Site icon Vistara News

Karnataka Weather : ಇನ್ನೆರಡು ದಿನಗಳು ರಾಜ್ಯಾದ್ಯಂತ ಸೆಕೆ ಟೈಂ; ತಾಪಮಾನ ಎಚ್ಚರಿಕೆ

karnataka Weather Forecast

ಬೆಂಗಳೂರು: ಮುಂದಿನ 48 ಗಂಟೆಯಲ್ಲಿ ರಾಜ್ಯಾದ್ಯಂತ ಶುಷ್ಕ ವಾತಾವರಣವೇ (Dry weather) ಇರಲಿದೆ. ಈ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka weather Forecast) ನೀಡಿದೆ.

ಶುಕ್ರವಾರದಂದು ರಾಜ್ಯಾದ್ಯಂತ ಒಣ ಹವೆ ಇತ್ತು. ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಕನಿಷ್ಠ ಉಷ್ಣಾಂಶ 15.6 ಡಿ.ಸೆ ದಾಖಲಾಗಿತ್ತು. ಕರಾವಳಿ ಹಾಗೂ ಒಳನಾಡಿನ ಬಹುತೇಕ ಕಡೆಗಳಲ್ಲಿ ಕನಿಷ್ಠ ಉಷ್ಣಾಂಶವು 2-3 ಡಿ.ಸೆ ಏರಿಕೆ ಆಗಿತ್ತು. ಗರಿಷ್ಠ ಉಷ್ಣಾಂಶ ಬಾಗಲಕೋಟೆಯಲ್ಲಿ 34.4 ಡಿ.ಸೆ ದಾಖಲಾಗಿತ್ತು. ರಾಜ್ಯಾದ್ಯಂತ ಗರಿಷ್ಠ ಉಷ್ಣಾಂಶವು ವಾಡಿಕೆಗಿಂತ 2-3 ಡಿ.ಸೆ ಹೆಚ್ಚಾಗಿತ್ತು.

ಬೆಂಗಳೂರಲ್ಲಿ ಆವರಿಸಲಿದೆ ದಟ್ಟ ಮಂಜು

ರಾಜಧಾನಿ ಬೆಂಗಳೂರು ಸುತ್ತಮುತ್ತ ಬೆಳಗಿನ ಜಾವ ದಟ್ಟ ಮಂಜು ಮುಸುಕುವ ಸಾಧ್ಯತೆ ಇದೆ. ನಂತರ ನಿರ್ಮಲ ಆಕಾಶ ಇರಲಿದೆ. ಗರಿಷ್ಠ ಉಷ್ಣಾಂಶ 29 ಮತ್ತು ಕನಿಷ್ಠ ಉಷ್ಣಾಂಶ 17 ಡಿ.ಸೆ ಇರಲಿದೆ.

ತಾಪಮಾನ ಮುನ್ಸೂಚನೆ

ಮುಂದಿನ ಎರಡು ದಿನಗಳು ರಾಜ್ಯಾದ್ಯಂತ ಕೆಲವು ಕಡೆಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್‌ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ಇದರಿಂದಾಗಿ ಇನ್ನೆರಡು ದಿನಗಳು ಸೆಕೆ ವಾತಾವರಣ ಇರಲಿದೆ.

ಇದನ್ನೂ ಓದಿ: Ram Mandir: ಆಪ್​ ನಿರ್ಧಾರ ಧಿಕ್ಕರಿಸಿ ರಾಮಮಂದಿರಕ್ಕೆ ಹೊರಟ ಸಂಸದ ಹರ್ಭಜನ್​ ಸಿಂಗ್​

ಥೈರಾಯ್ಡ್‌ ಜಾಗೃತಿ ಮಾಸ; ಏರುಪೇರಾಗದಿರಲಿ ಗಂಟಲಿನ ಪುಟ್ಟ ಚಿಟ್ಟೆ

ಚಳಿಗಾಲದಲ್ಲಿ ದೇಹದ ಹಲವಾರು ವಿಷಯಗಳು ಏರುಪೇರಾಗುವುದು ಸಹಜ. ಅಂಥ ಹಲವು ವಿಷಯಗಳಲ್ಲಿ ಥೈರಾಯ್ಡ್‌ ಗ್ರಂಥಿಯ ಚಟುವಟಿಕೆಯೂ ಸೇರಿದ್ದರೆ ಅಚ್ಚರಿಯಿಲ್ಲ. ಥೈರಾಯ್ಡ್‌ ಮಟ್ಟ ನಿಯಂತ್ರಣದಲ್ಲಿದೆ ಎಂದುಕೊಂಡವರಿಗೂ ಸೋಜಿಗವಾಗುವಂತೆ, ಚಳಿಗಾಲದಲ್ಲಿ ತಪಾಸಣೆ ಮಾಡಿಸಿದಾಗ ಥೈರಾಯ್ಡ್‌ ಆಚೀಚೆ ಆಗಿರುವುದು ತಿಳಿದಿರಬಹುದು. ಹೀಗೇಕಾಗುತ್ತದೆ? ಅದರಲ್ಲೂ ಜನವರಿ ತಿಂಗಳನ್ನು ಥೈರಾಯ್ಡ್‌ ಜಾಗೃತಿ (Thyroid Awareness Month) ಮಾಸವೆಂದು ಗುರುತಿಸಿರುವ ಹಿನ್ನೆಲೆಯಲ್ಲಿ, ಗಂಟಲಲ್ಲಿರುವ ಚಿಟ್ಟೆಯಾಕಾರದ ಈ ಪುಟ್ಟ ಗ್ರಂಥಿಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬೇಕಾದ್ದು ಅಗತ್ಯ.

ದೇಹಕ್ಕೆ ಬೇಕಾದಷ್ಟು ಚೋದಕಗಳನ್ನು ಗ್ರಂಥಿಯು ಉತ್ಪಾದಿಸುತ್ತಿಲ್ಲ ಎಂದಾದರೆ ಅದನ್ನು ಹೈಪೊಥೈರಾಯ್ಡ್‌ ಎನ್ನಲಾಗುತ್ತದೆ. ಅಗತ್ಯಕ್ಕಿಂತ ಹೆಚ್ಚಿನ ಚೋದಕಗಳನ್ನು ಗ್ರಂಥಿ ಸ್ರವಿಸುತ್ತಿದ್ದರೆ ಅದನ್ನು ಹೈಪರ್‌ಥೈರಾಯ್ಡ್‌ ಎನ್ನಲಾಗುತ್ತದೆ. ಈ ಎರಡೂ ಅವಸ್ಥೆಗಳು ದೇಹಕ್ಕೆ ನಾನಾ ಸಮಸ್ಯೆಗಳನ್ನು ತಂದೊಡ್ಡುತ್ತವೆ. ದೇಹದ ಸಾಮಾನ್ಯ ಚಟುವಟಿಕೆಗೆ ಅಗತ್ಯವಾದಷ್ಟೇ ಚೋದಕಗಳನ್ನು ಈ ಗ್ರಂಥಿ ಸ್ರವಿಸುತ್ತಿದ್ದರೆ, ಶರೀರದ ಬಹಳಷ್ಟು ಕ್ರಿಯೆಗಳು ಸರಾಗ ನಡೆಯುತ್ತವೆ.

ಚಳಿಗಾಲದಲ್ಲಿ ವ್ಯತ್ಯಾಸವೇಕೆ?

ಥೈರಾಯ್ಡ್‌ ಕೆಲಸ ಸರಿಯಾಗಿ ಇರುವವರಲ್ಲೂ ಚಳಿಗಾಲದಲ್ಲಿ ಕೊಂಚ ಏರುಪೇರು ದಾಖಲಾದರೆ ಹುಬ್ಬೇರಿಸಬೇಕಿಲ್ಲ. ತಪಾಸಣೆಯಲ್ಲಿ ಟಿಎಸ್‌ಎಚ್‌ ಮಟ್ಟ ಹೆಚ್ಚಿರುವುದು ಕಂಡುಬರಬಹುದು. ದೇಹದ ಚಯಾಪಚಯವನ್ನು ನಿರ್ವಹಿಸಲು ಹೆಚ್ಚಿನ ಹಾರ್ಮೋನುಗಳು ಚಳಿಗಾಲದಲ್ಲಿ ಅಗತ್ಯ. ಜತೆಗೆ, ದೇಹದ ಆಂತರಿಕ ಉಷ್ಣತೆಯನ್ನು ಕಾಪಾಡಿಕೊಳ್ಳುವುದಕ್ಕೂ ಇವುಗಳ ನೆರವು ಬೇಕು.

ಈ ಕಾರಣಗಳಿಗೆ ಚಳಿಯ ವಾತಾವರಣದಲ್ಲಿ ಗ್ರಂಥಿಯ ಚಟುವಟಿಕೆ ಏರುಪೇರಾಗುವುದು ಹೌದು. ಅದರಲ್ಲೂ ದೇಹದ ಚಯಾಪಚಯ ನಿರ್ವಹಿಸುವ ಟಿ೩ ಮತ್ತು ಟಿ೪ ಚೋದಕಗಳಲ್ಲಿ ಹೆಚ್ಚಳ ಕಂಡುಬರುತ್ತದೆ.
ಇದು ಸಾಲದೆಂಬಂತೆ, ಋತುಮಾನಕ್ಕೆ ತಕ್ಕಂತೆ ನಮ್ಮ ಆಹಾರಕ್ರಮಗಳಲ್ಲಿ ಬದಲಾವಣೆ ಮಾಡಿಕೊಳ್ಳುತ್ತೇವೆ. ಇದರಿಂದ ಥೈರಾಯ್ಡ್‌ ಕೆಲಸದಲ್ಲಿ ಏರಿಳಿತವಾಗಬಹುದು.

ಚಳಿಗಾಲದ ವೈರಸ್‌ ಸೋಂಕುಗಳು ಥೈರಾಯ್ಡ್‌ ಚಟಿವಟಿಕೆಯಲ್ಲಿ ವ್ಯತ್ಯಾಸ ತರಬಹುದು. ಬಿಸಿಲು ಕಡಿಮೆಯಿರುವ ದಿನಗಳು ಎದುರಾದರೆ, ದೇಹದ ಆಂತರಿಕ ಗಡಿಯಾರ ಅಥವಾ ಸರ್ಕೇಡಿಯನ್‌ ರಿದಂ ವ್ಯತ್ಯಾಸವಾಗುತ್ತದೆ. ಇದೂ ಸಹ ಥೈರಾಯ್ಡ್‌ ಚಟುವಟಿಕೆಯ ಮೇಲೆ ಪರಿಣಾಮ ಬೀರಬಹುದು. ಮಲಬದ್ಧತೆ, ಖಿನ್ನತೆ, ದೇಹದ ಚಟುವಟಿಕೆ ನಿಧಾನವಾಗುವುದು, ತೂಕದಲ್ಲಿ ಏರಿಳಿತ, ದೇಹದಲ್ಲೆಲ್ಲ ನೋವು, ಸುಸ್ತು, ಚಳಿಯ ಅನುಭವ- ಇಂಥ ಹಲವು ಲಕ್ಷಣಗಳಿದ್ದರೆ ಥೈರಾಯ್ಡ್‌ ತಪಾಸಣೆ ಮಾಡಿಸಿಕೊಳ್ಳಬೇಕಾದ್ದು ಅಗತ್ಯ.

ಯಾರಿಗೆ ತೊಂದರೆ ಹೆಚ್ಚು?

ಥೈರಾಯ್ಡ್‌ ಸಮಸ್ಯೆಗಳು ಯಾರಲ್ಲೂ ಕಾಣಿಸಿಕೊಳ್ಳಬಹುದು. ಆದರೆ ಕೆಲವರಲ್ಲಿ ಇದರ ಸಂಭವನೀಯತೆ ಹೆಚ್ಚು. ಪುರುಷರಿಗಿಂತ ಮಹಿಳೆಯರಲ್ಲಿ ಈ ಸಮಸ್ಯೆಗಳು ಹೆಚ್ಚು. ವಯಸ್ಸು ಹೆಚ್ಚಿದಂತೆ ಥೈರಾಯ್ಡ್ ತೊಂದರೆಗಳು ತಲೆದೋರುವ‌ ಪ್ರಮಾಣ ಹೆಚ್ಚು. ಕುಟುಂಬದಲ್ಲಿ ಥೈರಾಯ್ಡ್‌ ಸಮಸ್ಯೆಗಳಿದ್ದರೆ, ಆನುವಂಶಿಕವಾಗಿ ಇದು ಮುಂದುವರಿದು ಬರಬಹುದು.

ಈ ವಿಷಯದಲ್ಲಿ ಮಹಿಳೆ, ಪುರುಷ ಎಂಬ ಭೇದವಿಲ್ಲ. ಗ್ರೇವ್‌ ಅಥವಾ ಹಶಿಮೊಟೊದಂಥ ಅಟೋಇಮ್ಯೂನ್‌ ರೋಗಗಳು ಥೈರಾಯ್ಡ್‌ ಸಮಸ್ಯೆಗಳನ್ನು ತಂದಿಕ್ಕಬಹುದು. ಅಯೋಡಿನ್‌ ಕೊರತೆ ಇದ್ದರೆ ಥೈರಾಯ್ಡ್‌ ಸಮಸ್ಯೆ ಬೆನ್ನು ಬೀಳುವುದು ಸಾಮಾನ್ಯ. ವಿಕಿರಣಗಳಿಗೆ ತೆರೆದುಕೊಳ್ಳುವುದು. ಕೆಲವು ಔಷಧಿಗಳು ಮತ್ತು ಕುತ್ತಿಗೆಯ ಶಸ್ತ್ರ ಚಿಕಿತ್ಸೆಗಳು ಈ ಸಮಸ್ಯೆಗೆ ನಾಂದಿ ಹಾಡಬಹುದು. ಗರ್ಭಾವಸ್ಥೆಯೂ ಕೆಲವೊಮ್ಮೆ ಇದಕ್ಕೆ ಕಾರಣವಾದೀತು. ಹೀಗೆ ಥೈರಾಯ್ಡ್‌ ಏರುಪೇರಿಗೆ ಬಹಳಷ್ಟು ಕಾರಣಗಳಿವೆ.

ಥೈರಾಯ್ಡ್‌ ಸಮಸ್ಯೆ ತಲೆದೋರಿದರೆ, ಇದರಿಂದ ದೇಹದ ಮೇಲೆ ಆಗುವಂಥ ಪರಿಣಾಮಗಳು ದೂರಗಾಮಿ ಮತ್ತು ಗಂಭೀರ ಸ್ವರೂಪದವು. ಆರಂಭಿಕ ಲಕ್ಷಣಗಳಾಗಿ ಮಲಬದ್ಧತೆ, ಖಿನ್ನತೆ, ದೇಹದ ಚಟುವಟಿಕೆ ನಿಧಾನವಾಗುವುದು, ತೂಕದಲ್ಲಿ ಏರಿಳಿತ, ದೇಹದಲ್ಲೆಲ್ಲ ನೋವು, ಸುಸ್ತು ಇಂಥವು ಕಾಣಿಸಿಕೊಳ್ಳುತ್ತವೆ. ಕ್ರಮೇಣ ಫಲವಂತಿಕೆ ಕುಸಿತ, ಗರ್ಭಾವಸ್ಥೆಯಲ್ಲಿ ಅಪಾಯಗಳು ಎದುರಾಗುವುದು, ತೂಕ ಮತ್ತು ಕೊಲೆಸ್ಟ್ರಾಲ್‌ ಹೆಚ್ಚಳ, ಹೃದಯದ ತೊಂದರೆ ಮುಂತಾದವು ಎದುರಾಗುತ್ತವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version