ಬೆಂಗಳೂರು: ರಾಜ್ಯದಲ್ಲಿ ಮುಂದಿನ ವಾರವೂ ಒಣಹವೆ (Dry Weather) ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka Weather Forecast) ನೀಡಿದೆ. ಹಗಲಿರುಳು ಥಂಡಿ ವಾತಾವರಣ ಇದ್ದರೆ, ಮಧ್ಯಾಹ್ನದಂದು ಸೂರ್ಯನ ಪ್ರಖರತೆ ಜೋರಾಗಿಲಿದೆ. ಬೆಂಗಳೂರು ಸೇರಿ ಕೆಲವು ಮಲೆನಾಡಿನ ಭಾಗಗಳಲ್ಲಿ ಮಂಜು ಮುಸುಕುವ ಸಾಧ್ಯತೆ ಇದೆ.
ರಾಜಧಾನಿ ಬೆಂಗಳೂರಲ್ಲಿ ಸಾಮಾನ್ಯವಾಗಿ ಆಕಾಶವು ನಿರ್ಮಲವಾಗಿರುತ್ತದೆ. ಕೆಲವು ಕಡೆಗಳಲ್ಲಿ ಬೆಳಗಿನ ಜಾವ ಮಂಜು ಮುಸುಕುವ ಸಾಧ್ಯತೆ ಇದೆ. ಮೇಲ್ಮೈ ಮಾರುತಗಳು ಕೆಲವೊಮ್ಮೆ ಪ್ರಬಲವಾಗಿರಲಿದೆ. ಇದರಿಂದಾಗಿ ಕೆಲವು ಕಡೆಗಳಲ್ಲಿ ಚಳಿಯ ಏಟು ಜೋರಾಗಿರಲಿದೆ.
ವಿಜಯಪುರದಲ್ಲಿ ಕಡಿಮೆ ಕನಿಷ್ಠ ಉಷ್ಣಾಂಶ ದಾಖಲು
ರಾಜ್ಯದಲ್ಲಿ ಶನಿವಾರದಂದು ಶುಷ್ಕ ವಾತಾವರಣವೇ ಮೇಲುಗೈ ಸಾಧಿಸಿತ್ತು. ರಾಜ್ಯದ ಸಮತಟ್ಟಾದ ಪ್ರದೇಶಗಳಲ್ಲಿ ಕಡಿಮೆ ಕನಿಷ್ಠ ಉಷ್ಣಾಂಶವು ವಿಜಯಪುರದಲ್ಲಿ 14.5 ಡಿ.ಸೆ ದಾಖಲಾಗಿತ್ತು. ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಉಷ್ಣಾಂಶವು ಸಾಮಾನ್ಯಕ್ಕಿಂತ 3.1 ಡಿ.ಸೆ ನಿಂದ 5.0 ಡಿ.ಸೆ ಹೆಚ್ಚಳಗೊಂಡಿತ್ತು. ಕರಾವಳಿ, ದಕ್ಷಿಣ ಒಳನಾಡಿನ ಬಹುತೆೇಕ ಕಡೆಗಳಲ್ಲಿ, ಉತ್ತರ ಒಳನಾಡಿನ ಹಲವು ಕಡೆಗಳಲ್ಲಿ ತಾಪಮಾನದಲ್ಲಿ ಏರಿತ ಉಂಟಾಗಿತ್ತು.
ಇದನ್ನೂ ಓದಿ: Benefits Of Ginger: ಶುಂಠಿ ಘಾಟು, ಘಮಕ್ಕೆ ಮಾತ್ರವಲ್ಲ; ಔಷಧಕ್ಕೂ ಬೇಕು!
ಚಳಿಗಾಲದಲ್ಲಿ ಮೊಸರು ಬಳಸಬಹುದೇ?
ಮೊಸರು ಯಾರಿಗಿಷ್ಟವಿಲ್ಲ? ಅದರಲ್ಲೂ ಚಾಕುವಿನಲ್ಲಿ ಕತ್ತರಿಸಿ ಹಾಕುವಷ್ಟು ಗಟ್ಟಿ ಮೊಸರಿದ್ದರೆ, ಜೊತೆಗೆ ಅನ್ನವೋ ರೊಟ್ಟಿಯೊ ನಾಲ್ಕು ತುತ್ತು ಹೆಚ್ಚೇ ಹೋಗುತ್ತದೆ ಒಳಗೆ. ಸಿಹಿ ಮೊಸರು, ಕೆನೆ ಮೊಸರು, ಗಟ್ಟಿ ಮೊಸರು, ಕಡೆದ ಮಜ್ಜಿಗೆ, ಮಸಾಲೆ ಮಜ್ಜಿಗೆ… ಇಂಥವನ್ನು ಇಷ್ಟಪಡುವವರ ಸಂಖ್ಯೆಯನ್ನು ಲೆಕ್ಕ ಇಡಲಾಗದು. ಆದರೆ ಚಳಿಗಾಲದಲ್ಲಿ ಮೊಸರು (Curd in winter) ತಿನ್ನಬಹುದೇ?
ಈ ಪ್ರಶ್ನೆ ಹಿಂದಿನಿಂದಲೂ ಜನರನ್ನು ಕಾಡಿದ್ದಿದೆ. ಚಳಿಗಾಲದಲ್ಲಿ ಮೊಸರು ತಿಂದರೆ ಶೀತ, ಕೆಮ್ಮು, ಕಫದಂಥ ಸಮಸ್ಯೆಗಳು ಗಂಟಿಕ್ಕಿಕೊಳ್ಳುತ್ತವೆ ಎಂಬುದು ಹಲವರ ವಾದ, ಕೆಲವರ ಅನುಭವ. ಆಯುರ್ವೇದದಲ್ಲೂ ಚಳಿಗಾಲದಲ್ಲಿ, ಅದರಲ್ಲೂ ರಾತ್ರಿಯ ಹೊತ್ತು ಮೊಸರು ಸೇವನೆಯನ್ನು ಒಪ್ಪುವುದಿಲ್ಲ. ಹಾಗಾದರೆ ಚಳಿಗಾಲದಲ್ಲಿ ಮೊಸರು ತಿನ್ನಬೇಕೆ ಅಥವಾ ಬೇಡವೇ? ತಿಂದರೇನಾಗುತ್ತದೆ? ತಿನ್ನದಿದ್ದರೆ ಆಗುವ ತೊಂದರೆಯೇನು?
ಚಳಿಗಾಲದಲ್ಲಿ ಕಾಡುವ ಶೀತ-ಕೆಮ್ಮು-ಕಫದಂಥ ಸಮಸ್ಯೆಗಳು ನಿಮಗಿಲ್ಲ ಎಂದಾದರೆ, ಯಾವುದೇ ಕಾಲದಲ್ಲೂ ಮೊಸರು-ಮಜ್ಜಿಗೆ ಸೇವಿಸುವುದಕ್ಕೆ ತೊಂದರೆಯಿಲ್ಲ ಎನ್ನುತ್ತಾರೆ ಆಹಾರ ತಜ್ಞರು. ಪ್ರೊಬಯಾಟಿಕ್ ಅಂಶವನ್ನು ಸಾಂದ್ರವಾಗಿ ಹೊಂದಿರುವ ಮೊಸರು-ಮಜ್ಜಿಗೆ ನಮ್ಮ ಆರೋಗ್ಯಕ್ಕೆ ಬೇಕು. ಜೊತೆಗೆ, ಕ್ಯಾಲ್ಶಿಯಂ, ಫಾಸ್ಫರಸ್, ಪೊಟಾಶಿಯಂ, ವಿಟಮಿನ್ ಬಿ೧೨ ಮತ್ತಿತರ ಅಗತ್ಯ ಪೋಷಕಾಂಶಗಳನ್ನು ಹೊಂದಿರುವ ಇದನ್ನು ಹಲವು ಬಗೆಗಳಲ್ಲಿ ಸೇವಿಸಲು ಸಾಧ್ಯವಿದೆ. ಅಂದರೆ ನಂನಮ್ಮ ಆರೋಗ್ಯಕ್ಕೆ ಸೂಕ್ತ ಎನಿಸುವ ರೀತಿಯಲ್ಲಿ ಇದರ ಸೇವನೆಗೆ ಅವಕಾಶವಿದೆ.
ಲಾಭಗಳೇನು?
ಮೊಸರು ಎಂದಾಕ್ಷಣ ಅದನ್ನು ತಣ್ಣಗೇ ತಿನ್ನಬೇಕೆಂಬ ನಿಯಮವಿಲ್ಲ. ಬೆಚ್ಚಗೆ ಮಾಡಿ ಅಥವಾ ಬಿಸಿಯಾದ ಅಡುಗೆಗಳ ಮೂಲಕ ತಿನ್ನುವವರೂ ಇದ್ದಾರೆ. ಎಲ್ಲಕ್ಕಿಂತ ಮುಖ್ಯವಾದ ಲಾಭವೆಂದರೆ ನಮ್ಮ ಜೀರ್ಣಾಂಗಗಳ ಆರೋಗ್ಯ ಕಾಪಿಡುವಂಥ ಪ್ರೊಬಯಾಟಿಕ್ ಕಿಣ್ವಗಳು ಇದರಲ್ಲಿ ಹೇರಳವಾಗಿ ಇರುವುದು. ಇದರಿಂದ ಚಳಿಗಾಲದಲ್ಲೂ ಹೊಟ್ಟೆಯುರಿ, ಆಸಿಡಿಟಿ, ಹುಳಿತೇಗು, ಅಜೀರ್ಣ ಮುಂತಾದ ತೊಂದರೆಗಳಿಲ್ಲದಂತೆ ನೆಮ್ಮದಿಯಾಗಿರಬಹುದು.
ಪೋಷಕಸತ್ವಗಳು
ಕ್ಯಾಲ್ಶಿಯಂ, ವಿಟಮಿನ್ ಬಿ12, ಪ್ರೊಟೀನ್ ಮತ್ತಿತರ ಮಹತ್ವದ ಪೋಷಕಾಂಶಗಳನ್ನು ಮೊಸರು ಹೊಂದಿದೆ. ಇದರಿಂದ ಮೂಳೆಗಳು ಗಟ್ಟಿಯಾಗಿ, ಸ್ನಾಯುಗಳು ಆರೋಗ್ಯಪೂರ್ಣವಾಗಿ, ಜೀರ್ಣಾಂಗಗಳ ಕ್ಷಮತೆ ಹೆಚ್ಚಿ, ದೇಹದ ಒಟ್ಟಾರೆ ಸ್ವಾಸ್ಥ್ಯ ಹೆಚ್ಚುತ್ತದೆ. ಅದರಲ್ಲೂ ಚಳಿಗಾಲದಲ್ಲಿ ಸೋಂಕುಗಳು ಹೆಚ್ಚುವ ದಿನವಾದ್ದರಿಂದ, ರೋಗ ನಿರೋಧಕ ಶಕ್ತಿ ಮತ್ತು ದೇಹಾರೋಗ್ಯ ವರ್ಧನೆಗೆ ಇದು ನೆರವಾಗುತ್ತದೆ.
ಉಷ್ಣತೆ ಹೆಚ್ಚುತ್ತದೆ
ಮೊಸರನ್ನು ಫ್ರಿಜ್‌ನಲ್ಲಿಟ್ಟು ತಣ್ಣಗೆ ಮಾಡಿಯೇ ತಿನ್ನಬೇಕೆಂಬ ನಿಯಮವಿಲ್ಲ. ಅದರಲ್ಲೂ ಚಳಿಗಾಲದಲ್ಲಿ ಮೊಸರು ಅಷ್ಟೇನು ಬೇಗ ಹುಳಿಯಾಗುವುದೂ ಇಲ್ಲ. ಹಾಗಾಗಿ ವಾತಾವರಣದ ಉಷ್ಣತೆಯಲ್ಲೇ ಅದನ್ನು ಬಳಸಬಹುದು. ಜೊತೆಗೆ, ಪಾರಂಪರಿಕ ಆರೋಗ್ಯಕ್ರಮದಲ್ಲಿ ಮೊಸರು ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ ಎಂದೇ ಹೇಳಲಾಗಿದೆ. ಹಾಗಾಗಿ ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡುವುದಕ್ಕೆ ಮೊಸರು ನೆರವಾಗಬಹುದು.
ಹಲವು ಬಗೆಯಲ್ಲಿ ಬಳಕೆ
ಮೊಸರು ಭಾರತೀಯ ಅಡುಗೆ ಮನೆಗಳಲ್ಲಿ ಮಾತ್ರವಲ್ಲ, ಖಂಡಾಂತರಗಳ ಪಾಕ ಪದ್ಧತಿಗಳಲ್ಲಿ ಬಳಕೆಯಲ್ಲಿದೆ. ಟಾಪಿಂಗ್, ಡಿಪ್, ಸ್ಪ್ರೆಡ್ ಮುಂತಾದವುಗಳಿಗೆ ಇವು ವ್ಯಾಪಕವಾಗಿ ಬಳಸಲ್ಪಡುತ್ತದೆ. ನಮ್ಮ ದೇಶದಲ್ಲಿ ರಾಜ್ಯ ಯಾವುದೇ ಆದರೂ ಒಂದಿಲ್ಲೊಂದು ಬಗೆಯಲ್ಲಿ ಮೊಸರು-ಮಜ್ಜಿಗೆ ಬಳಸುವ ಅಡುಗೆಗಳು ಇದ್ದೇಇರುತ್ತವೆ.
ತೂಕ ಇಳಿಕೆಗೆ ನೆರವು
ಮೊಸರು ತಿಂದರೆ ದಪ್ಪ ಆಗುತ್ತೇವೆಂದು ನಂಬಿದವರು ಬಹಳಷ್ಟು ಮಂದಿಯಿದ್ದಾರೆ. ಆದರೆ ಮಿತವಾಗಿ ಮೊಸರು ತಿನ್ನುವುದರಿಂದ ದೇಹದ ಜೀರ್ಣಕ್ರಿಯೆ ಮತ್ತು ಚಯಾಪಚಯ ಸುಧಾರಿಸುತ್ತದೆ. ಹೆಚ್ಚು ಕಾಲ ಹೊಟ್ಟೆ ತುಂಬಿದ ಅನುಭವ ನೀಡಿ, ಕಳ್ಳ ಹಸಿವನ್ನೂ ಇದು ನಿಯಂತ್ರಿಸುತ್ತದೆ. ಹಾಗೂ ಮೊಸರಿನಿಂದ ತೂಕ ಹೆಚ್ಚುವ ಅನುಭವವಾದರೆ ಲೋಫ್ಯಾಟ್ ಹಾಲಿನ ಮೊಸರು ಬಳಸಬಹುದು ಅಥವಾ ಕಡೆದು ಬೆಣ್ಣೆ ತೆಗೆದು ಮಜ್ಜಿಗೆಯನ್ನಂತೂ ಧಾರಾಳವಾಗಿ ಬಳಸಬಹುದು.
ಮೊಸರು ಸೇವಿಸಿದಾಗೆಲ್ಲ ಹೊಟ್ಟೆ ಹಾಳಾಗುತ್ತಿದೆ ಎನಿಸಿದರೆ ಮೊಸರಿನ ಅರ್ಜಿಯಿದೆಯೇ ಎಂಬುದನ್ನು ವೈದ್ಯರಲ್ಲಿ ತಪಾಸಣೆ ಮಾಡಿಸಿ. ಕೆಲವರಿಗೆ ಕೆಮ್ಮು-ಕಫ ಬಿಗಿಯುವಂಥ ಸಮಸ್ಯೆಗಳು ಚಳಿಗಾಲದಲ್ಲಿ ಕಾಣಬಹುದು. ಆಗ ರಾತ್ರಿ ಮೊಸರು ವರ್ಜಿಸಬಹುದು. ಅಸ್ತಮಾ ಇದ್ದವರಿಗೂ ಇದು ಸಮಸ್ಯೆ ತರಬಹುದು. ಅಂಥವರು ಬಿಸಿ ಅಡುಗೆಗಳಲ್ಲಿ ಮೊಸರು ಬಳಸಬಹುದೇ ಎಂಬುದನ್ನು ಪ್ರಯತ್ನಿಸಿ ನೋಡಿ. ಉಳಿದಂತೆ, ಮೊಸರು-ಮಜ್ಜಿಗೆಗಳ ಸೇವನೆಯನ್ನು ಚಳಿಗಾಲದಲ್ಲಿ ಮುಂದುವರಿಸುವುದಕ್ಕೆ ಸಮಸ್ಯೆ ಇರಲಾರದು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ