Site icon Vistara News

Karnataka Rain: ಧಾರಾಕಾರ ಮಳೆ; ಚಿತ್ತಾಪುರ ತಾಲೂಕಿನ ತರ್ಕಸ್‌ಪೇಟೆ ಗ್ರಾಮ ತತ್ತರ

Due to heavy rain water entered the houses of Tharkas Pet village of Chittapur taluk

ಕಲಬುರಗಿ: ಕಲಬುರಗಿ, ಆಳಂದ, ಚಿತ್ತಾಪುರ, ಶಹಾಬಾದ್, ವಾಡಿ ಸೇರಿದಂತೆ ಹಲವು ಭಾಗದಲ್ಲಿ ಮಳೆಯ ಆರ್ಭಟ ಜೋರಾಗಿದೆ. ಜಿಲ್ಲೆಯಲ್ಲಿ ಅಬ್ಬರಿಸಿದ ಮಳೆಗೆ (Karnataka Rain) ಚಿತ್ತಾಪುರ ತಾಲೂಕಿನ ಕಟ್ಟಕಡೆಯ ಗ್ರಾಮ ತರ್ಕಸ್ ಪೇಟೆ ತತ್ತರಿಸಿ ಹೋಗಿದೆ. ಗುರುವಾರ ಸುರಿದ ಧಾರಾಕಾರ ಮಳೆಯಿಂದ (Rain Effect) ಮನೆಗಳಿಗೆ ನೀರು ನುಗ್ಗಿದ್ದು, ಗ್ರಾಮದ ರಸ್ತೆಗಳು ಜಲಾವೃತಗೊಂಡಿವೆ.

ಸತತ ಮೂರು ತಾಸು ಸುರಿದ ಮಳೆಯಿಂದ ಗ್ರಾಮದ ಹಲವು ಮನೆಗಳಿಗೆ ಭಾರಿ ಪ್ರಮಾಣದಲ್ಲಿ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಮನೆಯ ಪಾತ್ರೆಗಳು ನೀರಲ್ಲಿ ತೇಲಾಡಿದರೆ, ಶೇಖರಿಸಿಟ್ಟ ಜೋಳ ಮತ್ತು ಬೇಳೆಕಾಳುಗಳು ನೀರು ಪಾಲಾಗಿ, ಬಡ ಕುಟುಂಬಗಳು ತೀವ್ರ ನಷ್ಟ ಅನುಭವಿಸುವಂತಾಗಿದೆ. ಮನೆಗೆ ನುಗ್ಗಿದ ಮಳೆ ನೀರನ್ನು ಹೊರ ಚೆಲ್ಲುವಲ್ಲಿ ಗ್ರಾಮಸ್ಥರು ಹರಸಾಹಸ ಪಡಬೇಕಾಯಿತು.

ಇದನ್ನೂ ಓದಿ: Bus Accident : ವಾಹನ ಚಲಾಯಿಸುತ್ತಿದ್ದಾಗಲೇ ಚಾಲಕನಿಗೆ ತಲೆಸುತ್ತು; ರಸ್ತೆ ಬಿಟ್ಟು ಜಮೀನಿಗೆ ನುಗ್ಗಿದ ಬಸ್‌

ನಾಲವಾರ ವಲಯದ ಕೊಲ್ಲೂರು, ರಾಂಪುರಹಳ್ಳಿ, ಶಾಂಪುರಹಳ್ಳಿ ಸೇರಿದಂತೆ ತರ್ಕಸ್ ಪೇಟೆ ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದೆ. ಕಳೆದ ಹತ್ತು ದಿನಗಳಿಂದ ನಾಲವಾರ ವಲಯದಲ್ಲಿ ಮಳೆಯಾಗುತ್ತಿದೆ.

ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ಮುಂದಿನ ದಿನಗಳಲ್ಲಿ ಇನ್ನಷ್ಟು ಮಳೆಯಾಗುವ ಸಾಧ್ಯತೆಯಿದ್ದು, ಮಹಾರಾಷ್ಟ್ರದಲ್ಲಿ ಮಳೆ ಆಗುತ್ತಿರುವುದರಿಂದ ಭೀಮಾನದಿಗೆ ಯಾವುದೇ ಸಮಯದಲ್ಲಿ ಹೆಚ್ಚಿನ ನೀರು ಹರಿದು ಬರುವ ಸಾಧ್ಯತೆ ಇದೆ. ಆದ್ದರಿಂದ ಜನ-ಜಾನುವಾರುಗಳ ಸುರಕ್ಷತೆ ಅತ್ಯವಶ್ಯಕವಾಗಿದೆ. ನದಿ ತೀರದ ಜನರು ಸಾಕಷ್ಟು ಎಚ್ಚರಿಕೆ ವಹಿಸಬೇಕಿದೆ.

ಇದನ್ನೂ ಓದಿ: Bengaluru News: ಬೆಂಗಳೂರಿನಲ್ಲಿ ಜೂ.15ರಂದು ʼನಾರಿ ಸಮ್ಮಾನ್‌ʼ ಪ್ರಶಸ್ತಿ ಪ್ರದಾನ

ರೈತರು ತಮ್ಮ ಜಾನುವಾರುಗಳನ್ನು ನದಿ ತೀರಕ್ಕೆ ತರಬಾರದು. ಗುಡುಗು ಸಿಡಿಲು ಮಿಂಚು ಆರ್ಭಟಿಸುವ ಸಮಯದಲ್ಲಿ ಜಾನುವಾರುಗಳನ್ನು ಮರದ ಕೆಳಗೆ ಕಟ್ಟಬಾರದು. ಮಳೆಗಾಲದ ಸಂದರ್ಭದಲ್ಲಿ ಜಾನುವಾರುಗಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಪಶುಪಾಲನಾ ಇಲಾಖೆಯ ಚಿತ್ತಾಪುರ ತಾಲೂಕು ಸಹಾಯಕ ನಿರ್ದೇಶಕ ಶಂಕರ್ ಕಣ್ಣಿ ತಿಳಿಸಿದ್ದಾರೆ.

Exit mobile version