Site icon Vistara News

Karnataka Rain : ಭರ್ತಿಯತ್ತ ಜಲಾಶಯಗಳು; ಪ್ರವಾಹ ಭೀತಿ ಹಿನ್ನೆಲೆ ನದಿ ತೀರದಲ್ಲಿ ಹೈ ಅಲರ್ಟ್

karnataka rain

ವಿಜಯನಗರ/ಯಾದಗಿರಿ: ರಾಜ್ಯದಲ್ಲಿ ಸತತ ಮಳೆಯಿಂದಾಗಿ (Karnataka Rain) ಪ್ರಮುಖ ಜಲಾಶಯಗಳು ಭರ್ತಿಯತ್ತ ಸಾಗಿದೆ. ಜಲಾಶಯಗಳಲ್ಲಿ ಹೊರಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ನದಿ ಪಾತ್ರದ ಜನರಲ್ಲಿ ಪ್ರವಾಹ ಭೀತಿ ಹೆಚ್ಚಿದೆ. ಭಾರಿ ಮಳೆಗೆ ಬಹುತೇಕ ಜಲಾಶಯಗಳು ಭರ್ತಿಯಾಗುತ್ತಿವೆ. ಅದರಲ್ಲೂ ವಿಜಯನಗರದ ತುಂಗಭದ್ರಾ ಜಲಾಶಯದಲ್ಲಿ (Tunga bhadhra dam) ನೀರಿನ ಪ್ರಮಾಣ ಏರಿಕೆ ಆಗುತ್ತಲೆ ಇದೆ. ಸದ್ಯ 73.681 ಟಿಎಂಸಿ ನೀರು ಸಂಗ್ರಹವಾಗಿದ್ದು, ಕಳೆದ 24 ಗಂಟೆಯಲ್ಲಿ 1,27,792 ಕ್ಯೂಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಿದೆ. ತುಂಗಭದ್ರಾ ಜಲಾಶಯ ಭರ್ತಿಯಾಗಲು ದಿನಗಣನೆ ಪ್ರಾರಂಭವಾಗಿದ್ದು, ಈಗಾಗಲೇ ನದಿ ಪಾತ್ರದ ಜನರಿಗೆ ಟಿಬಿ ಬೋರ್ಡ್ ಎಚ್ಚರಿಕೆ ನೀಡಿದೆ. ಯಾವುದೇ ಕ್ಷಣದಲ್ಲೂ ನದಿಗೆ ನೀರು ಹರಿಸುವ ಸೂಚನೆ ನೀಡಲಾಗಿದೆ. 4 ಸಾವಿರ ಕ್ಯೂಸೆಕ್‌ನಿಂದ 6 ಸಾವಿರ ಕ್ಯೂಸೆಕ್ ನೀರು ನದಿಗೆ ಹರಿಬಿಡಲಾಗಿದೆ. ಹೀಗಾಗಿ ವಿಜಯನಗರ ಜಿಲ್ಲಾಡಳಿತ ಅಗತ್ಯ ಕ್ರಮಗಳನ್ನು ಕೈಗೊಂಡಿದೆ.

ನಾರಾಯಣಪುರ ಡ್ಯಾಂನಿಂದ ಭಾರೀ ಪ್ರಮಾಣದ ನೀರು ಬಿಡುಗಡೆ

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಡ್ಯಾಂನಿಂದ ಭಾರೀ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲಾಗುತ್ತಿದೆ. ನಾರಾಯಣಪುರ ಡ್ಯಾಂನಿಂದ 23 ಗೇಟ್ ತೆರದು ಕೃಷ್ಣಾ ನದಿಗೆ 1,34,570 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. 33.33 ಟಿಎಂಸಿ ಸಂಗ್ರಹ ಸಾಮರ್ಥ್ಯದ ಡ್ಯಾಂನಲ್ಲಿ 28.944 ಟಿಎಂಸಿ ನೀರು ಸಂಗ್ರಹವಾಗಿದೆ. ಆಲಮಟ್ಟಿ ಜಲಾಶಯದಿಂದ ಹೆಚ್ಚು ನೀರು ಬಿಟ್ಟ ಹಿನ್ನಲೆ ನಾರಾಯಣಪುರ ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚಳಗೊಂಡಿದೆ. ಹೀಗಾಗಿ ಡ್ಯಾಂನಿಂದ ಹೆಚ್ಚಿನ ಪ್ರಮಾಣದ ನೀರು ಕೃಷ್ಣಾ ನದಿಗೆ ಬಿಡುಗಡೆ ಮಾಡಲಾಗಿದೆ. ಈಗಾಗಲೇ ಕೃಷ್ಣಾ ನದಿ ತೀರಕ್ಕೆ ಜನರು ತೆರಳದಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಕೃಷ್ಣಾ ನದಿಗೆ ಭಾರೀ ಪ್ರಮಾಣದ ನೀರು ಬಿಡುಗಡೆ ಹಿನ್ನೆಲೆಯಲ್ಲಿ ಕೃಷ್ಣಾ ನದಿ ತೀರದ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಕೃಷ್ಣಾ ನದಿ ತೀರದ ಗ್ರಾಮಗಳಿಗೆ ತಹಶಿಲ್ದಾರ ವಿಜಯಕುಮಾರ್ ಭೇಟಿ ನೀಡಿ ನದಿ ತೀರಕ್ಕೆ ತೆರಳದಂತೆ ಮೈಕ್ ಮೂಲಕ ತಿಂಥಣಿ ಗ್ರಾಮದಲ್ಲಿ ಜಾಗೃತಿ ಮೂಡಿಸಲಾಗಿದೆ.

ಇದನ್ನೂ ಓದಿ: Lakshmi Hebbalkar: ಮಳೆಗೆ ತತ್ತರಿಸಿದ ಉಡುಪಿ; ನನ್ನ ಅವಶ್ಯಕತೆ ಇದ್ದಾಗಷ್ಟೇ ಬರ್ತೀನಿ ಎಂದ ಲಕ್ಷ್ಮೀ ಹೆಬ್ಬಾಳಕರ್

ಶಿರೂರು ಜಲಾಶಯವು ಭರ್ತಿ

ಪಶ್ಚಿಮ‌ ಘಟ್ಟಗಳಲ್ಲಿ ನಿರಂತರ ಮಳೆಗೆ ಜಲಾಶಯಗಳು ಭರ್ತಿಯಾಗುತ್ತಿವೆ. ರಾಕಸಕೊಪ್ಪ ಜಲಾಶಯದ ಬಳಿಕ ಶಿರೂರು ಜಲಾಶಯವು ಬಹುಬೇಗ ಭರ್ತಿಯಾದ ಬೆಳಗಾವಿಯ ‌ಎರಡನೇ ಜಲಾಶಯವಾಗಿದೆ. 3.76ಟಿಎಂಸಿ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಸಧ್ಯ 3.2 ಟಿಎಂಸಿಯಷ್ಟು ಭರ್ತಿಯಾಗಿದೆ. ಮಾರ್ಕಂಡೇಯ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಶಿರೂರು ಜಲಾಶಯದಿಂದ ನೀರು ಬಿಡುಗಡೆ ಮಾಡಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.

ಊರಲ್ಲಿ ಡಂಗೂರ ಸಾರಿ ಎಚ್ಚರಿಕೆ

ಶಿರೂರು ಜಲಾಶಯ ಭರ್ತಿ ಹಿನ್ನೆಲೆ ಜನರಿಗೆ ಎಚ್ಚರಿಕೆ ನೀಡುವ ಸಲುವಾಗಿ ಊರಲ್ಲಿ ಡಂಗೂರ ಸಾರಲಾಗಿದೆ. ಯಾವುದೇ ಕ್ಷಣದಲ್ಲಿ ಮಾರ್ಕಂಡೇಯ ನದಿಗೆ ನೀರು ಬಿಡಲಾಗುವುದು. ನದಿ ತೀರದ ಜನರು ಎಚ್ಚರಿಕೆಯಿಂದ ಇರಲು ಸೂಚನೆ ನೀಡಲಾಗಿದೆ. ಆಟೋದಲ್ಲಿ ಮೈಕ್ ಅಳವಡಿಸಿ ನದಿ ತೀರದ ಗ್ರಾಮಗಳಲ್ಲಿ ಮುನ್ಸೂಚನೆ ನೀಡಲಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version