್‌ ರಾಹುಲ್‌ ನಾಯಕ (ನಾಯಕ), ಶಿಖರ್‌ ಧವನ್‌ (ಉಪನಾಯಕ), ಋತುರಾಜ್‌ ಗಾಯಕ್ವಾಡ್‌, ಶುಬ್ಮನ್ ಗಿಲ್‌, ದೀಪಕ್‌ ಹೂಡ, ರಾಹುಲ್‌ ತ್ರಿಪಾಠಿ, ಇಶಾನ್‌ ಕಿಶನ್‌, ಸಂಜು ಸ್ಯಾಮ್ಸನ್‌, ವಾಷಿಂಗ್ಟನ್ ಸುಂದರ್, ಶಾರ್ದುಲ್‌ ಠಾಕೂರ್‌, ಕುಲ್ದೀಪ್‌ ಯಾದವ್‌, ಅಕ್ಷರ್‌ ಪಟೇಲ್‌, ಆವೇಶ್ ಖಾನ್‌, ಪ್ರಸಿದ್ಧ್‌ ಕೃಷ್ಣ, ಮೊಹಮ್ಮದ್‌ ಸಿರಾಜ್‌, ದೀಪಕ್ ಚಾಹರ್‌.

Exit mobile version