ಚಿಕ್ಕಮಗಳೂರು/ ಶಿವಮೊಗ್ಗ: ಚಿಕ್ಕಮಗಳೂರಲ್ಲಿ ಮಳೆಯು (Karnataka Rain) ಅಬ್ಬರಿಸುತ್ತಿದ್ದು, ಜನರು ತತ್ತರಿಸಿ ಹೋಗಿದ್ದಾರೆ. ಚಿಕ್ಕಮಗಳೂರು ನಗರದ ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿ ರಾತ್ರಿ ಇಡಿ ಸುರಿದ ಮಳೆಗೆ (Rain News) ಕಾಂಪೌಂಡ್ ಶಿಥಿಲಾವಸ್ಥೆಗೊಂಡು ಕುಸಿದು ಬಿದ್ದಿದೆ. ಕಾಂಪೌಂಡ್ ಪಕ್ಕದಲ್ಲಿ ನಿಲ್ಲಿಸಿದ್ದ ನಾಲ್ಕು ಬೈಕ್‌ಗಳು ನಜ್ಜುಗುಜ್ಜಾಗಿತ್ತು. ಸ್ಥಳೀಯರು ಹಳೆ ಕಾಂಪೌಂಡ್ ತೆರೆವಿಗಾಗಿ ಆಗ್ರಹಿಸಿ, ನಗರಸಭೆ ವಿರುದ್ಧ ಆಕ್ರೋಶ ಹೊರಹಾಕಿದರು.
ಚಿಕ್ಕಮಗಳೂರು ನಗರದ ಉದ್ದೇಬೋರನಹಳ್ಳಿಯಲ್ಲಿ ರಾತ್ರಿಯಿಡೀ ಸುರಿದ ಮಳೆಯಿಂದಾಗಿ ಗೊಬ್ಬರದ ಅಂಗಡಿಗೆ ಮೋರಿ ನೀರು ನುಗ್ಗಿತ್ತು. ಲಕ್ಷಾಂತರ ರೂಪಾಯಿ ರಾಸಾಯನಿಕ ಗೊಬ್ಬರ, ಸಿಮೆಂಟ್ ನಾಶವಾಗಿತ್ತು. ರಾಷ್ಟ್ರೀಯ ಹೆದ್ದಾರಿ ಪಕ್ಕದ ನೀರು ನುಗ್ಗಿ ಗೊಬ್ಬರ ನೀರು ಪಾಲಾಗಿತ್ತು. ಮೋರಿ ಕಾಮಗಾರಿ ಮಾಡದೆ ಅರ್ಧಕ್ಕೆ ಬಿಟ್ಟಿರುವ ಹೆದ್ದಾರಿ ಪ್ರಾಧಿಕಾರ ವಿರುದ್ಧ ಸ್ಥಳೀಯರು ಕಿಡಿಕಾರಿದರು.
ಚಿಕ್ಕಮಗಳೂರು ತಾಲೂಕಿನ ಆಲ್ದೂರು, ಕಂಡರ ಕಸ್ಕೆ ಗ್ರಾಮದಲ್ಲಿ ಭಾರಿ ಮಳೆಗೆ ಮನೆಯ ಮೇಲೆ ಮರ ಬಿದ್ದಿತ್ತು. ಕೂದಲೆಳೆ ಅಂತದಲ್ಲಿ ಮನೆಯಲ್ಲಿದ್ದವರು ಪಾರಾಗಿದ್ದರು. ಮರ ಬಿದ್ದ ಪರಿಣಾಮ ಮನೆಯಲ್ಲಿದ್ದ ಪೀಠೋಪಕರಣಗಳು, ಆಹಾರ ಪದಾರ್ಥ ನಾಶವಾಗಿತ್ತು. ಕಳೆದ ರಾತ್ರಿ ಮಲೆನಾಡು-ಬಯಲು ಸೀಮೆಯಲ್ಲಿ ಭಾರೀ ಮಳೆಯಿಂದಾಗಿ ಗುಡಿಸಲಿಗೆ ಚರಂಡಿ ನೀರು ನುಗ್ಗಿತ್ತು.
ಚಿಕ್ಕಮಗಳೂರು ತಾಲೂಕಿನ ಉದ್ದೇಬೋರನಹಳ್ಳಿಯಲ್ಲಿ ಘಟನೆ ನಡೆದಿದೆ. ಚಿಕ್ಕಮಗಳೂರಿನ ಕಳಸ, ಬಾಳೆಹೊನ್ನೂರು, ಮಾಗುಂಡಿ, ಎನ್‌ಆರ್ ಪುರ, ಕೊಪ್ಪ ಶನಿವಾರ ರಾತ್ರಿಯಿಡೀ ಮಳೆ ಸುರಿದಿದೆ. ಕಳಸ-ಬಾಳೆಹೊನ್ನೂರು ರಸ್ತೆಯಲ್ಲಿ ಮಳೆ ನೀರು ನದಿಯಂತೆ ಹರಿದಿದೆ. ಭಾರಿ ಮಳೆ ಹಿನ್ನೆಲೆ ಹಲವು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಸ್ಥಗಿತವಾಗಿತ್ತು.
ಇದನ್ನೂ ಓದಿ: Electric shock : ಮಳೆಗೆ ತುಂಡಾಗಿ ಬಿದ್ದ ವಿದ್ಯುತ್ ತಂತಿ; ಶಾಕ್‌ನಿಂದ ವ್ಯಕ್ತಿ ಸ್ಪಾಟ್ ಡೆತ್
ಮದುವೆ ಊಟ ಮಾಡುವಾಗಲೇ ನುಗ್ಗಿದ ನೀರು
ಶಿವಮೊಗ್ಗದಲ್ಲೂ ಮಳೆಯು ಅವಾಂತರ ಸೃಷ್ಟಿಸಿತ್ತು. ಕಳೆದ ರಾತ್ರಿ ಸುರಿದ ಮಳೆಯಿಂದ ಮದುವೆ ನಡೆಯುತ್ತಿದ್ದ ಹಾಲ್‌ಗೆ ನೀರು ನುಗ್ಗಿದೆ. ಶಿವಮೊಗ್ಗ ನಗರದ ಗುಡ್ಡೆಕಲ್ ದೇವಸ್ಥಾನಕ್ಕೆ ಸೇರಿದ ಸಮುದಾಯ ಭವನದಲ್ಲಿ ಮದುವೆ ಸಮಾರಂಭ ನಡೆಯುತ್ತಿತ್ತು. ಮದುವೆಗೆ ಬಂದ ಬಂಧು-ಮಿತ್ರರು ಊಟ ಮಾಡುವಾಗಲೇ ಊಟದ ಹಾಲ್‌ಗೆ ನೀರು ನುಗ್ಗಿತ್ತು. ಮಳೆಯ ನೀರಿನ ನಡುವೆಯೂ ಬೆಳಗಿನ ಉಪಹಾರ ಸೇವನೆ ಮಾಡಿದರು.
ಚಿತ್ರದುರ್ಗದಲ್ಲೂ ಎಡಬಿಡದೆ ಸುರಿದ ಮಳೆ
ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಹಲವೆಡೆ ವರುಣನ ಆರ್ಭಟ ಜೋರಾಗಿದೆ. ತಡರಾತ್ರಿ ಎಡಬಿಡದೆ ಸುರಿದ ಮಳೆಗೆ ಹಳ್ಳ-ಕೊಳ್ಳಗಳು ತುಂಬಿ ಹರಿದಿತ್ತು. ಒಂದೇ ಮಳೆಗೆ ಚೆಕ್ ಡ್ಯಾಂ, ಕೆರೆ ಕಟ್ಟೆಗಳು ತುಂಬಿದ್ದವು. ಹೊಸದುರ್ಗದ ಕೆಲ್ಲೋಡು ಬಳಿ ವೇದಾವತಿ ನದಿ ತುಂಬಿ ಹರಿದಿದೆ. ಕಡದಿನಕೆರೆ ಗ್ರಾಮದಲ್ಲಿ ಮಳೆಗೆ ರಸ್ತೆಯು ಕೊಚ್ಚಿಹೋಗಿತ್ತು. ಇದರಿಂದಾಗಿ ಕೊರಟಿಕೆರೆ, ಬಾಗಶೆಟ್ಟಿ, ಚೌಳ ಹಿರಿಯೂರು ಸಂಪರ್ಕ ಬಂದ್ ಆಗಿತ್ತು. ಇನ್ನೂ ಮೊಳಕಾಲ್ಮೂರು ತಾಲೂಕಿನ ಮೇಗಳ ಕಣಿವೆಲ್ಲಿ ಜಲಪಾತ ಸೃಷ್ಟಿಯಾಗಿತ್ತು. ಧುಮ್ಮಿಕ್ಕಿ ಹರಿಯುತ್ತಿರುವ ಮಳೆ ನೀರು ಕಂಡು ಜನರು ಸಂತಸಗೊಂಡಿದ್ದರು. ಇತ್ತ ಜಿಲ್ಲೆಯಲ್ಲಿ ಟ್ಯಾಂಕರ್ ನೀರು ಹೊಡೆಯುತ್ತಿದ್ದ ರೈತರ ಪಜೀತಿಯನ್ನು ಮಳೆಯು ತಪ್ಪಿಸಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ