Site icon Vistara News

Karnataka Weather : ಉತ್ತರ ಒಳನಾಡು, ಕರಾವಳಿಗೆ ನಾಳೆ ತಾಪಮಾನದ ಅಲರ್ಟ್‌

Dry weather conditions prevailed over the state

ಬೆಂಗಳೂರು: ರಾಜ್ಯಾದ್ಯಂತ ಶುಷ್ಕ ವಾತಾವರಣವು (Dry Weather) ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ (Karnataka Weather Forecast) ಮುನ್ಸೂಚನೆಯನ್ನು ನೀಡಿದೆ.

ಕರಾವಳಿ ಹಾಗೂ ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-3 ಡಿ.ಸೆ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಬಿಸಿಲ ಝಳ ಹೆಚ್ಚಿರಲಿದೆ. ಜತೆಗೆ ಕನಿಷ್ಠ ಉಷ್ಣಾಂಶದಲ್ಲೂ ಕರಾವಳಿ ಹಾಗೂ ಉತ್ತರ ಒಳನಾಡಿನ ಹಲವೆಡೆ ಸಾಮಾನ್ಯಕ್ಕಿಂತ 2 ಡಿ.ಸೆ ನಷ್ಟು ಹೆಚ್ಚಾಗಿರಲಿದೆ.

ರಾಜಧಾನಿ ಬೆಂಗಳೂರಲ್ಲಿ ಇನ್ನೊಂದು ವಾರವೂ ಬೆಳಗಿನ ಜಾವ ದಟ್ಟ ಮಂಜು ಮುಸುಕುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 31 ಹಾಗೂ ಕನಿಷ್ಠ ಉಷ್ಣಾಂಶ 17 ಡಿ.ಸೆ ಇರಲಿದೆ.

ರಾಜ್ಯದಲ್ಲಿ ಗುರುವಾರ ಸರಾಸರಿ ಕನಿಷ್ಠ ಉಷ್ಣಾಂಶ 13.7 ಡಿಗ್ರಿ ಸೆಲ್ಸಿಯಸ್ ಕೋಲಾರದಲ್ಲಿ ದಾಖಲಾಗಿದ್ದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 37.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು.

ಹಾಸನ, ಚಿಕ್ಕಬಳ್ಳಾಪುರ ಮತ್ತು ಚಿಕ್ಕಮಗಳೂರಿನ ಕೆಲವು ಭಾಗಗಳಲ್ಲಿ ಕನಿಷ್ಠ ತಾಪಮಾನ 8 ಡಿ.ಸೆ ನಿಂದ 10 ಡಿ.ಸೆ ವ್ಯಾಪ್ತಿಯಲ್ಲಿ ದಾಖಲಾಗಿದೆ. ಹಾವೇರಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಗರಿಷ್ಠ ತಾಪಮಾನ 38 ಡಿಗ್ರಿ ಸೆಲ್ಸಿಯಸ್ ನಿಂದ 40 ಡಿಗ್ರಿ ಸೆಲ್ಸಿಯಸ್ ವ್ಯಾಪ್ತಿಯಲ್ಲಿ ದಾಖಲಾಗಿದೆ.

ಇದನ್ನೂ ಓದಿ: Murder case : 31 ವರ್ಷಗಳ ಬಳಿಕ ಸೆರೆ ಸಿಕ್ಕ ಕೊಲೆಗಾರ; ಜಾಮೀನು ಪಡೆದು ಪರಾರಿ ಆದವ ಮೌಲ್ವಿಯಾಗಿದ್ದ!

Skin Care in Summer: ಬೇಸಿಗೆಯಲ್ಲಿ ಚರ್ಮದ ಆರೈಕೆ ಮಾಡಿಕೊಳ್ಳೋದು ಹೇಗೆ?

ಇಂದು ರಥಸಪ್ತಮಿ. ತನ್ನ ಹಳೆಯ ರಥವನ್ನು ಬಿಟ್ಟು ಸೂರ್ಯ ಹೊಸ ರಥವನ್ನೇರುತ್ತಾನೆ ಎಂಬುದು ಪ್ರತೀತಿ. ಹೊಸ ರಥವನ್ನೇರಿದ ಸೂರ್ಯ ಇನ್ನು ಹೊಸ ಶಕ್ತಿಯಿಂದ ಕಂಗೊಳಿಸುತ್ತಾನೆ. ಅಂದರೆ ಬಿಸಿಲಿನ ಝಳ ಇನ್ನು ಮತ್ತೂ ತೀವ್ರವಾಗುತ್ತದೆ. ದೇಹವನ್ನು ಬಿಸಿಲಿಗೆ ಚಾಚುವಷ್ಟರಲ್ಲೇ ಸೂರ್ಯನ ಪ್ರಕೋಪ ಅರಿವಿಗೆ ಬರುತ್ತದೆ. ಹನ್ನೆರಡು ಗಂಟೆಯ ನಂತರ ಹೊರಗೆ ಹೋಗುವುದೇ ದುಸ್ತರವಾಗುತ್ತದೆ; ಮೈಯೆಲ್ಲ ಸುಟ್ಟ ಅನುಭವ ಆಗಬಹುದು. ಬೇಸಿಗೆಯ ತಾಪ ಹೀಗೆ ವಿಪರೀತ ಏರುತ್ತಿದ್ದಂತೆ, ಸೆಕೆಗಾಲಕ್ಕೆಂದೇ ಮೀಸಲಾದ ಒಂದಿಷ್ಟು ಚರ್ಮದ ಸಮಸ್ಯೆಗಳೂ (skin care in summer) ಏರುತ್ತವೆ. ಅಂಥ ಕೆಲವು ತೊಂದರೆಗಳು ಇಲ್ಲಿವೆ.
ಇದರಲ್ಲಿ ಎಲ್ಲಕ್ಕಿಂತ ಮುಖ್ಯವಾಗಿ ಕಾಟ ಕೊಡುವುದು ಬೆವರುಸಾಲೆ. ಸಾಮಾನ್ಯವಾಗಿ ಬೆವರು ಹೆಚ್ಚಾಗಿ ಬರುವಂಥ ಕುತ್ತಿಗೆ, ಬೆನ್ನು, ಎದೆಯಂಥ ಭಾಗಗಳ ಮೇಲೆ ಇವುಗಳ ಉಪದ್ರವ ಹೆಚ್ಚು. ಕೆಂಪಾಗಿ ಸಾಲುಸಾಲಾಗಿ ದದ್ದಿನಂತೆ ಅಥವಾ ಚಿಕ್ಕಚಿಕ್ಕ ಗುಳ್ಳೆಗಳಂತೆ ಚರ್ಮದ ಮೇಲೆ ಎದ್ದು, ತುರಿಕೆ-ಕಿರಿಕಿರಿ ಉಂಟುಮಾಡುತ್ತದೆ. ಇದೇನು ಗಂಭೀರ ಸಮಸ್ಯೆ ಅಲ್ಲದಿದ್ದರೂ, ಉಪಶಮನ ಮಾಡಿಕೊಳ್ಳದಿದ್ದರೆ ಬೇಸಿಗೆಯಿಡೀ ಕಿರಿಕಿರಿ ತಪ್ಪಿದ್ದಲ್ಲ. ಅದರಲ್ಲೂ ಮಕ್ಕಳಿಗೆ ಈ ಸಮಸ್ಯೆ ಸ್ವಲ್ಪ ಹೆಚ್ಚೇ. ಪುಟ್ಟ ಕಂದಮ್ಮಗಳಿಗೆ ಬೆವರುಸಾಲೆಯ ಉಪಟಳ ಶುರುವಾದರೆ, ಬೇಸಿಗೆಯಲ್ಲಿ ಬಟ್ಟೆ ಹಾಕುತ್ತಿದ್ದಂತೆ ಅವು ಕಿರಿಕಿರಿಯಿಂದ ರಚ್ಚೆ ಹಿಡಿಯಲಾರಂಭಿಸುತ್ತವೆ.

ಏಕೆ ಬರುತ್ತದೆ?

ದೇಹದ ಕಶ್ಮಲಗಳನ್ನು ಬೆವರಿನ ರೂಪದಲ್ಲಿ ಚರ್ಮ ವಿಸರ್ಜಿಸುತ್ತಿರುತ್ತದೆ. ಆದರೆ ಬೇಸಿಗೆಯಲ್ಲಿ ಬೆವರಿನೊಂದಿಗೆ ಬರುವಂಥ ಎಣ್ಣೆಯ ಅಂಶವು ಚರ್ಮದ ರಂಧ್ರಗಳ ಮೇಲೆ ಕುಳಿತುಬಿಡುತ್ತವೆ. ಇದರಿಂದಾಗಿ ಕಶ್ಮಲಗಳು ಸರಾಗವಾಗಿ ಹೊರಗೆ ಬಾರದೆ, ಅಲ್ಲಿಯೇ ಬ್ಯಾಕ್ಟೀರಿಯಾಗಳ ಬೆಳವಣಿಗೆ ಆರಂಭವಾಗುತ್ತದೆ. ಇದರಿಂದಾಗಿ ಚರ್ಮದ ಮೇಲೆ ಹೀಗೆ ದದ್ದು, ಕೆಂಪಾಗುವುದು, ತುರಿಕೆ ಕಿರಿಕಿರಿ ಆರಂಭವಾಗುತ್ತದೆ.

ಏನು ಮಾಡಬಹುದು?

ತಂಪಾದ ನೀರಲ್ಲಿ ಸ್ನಾನ ಮಾಡುವುದು, ತೆಳುವಾದ ಹತ್ತಿ ಬಟ್ಟೆಗಳನ್ನೇ ಧರಿಸುವುದು, ಅತಿಯಾಗಿ ಬಿಸಿಲಿಗೆ ಹೋಗದಿರುವುದು ಮುಖ್ಯ. ಇಷ್ಟಾಗಿ ಈ ಗುಳ್ಳೆಗಳಿಗೆ ಅಲೋವೇರಾ ರಸ ಹಚ್ಚುವುದು ಒಳ್ಳೆಯ ಉಪಶಮನ ನೀಡುತ್ತದೆ. ಇದಲ್ಲದೆ, ರೋಸ್‌ ವಾಟರ್‌, ಸೌತೇಕಾಯಿ ರಸ, ಕ್ಯಾಲಮಿನ್‌ ಲೋಶನ್‌, ಪ್ರಿಕ್ಲೀಹೀಟ್‌ ಪೌಡರ್‌ಗಳಿಂದಲೂ ಉತ್ತಮ ಉಪಶಮನ ದೊರೆಯುತ್ತದೆ.

ಸನ್‌ ಬರ್ನ್‌

ಸೂರ್ಯನ ಪ್ರಕೋಪಕ್ಕೆ ಚರ್ಮ ಸುಡುವುದು ಎಲ್ಲರನ್ನೂ ಕಾಡುವ ಸಮಸ್ಯೆ. ಬಿಸಿಲಿಗೆ ಮೊದಲಿಗೆ ಕೆಂಪಾಗುವ ಚರ್ಮ, ನಂತರ ಕಪ್ಪಾಗಿ, ಒಂದೆರಡು ದಿನಗಳ ನಂತರ ಸುಲಿಯಲಾರಂಭಿಸುತ್ತದೆ. ಅದಿಲ್ಲದಿದ್ದರೆ, ಕೆಂಪಾದ ಚರ್ಮದ ಮೇಲೆ ಸಣ್ಣ ಗುಳ್ಳೆಗಳು ತುಂಬಿಹೋಗುತ್ತವೆ ಅಥವಾ ದದ್ದಾಗಿ ಉರಿಯಲು ಆರಂಭಿಸಬಹುದು. ಮಾತ್ರವಲ್ಲ, ಬಿಸಿಲಿಗೆ ಸುಡುವ ಚರ್ಮ ದೀರ್ಘಕಾಲೀನ ಸಮಸ್ಯೆಗಳನ್ನೂ ತರಬಹುದು. ಮುಖ, ಕುತ್ತಿಗೆ, ಬೆನ್ನು, ಎದೆ, ಕೈ, ಕಾಲು- ಹೀಗೆ ಬಿಸಿಲು ತಾಗುವ ಜಾಗಗಳಲ್ಲೆಲ್ಲಾ ಈ ತೊಂದರೆ ಕಂಡುಬರಬಹುದು. ಆದರೆ ಎಲ್ಲಕ್ಕಿಂತ ಹೆಚ್ಚಿನ ತಾಪ ತಾಗುವುದು ಮುಖದ ಚರ್ಮಕ್ಕೆ ಎನ್ನುವುದಂತೂ ಸತ್ಯ.

ಏನು ಮಾಡಬಹುದು?

ಬಿಸಿಲಿಗೆ ಚರ್ಮ ಸುಡದಂತೆ ತಡೆಯುವುದು ಅಗತ್ಯ. ಹಗಲು ಹೊತ್ತಿನಲ್ಲಿ ಹೊರಗೆ ಹೋಗಬೇಕಾದರೆ ಎಸ್‌ಎಫ್‌ಪಿ ೪೦ಕ್ಕಿಂತ ಹೆಚ್ಚಿನ ಸಾಂದ್ರತೆಯ ಸನ್‌ಸ್ಕ್ರೀನ್‌ ಹಚ್ಚಿಕೊಳ್ಳುವುದು ಉಪಯುಕ್ತ. ಈಜುವ ಅಥವಾ ನೀರಿಗಿಳಿಯುವ ಉದ್ದೇಶವಿದ್ದರಂತೂ, ಯುವಿ ಬ್ಲಾಕ್‌ ಇರುವ ಪ್ರಬಲ ಸನ್‌ಸ್ಕ್ರೀನ್‌ ಬಳಕೆ ಮಾಡಿ. ಇಷ್ಟಾಗಿ ಬಿಸಿಲಿಗೆ ಚರ್ಮ ಕೆಂಪಾದರೆ, ಅದನ್ನು ಮೊದಲಿಗೆ ತಂಪು ಮಾಡಿ. ಐಸ್‌ಪ್ಯಾಕ್‌ ಅಥವಾ ತಣ್ಣೀರಿನ ಬಟ್ಟೆಯನ್ನು ಸುಟ್ಟ ಜಾಗಕ್ಕೆ ಇಡಿ. ನಂತರ ಅಲೋವೇರಾ ಅಥವಾ ಕ್ಯಾಲಮಿನ್‌ ಲೋಶನ್‌ ಅಥವಾ ಗುಲಾಬಿ ಜಲ ಮತ್ತು ಮುಲ್ತಾನಿ ಮಿಟ್ಟಿಯ ಮಿಶ್ರಣ ಹಚ್ಚಿ.

ಸ್ವಚ್ಛತೆ ಮುಖ್ಯ

ಬೇಸಿಗೆಯಲ್ಲಿ ತಂಪಾದ ನೀರಿನಲ್ಲಿ ಸ್ನಾನ ಮಾಡುವುದು ಹಿತಕರ. ಆದರೆ ಚರ್ಮ ತೀರಾ ಒಣಗಿದಂತಾದರೆ ಬೆಚ್ಚಗಿನ ನೀರು ಉಪಯೋಗಿಸಿ. ಬಿಗಿಯಾದ ಉಡುಪುಗಳು ಬೆವರನ್ನು ಇನ್ನಷ್ಟು ಹೆಚ್ಚಿಸುತ್ತವೆ. ಹಾಗಾಗಿ ಸ್ವಚ್ಛ, ಹಗುರ ಮತ್ತು ಸಡಿಲವಾದ ಹತ್ತಿಯ ಬಟ್ಟೆಗಳೇ ಆರಾಮದಾಯಕ. ಬಿಸಿಲಿಗೆ ಹೋಗುವಾದ ತಿಳಿ ಬಣ್ಣದ, ತುಂಬು ತೋಳಿನ ಹತ್ತಿಯ ಬಟ್ಟೆಗಳು ಕ್ಷೇಮ.

ನೀರು ಬೇಕು

ದೇಹಕ್ಕೆ ಸಾಕಷ್ಟು ನೀರು ದೊರೆಯದಿದ್ದರೆ ಚರ್ಮದ ಮೇಲೂ ಪರಿಣಾಮ ಬೀರುತ್ತದೆ. ಹೆಚ್ಚು ಬೆವರುವ ಈ ದಿನಗಳಲ್ಲಿ ಹೆಚ್ಚು ನೀರು, ಕಿತ್ತಳೆ, ಕಲ್ಲಂಗಡಿಯಂಥ ರಸಭರಿತ ಹಣ್ಣುಗಳು, ಸೌತೇಕಾಯಿ, ಕ್ಯಾರೆಟ್‌, ಬೀಟ್‌ರೂಟ್‌ನಂಥ ತರಕಾರಿ ಜ್ಯೂಸುಗಳು, ಎಳನೀರು ಮುಂತಾದ ಆರೋಗ್ಯಕರ ಪೇಯಗಳ ನಮ್ಮ ದಾಹವನ್ನು ಆರೋಗ್ಯಕರ ರೀತಿಯಲ್ಲಿ ನೀಗಿಸಬಲ್ಲವು. ಸಕ್ಕರೆಭರಿತ ಜ್ಯೂಸ್‌ ಅಥವಾ ಎನರ್ಜಿ ಪೇಯಗಳು ಕುಡಿಯುವಾಗ ಬಾಯಿಗೆ ರುಚಿ ಹೌದಾದರೂ ಪರಿಣಾಮದಲ್ಲಿ ಒಳ್ಳೆಯದನ್ನೇನೂ ನೀಡುವುದಿಲ್ಲ. ಹಾಗಾಗಿ ದೇಹವನ್ನು ತಂಪಾಗಿಡಬಲ್ಲ ನೈಸರ್ಗಿಕ ಉಪಚಾರದ ಆಯ್ಕೆಗಳು ಉತ್ತಮ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version