ಬೆಳಗಾವಿ: ಧಾರಾಕಾರವಾಗಿ ಸುರಿಯುತ್ತಿರುವ ಮಳೆಯು (Karnataka Rain) ಜನರ ಬದುಕನ್ನೇ ಬೀದಿಗೆ ತರುತ್ತಿದೆ. ರಾತೋರಾತ್ರಿ ಸುರಿದ ಮಳೆಗೆ, ಮನೆ ಕುಸಿದು ಬಿದ್ದು, 9 ತಿಂಗಳ ತುಂಬು ಗರ್ಭಿಣಿ ಹೈರಾಣಾದರು. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಸಮಳಗಿ ಗ್ರಾಮದಲ್ಲಿ ಘಟನೆ ನಡೆದಿದೆ.
ನಿರಂತರ ಮಳೆಗೆ ಸಾವಂತ್ ತೇಗೂರು ಎಂಬುವವರ ಮನೆ ಕುಸಿದು ಬಿದ್ದಿದೆ. ಸಾವಂತ್ ಅವರು ಮಗಳನ್ನು ಹೆರಿಗೆಗೆ ಎಂದು ಮನೆಗೆ ಕರೆತಂದಿದ್ದರು. ಹೆರಿಗೆಗೆ 4 ದಿನ ಇರುವಾಗಲೇ ಮಳೆಗೆ ಮನೆಯು ಕುಸಿದಿದೆ. ಮಗಳ ಹೆರಿಗೆಯ ನಿರೀಕ್ಷೆಯಲ್ಲಿದ್ದ ಅಪ್ಪ- ಅಮ್ಮನಿಗೆ ಬರಸಿಡಿಲು ಬಡಿದಂತಾಗಿದೆ. ತುರ್ತಾಗಿ ಬೇರೆಲ್ಲೂ ಮನೆ ಸಿಗದೇ ಇರುವುದರಿಂದ ತುಂಬು ಗರ್ಭಿಣಿ ಜತೆಗೆ ಕುಸಿದು ಬಿದ್ದಿರುವ ಮನೆಯಲ್ಲಿಯೇ ವಾಸಿಸುವ ದುಸ್ಥಿತಿ ನಿರ್ಮಾಣವಾಗಿದೆ.
ಬೆಳಗಾವಿಯಲ್ಲಿ ಸೇತುವೆಗಳು ಮುಳುಗಡೆ
ಮಹಾರಾಷ್ಟ್ರ ಘಟ್ಟ ಪ್ರದೇಶದಲ್ಲಿ ಮುಂದುವರೆದ ಮಳೆ ಅಬ್ಬರಕ್ಕೆ ಅಪಾಯದ ಮಟ್ಟ ಮೀರಿ ವೇದಗಂಗಾ ನದಿ ಹರಿಯುತ್ತಿದೆ. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಜತ್ರಾಟ-ಭೀವಶಿ ಸೇತುವೆ ಜಲಾವೃತಗೊಂಡಿದೆ. ಸೇತುವೆ ಎರಡು ಬದಿಯಲ್ಲಿ ಬ್ಯಾರಿಕೇಡ್ ಹಾಕಿ ಸಂಚಾರ ನಿಷೇಧಿಸಲಾಗಿದೆ. ಅಕ್ಕಪಕ್ಕದ ಜಮೀನುಗಳಿಗೂ ನೀರು ನುಗ್ಗಿದೆ.
ಇತ್ತ ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯಲ್ಲಿ ಮತ್ತೆರಡು ಸೇತುವೆ ಮುಳುಗಡೆಯಾಗಿದೆ. ವೇದಗಂಗಾ ನದಿಗೆ ಅಡ್ಡಲಾಗಿ ಕಟ್ಟಿದ ಅಕ್ಕೋಳ-ಸಿದ್ನಾಳ ಮತ್ತು ಜತ್ರಾಟ-ಭೀವಶಿ ನಡುವಿನ ಸೇತುವೆ ಜಲಾವೃತಗೊಂಡಿದೆ. ಈವರೆಗೂ ಐದು ಸಂಪರ್ಕ ಸೇತುವೆಗಳು ಜಲಾವೃತಗೊಂಡಿವೆ. ನದಿ ಪಾತ್ರದ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಬೆಳಗಾವಿಯ ಖಾನಾಪುರ ತಾಲೂಕಿನಾದ್ಯಂತ ಭಾರಿ ಮಳೆಯಾಗುತ್ತಿದ್ದು, ಅಪಾಯದ ಮಟ್ಟ ಮೀರಿ ಸಾತ್ನಳ್ಳಿ ಹಳ್ಳ ಹರಿಯುತ್ತಿದೆ. ಸಂಜೆ ಏಕಾಏಕಿ ಹಳ್ಳ ಬಂದು ಶಾಲಾ ಮಕ್ಕಳ ಪರದಾಡಬೇಕಾಯಿತು. ಈ ವೇಳೆ ಮಕ್ಕಳನ್ನು ಹೊತ್ತುಕೊಂಡು ಹಳ್ಳ ದಾಟಿಸಬೇಕಾಯಿತು.
ನಿರಂತರ ಮಳೆಗೆ ಬೆಳಗಾವಿಯಲ್ಲಿ ಮನೆ ಕುಸಿತ ಪ್ರಕರಣಗಳು ಮುಂದುವರಿದಿದೆ. ಭೂರಣಕಿ ಗ್ರಾಮದಲ್ಲಿ ಮತ್ತೊಂದು ಮನೆ ಕುಸಿದಿದ್ದು, ಅದೃಷ್ಟವಷಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಭೂರಣಕಿ ಗ್ರಾಮದ ಪರಶುರಾಮ್ ನಾರಾಯಣ ರಾಮಗಾನ್ ಎಂಬುವವರ ಮನೆ ಕುಸಿದು ಬಿದ್ದಿದೆ. ಕಳೆದ ರಾತ್ರಿ ಮನೆಯ ಸದಸ್ಯರು ಮನೆಯಲ್ಲಿರುವಾಗಲೇ ಗೋಡೆ ಕುಸಿದಿದೆ. ಈ ವೇಳೆ ಎಲ್ಲರೂ ಹೊರಗಡೆ ಓಡಿ ಬಂದು ಜೀವ ಉಳಿಸಿಕೊಂಡಿದ್ದಾರೆ.
ಇದನ್ನೂ ಓದಿ: Karnataka Rain : ರಾಜ್ಯದಲ್ಲಿ ಮಳೆಯ ಆರ್ಭಟ; ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕ ನಿರ್ಮಾಣ
ಕೊಡಗಿನಲ್ಲಿ ಕೆರೆ ಕೋಡಿ ಬಿದ್ದು ಅವಾಂತರ
ಕೊಡಗು ಜಿಲ್ಲೆಯಾದ್ಯಂತ ವಿಪರೀತ ಮಳೆಯಾಗುತ್ತಿದ್ದು, ಕೊಡಗಿನ ಕುಶಾಲನಗರದ ರೊಂಡೆ ಕೆರೆ ಕೋಡಿ ಬಿದ್ದಿದೆ. ಪರಿಣಾಮ ಕೆರೆಯ ನೀರು ನುಗ್ಗಿ ಬಡಾವಣೆಯ ಕೆಲ ಮನೆಗಳು ಜಲಾವೃತಗೊಂಡಿದೆ. ಕುಶಾಲನಗರ ಬಳಿಯ ಗೊಂದಿಬಸವನಹಳ್ಳಿಯಲ್ಲಿ ಘಟನೆ ನಡೆದಿದೆ. ಜನವಸತಿ ಪ್ರದೇಶ ಅಲ್ಲದೆ ಕೃಷಿ ಪ್ರದೇಶಕ್ಕೂ ನೀರು ಹರಿದು ಅವಾಂತರವೇ ಸೃಷ್ಟಿಯಾಗಿದೆ. ಕೊಡಗು ಜಿಲ್ಲೆಯ ಮಡಿಕೇರಿ – ಚೆಟ್ಟಳ್ಳಿ ರಸ್ತೆಯಲ್ಲಿ ಗುಡ್ಡ ಕುಸಿದಿದೆ. ಇದರಿಂದಾಗಿ ಮಡಿಕೇರಿ – ಚೆಟ್ಟಳ್ಳಿ ಗ್ರಾಮೀಣ ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದೆ. ಸಣ್ಣ ಪ್ರಮಾಣದ ಗುಡ್ಡ ಕುಸಿತ ಹಿನ್ನಲೆ ಅನಾಹುತ ತಪ್ಪಿದೆ. ಮಣ್ಣು ತೆರವು ಬಳಿಕವಷ್ಟೇ ವಾಹನ ಸಂಚಾರ ಸಾಧ್ಯ. ಹೀಗಾಗಿ ಮಣ್ಣು ತೆರವು ಕಾರ್ಯ ಮುಂದುವರಿದಿದೆ.
ಮಳೆಗೆ ಸೋರುತ್ತಿದೆ ಐತಿಹಾಸಿಕ ಮಧುಕೇಶ್ವರ ದೇವಸ್ಥಾನ
ಭಾರಿ ಮಳೆ ಐತಿಹಾಸಿಕ ಮಧುಕೇಶ್ವರ ದೇವಸ್ಥಾನದ ಚಾವಣಿ ಸೋರುತ್ತಿದೆ. ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಕದಂಬರ ರಾಜಧಾನಿ ಬನವಾಸಿಯ ಶ್ರೀ ಮಧುಕೇಶ್ವರ ದೇವಸ್ಥಾನವು ಭಾರೀ ಮಳೆಗೆ ಸೋರುತ್ತಿದೆ. ಹೀಗಾಗಿ ದೇವಸ್ಥಾನದ ಮೇಲ್ಭಾಗಕ್ಕೆ ಟಾರ್ಪಲ್ ಅಳವಡಿಕೆ ಮಾಡಲಾಗಿದೆ. ಪುರಾತತ್ವ ಇಲಾಖೆಯ ವ್ಯಾಪ್ತಿಯಲ್ಲಿರುವ ಮಧುಕೇಶ್ವರ ದೇವಸ್ಥಾನಕ್ಕೆ ಬರುವ ಭಕ್ತರು, ಪ್ರವಾಸಿಗರಿಗೆ ತೊಂದರೆ ಆಗುತ್ತಿದೆ.
ಧಾರಾಕಾರ ಮಳೆಗೆ ಶಿರಸಿಯ ಗುಡ್ನಾಪುರ ಬಂಗಾರೇಶ್ವರ ದೇವಸ್ಥಾನ ಜಲಾವೃತಗೊಂಡಿತ್ತು. ನಿರಂತರ ಮಳೆಯಿಂದಾಗಿ ಮೈದುಂಬಿಕೊಂಡ ಗುಡ್ನಾಪುರ ಕೆರೆಗೆ ಹೊಂದಿಕೊಂಡೇ ಇರುವ ಬಂಗಾರೇಶ್ವರ ದೇವಸ್ಥಾನದ ಸುತ್ತ ನೀರು ಆವರಿಸಿಕೊಂಡಿತ್ತು. ನೀರಲ್ಲಿ ತೆರಳಿ ಬಂಗಾರೇಶ್ವರನಿಗೆ ಜನರು ಪೂಜೆ ಸಲ್ಲಿಸಿದರು.
ಹೆದ್ದಾರಿ ಬಂದ್
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಶಿರೂರು ಬಳಿ ಗುಡ್ಡ ಕುಸಿತ ಹಿನ್ನೆಲೆಯಲ್ಲಿ ಹೆದ್ದಾರಿ ಬಂದ್ ಮಾಡಲಾಗಿದೆ. ಹೀಗಾಗಿ ಮಂಗಳೂರಿನಿಂದ ಧಾರವಾಡಕ್ಕೆ ತೆರಳಬೇಕಾದ ಟ್ಯಾಂಕರ್ ಟ್ರಕ್‌ಗಳು ಟೋಲ್ ಗೇಟ್‌ನಲ್ಲೇ ಉಳಿಯುವಂತಾಗಿದೆ. ರಾಷ್ಟ್ರೀಯ ಹೆದ್ದಾರಿ 66 ಬೈಂದೂರು ತಾಲೂಕಿನ ಶಿರೂರು ಐಆರ್‌ಬಿ ಟೋಲ್ ಗೇಟ್ ಬಳಿ ಮೊಕ್ಕಾಂ ಹೂಡಿದ್ದಾರೆ.
ಕಳೆದ ಮೂರು ದಿನಗಳಿಂದ ಟ್ರಕ್ ಚಾಲಕರು ಇಲ್ಲಿಯೇ ಕಾಯುತ್ತಿದ್ದು, ಟ್ರಕ್‌ನಲ್ಲಿರುವ ರೇಷನ್ ಬಳಸಿ ಅಡುಗೆ ತಯಾರಿಸುತ್ತಿದ್ದಾರೆ. ಶೌಚ ಮತ್ತು ಸ್ನಾನಕ್ಕೆ ವ್ಯವಸ್ಥೆ ಸರಿಯಾಗಿಲ್ಲದೆ ದಿನದೂಡುತ್ತಿದ್ದಾರೆ. ಕೇವಲ ಎರಡು ದಿನಗಳಿಗೆ ಆಗುವಷ್ಟು ರೇಷನ್ ತಂದಿದ್ದರು. ಮಂಗಳೂರಿನಿಂದ ಎಲ್‌ಪಿಜಿ ಗ್ಯಾಸ್ ತುಂಬಿಸಿಕೊಂಡು ಅಂಕೋಲ ಮಾರ್ಗವಾಗಿ ಧಾರವಾಡ ತಲುಪ ಬೇಕಾಗಿರುವ ಟ್ಯಾಂಕರ್‌ಗಳು ನಿಂತಲ್ಲೇ ನಿಲ್ಲುವಂತಾಗಿದೆ. ಅಂಕೋಲಾ ಗುಡ್ಡ ಕುಸಿತ ಹಿನ್ನೆಲೆಯಲ್ಲಿ ಮುಖ್ಯ ಹೆದ್ದಾರಿ ಸಂಪೂರ್ಣ ಬಂದ್ ಆಗಿದೆ.
ಬಂಟ್ವಾಳ-ಉಪ್ಪಿನಂಗಡಿ ಸಂಪರ್ಕ ಕಲ್ಪಿಸುವ ರಸ್ತೆ ಸ್ಥಗಿತ
ದಕ್ಷಿಣ ಕನ್ನಡದ ಬಂಟ್ವಾಳದ ಅಜಿಲಮೊಗರು ಬಳಿ ನೇತ್ರಾವತಿ ನದಿ ಉಕ್ಕಿ ಹರಿದು ಮುಖ್ಯ ರಸ್ತೆಗೆ ಹರಿದು ಬಂದಿದೆ. ಅಜಿಲಮೊಗರು ಬಳಿ ರಸ್ತೆ ಜಲಾವೃತಗೊಂಡಿದ್ದು, ವಾಹನ ಸಂಚಾರ ಬಂದ್ ಆಗಿದೆ. ಹೀಗಾಗಿ ಬಂಟ್ವಾಳ-ಉಪ್ಪಿನಂಗಡಿ ಸಂಪರ್ಕ ಕಲ್ಪಿಸುವ ರಸ್ತೆ ಸಂಚಾರ ಸ್ಥಗಿತಗೊಂಡಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ