Site icon Vistara News

Karnataka Rain : ಕುರಿಗಾಹಿಗಳ ಪ್ರಾಣ ಕಸಿದ ಸಿಡಿಲು; 20ಕ್ಕೂ ಹೆಚ್ಚು ಕುರಿಗಳು ಸಾವು

Karnataka Rain

ಯಾದಗಿರಿ: ಗುಡುಗು ಸಹಿತ ಬಿರುಗಾಳಿ ಮಳೆಗೆ (Heavy Rain) ಸಾವು-ನೋವು ಸಂಭವಿಸಿದೆ. ಯಾದಗಿರಿಯಲ್ಲಿ ಸುರಿದ ಭಾರಿ ಮಳೆಗೆ (Karnataka Rain) ಜನರು ಬೆಚ್ಚಿ ಬಿದ್ದಿದ್ದಾರೆ. ಯಾದಗಿರಿಯಲ್ಲಿ ಪ್ರತ್ಯೇಕ ಕಡೆಗಳಲ್ಲಿ ಸಿಡಿಲಿಗೆ ಕುರಿಗಾಹಿ ಸೇರಿ 20ಕ್ಕೂ ಹೆಚ್ಚು ಕುರಿಗಳು ಪ್ರಾಣ ಕಳೆದುಕೊಂಡಿವೆ.

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ವಿಭೂತಿಹಳ್ಳಿ ಗ್ರಾಮ ಹೊರಭಾಗದಲ್ಲಿ ಸಿಡಿಲು ಬಡಿದು ಕುರಿಗಾಹಿ ಮೃತಪಟ್ಟಿದ್ದಾರೆ. ಭಾನುವಾರ ತಡರಾತ್ರಿ ಬಿರುಗಾಳಿ ಸಹಿತ ಭಾರಿ ಮಳೆ ಸುರಿದಿತ್ತು. ಈ ವೇಳೆ ಸಿಡಿಲು ಬಡಿದು ಕುರಿಗಾಹಿ ಬುಯೆಪ್ಪ (22) ಎಂಬುವವರು ಮೃತಪಟ್ಟಿದ್ದಾರೆ. ಕುರಿಗಾಹಿ ಜತೆಗೆ ಸ್ಥಳದಲ್ಲೇ 7 ಕುರಿಗಳು ಮೃತಪಟ್ಟಿವೆ. ಸ್ಥಳದಲ್ಲಿ ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಶಹಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಐಕೂರು ಗ್ರಾಮದಲ್ಲೂ ಸಿಡಿಲು ಬಡಿದು ಕುರಿಗಳು ಮೃತಪಟ್ಟಿವೆ. ಸಿಡಿಲು ಬಡಿದು ಐಕೂರು ಗ್ರಾಮದಲ್ಲಿ 10 ಕುರಿಗಳು ಸಾವನ್ನಪ್ಪಿವೆ. ಐಕೂರು ಗ್ರಾಮದ ರಾಯಪ್ಪ ಎಂಬ ಕುರಿಗಾಹಿಗೆ ಸೇರಿದ ಕುರಿಗಳನ್ನು ಜಮೀನಿನಲ್ಲಿರುವ ಕುರಿ ಹಟ್ಟಿಯಲ್ಲಿ ಬಿಡಲಾಗಿತ್ತು. ನಿನ್ನೆ ತಡರಾತ್ರಿ ಬಿರುಗಾಳಿ ಸಹಿತ ಭಾರಿ ಮಳೆ ವೇಳೆ ಸಿಡಿಲು ಬಡಿದಿದೆ. ಪರಿಣಾಮ ಕುರಿಗಳು ಸ್ಥಳದಲ್ಲೇ ಮೃತಪಟ್ಟಿವೆ. ವಡಗೇರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: Murder Case: ಮೂರು ಮಂದಿಯನ್ನು ಕೊಂದು ಅಬ್ಬರಿಸಿದ ರೌಡಿ ಶೀಟರ್‌ ಕಾಲಿಗೆ ಗುಂಡೇಟು, ಬಂಧನ

ವಿಜಯನಗರದಲ್ಲೂ ಸಿಡಿಲಿಗೆ ರೈತ ಸಾವು

ಸಿಡಿಲು ಬಡಿದು ರೈತರೊಬ್ಬರು ಮೃತಪಟ್ಟಿದ್ದಾರೆ. ಚೌಡಪ್ಪ( 33) ಮೃತ ದುರ್ದೈವಿ. ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಅಡವಿ ಮಲ್ಲಾಪುರದಲ್ಲಿ ಘಟನೆ ನಡೆದಿದೆ. ಮೇವಿನ ಬಣವೆಗೆ ಹೋದಿಗೆ ಹಾಕುತ್ತಿದ್ದಾಗ ಸಿಡಿಲು ಬಡಿದು ಚೌಡಪ್ಪ ಮೃತಪಟ್ಟಿದ್ದಾರೆ. ಹರಪನಹಳ್ಳಿ ತಾಲೂಕಾಡಳಿತ ಪರಿಹಾರಕ್ಕಾಗಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯಾದಗಿರಿಯಲ್ಲಿ ಪಿಡಬ್ಲೂಡಿ ಕಚೇರಿಗೆ ನುಗ್ಗಿದ ನೀರು

ಯಾದಗಿರಿ ಜಿಲ್ಲೆಯಲ್ಲಿ ನಸುಕಿನ ಜಾವ ಸುರಿದ ಬಿರುಗಾಳಿ ಸಹಿತ ಭಾರಿ ಮಳೆಗೆ ಪಿಡಬ್ಲೂಡಿ ಕಚೇರಿ ಆವರಣ ಹಾಗೂ ಮನೆಗೆ ಮಳೆ ನೀರು ನುಗ್ಗಿದೆ. ಯಾದಗಿರಿ ನಗರದ ಸುಭಾಷ್ ವೃತ್ತದ ಸಮೀಪದಲ್ಲಿರುವ ಪಿಡಬ್ಲೂಡಿ ಕಚೇರಿ ಹಾಗೂ ಮನೆಯೊಳಗೆ ನೀರು ನುಗ್ಗಿದ ಕಾರಣಕ್ಕೆ ಪರದಾಡಬೇಕಾಯಿತು. ಸೋಮವಾರ ಬೆಳಗಿನಿಂದ ಜಿಟಿ ಜಿಟಿ ಮಳೆ ಸುರಿಯುತ್ತಿದ್ದು, ಬಿಸಿಲಿಗೆ ತತ್ತರಿಸಿದ ಜನರಿಗೆ ವರುಣ ತಂಪೆರೆದಿದ್ದಾನೆ.

ರಾಯಚೂರಿನಲ್ಲಿ ರಾತ್ರಿ ಇಡೀ ಮಳೆ ಅಬ್ಬರ

ರಾಯಚೂರಿನಲ್ಲಿ ರಾತ್ರಿ ಇಡೀ ಗುಡುಗು ಸಹಿತ ಭಾರೀ ಮಳೆಯಾಗಿದೆ. ನಗರದಲ್ಲಿ ಈ ಬೇಸಿಗೆಯಲ್ಲೇ ಮೊದಲ ಬಾರಿಗೆ ವರುಣ ದರ್ಶನ ಕೊಟ್ಟಿದ್ದಾನೆ. ಬಿಸಿಲಿನ ಸೆಕೆಯಿಂದ ಕಂಗೆಟ್ಟ ಜನರಿಗೆ ಸುಮಾರು 5 ಗಂಟೆಗಳ ಕಾಲ ಧಾರಾಕಾರವಾಗಿ ಮಳೆ ಸುರಿದಿದೆ. ಮಳೆಯಿಂದಾಗಿ ಇಡೀ ರಾಯಚೂರು ನಗರದಾದ್ಯಂತ ವಿದ್ಯುತ್ ವ್ಯತ್ಯಯವಾಗಿತ್ತು.

ಚಿಕ್ಕಮಗಳೂರಲ್ಲಿ ಮಳೆಯಲ್ಲಿ ರಸ್ತೆ ಕಾಣದೆ ಅಪಘಾತ

ಮಳೆಯಲ್ಲಿ ರಸ್ತೆ ಕಾಣದೆ ಟಿಟಿ ವಾಹನವೊಂದು ವಿದ್ಯುತ್ ಕಂಬಕ್ಕೆ ಗುದ್ದಿದೆ. ಟಿಟಿ ವಾಹನ ಗುದ್ದಿದ ರಭಸಕ್ಕೆ ವಿದ್ಯುತ್ ಕಂಬ ತುಂಡಾಗಿತ್ತು. ಭಾರಿ ಮಳೆ ಹಿನ್ನೆಲೆಯಲ್ಲಿ ವಿದ್ಯುತ್‌ ಸಂಪರ್ಕ ಸ್ಥಗಿತಗೊಂಡಿತ್ತು. ಇದರಿಂದಾಗಿ ಅದೃಷ್ಟವಶಾತ್ ವಾಹನದಲ್ಲಿದ್ದ 9ಕ್ಕೂ ಹೆಚ್ಚು ಪ್ರಯಾಣಿಕರು ಪಾರಾಗಿದ್ದರು. ಚಿಕ್ಕಮಗಳೂರಿನ ಶೃಂಗೇರಿ ತಾಲೂಕಿನ ಕುಂಚೆ ಬೈಲು ಗ್ರಾಮದ ಬಳಿ ಘಟನೆ ನಡೆದಿದೆ. ಪ್ರಯಾಣಿಕರು ಟಿಟಿ ವಾಹನದಲ್ಲಿ ಹಾಸನದಿಂದ ಶೃಂಗೇರಿ ಕಡೆಗೆ ತೆರಳುತ್ತಿದ್ದರು.

ವಿಜಯನಗರದಲ್ಲಿ ಮಳೆಗೆ ಕ್ಷಣಾರ್ಧದಲ್ಲೇ ಕೊಚ್ಚಿ ಹೋಯ್ತು ಫಸಲು

ಬಿರುಗಾಳಿ ಸಹಿತ ಭಾರಿ ಮಳೆಗೆ ನೂರಾರು ಎಕರೆ ಬಾಳೆ ಬೆಳೆ ಧರೆಗೆ ಉರುಳಿವೆ. ವಿಜಯನಗರದ ಹೊಸೂರು, ಇಪ್ಪಿತೇರಿ, ನರಸಾಪುರ, ಮಾಗಾಣಿಗಳು, ಕಮಲಾಪುರ ಗ್ರಾಮ ಸೇರಿ ಹತ್ತಾರು ಗ್ರಾಮದ ರೈತ ಬದುಕು ಅಯೋಮಯವಾಗಿದೆ. ಮಕ್ಕಳಂತೆ ಜೋಪಾನ ಮಾಡಿದ್ದ ಬಾಳೆ ಬೆಳೆ ಮೇಲೆ ಪ್ರಕೃತಿಯ ಮುನಿಸಿಗೆ ಸಂಪೂರ್ಣ ನಾಶವಾಗಿದೆ.

ಕಳೆದ ಒಂದು ವಾರದಲ್ಲಿ ಎರಡು ಬಾರಿ ಸುರಿದ ಬಿರುಗಾಳಿ ಸಹಿತ ಭಾರೀ ಮಳೆಗೆ ಬಾಳೆ ಬೆಳೆ ನೆಲಕಚ್ಚಿದೆ. ಎಕರೆ ಹೊಲದಲ್ಲಿ ಬಾಳೆ ಬೆಳೆಯೋದಕ್ಕೆ ರೈತರು ಲಕ್ಷದವರೆಗೆ ಖರ್ಚು ಮಾಡಿದ್ದರು. ಇನ್ನೇನು ಒಂದು ತಿಂಗಳಲ್ಲಿ ಬಾಳೆ ಮಾರಾಟಕ್ಕೆ ರೆಡಿ ಮಾಡಿಕೊಂಡಿದ್ದ ರೈತರಿಗೆ ಮಳೆಯು ಆಘಾತವನ್ನುಂಟು ಮಾಡಿದೆ. ಮಳೆಯು ನಮ್ಮ ಬದುಕನ್ನು ಕಸಿದುಕೊಂಡಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಅಂತ ಬಾಳೆ ಬೆಳೆಗಾರರು ಅಳಲು ತೊಡಿಕೊಂಡಿದ್ದಾರೆ.

ಈ ಬಾರಿ ಮಳೆಯಿಲ್ಲದೇ ತುಂಗಭದ್ರಾ ಜಲಾನಯದ ಪ್ರದೇಶದ ರೈತರು ಕಂಗಾಲಾಗಿದ್ದಾರೆ. ವಿಜಯನಗರ ಕಾಲದ ಕಾಲುವೆಗಳನ್ನು ನಂಬಿ ತಿಂಗಳಿಗೊಮ್ಮೆ ಬಂದ ನೀರಲ್ಲೇ ಬದುಕು, ಬವಣೆ ನಡೆಯುತ್ತಿದ್ದೇವೆ. 2 ಟಿಎಂಸಿ ನೀರಲ್ಲಿ ಆಗೊಮ್ಮೆ, ಈಗೊಮ್ಮೆ ಬಂದ ನೀರಲ್ಲೇ ಬಾಳೆ ಬೆಳೆದಿದ್ದರು. ಇನ್ನೂ 15 ದಿನ ಮುಗಿದಿದ್ದರೆ ಬಾಳೆ ಗೊಣೆಗಳು ಕೈಗೆ ಬರುತ್ತಿದ್ದವು. ಕೈಗೆ ಬಂದ ಬಾಳೆ ಈಗ ನೆಲಕ್ಕೆ ಬಿದ್ದಿದೆ. ಮಳೆರಾಯ ಬಡವರ ಬದುಕನ್ನು ಮೂರಾಬಟ್ಟೆ ಮಾಡಿದ್ದಾನೆ ಎಂದು ಕಿಡಿಕಾರಿದರು.

ಕೊಡಗು, ಕೊಪ್ಪಳದಲ್ಲೂ ಮಳೆಯ ಸಿಂಚನ

ಕಳೆದ ಮೂರು ತಿಂಗಳಿಂದ‌ ಬಿಸಿಲಿನ ತಾಪಕ್ಕೆ ಕೊಪ್ಪಳದ ಜನತೆ ಹೈರಾಣಾಗಿದ್ದರು. ಭಾನುವಾರ ರಾತ್ರಿ ಸುರಿದ ಗುಡುಗು ಸಹಿತ ಮಳೆಗೆ ವಾತಾವರಣ ತಂಪಾಗಿದೆ. ಕಳೆದ ಎರಡು ದಿನಗಳಿಂದ‌ ಸುರಿಯುತ್ತಿರುವ ಮಳೆಗೆ ಜನರು ಸಂತಸಗೊಂಡಿದ್ದಾರೆ. ಇತ್ತ ಕೊಡಗು‌ ಜಿಲ್ಲೆಯ ವಿವಿಧೆಡೆ ಮಳೆಯ ಸಿಂಚನವಾಗಿದೆ. ಹಲವು‌ ದಿನಗಳಿಂದ ಮಳೆಗಾಗಿ‌ ಕಾದಿದ್ದ ಜನರಿಗೆ ಸೋಮವಾರ ಮುಂಜಾನೆಯಿಂದಲೆ ತುಂತುರು ಮಳೆಯಾಗಿದೆ. ಮಳೆಯಿಂದ ಕೊಡಗಿನ‌ ಜನರ ಮೊಗದಲ್ಲಿ ಮಂದಹಾಸ ಮೂಡಿದೆ.

ರಾಯಚೂರಲ್ಲಿ ಭತ್ತದ ರಾಶಿಗೆ ನುಗ್ಗಿದ ನೀರು

ಇನ್ನೂ ರಾಯಚೂರಿನಲ್ಲಿ ವರುಣನ ಆರ್ಭಟಕ್ಕೆ ರೈತರು ಸಂಕಷ್ಟಕ್ಕೆ ಸಿಲುಕಿದರು. ಎರಡು ಗಂಟೆಗಳ ಕಾಲ ಸುರಿದ ಮಳೆಯು ಅವಾಂತರವನ್ನೇ ಸೃಷ್ಟಿಸಿದೆ. ಮಳೆಗೆ ನಗರದ ರಸ್ತೆಗಳು ಹಳ್ಳದಂತಾದರೆ, ನಗರದ ಎಪಿಎಂಸಿಗೆ ನೀರು ನುಗ್ಗಿತ್ತು. ತೆಲಂಗಾಣದ ಮಕ್ತಲ್‌ನಿಂದ ಸಾಕಷ್ಟು ರೈತರು ಭತ್ತ ತಂದು ರಾಶಿ ಮಾಡಿದರು.ಆದರೆ ಮಳೆ ಸುರಿದ ಕಾರಣ ಭತ್ತದ ರಾಶಿ ನೀರುಪಾಲಾಗಿತ್ತು. ಎಪಿಎಂಸಿ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ ಎಂದು ರೈತರು ಅಸಮಾಧಾನ ಹೊರಹಾಕಿದ್ದರು.

ಇತ್ತ ರಾಯಚೂರು ನಗರದ ವಾರ್ಡ್‌ನ 34ರಲ್ಲಿ ಸುಮಾರು 25ಕ್ಕೂ ಹೆಚ್ಚು ಮನೆಗಳು ಮತ್ತು ದೇವಸ್ಥಾನವು ಜಲಾವೃತಗೊಂಡಿತ್ತು. ಚಿಕ್ಕ ಕಾಲುವೆ ಬ್ಲಾಕ್ ಆಗಿದ್ದರಿಂದ ಈ ಆವಾಂತರಗಳು ಸೃಷ್ಟಿಯಾಗಿತ್ತು. ಮಳೆ ನೀರು ನುಗ್ಗಿದ್ದರಿಂದ ರಾತ್ರಿಯಿಡೀ ಜನರು ಜಾಗರಣೆ ಮಾಡುವಂತಾಯಿತು. ಬೆಳಗ್ಗೆಯಿಂದ ಮಳೆ ನೀರು ಹೊರ ಹಾಕಲು ಜನರು ಹರಸಾಹಸ ಪಟ್ಟರು. ನಗರಸಭೆ ಮತ್ತು ಜನ ಪ್ರತಿನಿಧಿಗಳ ವಿರುದ್ಧ ವಾರ್ಡ್‌ನ ಜನರು ಆಕ್ರೋಶ ಹೊರಹಾಕಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version