ಬೆಂಗಳೂರು: ಆ. 8ರಂದು ಗುರುವಾರ ಉತ್ತರ ಕನ್ನಡ ಸೇರಿ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಒಳನಾಡಿನ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ (Rain News) ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (Karnataka Weather) ಮುನ್ಸೂಚನೆ ನೀಡಿದೆ.
ಇನ್ನು ಆ.9ರಂದು ಕರಾವಳಿ ಜಿಲ್ಲೆಗಳಲ್ಲಿ ಒಂದೆರಡು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಒಳನಾಡಿನ ಜಿಲ್ಲೆಗಳಲ್ಲಿ ಅನೇಕ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಅದೇ ರೀತಿ 10ರಂದು ಉತ್ತರ ಒಳನಾಡು ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಕರಾವಳಿ ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಇದೇ ರೀತಿಯ ಹವಾಮಾನ ಆ.13ರವರೆಗೆ ಇರಲಿದೆ.
ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮುನ್ಸೂಚನೆ
ಮುಂದಿನ 48 ಗಂಟೆಗಳು: ಸಾಮಾನ್ಯವಾಗಿ ಮೋಡ ಕವಿದ ಆಕಾಶ. ಹಗುರ ಮಳೆಯಾಗುವ ಸಾಧ್ಯತೆ ಹೆಚ್ಚು. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 27° C ಮತ್ತು 20° C ಆಗಿರಬಹುದು.
ಶಿರಾಡಿಘಾಟ್‌ನಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ
ಹಾಸನ: ಶಿರಾಡಿಘಾಟ್‌ನಲ್ಲಿ ಗುಡ್ಡ ಕುಸಿದಿದ್ದ ಸ್ಥಳದಲ್ಲಿ ಮಣ್ಣನ್ನು ತೆರವು ಮಾಡಿರುವ ಅಧಿಕಾರಿಗಳು, ಇದೀಗ ಎಲ್ಲಾ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಕೊಂಚ ಮಳೆ ಕಡಿಮೆಯಾದ ಹಿನ್ನೆಲೆ ದಿನದ 24 ಗಂಟೆ ಕಾಲ ವಾಹನಗಳ ಓಡಾಟಕ್ಕೆ ಜಿಲ್ಲಾಡಳಿತ ಅವಕಾಶ ಮಾಡಿಕಟ್ಟಿದೆ.
ಸಕಲೇಶಪುರ ತಾಲೂಕಿನ ದೊಡ್ಡತಪ್ಲು ಬಳಿ ಹಲವು ಭಾರಿ ಗುಡ್ಡ ಕುಸಿದಿತ್ತು. ಇದರಿಂದ ವಾಹನಗಳ ಓಡಾಟಕ್ಕೆ ನಿರ್ಬಂಧ ಹೇರಲಾಗಿತ್ತು. ಈ ಬಗ್ಗೆ ಎಸಿ ಶೃತಿ ಮಾತನಾಡಿ, ಎರಡು ದಿನದಿಂದ ಮಳೆಯ ಪ್ರಮಾಣ ಸ್ವಲ್ಪ ಕಡಿಮೆಯಾಗಿದೆ. ವಾಹನಗಳ ಓಡಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ. ಆದರೂ ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಟೀಂ ನಿಯೋಜನೆ ಮಾಡಿದ್ದೇವೆ. ಪೊಲೀಸ್ ಅಧಿಕಾರಿಗಳು, ಎನ್‌ಎಚ್‌ಎಐ ಟೀಂ ದಿನದ 24 ಗಂಟೆಯೂ ಸ್ಥಳದಲ್ಲಿರಲಿದೆ ಎಂದು ತಿಳಿಸಿದ್ದಾರೆ.
ಕಾಳಿ ನದಿಗೆ ಕಟ್ಟಿದ ಸೇತುವೆ ಕುಸಿತ; ಕಾರವಾರ-ಗೋವಾ ಸಂಚಾರ ಬಂದ್
ಕಾರವಾರ: ಕಾಳಿ ನದಿಗೆ (Kali River) ಅಡ್ಡಲಾಗಿ ಕಟ್ಟಿದ್ದ ಹಳೆಯ ಸೇತುವೆ (Kali Bridge Collapse) ಕುಸಿದುಬಿದ್ದಿದ್ದು, ಅದರ ಮೇಲೆ ಚಲಿಸುತ್ತಿದ್ದ ಟ್ರಕ್ ಕೆಳಗೆ ಬಿದ್ದು ಚಾಲಕನಿಗೆ (truck driver injury) ಗಾಯವಾಗಿದೆ. ಹೊಸ ಸೇತುವೆಯಲ್ಲಿ ವಾಹನಗಳ ಓಡಾಟಕ್ಕೆ ಅವಕಾಶ ಕಲ್ಪಿಸಿದ್ದುದರಿಂದ ಭಾರಿ ಅನಾಹುತ ಆಗಿಲ್ಲ.
ಉತ್ತರಕನ್ನಡ ಜಿಲ್ಲೆಯ (Uttara kannada news) ಕಾರವಾರ ನಗರದ ಕೋಡಿಭಾಗ್‌ನಲ್ಲಿರುವ ಈ ಸೇತುವೆಯನ್ನು ಕಾರವಾರ- ಗೋವಾ ನಡುವಿನ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ನಿರ್ಮಿಸಲಾಗಿದೆ. ಇದು ಸುಮಾರು 60 ವರ್ಷ ಹಳೆಯದಾದ ಸೇತುವೆ. ಇತ್ತೀಚೆಗೆ ನಿರ್ಮಿಸಲಾದ ಹೊಸ ಸೇತುವೆಯಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದ್ದು, ಹಳೆಯ ಸೇತುವೆಯನ್ನು ಅಪಾಯಕಾರಿ ಎಂದು ಪರಿಗಣಿಸಲಾಗಿತ್ತು.
ಮಳೆ ಹಾಗೂ ನೀರಿನ ರಭಸ ಹೆಚ್ಚಾಗಿ ಸೇತುವೆ ಕುಸಿದು ಕೆಳಗೆ ಬಿದ್ದಿದ್ದು, ಅದರ ಮೇಲಿದ್ದ ಟ್ರಕ್ ಕೆಳಗೆ ಬಿದ್ದು ಚಾಲಕನಿಗೆ ಗಾಯವಾಗಿದೆ. ಚಾಲಕನನ್ನು ಅಗ್ನಿಶಾಮಕ ಹಾಗೂ ಪೊಲೀಸ್ ಸಿಬ್ಬಂದಿ ರಕ್ಷಿಸಿದ್ದಾರೆ. ಲಾರಿ ಚಾಲಕ ಕೇರಳ ಮೂಲದ ರಾಧಾಕೃಷ್ಣ ನಾಳಾ ಸ್ವಾಮಿ(37) ರಕ್ಷಣೆಗೊಳಗಾದವರು. ಟ್ರಕ್ ಸಂಪೂರ್ಣ ನೀರಿನಲ್ಲಿ ಮುಳುಗಿದೆ.
ವಿಷಯ ತಿಳಿದ ಕೂಡಲೇ ಎಚ್ಚೆತ್ತ ಉತ್ತರಕನ್ನಡ ಎಸ್.ಪಿ ನಾರಾಯಣ್, ಎಎಸ್‌ಪಿ ಜಯಕುಮಾರ ಹಾಗೂ ಡಿಎಸ್‌ಪಿ ಗಿರೀಶ್ ಸೇರಿದಂತೆ ಪೊಲೀಸರ ತಂಡ ಸ್ಥಳಕ್ಕೆ ಧಾವಿಸಿದೆ. ಲಾರಿ ಚಾಲಕನನ್ನು ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ಪೊಲೀಸರಿಂದ ಮಾಹಿತಿ ಸಿಗುತ್ತಿದ್ದಂತೆ ಡಿಸಿ ಲಕ್ಷ್ಮಿಪ್ರಿಯಾ ಮಧ್ಯರಾತ್ರಿ ಸ್ಥಳಕ್ಕೆ ಧಾವಿಸಿದ್ದು, ಮಾಹಿತಿ ಪಡೆದರು.
ಅವೈಜ್ಞಾನಿಕ ಕಾಮಗಾರಿಯಿಂದ ಕಳೆದ 15 ದಿನಗಳ ಹಿಂದಷ್ಟೆ ಶಿರೂರು ಗುಡ್ಡ ಕುಸಿತ ಆಗಿತ್ತು. ಈಗ ಹಳೆಯ ಸೇತುವೆ ಬಿದ್ದಿರುವ ಹಿನ್ನೆಲೆಯಲ್ಲಿ, ಐಆರ್‌ಬಿಯಿಂದ ನಿರ್ಮಾಣ ಮಾಡಿರುವ ಹೊಸ ಸೇತುವೆಯ ಗುಣಮಟ್ಟ ಪರೀಕ್ಷೆ ಮಾಡಲು ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ. ಈಗ ಕುಸಿದ ಸೇತುವೆಯ ಪಕ್ಕದಲ್ಲಿರುವ ಹೊಸ ಸೇತುವೆಯ ಗುಣಮಟ್ಟ ಪರೀಕ್ಷೆ ಮಾಡಲು, ಸೇತುವ ಗುಣಮಟ್ಟದ ಬಗ್ಗೆ 12 ಗಂಟೆಯೊಳಗೆ ವರದಿ ಸಲ್ಲಿಸುವಂತೆ IRB ಹಾಗೂ NHAIಗೆ ಡಿಸಿ ಲಕ್ಷ್ಮೀಪ್ರಿಯಾ ಆದೇಶಿಸಿದ್ದಾರೆ. ಸೇತುವೆ ಗುಣಮಟ್ಟದ ವರದಿ ಬರುವವರೆಗೂ ಸಂಚಾರ ನಿಷೇಧಿಸಲಾಗಿದ್ದು, ಸದ್ಯ ಕಾರವಾರದಿಂದ ಗೋವಾ ಕಡೆ ಹೋಗುವ ಸಂಚಾರ ಬಂದ್ ಆಗಿದೆ.
ಇದನ್ನೂ ಓದಿ: Konkan Railway: ಕಾರವಾರ – ಬೆಂಗಳೂರು ನಡುವಿನ ಎಲ್ಲಾ ರೈಲುಗಳ ಸಂಚಾರ ಆ. 8ರವರೆಗೆ ರದ್ದು
ಉತ್ತರಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆ ಮುಂದುವರಿದಿದ್ದು, ಭಾನುವಾರ ಕಾರವಾರದ ಸುರಂಗ ಮಾರ್ಗದಲ್ಲಿ ಕಲ್ಲು ಕುಸಿದಿತ್ತು. ರಾಷ್ಟ್ರೀಯ ಹೆದ್ದಾರಿ 66ರ ಸುರಂಗ ಮಾರ್ಗದಲ್ಲಿ ಬಿಣಗಾದಿಂದ ಕಾರವಾರಕ್ಕೆ ಆಗಮಿಸುವ ಸುರಂಗದ ಎದುರು ಭಾರಿ ಪ್ರಮಾಣದ ಕಲ್ಲು, ಮಣ್ಣು ಕುಸಿದಿತ್ತು. ಅದೃಷ್ಟವಶಾತ್ ವಾಹನ ಸವಾರರು ಪಾರಾಗಿದ್ದರು. ಸ್ಥಳಕ್ಕೆ ಬಂದ ಕಾರವಾರ ಟ್ರಾಫಿಕ್ ಪೊಲೀಸರು ಐಆರ್‌ಬಿ ಕಾರ್ಮಿಕರಿಂದ ಹೆದ್ದಾರಿಯಲ್ಲಿ ಬಿದ್ದ ಕಲ್ಲು ಮಣ್ಣು ತೆರವು ಮಾಡಿಸಿದ್ದರು. ಮುನ್ನೆಚ್ಚರಿಕಾ ಕ್ರಮವಾಗಿ ಬಿಣಗಾ ಕಾರವಾರ ಟನೆಲ್ ಬಂದ್ ಮಾಡಿಸಿದ್ದರಲ್ಲದೆ, ಬಿಣಗಾದಿಂದ ಬೈತಕೋಲ್ ಮಾರ್ಗದಲ್ಲಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರು.