Site icon Vistara News

Kalaburagi News: ರಸಗೊಬ್ಬರ, ಬೀಜ ಕೊರತೆಯಾಗದಂತೆ ಎಚ್ಚರ ವಹಿಸಲು ಪ್ರಿಯಾಂಕ್ ಖರ್ಗೆ ಸೂಚನೆ

Minister Priyank Kharge held a meeting on Monsoon Sowing Preparation and Precautionary Measures for Flood Control

ಕಲಬುರಗಿ: ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದ್ದ ಕಾರಣ ಎಲ್ಲೆಡೆ ಒಮ್ಮೆಲೆ ಬಿತ್ತನೆ ಶುರುವಾಗಿದ್ದು, ಬೀಜ ಮತ್ತು ರಸಗೊಬ್ಬರ ಕೊರತೆಯಾಗದಂತೆ ಕೃಷಿ ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಪ್ರಸಕ್ತ ಸಾಲಿನ ಮುಂಗಾರು ಬಿತ್ತನೆ ಸಿದ್ಧತೆ ಮತ್ತು ಪ್ರವಾಹ ನಿಯಂತ್ರಣಕ್ಕೆ ತೆಗೆದುಕೊಳ್ಳಬಹುದಾದ ಮುಂಜಾಗ್ರತಾ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಕಳೆದ ವರ್ಷ ಕಲಬುರಗಿ, ಚಿತ್ತಾಪುರ, ಕಾಳಗಿ ತಾಲೂಕಿನಲ್ಲಿ ಕಳಪೆ ಬೀಜ ವಿತರಣೆಯಾಗಿದ್ದರಿಂದ ರೈತರು ತಮ್ಮ ಬೆಳೆ ಹಾನಿ ಮಾಡಿಕೊಂಡಿದ್ದಾರೆ ಇದು ಪುನರಾವರ್ತನೆಯಾಗಬಾರದು ಎಂದು ತಿಳಿಸಿದರು.

ಈ ಸಲ ಅತಿವೃಷ್ಠಿಯಿಂದ ಬೆಳೆ ಹಾನಿಯಾಗುವ ಸಾಧ್ಯತೆ ಇದ್ದು, ಹಾನಿ ತಡೆಗೆ ಈ ಕೂಡಲೇ ಅಗತ್ಯ ಹಾಗೂ ಸೂಕ್ತ ಕ್ರಮ ಕೈಗೊಳ್ಳುವಂತೆ ಕೃಷಿ ಅಧಿಕಾರಿಗಳಿಗೆ ಸೂಚಿಸಿದ ಸಚಿವ‌ ಪ್ರಿಯಾಂಕ್ ಖರ್ಗೆ, ಹೆಚ್ಚು ಮಳೆಗೆ ಆಗಬಹುದಾದ ಹಾನಿ ತಪ್ಪಿಸಲು ಬಸಿಗಾಲುವೆ ನಿರ್ಮಾಣ ಹಾಗೂ ಬೆಳೆ ವಿಮೆ ಮಾಡಿಸಲು ಗ್ರಾಮೀಣ ಮಟ್ಟದಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕು. ಕಳೆದ ವರ್ಷ ಬೆಳೆ‌ ವಿಮೆ ಮಾಡಿಸಿದ್ದರಿಂದ ಹೆಚ್ಚಿನ ಪರಿಹಾರ ಸಿಗಲು ಕಾರಣವಾಗಿದೆ. ಈ ಬಾರಿಯೂ ನೊಂದಣಿ ಹೆಚ್ಚಿಸಿ, ಮೈ ಮರೆಯದಿರಿ ಎಂದು ಕೃಷಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ಇದನ್ನೂ ಓದಿ: Kalki 2898 AD: ‘ಕಲ್ಕಿ 2898 AD’ ಚಿತ್ರದ ಫೈನಲ್‌ ಟ್ರೇಲರ್‌ ಹೀಗಿದೆ ನೋಡಿ! ಜೂ.27ರಂದು ಚಿತ್ರ ರಿಲೀಸ್

ಪ್ರತಿ ತಾಲೂಕಿನಲ್ಲಿ ಪರವಾನಿಗೆ ಇಲ್ಲದೆ ಬೀಜ, ರಸಗೊಬ್ಬರ, ಕೀಟನಾಶಕ ಮಾರಾಟ ಮಾಡಿದಲ್ಲಿ, ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಿದಲ್ಲಿ ಅಂತಹ ಕೃಷಿ ಮಳಿಗೆಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಸಂಬಂಧಪಟ್ಟ ತಾಲೂಕಿನ ಸಹಾಯಕ ನಿರ್ದೇಶಕರನ್ನೇ ಇದಕ್ಕೆ ಹೊಣೆಗಾರರನ್ನಾಗಿಸಬೇಕು. ಈ ಸಂಬಂಧ ತಾಲೂಕಾ ಅಧಿಕಾರಿಗಳಿಗೆ ಲಿಖಿತ ಸೂಚನೆ ನೀಡಿ ಎಂದು ಡಿ.ಸಿ ಬಿ. ಫೌಜಿಯಾ ತರನ್ನುಮ್ ಅವರಿಗೆ ಸಚಿವ ಪ್ರಿಯಾಂಕ್‌ ಖರ್ಗೆ ನಿರ್ದೇಶನ ನೀಡಿದರು.

ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಮಾತನಾಡಿ, ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ 8.65 ಲಕ್ಷ‌ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ. ಈ ವರ್ಷ ಉತ್ತಮ ಮಳೆಯಾದ ಕಾರಣ ಜಿಲ್ಲೆಯ ಎಲ್ಲೆಡೆ ಇದೂವರೆಗೆ ಶೇ.30 ಬಿತ್ತನೆಯಾಗಿದೆ. ಉಳಿದೆಡೆ ಬಿತ್ತನೆ ಚಟುವಟಿಕೆ ಗರಿಗೆದರಿವೆ. ಕಳೆದ ವರ್ಷದಲ್ಲಿ ಬೆಳೆ‌ ವಿಮೆ, ಸ್ಥಳೀಯ ಪ್ರಕೃತಿ ವಿಕೋಪ ಹಾಗೂ ತೊಗರಿ ನೆಟೆ ರೋಗ ಪ್ರಕರಣದಲ್ಲಿ ಒಟ್ಟಾರೆ 697.34 ಕೋಟಿ ರೂ. ಪರಿಹಾರ ರೈತರಿಗೆ ಸಿಕ್ಕಿದೆ. ಕಳೆದ‌ ಬಾರಿ 1.62 ಲಕ್ಷ ರೈತರು ಬೆಳೆ ವಿಮೆ‌ ಮಾಡಿಸಿದ್ದರು, ಈ ಸಲ 2.50 ಲಕ್ಷಕ್ಕೆ ಹೆಚ್ಚಿಸಲು ಗುರಿ ಹೊಂದಿದ್ದು, ಇದೂವರೆಗೆ 15 ಸಾವಿರಕ್ಕೂ ಹೆಚ್ಚು ರೈತರು ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದರು.

ರೈತರಿಗೆ ಸಬ್ಸಿಡಿ ಹಾಗೂ ಪರಿಹಾರ ಕೊಡಿಸುವಲ್ಲಿ ಕೃಷಿ, ಕಂದಾಯ, ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಶ್ರಮವಹಿಸಿದ್ದೀರಿ. ಸರ್ಕಾರದ‌ ಮಟ್ಟದಲ್ಲಿ ಈ ಬಗ್ಗೆ ಪ್ರಶಂಸೆ ವ್ಯಕ್ತವಾಗಿದೆ. ನಿಮಗೆ ಅಭಿನಂದನೆಗಳು ಎಂದು ಪ್ರಿಯಾಂಕ್ ಖರ್ಗೆ ಹೇಳಿದರು. ಮುಂದುವರೆದು, ಎಫ್.ಐ.ಡಿ. ನೊಂದಣಿ ತೀವ್ರಗೊಳಿಸಬೇಕು. ಇದರಿಂದ ಡಿ.ಬಿ.ಟಿ. ಪರಿಹಾರ ಪಡೆಯಲು ಸಹಕಾರಿಯಾಗಲಿದೆ. ಇದು ಸ್ಪಂದಿಸುವ ಸರ್ಕಾರ ಎಂಬುದನ್ನು ಅರಿತಿರುವ ರೈತರು ನಮ್ಮಿಂದ ಹೆಚ್ಚಿನ ಅಪೇಕ್ಷೆ ಹೊಂದಿದ್ದಾರೆ. ಇದನ್ನರಿತು ನೀವು ಕೆಲಸ ಮಾಡಿ ಎಂದು ತಿಳಿಸಿದರು‌.

ಇದನ್ನೂ ಓದಿ: DK Shivakumar: ವಾರದೊಳಗೆ ಹೊಸ ಜಾಹೀರಾತು ನೀತಿಯ ಕರಡು ಪ್ರತಿ ಬಿಡುಗಡೆ

ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಖಾತೆ ಸಚಿವ ಡಾ. ಶರಣಪ್ರಕಾಶ ಪಾಟೀಲ ಮಾತನಾಡಿ, ಜಿಲ್ಲೆಯಲ್ಲಿ ವಿಶೇಷವಾಗಿ ಡಿ.ಎ.ಪಿ.ರಸಗೊಬ್ಬರ ಕೊರತೆ ಎದ್ದು ಕಾಣುತ್ತಿದೆ. ಇದು ಹೀಗೆ ಮುಂದುವರೆದರೆ ರೈತರು ಪಕ್ಕದ ರಾಜ್ಯ ಅಥವಾ ಬ್ಲ್ಯಾಕ್ ಮಾರ್ಕೆಟ್‌ನಲ್ಲಿ ಹೆಚ್ಚಿನ ಹಣ ನೀಡಿ ಖರೀದಿಸಬೇಕಾಗುತ್ತದೆ. ರೈತರನ್ನು ಇದರಿಂದ ತಪ್ಪಿಸಲು ಸಾಕಷ್ಟು ಪ್ರಮಾಣದಲ್ಲಿ ಆರ್.ಎಸ್.ಕೆ. ಕೇಂದ್ರದಲ್ಲಿ ಡಿ.ಎ.ಪಿ. ದಾಸ್ತಾನಿಕರಿಸಬೇಕು. ಕಳಪೆ, ನಕಲಿ ಬೀಜ ಮಾರಾಟಕ್ಕೆ ಕಡಿವಾಣ ಹಾಕಬೇಕು ಎಂದರು.

ಬೆಳೆ ವಿಮೆ‌ ಮಾಡಿದ ರೈತರಿಗೆ ಬೆಳೆ ಹಾನಿ‌ ಸಂದರ್ಭದಲ್ಲಿ ಸಮರ್ಪಕ ಪರಿಹಾರ ಪಡೆಯುವ ನಿಟ್ಟಿನಲ್ಲಿ ಕ್ರಾಪ್ ಕಟ್ಟಿಂಗ್ ಎಕ್ಸ್ ಪೆರಿಮೆಂಟ್ ನಡೆಯುವ ಸಮಯದಲ್ಲಿ ಕಡ್ಡಾಯವಾಗಿ ಇರಬೇಕಾದ ಅಧಿಕಾರಿಗಳು ಇರಲೇಬೇಕು ಹಾಗೂ ಸಂಪೂರ್ಣ ಪ್ರಕ್ರಿಯೆಯನ್ನು ವಿಡಿಯೋಗ್ರಾಫಿ ಮಾಡಲೇಬೇಕು ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ್ ಕಟ್ಟುನಿಟ್ಟಾಗಿ ಸೂಚಿಸಿದರು.

ತೋಟಗಾರಿಕೆ ಇಲಾಖೆ ಚರ್ಚೆ ವೇಳೆಯಲ್ಲಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ತೋಟಗಾರಿಕೆ ಬೆಳೆ ಪ್ರಮಾಣ ವರ್ಷದಿಂದ ವರ್ಷಕ್ಕೆ ವಿಸ್ತರಣೆಯಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ, ತೋಟಗಾರಿಕೆ ಬೆಳೆ ವಿಸ್ತಿರ್ಣ ಹೆಚ್ಚಿಸಬೇಕು. ಇಲ್ಲಿನ ಕೆಂಬಾಳೆ, ಕಲ್ಲಂಗಡಿ ಅಂತಹ ಹಣ್ಣುಗಳನ್ನು ಸೂಪರ್ ಫುಡ್ ಬ್ರ್ಯಾಂಡ್ ನಡಿ ಮಾರಾಟ ಮಾಡಬೇಕು. ರೈತರಿಗೆ ಉತ್ತಮ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕೆಂದ ಅವರು, ಅತಿವೃಷ್ಠಿ ಹಾನಿಯಾದಲ್ಲಿ ಮೇವು ದಾಸ್ತಾನು, ಜಾನುವಾರುಗಳಿಗೆ ಲಸಿಕಾಕರಣ ಮಾಡಬೇಕು ಎಂದು ಪಶುಸಂಗೋಪನಾ ಉಪನಿರ್ದೇಶಕ ಡಾ.ಎಸ್.ಡಿ. ಆವಂಟಿ ಅವರಿಗೆ ಸೂಚಿಸಿದರು.

ರೈತರ ಆತ್ಮಹತ್ಯೆಗೆ ಕಳವಳ, ಪರಿಹಾರ ವಿಳಂಬ ಸಲ್ಲದು

ಸಭೆಯಲ್ಲಿ ರೈತರ ಆತ್ಮಹತ್ಯೆ ಚರ್ಚೆ ಸಂದರ್ಭದಲ್ಲಿ ಇನ್ನು 5 ಪ್ರಕರಣ ಪರಿಹಾರ ನೀಡಲು ಬಾಕಿ ಎಂದು ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್‌ ಹೇಳಿದಾಗ, ಸಚಿವ ಪ್ರಿಯಾಂಕ್ ಖರ್ಗೆ ಅವರು ಆತ್ಮಹತ್ಯೆಗೆ ತೀವ್ರ ಕಳವಳ ವ್ಯಕ್ತಪಡಿಸುತ್ತಾ, ಇಂತಹ ಪ್ರಕರಣದಲ್ಲಿ ಪರಿಹಾರ ವಿಳಂಬ ಸಲ್ಲದು. ಇತ್ತೀಚೆಗೆ ಚಿತ್ತಾಪೂರ ತಾಲೂಕಿನ ಅಳ್ಳೊಳ್ಳಿಯಲ್ಲಿ ವ್ಯಕ್ತಿಯೊಬ್ಬನಿಗೆ ಹಾವು ಕಚ್ಚಿದ ಪ್ರಕರಣ ಉಲ್ಲೇಖಿಸಿ ಪಿ.ಎಚ್.ಸಿ ಯಲ್ಲಿ ಎಂಟಿ ಸ್ನೇಕ್ ವೆನೋಮ್ ಇಲ್ಲದಕ್ಕೆ ಯಾದಗಿರಿ ಆಸ್ಪತ್ರೆಗೆ ಹೋಗಬೇಕಾಯಿತು. ಪ್ರತಿ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಎಂಟಿ ಸ್ನೇಕ್ ವೆನೋಮ್ ಶೇಖರಿಸಿಡುವಂತೆ ಸೂಚಿಸಿದರು. ಇದಕ್ಕೆ ದನಿಗೂಡಿಸಿದ ಸಚಿವ ಡಾ. ಶರಣಪ್ರಕಾಶ ಪಾಟೀಲ್, ಹಾವು ಕಚ್ಚಿದ ಪ್ರಕರಣದಲ್ಲಿ ಜನರು ತಪ್ಪು ನಂಬಿಕೆಯಲ್ಲಿ ಮಂತ್ರ-ತಂತ್ರ ಎಂದು ಆ ಕಡೆ ಹೋಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ಆರೋಗ್ಯ ಇಲಾಖೆ ಸೇರಿದಂತೆ ಸಂಬಂಧಿಸಿದ ಇಲಾಖೆಗಳು ಸಾರ್ವಜನಿಕರಿಗೆ ಅರಿವು ಮೂಡಿಸಲು ಅಭಿಯಾನ ಕೈಗೊಳ್ಳಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಿದರು.

ಇದನ್ನೂ ಓದಿ: PGCET 2024 : ಪಿಜಿಸಿಇಟಿ ಅಪ್‌ಡೇಟ್ಸ್‌ ; ಶುಲ್ಕ ಪಾವತಿ, ತಿದ್ದುಪಡಿ, ಪರೀಕ್ಷಾ ಕೇಂದ್ರ ಆಯ್ಕೆಗೆ ಜೂ.24 ಕೊನೆ ದಿನ

ಸಭೆಯಲ್ಲಿ ಅಫಜಲಪುರ ಶಾಸಕ ಎಂ.ವೈ. ಪಾಟೀಲ, ವಿಧಾನ ಪರಿಷತ್ ಶಾಸಕರುಗಳಾದ ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷೆ ಚಂದ್ರಿಕಾ ಪರಮೇಶ್ವರಿ, ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವರಸಿಂಗ್ ಮೀನಾ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಮಹಾನಗರ ಪಾಲಿಕೆ ಉಪ ಆಯುಕ್ತ ಮಾಧವ ಗಿತ್ತೆ, ಪ್ರೊಬೇಷನರ್ ಐ.ಎ.ಎಸ್. ಅಧಿಕಾರಿ ಮೀನಾಕ್ಷಿ ಆರ್ಯ ಸೇರಿದಂತೆ ಜಿಲ್ಲಾ ಮಟ್ಟದ ಅನೇಕ ಅಧಿಕಾರಿಗಳು ಇದ್ದರು.

Exit mobile version