Site icon Vistara News

Bengaluru Rain : ಅಬ್ಬಾ.. ಬೆಂಗಳೂರಲ್ಲಿ ಏನ್‌ ಮಳೆ ರೀ; ನೀರಲ್ಲಿ ತೇಲಿ ಬಂದ ಗನ್‌ಗಳು!

Bengaluru Rain Effect Wall collpase

ಬೆಂಗಳೂರು: ಆಗ್ನೇಯ ಅರಬ್ಬಿ ಸಮುದ್ರದಲ್ಲಿ ಸುಳಿಗಾಳಿ ಎದ್ದಿದ್ದು, ಟ್ರಫ್‌ ನಿರ್ಮಾಣವಾಗಿದೆ. ಇದರ ಪ್ರಭಾವದಿಂದಾಗಿ ರಾಜ್ಯಾದ್ಯಂತ (Karnataka Weather Forecast) ಮಳೆಯಾಗುತ್ತಿದೆ. ರಾಜಧಾನಿ ಬೆಂಗಳೂರಲ್ಲಿ‌ ಬೆಳಗಿನ ಸಮಯ ಮೋಡ ಕವಿದ ವಾತಾವರಣ ಇದ್ದರೆ, ಮಧ್ಯಾಹ್ನ ಆಗುತ್ತಿದ್ದಂತೆ ಕಗ್ಗತ್ತಲು ಆವರಿಸಿತ್ತು. ಮಧ್ಯಾಹ್ನ 3ರ ಸುಮಾರಿಗೆ ಶುರುವಾದ ಮಳೆಯು (Rain News) ಅರ್ಧ ಗಂಟೆಗೂ ಹೆಚ್ಚು ಸಮಯ (Bengaluru Rain) ಅಬ್ಬರಿಸಿದೆ.

ನಗರದ ವಿಧಾನಸೌಧ, ಶಿವಾಜಿನಗರ, ಕಬ್ಬನ್‌ಪಾರ್ಕ್‌, ಕೆಆರ್‌ ಸರ್ಕಲ್‌ ಸೇರಿದಂತೆ ಫ್ರೀಡಂ ಪಾರ್ಕ್‌, ಮೆಜೆಸ್ಟಿಕ್‌, ಕೆಆರ್‌ ಮಾರ್ಕೆಟ್‌ ಸುತ್ತಮುತ್ತ ಗುಡುಗು ಸಹಿತ ಭಾರಿ ಮಳೆಯಾಗಿದೆ. ಇನ್ನೆರಡು ದಿನಗಳು ಬೆಂಗಳೂರಲ್ಲಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ನೀರಲ್ಲಿ ತೇಲಿದ ಶಸ್ತ್ರಾಸ್ತ್ರ

ಸೋಮವಾರ ರಾತ್ರಿಯಿಡೀ ಸುರಿದ ಮಳೆಯು ನಾನಾ ಅವಾಂತರವನ್ನೇ ಸೃಷ್ಟಿಸಿತ್ತು. ಇತ್ತೀಚೆಗೆ ನಿರ್ಮಾಣವಾಗಿದ್ದ ಸಶಸ್ತ್ರ ಮೀಸಲು ಪಡೆ ಕಚೇರಿಯ ಗೋಡೆ ಕುಸಿದಿದೆ. ಪರಿಣಾಮ ಮಳೆ ನೀರು ಕಚೇರಿಯೊಳಗೆ ನುಗ್ಗಿದೆ. ಬೆಂಗಳೂರು ಪಶ್ಚಿಮದ ಉಲ್ಲಾಳದಲ್ಲಿರುವ ನಗರ ಸಶಸ್ತ್ರ ಮೀಸಲು ಪಡೆ ಕಚೇರಿಯೊಳಗೆ ಘಟನೆ ನಡೆದಿದೆ.

ಇಡೀ ರಾತ್ರಿ ಮಳೆ ನೀರಿನಲ್ಲೆ ಸಿಎಆರ್ ಸಿಬ್ಬಂದಿ ಕಾಲ ಕಳೆದಿದ್ದಾರೆ. ಗನ್‌ಗಳನ್ನು ಇಟ್ಟಿದ್ದ ಕೊಠಡಿಗೂ ನೀರು ನುಗ್ಗಿದ್ದರಿಂದ ಎಲ್ಲವೂ ತೇಲಿ ಬಂದಿತ್ತು. ಲಕ್ಷಾಂತರ ರೂಪಾಯಿ ವೆಚ್ಚದ ಶಸ್ತ್ರಾಸ್ರಗಳು ಹಾನಿಯಾಗಿದೆ. ಕಳಪೆ ಕಾಮಗಾರಿಯಿಂದ ಗೋಡೆ ಕುಸಿದಿದೆ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ. ಘಟನಾ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: Karnataka Weather : ಬೆಂಗಳೂರಲ್ಲಿ ರಾತ್ರಿಯಿಡೀ ಸುರಿದ ಮಳೆ; ಇನ್ನೆರಡು ದಿನ ವರುಣಾರ್ಭಟ

ಧಾರಾಕಾರ ಮಳೆಗೆ ಕೆರೆಯಂತಾದ ಶಿವಾನಂದ ಸರ್ಕಲ್‌

ಮಂಗಳವಾರ ಮಧ್ಯಾಹ್ನ ಸುರಿದ ಧಾರಾಕಾರ ಮಳೆಗೆ ಬೆಂಗಳೂರಿನ ಶಿವಾನಂದ ‌ಸರ್ಕಲ್ ಬಳಿ ಇರುವ ರೈಲ್ವೆ ಅಂಡರ್ ಪಾಸ್‌ ಕೆರೆಯಂತಾಗಿತ್ತು. ಅಂಡರ್ ಪಾಸ್‌ನಲ್ಲಿ ನಾಲ್ಕೈದು ಅಡಿ ನೀರು ನಿಂತ ಪರಿಣಾಮ ಬೈಕ್‌ ಸವಾರರು ಪರದಾಡಿದರು. ಪ್ರತಿ ಬಾರಿ ಮಳೆ ಬಂದಾಗಲೂ ಅಂಡರ್ ಪಾಸ್‌ನಲ್ಲಿ ಇದೇ ಸಮಸ್ಯೆ ಆಗುತ್ತೆ ಎಂದು ಜನರು ಕಿಡಿಕಾರಿದರು.

ಇತ್ತ ಅಂಡರ್ ಪಾಸ್‌ನಲ್ಲಿ ಹರಿಯುತ್ತಿರುವ ಮಳೆ ನೀರಿನಿಂದಾಗಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಹೀಗಾಗಿ ವಾಹನಗಳನ್ನು ರೈಲ್ವೆ ಹಳಿ ಪಕ್ಕದ ವರ್ತುಲ ರಸ್ತೆಗಳ ಮೂಲಕ ಹೋಗಲು ಸೂಚನೆ ನೀಡಿದರು. ಬ್ಯಾರಿಕೇಡ್ ಹಾಕಿ ತಾತ್ಕಾಲಿಕ ವಾಹನ ಓಡಾಟಕ್ಕೆ ಬ್ರೇಕ್‌ ಹಾಕಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ಕ್ಲಿಕ್‌ ಮಾಡಿ

Exit mobile version