ಬೆಂಗಳೂರು: ರಾಜ್ಯಾದ್ಯಂತ ಶುಷ್ಕ ವಾತಾವರಣ (Dry Weather) ಮುಂದುವರಿಯಲಿದ್ದು, ಸೆಕೆ ಪ್ರಮಾಣ ಹೆಚ್ಚಿರಲಿದೆ. ಕರಾವಳಿ ಹಾಗೂ ಮಲೆನಾಡು, ದಕ್ಷಿಣ ಒಳನಾಡು, ಉತ್ತರ ಒಳನಾಡಿನಲ್ಲಿ ಕನಿಷ್ಠ ಹಾಗೂ ಗರಿಷ್ಠ ತಾಪಮಾನ ಏರಿಕೆ (Karnataka Weather Forecast) ಆಗಲಿದೆ.
ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಗಮನಾರ್ಹವಾಗಿ ಕನಿಷ್ಠ ಉಷ್ಣಾಂಶವು 3- 5 ಡಿ.ಸೆ ನಷ್ಟು ಹೆಚ್ಚಾಗಲಿದೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ಹಾಗೂ ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಕನಿಷ್ಠ ಉಷ್ಣಾಂಶವು ಸಾಮಾನ್ಯಕ್ಕಿಂತ 3 ಡಿ.ಸೆ ಕಡಿಮೆ ಆಗಲಿದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆಯನ್ನು (Karnataka Weather Forecast) ನೀಡಿದೆ.
ರಾಜಧಾನಿ ಬೆಂಗಳೂರಲ್ಲಿ ಬೆಳಗ್ಗೆ ಜಾವ ದಟ್ಟ ಮಂಜು ಇರಲಿದ್ದು, ಮಧ್ಯಾಹ್ನ ಬಿಸಿಲು ಹೆಚ್ಚಿರಲಿದೆ. ಗರಿಷ್ಠ ಉಷ್ಣಾಂಶ 33 ಮತ್ತು ಕನಿಷ್ಠ ಉಷ್ಣಾಂಶ 17 ಡಿ.ಸೆ ಇರಲಿದೆ. ಮುಂದಿನ 48 ಗಂಟೆಯಲ್ಲಿ ರಾಜ್ಯಾದ್ಯಂತ ಕೆಲವು ಕಡೆಗಳಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-3 ಡಿ.ಸೆ ಹೆಚ್ಚಾಗುವ ಸಾಧ್ಯತೆ ಇದೆ.
ಪ್ರಮುಖ ನಗರಗಳಲ್ಲಿನ ಇಂದಿನ ತಾಪಮಾನ ಹೀಗಿದೆ.
ನಗರದ ಹೆಸರು- ಗರಿಷ್ಠ ಉಷ್ಣಾಂಶ- ಕನಿಷ್ಠ ಉಷ್ಣಾಂಶ (ಡಿಗ್ರಿ ಸೆಲ್ಸಿಯಸ್)
ಬೆಂಗಳೂರು ನಗರ: 33 ಡಿ.ಸೆ -17 ಡಿ.ಸೆ
ಮಂಗಳೂರು: 34 ಡಿ.ಸೆ – 22 ಡಿ.ಸೆ
ಚಿತ್ರದುರ್ಗ: 34 ಡಿ.ಸೆ – 19 ಡಿ.ಸೆ
ಗದಗ: 35 ಡಿ.ಸೆ – 18 ಡಿ.ಸೆ
ಹೊನ್ನಾವರ: 35 ಡಿ.ಸೆ- 20 ಡಿ.ಸೆ
ಕಲಬುರಗಿ: 36 ಡಿ.ಸೆ – 23 ಡಿ.ಸೆ
ಬೆಳಗಾವಿ: 34ಡಿ.ಸೆ – 19 ಡಿ.ಸೆ
ಕಾರವಾರ: 34 ಡಿ.ಸೆ – 22 ಡಿ.ಸೆ
ಇದನ್ನೂ ಓದಿ: Yuva Nidhi Scheme: ಬೆಳಗಾವಿಯಲ್ಲಿ ಅತಿ ಹೆಚ್ಚು ನಿರುದ್ಯೋಗಿ ಯುವ ಜನತೆ!
ಬೇಸಿಗೆಯಲ್ಲಿ ತಂಪಾಗಿರಲು ಬೇಕು ವಿಟಮಿನ್ ಸಿ
ಬಿಸಿಲ ತಾಪ ಏರುವ ಸೂಚನೆಗಳು ಕಾಣುತ್ತಿದ್ದಂತೆ ಸನ್‌ಬ್ಲಾಕ್, ಕಪ್ಪು ಕನ್ನಡಕ, ಕೊಡೆ ಎಲ್ಲವನ್ನೂ ತೆಗೆದಿರಿಸಿ ಸಜ್ಜಾಗುತ್ತೇವೆ. ಬೆಚ್ಚನೆಯ ಉಣ್ಣೆಯ ಬಟ್ಟೆಗಳನ್ನೆಲ್ಲ ಮೂಲೆ ಸೇರಿಸಿ, ತಂಪಾದ ಹತ್ತಿಯ ಬಟ್ಟೆಗಳನ್ನು ತೆಗೆದಿರಿಸುತ್ತೇವೆ. ಇವೆಲ್ಲ ಸರಿ, ಜೊತೆಗೆ ಬೇಸಿಗೆಯಲ್ಲಿ ದೇಹಕ್ಕೇನು ಬೇಕು ಎಂಬುದನ್ನೂ ಗಮನಿಸಬೇಡವೇ? ʻನಾವು ದಿನಾ ಎಳನೀರು, ಕಬ್ಬಿನ ರಸ, ಫೂಟ್ ಜ್ಯೂಸು ಕುಡೀತಿವಿʼ ಎನ್ನುವವರು ಬೇಕಷ್ಟು ಮಂದಿ ಇರಬಹುದು. ಇವೆಲ್ಲ ಸರಿಯೇ, ಆದರೆ ಸತ್ವಗಳ ದೃಷ್ಟಿಯಿಂದ ನೋಡುವುದಾದರೆ ಬೇಸಿಗೆಯಲ್ಲಿ ನಮ್ಮನ್ನು ಅತಿ ಉಷ್ಣದಿಂದ ಕಾಪಾಡುವುದಕ್ಕೆ ವಿಟಮಿನ್ ಸಿ ಪ್ರಧಾನವಾಗಿ ಬೇಕು. ಏನಂಥ ಮಹತ್ವವಿದೆ ಈ ಸತ್ವದಲ್ಲಿ?
ದೇಹಕ್ಕೆ ಅಗತ್ಯವಾಗಿ ಬೇಕಿರುವ ಪೋಷಕಾಂಶಗಳ ಪಟ್ಟಿಯಲ್ಲಿ ವಿಟಮಿನ್ ಸಿ ಮುಂಚೂಣಿಯಲ್ಲಿದೆ. ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸಲು ಈ ಜೀವಸತ್ವ ಬೇಕು. ಹಾಗಾಗಿ ಕಾಲ ಯಾವುದೇ ಆದರೂ ದೇಹಕ್ಕೆ ಈ ಸತ್ವದ ಕೊರತೆ ಆಗುವಂತಿಲ್ಲ. ಹಾಗಾದರೆ ಅದೊಂದೇ ಕಾರಣಕ್ಕೆ ನಮಗೆ ಸಿ ಜೀವಸತ್ವ ಅಗತ್ಯವೇ? ಇದಲ್ಲದೆ ಇನ್ನೂ ಯಾವೆಲ್ಲಾ ಕಾರಣಗಳಿಗಾಗಿ ವಿಟಮಿನ್ ಸಿ ಬೇಕು? ಇನ್ನೇನೇನು ಕೆಲಸವಿದೆ ಇದಕ್ಕೆ ನಮ್ಮ ದೇಹದಲ್ಲಿ ಎಂಬುದರ ಬಗ್ಗೆ ಒಂದಿಷ್ಟು ಮಾಹಿತಿಯಿದು. ವಾತಾವರಣದಲ್ಲಿರುವ ಅತಿಯಾದ ಹೊಗೆ, ಮಾಲಿನ್ಯದಿಂದ ನಮ್ಮನ್ನು ರಕ್ಷಿಸಲು, ಬಿಸಿಲಿಗೆ ದೇಹ ಸೊರಗದೆ ಇರಲು, ಶರೀರಕ್ಕೆ ಅಗತ್ಯವಾದ ಕೊಲಾಜಿನ್ ಮತ್ತು ಎಲಾಸ್ಟಿನ್ ಉತ್ಪಾದನೆಗೆ ಈ ಪೋಷಕತತ್ವ ಬೇಕು. ಇದಲ್ಲದೆ, ಆಹಾರದಲ್ಲಿರುವ ಕಬ್ಬಿಣದ ಅಂಶವನ್ನು ಹೀರಿಕೊಳ್ಳಲು ದೇಹಕ್ಕೆ ಅನುಕೂಲ ಮಾಡಿಕೊಡುವ ಪಾತ್ರವೂ ಇದೇ ಜೀವಸತ್ವದ್ದು. ಹಾಗಾಗಿ, ನಮ್ಮ ಚರ್ಮ, ಕೂದಲು, ಶ್ವಾಸಕೋಶಗಳನ್ನು ರಕ್ಷಿಸುವುದೇ ಅಲ್ಲದೆ, ಅನೀಮಿಯದಿಂದ ದೂರವಿರಿಸಿ, ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುವ ಮಲ್ಟಿಟಾಸ್ಕಿಂಗ್ ಕೆಲಸ ಇದರದ್ದು. ಇವಿಷ್ಟು ವಿಟಮಿನ್ ಸಿ ಮಾಡುವ ಕೆಲಸದ ಸ್ಥೂಲ ಪರಿಚಯವಾದರೆ, ಇವುಗಳ ವಿವರಗಳು ಇಲ್ಲಿವೆ.
ಬೇಸಿಗೆಯಲ್ಲಿ
ಸೆಖೆಗಾಲದಲ್ಲಿ ತೀಕ್ಷ್ಣವಾಗಿ ಏರುವ ತಾಪಮಾನವನ್ನು ಸಹಿಸಿಕೊಳ್ಳಲು, ಅದಕ್ಕೆ ಹೊಂದಿಕೊಳ್ಳಲು ಅಗತ್ಯ ಸಾಮರ್ಥ್ಯವನ್ನು ದೇಹಕ್ಕೆ ಒದಗಿಸುವಲ್ಲಿ ವಿಟಮಿನ್ ಸಿ ಪ್ರಧಾನ ಭೂಮಿಕೆ ನಿರ್ವಹಿಸುತ್ತದೆ. ಬೆವರು ಹರಿಸುವ ಮೂಲಕ ದೇಹದ ಉಷ್ಣತೆಯನ್ನು ನಿಯಂತ್ರಿಸುತ್ತದೆ. ಬೆವರುಸಾಲೆಯಂಥ ಚರ್ಮದ ಕಿರಿಕಿರಿಗಳನ್ನು ದೂರವಿರಿಸುತ್ತದೆ.
ಬಿಸಿಲ ಕೊಡೆ
ಸೂರ್ಯ ಸ್ನಾನ ಮಾಡುವವರ ಸಂಖ್ಯೆ ಪಶ್ಚಿಮ ದೇಶಗಳಲ್ಲಿ ಬಹಳ ಹೆಚ್ಚು. ವರ್ಷದ ಆರೆಂಟು ತಿಂಗಳು ಚಳಿ ಅಥವಾ ಹಿಮದಲ್ಲೇ ಹುಗಿದುಕೊಂಡಿರುವ ಭೂಭಾಗಗಳ ಜನರಿಗೆ ಬೇಸಿಗೆಯಲ್ಲಿ ಬಿಸಿಲಿಗೆ ಮೊಸಳೆಯಂತೆ ಒಡ್ಡಿಕೊಳ್ಳುವುದು ಬಲುಪ್ರಿಯವಾದ ಸಂಗತಿ. ಆದರೆ ಓಝೋನ್ ಪದರಕ್ಕೆ ಹಾನಿಯಾಗಿ, ಭೂಮಿಗೆ ಅತಿನೇರಳೆ ಕಿರಣಗಳ ದಾಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಈಗೆ ಸೂರ್ಯ ಸ್ನಾನ ಮಾಡಿದವರಲ್ಲಿ ಚರ್ಮದ ಕ್ಯಾನ್ಸರ್ ಕಾಣಿಸಿಕೊಳ್ಳುವುದಿದೆ. ಸೂರ್ಯನ ಬಿಸಿಲಿಗೆ ಹಾನಿಯಾದ ಕೋಶಗಳನ್ನು ಚುರುಕಾಗಿ ಸರಿಪಡಿಸಿ, ಕ್ಯಾನ್ಸರ್ ತಡೆಗಟ್ಟಲು ವಿಟಮಿನ್ ಸಿ ಅವಶ್ಯವಾಗಿ ಬೇಕು.
ಗುಣಪಡಿಸಲು
ಯಾವುದೇ ಗಾಯಗಳು ಗುಣವಾಗುವುದಕ್ಕೆ, ಗಾಯಗೊಂಡ ಕೋಶಗಳನ್ನು ರಿಪೇರಿ ಮಾಡಲು ಸಿ ಜೀವಸತ್ವ ಅಗತ್ಯ. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ದೇಹದ ಹಾನಿ ಸರಿಪಡಿಸಲು ನೆರವಾಗುತ್ತವೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ದೇಹದಲ್ಲಿ ಸುತ್ತುವ ಮುಕ್ತ ಕಣಗಳನ್ನು ನಿರ್ಬಂಧಿಸುತ್ತವೆ. ಇದರಿಂದ ಮಾರಕ ರೋಗಗಳ ದಾಳಿಯ ಸಾಧ್ಯತೆ ಕ್ಷೀಣಿಸುತ್ತದೆ.
ಜೊತೆಗೆ, ಚರ್ಮದ ಆರೋಗ್ಯ ಕಾಪಾಡುವಂಥ ಕೊಲಾಜಿನ್ ಉತ್ಪತ್ತಿಗೆ ಈ ಪೋಷಕಾಂಶ ಪೂರಕ. ಹಾಗಾಗಿ, ಕೂದಲು ಮತ್ತು ಚರ್ಮದ ತೊಂದರೆಗಳು ಶೀಘ್ರವೇ ಗುಣವಾಗುತ್ತವೆ. ಮೂಳೆಗಳು ಮತ್ತು ಕೀಲುಗಳ ನಡುವಿನ ಕೋಶಗಳು- ಇವೆಲ್ಲವುಗಳು ಆರೋಗ್ಯಕರವಾಗಿ ಇರುವುದಕ್ಕೆ ದೇಹದಲ್ಲಿ ಸಾಕಷ್ಟು ಎಲಾಸ್ಟಿನ್ ಮತ್ತು ಕೊಲಾಜಿನ್ ತಯಾರಾಗಲೇ ಬೇಕು. ಕೊಲಾಜಿನ್ ಕಡಿಮೆಯಾದರೆ ಮಂಡಿ ಕೀಲುಗಳ ಸವೆತ, ಚರ್ಮ ಸುಕ್ಕಾಗುವುದು, ಕೂದಲು ಉದುರುವುದು ಇತ್ಯಾದಿ ಸಮಸ್ಯೆಗಳು ಗಂಟಾಗುತ್ತವೆ.
ಹೇಗೆ ದೊರೆಯುತ್ತದೆ?
ದಿನನಿತ್ಯ ಸೇವಿಸುವ ಹಣ್ಣು ತರಕಾರಿಗಳಲ್ಲೇ ಸಿ ಜೀವಸತ್ವ ಹೇರಳವಾಗಿದೆ. ನಿಂಬೆ, ಕಿತ್ತಳೆ, ದ್ರಾಕ್ಷಿಯಂಥ ಹುಳಿ ಹಣ್ಣುಗಳು, ಸೇಬು, ಕಿವಿ, ಅನಾನಸ್, ಪಪ್ಪಾಯಿ, ದಪ್ಪ ಮೆಣಸಿನ ಕಾಯಿ ಇತ್ಯಾದಿಗಳನ್ನು ಸೇವಿಸುವುದರಿಂದ ವಿಟಮಿನ್ ಸಿ ಪಡೆಯಬಹುದು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ