ಗಂಗಾವತಿ: ಬುಧವಾರ ಮಧ್ಯರಾತ್ರಿ ಸುರಿದ ಭಾರೀ ಮಳೆಗೆ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿನ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾದರೆ, ಮಳೆ (Karnataka Rain) ನೀರಿನಿಂದ ಅಪಾರ ಪ್ರಮಾಣದ ಭತ್ತದ ಗದ್ದೆಗಳಿಗೆ ಹಾನಿಯಾಗಿದೆ.
ತಾಲೂಕಿನ ಗ್ರಾಮೀಣ ಭಾಗದಲ್ಲಿ ಈಗಷ್ಟೆ ಭತ್ತ ನಾಟಿ ಮಾಡಲಾಗಿದ್ದ ಸಾವಿರಾರು ಎಕರೆ ಪ್ರದೇಶದಲ್ಲಿ ಹೊಲ-ಗದ್ದೆಗಳಲ್ಲಿ ಅಪಾರ ಪ್ರಮಾಣ ಮಳೆ ನೀರು ನಿಂತು ಹಾನಿಯಾಗಿದೆ. ಸಸಿಮಡಿಗಳು ಮಳೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿವೆ.
ಆನೆಗೊಂದಿ, ಮಲ್ಲಾಪುರ, ಸಣಾಪುರ, ರಾಂಪುರ, ಸಂಗಾಪುರ, ಕಣಿವೆ ಆಂಜನೇಯ ದೇಗುಲ, ಗಂಗಾವತಿ, ಅಯೋಧ್ಯೆ, ಢಣಾಪುರ, ಚಿಕ್ಕಜಂತಕಲ್, ಬಸವಪಟ್ಟಣ, ವಡ್ಡರಹಟ್ಟಿ, ಮರಳಿ, ಕಲ್ಗುಡಿ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಭಾರಿ ಪ್ರಮಾಣದಲ್ಲಿ ಭತ್ತದ ಗದ್ದೆಗಳು ನಾಶವಾಗಿವೆ.
ಬುಧವಾರ ರಾತ್ರಿಯಿಂದ ಆರಂಭವಾದ ಮಳೆ ಬೆಳಗಿನ ಜಾವದವರೆಗೂ ನಿರಂತರ ಸುರಿದಿದೆ. ಹೀಗಾಗಿ ಗಂಗಾವತಿ ನಗರದ ಸುತ್ತಲೂ ಇರುವ ಬೆಟ್ಟದ ಪ್ರದೇಶದಿಂದ ಅಪಾರ ಪ್ರಮಾಣ ಮಳೆ ನೀರು ಜನವಸತಿ ಪ್ರದೇಶಕ್ಕೆ ಹರಿದು ಹಾನಿ ಸಂಭವಿಸಿದೆ.
ನಗರದ ಕಿಲ್ಲಾ ಏರಿಯಾ, ಹಿರೇಜಂತಕಲ್, ಮಹೆಬೂಬನಗರ, ಅಂಗಡಿಸಂಗಣ್ಣ ಕ್ಯಾಂಪ್, ರಾಮಲಿಂಗೇಶ್ವರ ಕ್ಯಾಂಪ್, ನೀಲಕಂಠೇಶ್ವರ ಕ್ಯಾಂಪ್, ಎಚ್ಆರ್‌ಎಸ್ ಕಾಲೋನಿ, ಗೌಸೀಯಾ ಕಾಲೋನಿ ಸೇರಿದಂತೆ ಕೊಳಚೆ ಪ್ರದೇಶದಲ್ಲಿನ ಮನೆಗಳಿಗೆ ನೀರು ನುಗ್ಗಿ ದವಸ-ಧಾನ್ಯ ಹಾನಿಯಾಗಿವೆ ಎಂದು ತಿಳಿದುಬಂದಿದೆ.
ಇದರ ಜತೆ ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್ ನಂಬರ್ 19 ಕಿತ್ತು ಹೋಗಿರುವ ಕಾರಣಕ್ಕೆ ಜಲಾಶಯದ ಭದ್ರತೆ ದೃಷ್ಟಿಯಿಂದ ಹೆಚ್ಚುವರಿ ನೀರನ್ನು ಎಸ್ಕೇಪ್ ಛಾನಲ್ ಮೂಲಕ ಹರಿಸಿದ್ದರ ಪರಿಣಾಮ ಅಪಾರ ಪ್ರಮಾಣದ ನೀರು ಗಂಗಾವತಿ ನಗರ ಪ್ರದೇಶಕ್ಕೆ ನುಗ್ಗಿದೆ. ಪರಿಣಾಮ ನಗರದ ದುರುಗಮ್ಮನ ಹಳ್ಳ ತುಂಬಿ ಹರಿಯುತ್ತಿದ್ದು, ಸಮೀಪದ ರಸ್ತೆಗಳು ಕೂಡ ಜಲಾವೃತವಾಗಿವೆ. ಇನ್ನು ಕಣಿವೆ ಆಂಜನೇಯ ದೇವಸ್ಥಾನದ ಸುತ್ತಲಿನ ಹೊಲಗಳಲ್ಲಿ ಅಪಾರ ಪ್ರಮಾಣ ಮಳೆ ನೀರು ರಭಸವಾಗಿ ಹರಿದ ಪರಿಣಾಮ ಭೂಮಿಯ ಸಾರ ಉಳ್ಳ ಮೇಲ್ಮೈ ಸಂಪೂರ್ಣ ಕೊಚ್ಚಿಕೊಂಡು ಹೋಗಿದ್ದು, ಕೇವಲ ಮರಳು, ಕಲ್ಲು ಬಂಡೆಯ ಅವಶೇಷಗಳು ಉಳಿದುಕೊಂಡಿದೆ.
72 ಎಂ.ಎಂ. ಮಳೆ
ಬುಧವಾರ ರಾತ್ರಿ ಧಾರಾಕಾರವಾಗಿ ಸುರಿದ ಮಳೆಯ ಪ್ರಮಾಣ ದಾಖಲೆ ನಿರ್ಮಿಸಿದೆ. ಗಂಗಾವತಿ ಮಳೆ ಮಾಪನ ಕೇಂದ್ರದಲ್ಲಿ ದಾಖಲಾದ ಮಾಹಿತಿ ಪ್ರಕಾರ ಗಂಗಾವತಿಯಲ್ಲಿ ಒಂದೇ ದಿನ ರಾತ್ರಿ ಒಟ್ಟು 72.5 ಮಿ.ಮೀ. ಪ್ರಮಾಣದಷ್ಟು ಮಳೆಯಾಗಿದೆ.
ಇತ್ತೀಚಿನ ವರ್ಷದಲ್ಲಿ ಒಂದೇ ದಿನ ಇಷ್ಟು ಮಳೆಯಾಗಿದ್ದು ಐತಿಹಾಸಿಕ ದಾಖಲೆ ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಮರಳಿ ಮಳೆ ಮಾಪನ ಕೇಂದ್ರದಲ್ಲಿ 26.3 ಮಿ.ಮೀ. ಮಳೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: Job Alert: ಹೆಸ್ಕಾಂನ 338 ಹುದ್ದೆಗಳಿಗೆ ಅರ್ಜಿ ಆಹ್ವಾನ
ಬುಧವಾರ ರಾತ್ರಿ ಸುರಿದ ಅಪಾರ ಪ್ರಮಾಣ ಮಳೆಗೆ ಮನೆ, ಮತ್ತು ಹೊಲ-ಗದ್ದೆಗಳಿಗೆ ಹಾನಿಯಾಗಿರುವ ಪ್ರಾಥಮಿಕ ಮಾಹಿತಿ ಇದೆ. ಹಾನಿಯ ಕುರಿತು ಮತ್ತಷ್ಟು ಮಾಹಿತಿ ಸಂಗ್ರಹಿಸಲಾಗುವುದು ಎಂದು ತಹಸೀಲ್ದಾರ್ ಯು. ನಾಗರಾಜ್ ತಿಳಿಸಿದ್ದಾರೆ.