ಚಿಕ್ಕೋಡಿ/ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ಮಳೆ ಅವಾಂತರ (Karnataka Rain) ಮುಂದುವರಿದಿದೆ. ಜೋರಾಗಿ ಬೀಸಿದ ಗಾಳಿ-ಮಳೆಗೆ ವಿದ್ಯುತ್ ಕಂಬ ಬಿದ್ದಿದೆ. ಅಲ್ಲೆ ಸಮೀಪದಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯ ತಲೆಗೆ ಕಂಬ ತಾಗಿದ್ದು, ಗಾಯಗೊಂಡಿದ್ದಾರೆ. ಸ್ವಲ್ಪದರಲ್ಲಿ ಸಾವಿನ ದವಡೆಯಿಂದ ವ್ಯಕ್ತಿ ಪಾರಾಗಿದ್ದಾರೆ. ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಸಾರಗೋಡು ತುಂಬರಗಡಿಯಲ್ಲಿ ಘಟನೆ ನಡೆದಿದೆ. ದಿವೀತ್ ಎಂಬುವವರು ಬಸ್ ಇಳಿದು ಹೋಗುತ್ತಿರುವಾಗ ವಿದ್ಯುತ್ ಕಂಬ ಮುರಿದು ಬಿದ್ದಿದೆ. ಪರಿಣಾಮ ತಲೆಗೆ ಗಂಭೀರ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ನಿದ್ರೆ ಮಂಪರಿನಲ್ಲಿದ್ದಾಗ ಕುಸಿದು ಬಿದ್ದ ಮನೆ
ನಿರಂತರ ಮಳೆಗೆ ಸೋಮವಾರ ನಸುಕಿನ ಜಾವ ಮನೆಯೊಂದು ಕುಸಿದು ಬಿದ್ದಿದೆ. ಮನೆ ಕುಸಿಯುತ್ತಿದ್ದಂತೆ ನಿದ್ದೆಯಲ್ಲಿ ಇದ್ದವರು ಹೊರಗೆ ಓಡಿ ಬಂದಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ರಾಮನಗರದಲ್ಲಿ ಘಟನೆ ನಡೆದಿದೆ. ರಾಜಕುಮಾರ ಬಾಳಪ್ಪಗೋಳ ಎಂಬುವವರ ಮನೆ ಕುಸಿದಿದೆ. ಐವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮನೆ ಗೋಡೆ ಕುಸಿದು ಮಹಿಳೆ ಗಂಭೀರ
ಸತತವಾಗಿ ಸುರಿದ ಮಳೆಯಿಂದ ಮನೆಯ ಗೋಡೆ ಕುಸಿದು ಮಹಿಳೆಯೊಬ್ಬರು ಗಂಭೀರ ಗಾಯಗೊಂಡಿದ್ದಾರೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬಡಕುಂದ್ರಿ ಗ್ರಾಮದಲ್ಲಿ ಘಟನೆ ನಡೆದಿದೆ. ಲಕ್ಷ್ಮಿ ಬಾಯಿ ಚೌಗಲೆ ಎಂಬಾಕೆ ಗಾಯಗೊಂಡವರು. ಸೋಮವಾರ ಬೆಳಗ್ಗೆ ಮನೆ ಸ್ವಚ್ಛಗೊಳಿಸಿ ಸ್ನಾನಕ್ಕೆ ಹೋಗುವಾಗ ಏಕಾಏಕಿ ಗೋಡೆ ಕುಸಿದಿದೆ. ಸದ್ಯ ಗಾಯಾಳು ಲಕ್ಷ್ಮಿಯನ್ನು ಹುಕ್ಕೇರಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ವಿದ್ಯುತ್ ಮಗ್ಗದ ಮೇಲೆ ಗೋಡೆ ಕುಸಿತ
ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಮನೆಯ ಗೋಡೆ ಕುಸಿಯುತ್ತಿದೆ. ನೇಕಾರಿಕೆ ಮಾಡುವಾಗ ವಿದ್ಯುತ್ ಮಗ್ಗದ ಮೇಲೆಯೇ ಗೋಡೆ ಕುಸಿದಿದೆ. ಬೆಳಗಾವಿ ತಾಲೂಕಿನ ಸುಳೆಭಾವಿ ಗ್ರಾಮದಲ್ಲಿ ಘಟನೆ ನಡೆದಿದೆ. ಸುಳೇಭಾವಿಯ ಕಮ್ಮಾರ ಗಲ್ಲಿಯ ದ್ಯಾಮಪ್ಪ ನಾನಾವರ್ ಎಂಬುವವರ ಮನೆ ಕುಸಿದು ಬಿದ್ದಿದೆ. ಗೋಡೆ ಕುಸಿಯುತ್ತಿದ್ದಂತೆ ಮನೆಯಿಂದ ಹೊರ ಓಡಿ ಬಂದು ಪಾರಾಗಿದ್ದಾರೆ. ಮನೆ ಕಳೆದುಕೊಂಡು ಸಂಕಷ್ಟಕ್ಕೆ ಸಲುಕಿರುವ ಬಡ ನೇಕಾರ ಕುಟುಂಬವು ಪರಿಹಾರದ ನಿರೀಕ್ಷೆಯಲ್ಲಿದ್ದಾರೆ.
ಮನೆ ಮೇಲೆ ಮರ ಬಿದ್ದು ಇಬ್ಬರಿಗೆ ಗಾಯ
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದ ಮಣಿಗಾರ ಪಂಚಾಯತ್ ವ್ಯಾಪ್ತಿಯ ಹೊಂಡಗದ್ದೆಯಲ್ಲಿ ಮನೆ ಮೇಲೆ ಮರ ಬಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಹರಿಶ್ಚಂದ್ರ ನಾಯ್ಕ ಎಂಬುವವರು ತಲೆಗೆ, ಪತ್ನಿ ಭಾಗೀರಥಿ ನಾಯ್ಕ ಹಣೆಗೆ ಗಾಯವಾಗಿದೆ. ಗಾಯಾಳುಗಳನ್ನು ಸಿದ್ದಾಪುರ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಭಾರೀ ಗಾತ್ರದ ಮರ ಬಿದ್ದ ಪರಿಣಾಮ ಮನೆಯ ಒಂದು ಬದಿ ಚಾವಣಿಗೆ ಹಾನಿಯಾಗಿದೆ.
ಶಿರಾಡಿಘಾಟ್‌ನಲ್ಲಿ ಮತ್ತೆ ಭೂಕುಸಿತ
ಶಿರಾಡಿಘಾಟ್‌ನಲ್ಲಿ ಮತ್ತೆ ಭೂಕುಸಿತ ಉಂಟಾಗಿದೆ. ಪೊಲೀಸರು ಸಕಲೇಶಪುರ ತಾಲೂಕಿನ ದೊಡ್ಡತಪ್ಲು ಬಳಿ ಹೈವೆ ಪಟ್ರೋಲ್ ವಾಹನವನ್ನು ನಿಲ್ಲಿಸಿದ್ದರು. ಈ ವೇಳೆ ವಾಹನ ನಿಂತ ಜಾಗದಲ್ಲೇ ಭೂಮಿ ಕುಸಿದಿದೆ.ಇದರಿಂದಾಗಿ ಪೊಲೀಸರ ವಾಹವು ಮಣ್ಣಿನಲ್ಲಿ ಸಿಲುಕುವಂತಾಯಿತು. ಕೂಡಲೇ ಜೆಸಿಬಿ ಮೂಲಕ ಮಣ್ಣು ತೆರವು ಮಾಡಲಾಯಿತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ