Site icon Vistara News

Karnataka Rain: ಸಿಡಿಲಾಘಾತಕ್ಕೆ ಕುರಿಗಳು ಬಲಿ; ಮೇವಿನ ಬಣವೆ ಭಸ್ಮ, ಮನೆಗಳಿಗೆ ಹಾನಿ

karnataka Rain Effected

ವಿಜಯಪುರ/ಹಾವೇರಿ: ರಾಜ್ಯದ ಹಲವೆಡೆ ಗುಡುಗು, ಸಿಡಿಲು ಸಹಿತ ಭಾರಿ ಗಾಳಿಯೊಂದಿಗೆ (Karnataka Rain) ಮಳೆಯಾಗುತ್ತಿದೆ. ಮಳೆ ಅನಾಹುತ (Rain News) ಒಂದು ಕಡೆಯಾದರೆ, ಮತ್ತೊಂದು ಕಡೆ ಸಿಡಿಲಾಘಾತಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ವಿಜಯಪುರದಲ್ಲಿ ಸಿಡಿಲು ಬಡಿದು ಕುರಿಗಳು ಮೃತಪಟ್ಟರೆ, ಹಾವೇರಿಯಲ್ಲಿ ಮೇವಿನ ಬಣವೆ ಸುಟ್ಟು ಕರಕಲಾಗಿದೆ. ಕೊಡಗಿನಲ್ಲಿ ಸಿಡಿಲಿಗೆ ಮನೆಗೆ ಹಾನಿಯಾಗಿದ್ದು ಚಾವಣಿ ಕಿತ್ತುಬಂದಿದೆ. ಕೊಪ್ಪಳದಲ್ಲಿ ಗಾಳಿ ಮಳೆಗೆ ಮನೆಯ ಶೀಟ್‌ಗಳು ಹಾರಿ ಹೋದರೆ, ವಿಜಯಪುರ, ವಿಜಯನಗರದಲ್ಲಿ ಬೆಳೆಗಳಿಗೆ ಹಾನಿಯಾಗಿವೆ.

ವಿಜಯಪುರದಲ್ಲಿ ಸಿಡಿಲಿಗೆ ಕುರಿಗಳು ಬಲಿ

ಸಿಡಿಲು ಬಡಿದು ಎರಡು ಕುರಿಗಳು ಮೃತಪಟ್ಟಿವೆ. ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಹಾಲಿಹಾಳ ಗ್ರಾಮದಲ್ಲಿ ಘಟನೆ ನಡೆದಿದೆ. ಸಾಬಣ್ಣ ಬಸನಗೌಡ ಬಿರಾದಾರ ಎಂಬುವವರ ಕುರಿಗಳು ಮೃತಪಟ್ಟಿವೆ. ಇತ್ತ ಶಿವಸಂಗಪ್ಪ ರಾಯಪ್ಪ ಬೇವಿನಮಟ್ಟಿ ಎಂಬುವವರಿಗೆ ಸಿಡಿಲು ಬಡಿದು ಗಾಯಗೊಂಡಿದ್ದಾರೆ. ಗಾಯಾಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Karnataka Rain

ಹಾವೇರಿಯಲ್ಲಿ ಸಿಡಿಲಿಗೆ ಸುಟ್ಟು ಕರಕಲಾದ ಮೇವಿನ ಬಣವೆ

ಸಿಡಿಲು ಬಡಿದು ಮೇವಿನ ಬಣವೆ ಸುಟ್ಟು ಕರಕಲಾದ ಘಟನೆ ಹಾವೇರಿ ಜಿಲ್ಲೆ ಹಾನಗಲ ತಾಲೂಕಿನ ವರ್ದಿ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಪರಶುರಾಮ ಬಾರ್ಕಿ ಎಂಬ ರೈತ ಧನಕರುಗಳಿಗೆ ಮೇವಿನ ಬಣವೆ ಸಂಗ್ರಹಿಸಿಟ್ಟಿದ್ದರು. ಆದರೆ ಬೆಂಕಿ ಎಲ್ಲವೂ ಸುಟ್ಟು ಕರಲಾಗಿದೆ. ಆಡೂರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇತ್ತ ಸಿಡಿಲು ಬಡಿದು ತೆಂಗಿನಮರ ಸುಟ್ಟು ಭಸ್ಮವಾಗಿದೆ. ಹನುಮಂತಪ್ಪ ದೇಸೂರ ಮನೆಯ ಆವರಣದಲ್ಲಿದ್ದ ತೆಂಗಿನ ಮರಕ್ಕೆ ಸಿಡಿಲು ಬಡಿದು ಹೊತ್ತಿ ಉರಿದಿದೆ. ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ‌ ಹಿರೇಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.

ಕೊಡಗಿನಲ್ಲಿ ಸಿಡಿಲಿಗೆ ಮನೆಗೆ ಹಾನಿ

ಕೊಡಗಿನಲ್ಲಿ ರಾತ್ರಿ ಸಿಡಿಲು ಬಡಿದು ಮನೆಯೊಂದಕ್ಕೆ ಹಾನಿಯಾಗಿದೆ. ಮಡಿಕೇರಿ ಸಮೀಪದ ಕಾಲೂರು ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮದ ಎನ್.ಟಿ.ಲಿಂಗಮ್ಮ ಎಂಬವರಿಗೆ ಸೇರಿದ ಮನೆ ಸಂಪೂರ್ಣ ಜಖಂಗೊಂಡಿದೆ. ಸಿಡಿಲಿಗೆ ಮನೆಯ ಚಾವಣಿ ಕುಸಿದು ಬಿದ್ದಿದೆ. ಸಿಡಿಲಿನಾಘಾತಕ್ಕೆ ಮನೆ ಮಂದಿ ಕಂಗಾಲಾಗಿದ್ದಾರೆ. ಜಿಲ್ಲೆಯ ಹಲವೆಡೆ ರಾತ್ರಿಯೆಲ್ಲ ಗುಡುಗು ಸಹಿತ ಮಳೆಯಾಗಿದೆ.

Karnataka Rain

ಇದನ್ನೂ ಓದಿ: POSCO Case : ತುಮಕೂರಿನಲ್ಲಿ ಪೈಶಾಚಿಕ ಕೃತ್ಯ; ತಂದೆಯಿಂದಲೇ ಮಗಳ ಮಾನಭಂಗ!

ಕೊಪ್ಪಳದಲ್ಲಿ ಭಾರಿ ಗಾಳಿ ಮಳೆಗೆ ಹಾರಿ ಹೋದ ಚಾವಣಿ

ಶನಿವಾರ ರಾತ್ರಿ ಕೊಪ್ಪಳ ಸೇರಿದಂತೆ ಹಲವು ಭಾಗದಲ್ಲಿ ಬಿರುಗಾಳಿ ಸಹಿತ ಮಳೆಯಾಗಿದೆ. ಭಾರಿ ಮಳೆಗೆ ಮನೆ ಚಾವಣಿಯ ಶೀಟ್‌ಗಳು ಹಾರಿಹೋಗಿವೆ. ಮರಗಳು ಉರುಳಿ ಬಿದ್ದಿವೆ. ಕೊಪ್ಪಳ ತಾಲೂಕಿನ ನರೇಗಲ್ ಗ್ರಾಮದಲ್ಲಿ ವೀರೇಶಪ್ಪ ಯಲಬುರ್ಗಿ ಎಂಬುವವರ ಮನೆಯಲ್ಲಿ ಬಿರುಗಾಳಿಗೆ ಶೀಟ್‌ಗಳು ಹಾರಿ ಹೋಗಿವೆ.

ವಿಜಯನಗರದಲ್ಲಿ ಭಾರಿ ಮಳೆಗೆ ಬಾಳೆ ಗಿಡಗಳು ನಾಶ

ಭಾರಿ ಮಳೆಗೆ ನೂರಾರು ಎಕರೆ ಬಾಳೆ ಗಿಡಗಳು ನೆಲಕ್ಕೆ ಬಾಗಿವೆ. ವಿಜಯನಗರದ ಹೊಸಪೇಟೆ ತಾಲೂಕಿನ ಹೊಸೂರು ಮಾಗಾಣಿ, ನಾಗೇನಹಳ್ಳಿ ಹಾಗೂ ಚಿತ್ತವಾಡ್ಗಿ, ಹಾನಗಲ್, ಇಪ್ಪತೇರಿ, ಕರೆಕಲ್ ಮಾಗಾಣಿ, ನರಸಾಪುರ ಸೇರಿದಂತೆ ಹತ್ತಾರು ಗ್ರಾಮಗಳಲ್ಲಿ ಸುಗಂಧಿ, ಯಾಲಕ್ಕಿ, ಬಾಳೆಗಿಡಗಳು ನೆಲಕ್ಕುರುಳಿವೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂದು ಅನ್ನದಾತರು ಕಂಗಾಲಾಗಿದ್ದಾರೆ.

Karnataka Rain

ವಿಜಯಪುರದಲ್ಲಿ ನಿಂಬೆ ಬೆಳೆ ನಾಶ

ಶನಿವಾರ ತಡರಾತ್ರಿ ಬೀಸಿದ ಮಳೆ ಗಾಳಿಗೆ ನಿಂಬೆ ಬೆಳೆ ನಾಶವಾಗಿದೆ. ವಿಜಯಪುರ ಜಿಲ್ಲೆ ಇಂಡಿ ಪಟ್ಟಣದ ಹೊರ ಭಾಗದಲ್ಲಿನ ನಿಂಬೆ ತೋಟಕ್ಕೆ ಹಾನಿಯಾಗಿದೆ. ಇಂಡಿ ಅಹಿರಸಂಗ ರಸ್ತೆಯಲ್ಲಿನ ಸಂಜು ವಾಘಮೋಡೆ ಎಂಬುವವರ ನಿಂಬೆ ತೋಟದಲ್ಲಿನ‌ ನಿಂಬೆ ಗಿಡಗಳು ಹಾನಿಯಾಗಿದೆ.

ಬರಗಾಲ ಹಾಗೂ ಬೇಸಿಗೆಯಲ್ಲಿ ಕಷ್ಟಪಟ್ಟು ಉಳಿಸಿಕೊಂಡಿದ್ದ ನಿಂಬೆ ಬೆಳೆ, ನಿನ್ನೆ ತಡರಾತ್ರಿ ಮಳೆಯ ಗಾಳಿಗೆ ಬುಡ ಸಮೇತ ಕಿತ್ತು ಬಿದ್ದಿವೆ. ಎರಡು ಎಕರೆ ಪ್ರದೇಶದಲ್ಲಿ ಬೆಳೆದ ಬೆಳೆಯು ನಾಶವಾಗಿವೆ. ತೋಟಗಾರಿಕಾ ಇಲಾಖೆಯಿಂದ ಸೂಕ್ತ ಪರಿಹಾರಕ್ಕೆ ಒತ್ತಾಯಿಸಿದ್ದಾರೆ.

ಚಿಕ್ಕೋಡಿಯಲ್ಲಿ ಮಳೆಗೆ ಧರೆಗುರುಳಿದ ವಿದ್ಯುತ್ ಕಂಬಗಳು

ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯಲ್ಲಿ ಮಳೆ ಅವಾಂತರ ಮುಂದುವರಿದಿದೆ. ನಿನ್ನೆ ಶನಿವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ವಿಧ್ಯುತ್ ಕಂಬಗಳು ಧರೆಗುರುಳಿವೆ. ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಅಮ್ಮಣಗಿ ಗ್ರಾಮದ ಹೊರ ವಲಯದಲ್ಲಿ ಘಟನೆ ನಡೆದಿದೆ.

Karnataka Rain

ಬಿರುಗಾಳಿ ಸಹಿತ ಸುರಿದ ಭಾರಿ ಮಳೆಗೆ ವಿದ್ಯುತ್ ಪರಿವರ್ತಕ ಸಹಿತ ವಿದ್ಯುತ್ ಕಂಬಗಳು ಧರೆಗುರುಳಿವೆ. ಏಳು ಕಂಬಗಳು ಧರೆಗುರುಳಿದ ಪರಿಣಾಮ ಕರೆಂಟ್‌ ಇಲ್ಲದ ಗ್ರಾಮಸ್ಥರು ಪರದಾಡುತ್ತಿದ್ದಾರೆ. ಚಿಕ್ಕೋಡಿ, ನಿಪ್ಪಾಣಿ, ಹುಕ್ಕೇರಿ ತಾಲೂಕುಗಳಲ್ಲಿ ರಾತ್ರಿ ಇಡಿ ಸುರಿದ ಬಿರುಗಾಳಿ ಸಹಿತ ಮಳೆಗೆ ವಾತಾವರಣ ತಂಪಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version