Site icon Vistara News

Karnataka Weather : ತಲೆನೋವು ತಂದ ರಾತ್ರಿ ಚಳಿ; ಈ ವಾರವೆಲ್ಲ ಶುಷ್ಕ ವಾತಾವರಣ

Mist very likely during early morning hours in some areas Dry weather likely to prevail over

ಬೆಂಗಳೂರು: ರಾತ್ರಿಯಿಂದ ಬೆಳಗಿನ ಜಾವದವರೆಗೆ ಚುಮು ಚುಮು ಚಳಿಯು ತಲೆನೋವು ತಂದರೆ, ಇತ್ತ ಮಧ್ಯಾಹ್ನ ಆಗುತ್ತಿದ್ದಂತೆ ಸೂರ್ಯ ನೆತ್ತಿಗೆ ಬಂದು ಸುಡುತ್ತಿದ್ದಾನೆ. ಮುಂದಿನ 24 ಗಂಟೆಯಲ್ಲಿ ರಾಜ್ಯಾದ್ಯಂತ ಒಣ ಹವೆ (Dry Weather) ಇರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (Karnataka Weather Forecast) ಮುನ್ಸೂಚನೆಯನ್ನು ನೀಡಿದೆ.

ರಾಜ್ಯದಲ್ಲಿ ಸೋಮವಾರವು ಒಣಹವೆ ಇತ್ತು. ಅತೀ ಕಡಿಮೆ ಕನಿಷ್ಠ ಉಷ್ಣಾಂಶವು 13.4 ಡಿ.ಸೆ. ವಿಜಯಪುರದಲ್ಲಿ ದಾಖಲಾಗಿತ್ತು. ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಖ್ಯವಾಗಿ ಆಕಾಶವು ನಿರ್ಮಲವಾಗಿರುತ್ತದೆ. ಕೆಲವು ಕಡೆಗಳಲ್ಲಿ ಬೆಳಗಿನ ಜಾವ ಮಂಜು ಮುಸುಕುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

drinking water

ಬೆಳಗಿನ ಜಾವ ಹಾಗೂ ರಾತ್ರಿಯಂದು ಚಳಿಯು ಹೆಚ್ಚಿರಲಿದೆ. ಆದರೆ ಮಧ್ಯಾಹ್ನದ ಹೊತ್ತು ಬಿಸಿಲು ಹೆಚ್ಚಿರಲಿದೆ. ಗರಿಷ್ಠ ಉಷ್ಣಾಂಶ 30 ಮತ್ತು ಕನಿಷ್ಠ ಉಷ್ಣಾಂಶ 16 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಇದನ್ನೂ ಓದಿ: Operation Elephant : ಬೀಟಮ್ಮ ಗುಂಪನ್ನು ಬೀಟ್‌ ಮಾಡಲು ಎಂಟ್ರಿ ಕೊಟ್ಟ ಅಭಿಮನ್ಯು ಟೀಂ

ಚಳಿಯಿಂದ ಬೇಸಿಗೆಯತ್ತ: ಆಹಾರ ಹೇಗಿರಬೇಕು?

ಚಳಿಗಾಲ ಇನ್ನೇನು ಮುಗಿಯುತ್ತಾ ಬಂತು. ತಾಪಮಾನ ನಿಧಾನಕ್ಕೆ ಏರುತ್ತದೆ. ರಾತ್ರಿ ಚಳಿಯಿದ್ದರೂ, ಹಗಲಿಗೆ ಬಿಸಿಲು ಏರುತ್ತಾ ಹೋಗಬಹುದು (Winter transitions to summer) ಇನ್ನು ಕೆಲವೇ ದಿನಗಳಲ್ಲಿ. ಹೀಗೆ ಇಂದು ಋತುವಿನಿಂದ ಇನ್ನೊಂದು ಋತುವಿಗೆ ದಾಟುವ ಸಂಕ್ರಮಣ ಕಾಲದಲ್ಲಿ ನಮ್ಮ ಆರೋಗ್ಯ ರಕ್ಷಣೆಗೆ ನಾವು ಮಾಡಬೇಕಾದ ಕೆಲಸಗಳೇನು? ನಮ್ಮ ಆಹಾರದಲ್ಲಿ ಮಾಡಿಕೊಳ್ಳಬೇಕಾದ ಬದಲಾವಣೆಗಳೇನು? ಬಿಸಿಲು ಹೆಚ್ಚುತ್ತಾ ಹೋದಂತೆ ನಮ್ಮ ಹಸಿವೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಬಹುದು. ತಿನ್ನುವುದಕ್ಕಿಂತ ತಂಪಾಗಿ ಏನನ್ನಾದರೂ ಕುಡಿಯುವುದನ್ನು ನಮ್ಮ ದೇಹ ಬಯಸುವುದು ಸಹಜ. ಇದಕ್ಕೆ ತಕ್ಕಂತೆ, ನಮ್ಮ ಜೀರ್ಣಾಂಗಗಳಲ್ಲಿರುವ ಬ್ಯಾಕ್ಟೀರಿಯಗಳಲ್ಲೂ ವ್ಯತ್ಯಾಸ ಕಾಣಬಹುದು. ಹಾಗಾಗಿ ಋತುಮಾನಕ್ಕೆ ತಕ್ಕ ಆಹಾರಗಳನ್ನು ನಾವು ಸೇವಿಸದಿದ್ದರೆ ಹೊಟ್ಟೆ ಮಗುಚುವುದು ಖಚಿತ. ಹಾಗಾದರೆ ಹವಾಮಾನ ಬದಲಾವಣೆಯ ಸಂಕ್ರಮಣ ಕಾಲದಲ್ಲಿ ಹೊಟ್ಟೆಯ ಆರೋಗ್ಯ ಕಾಪಾಡುವಂಥ ಆಹಾರಗಳು ಯಾವುದು?

ನಾರು ಹೆಚ್ಚಿರಲಿ

ಇನ್ನು ಸ್ವಲ್ಪ ದಿನಗಳಲ್ಲಿ ಎಲ್ಲೆಡೆ ಎಳೆ ಹಸಿರು ಕಾಣತೊಡಗುತ್ತದೆ. ಇಂಥ ಚಿಗುರುವ ಕಾಲದಲ್ಲಿ ಸೊಪ್ಪುಗಳು ಮತ್ತು ನಾರುಭರಿತ ತರಕಾರಿಗಳು ಧಾರಾಳವಾಗಿ ದೊರೆಯುತ್ತವೆ. ದಾಕ್ಷಿಣ್ಯ ಬಿಟ್ಟು ತಿನ್ನಿ ಅವುಗಳನ್ನು. ಈವರೆಗೆ ಋತುವಿನಲ್ಲಿ ಪಿಷ್ಟ ಪ್ರಧಾನವಾದ ತರಕಾರಿಗಳು, ಅಂದರೆ ನಾನಾ ಬಗೆಯ ಕಾಳುಗಳು, ಗೆಣಸು, ಶೇಂಗಾ- ಇಂಥವೆಲ್ಲ ಹೆಚ್ಚಾಗಿ ದೊರೆಯುತ್ತಿದ್ದವು. ಚಳಿಗಾಲಕ್ಕೆ ಅಂತಹ ಆಹಾರಗಳ ಅಗತ್ಯವಿತ್ತು. ಆದರೆ ಬೇಸಿಗೆಯತ್ತ ಹೊರಳುವಾಗ ಪಿಷ್ಟಭರಿತ ಆಹಾರಗಳನ್ನು ನಿಧಾನಕ್ಕೆ ಕಡಿಮೆ ಮಾಡಿ, ನಾರು ಹೆಚ್ಚಿಸಿ.

ಹಣ್ಣುಗಳು

ಚಳಿಗಾಲದಲ್ಲಿ ದೊರೆಯುವ ಹಣ್ಣುಗಳಿಗಿಂತ ಬೇಸಿಗೆ ಹಣ್ಣುಗಳಲ್ಲಿ ನೀರು ಹೆಚ್ಚಿರುತ್ತದೆ. ತರಹೇವಾರಿ ಮೆಲನ್‌ಗಳು, ಕಲ್ಲಂಗಡಿಯಂಥವು ಇನ್ನು ಮಾರುಕಟ್ಟೆಯಲ್ಲಿ ಕಾಣಲಾರಂಭಿಸುತ್ತವೆ. ಕ್ರಮೇಣ ಇಂಥ ಹಣ್ಣುಗಳನ್ನು ತಿನ್ನುವುದು ಸೂಕ್ತ. ಆದರೆ ಯಾವುದೇ ಬದಲಾವಣೆಯನ್ನು ದಿಢೀರ್‌ ಮಾಡಬೇಡಿ, ಇದರಿಂದ ಆರೋಗ್ಯ ಏರುಪೇರಾಗಬಹುದು. ಕ್ರಮೇಣ ಜಾರಿಗೆ ತನ್ನಿ.

ಪ್ರೊಬಯಾಟಿಕ್

ಈ ಆಹಾರಗಳಿಗೆ ಮಾತ್ರ ಕಾಲದ ಹಂಗಿಲ್ಲ. ಯಾವುದೇ ಋತುಮಾನದಲ್ಲಾದರೂ ಪ್ರೊಬಯಾಟಿಕ್‌ ಆಹಾರಗಳು ಜೀರ್ಣಾಂಗಗಳ ಆರೋಗ್ಯ ಕಾಪಾಡಲು ಅಗತ್ಯವಾಗುತ್ತವೆ. ಹುದುಗು ಬಂದಂಥ ಮೊಸರು, ಮಜ್ಜಿಗೆಯಂಥವು, ನೆನೆದು ಉಬ್ಬಿದ ಮೊಳಕೆ ಕಾಳುಗಳಂಥವು ಎಲ್ಲಾ ಕಾಲಗಳಲ್ಲೂ ನಮ್ಮ ಹೊಟ್ಟೆಯಲ್ಲಿನ ಬ್ಯಾಕ್ಟೀರಿಯಗಳ ಸಮತೋಲನಕ್ಕೆ ಅಗತ್ಯ. ಇದರಿಂದ ಅಜೀರ್ಣ, ಆಸಿಡಿಟಿ, ಹೊಟ್ಟೆಯುಬ್ಬರಗಳನ್ನು ತಡೆಯಬಹುದು.

ಇಡೀ ಧಾನ್ಯಗಳು

ಚಳಿಗಾಲದಲ್ಲಿ ಸಿರಿ ಧಾನ್ಯಗಳು, ಗೋದಿ ನುಚ್ಚು, ಕೆಂಪಕ್ಕಿ ಮುಂತಾದ ಇಡೀ-ಧಾನ್ಯಗಳತ್ತ ಚಿತ್ತ ಹರಿಸಿದ್ದರೆ, ಬೇಸಿಗೆಯಲ್ಲಿ ಕಿನೊವಾ, ಬಾರ್ಲಿ, ಕುಚ್ಚಲಕ್ಕಿಯಂಥ ತಂಪಾಗಿಸುವ ಇಡೀ- ಧಾನ್ಯಗಳತ್ತ ಗಮನ ನೀಡಬಹುದು. ಇವುಗಳಿಂದ ದೇಹಕ್ಕೆ ಅಗತ್ಯವಾದ ನಾರು ಮತ್ತು ಸೂಕ್ಷ್ಮ ಪೋಷಕಾಂಶಗಳು ದೊರೆಯುವುದರ ಜೊತೆಗೆ, ಜೀರ್ಣಾಂಗಗಳ ಸುಸ್ಥಿತಿಯಲ್ಲಿ ಇರುತ್ತವೆ.

ನೀರು

ಇದನ್ನಂತೂ ಹೇಳುವ ಅಗತ್ಯವಿಲ್ಲ ಎಂದುಕೊಂಡರೂ, ಮರೆಯುವವರೇ ಹೆಚ್ಚು. ಆದರೊಂದು, ಬೇಸಿಗೆಯಲ್ಲಿ ದೇಹ ತಾನಾಗಿಯೇ ನೀರು ಕೇಳುತ್ತದೆ, ಚಳಿಗಾಲದಂತಲ್ಲ. ಇದರ ಫಲವಾಗಿ, ಅತಿಯಾಗಿ ನೀರು ಕುಡಿದು ತಿನ್ನುವುದಕ್ಕೆ ಹೊಟ್ಟೆಯಲ್ಲಿ ಜಾಗವಿಲ್ಲದೆ ದಣಿಯಬೇಕಾಗುತ್ತದೆ. ಹಾಗಾಗಿ ದ್ರವಾಹಾರ ಸೇವನೆಯ ಕ್ರಮ ಸರಿಯಾಗಿ ರೂಢಿಸಿಕೊಳ್ಳಿ. ಜೊತೆಗೆ ಸೌತೇಕಾಯಿ, ದಾಳಿಂಬೆ, ಕಿತ್ತಳೆ ಮುಂತಾದ ನೀರುಭರಿತ ಆಹಾರಗಳನ್ನೂ ಸೇವಿಸಿ.

ಲೀನ್‌ ಪ್ರೊಟೀನ್‌

ಈ ವಿಷಯವೂ ವರ್ಷವಿಡೀ ವ್ಯತ್ಯಾಸವಾಗುವುದಿಲ್ಲ. ಅತಿಯಾದ ಕೊಬ್ಬಿರುವ ಪ್ರೊಟೀನ್‌ಗಳು ಎಲ್ಲಾ ಋತುವಿನಲ್ಲೂ ಕಾಟವನ್ನೇ ಕೊಡುತ್ತವೆ. ಬದಲಿಗೆ, ಕಡಿಮೆ ಕೊಬ್ಬಿರುವ ಲೀನ್‌ ಪ್ರೊಟೀನ್‌ ಆಯ್ಕೆ ಮಾಡಿಕೊಳ್ಳಿ. ಮೊಟ್ಟೆ, ಮೀನು, ಚಿಕನ್‌ನಂಥವು ಅಥವಾ ಸಸ್ಯಜನ್ಯ ತೋಫು, ಮೊಳಕೆ ಕಾಳುಗಳು, ಬೀಜಗಳಂಥವು ಈ ವಿಷಯದಲ್ಲಿ ಉತ್ತಮ ಆಯ್ಕೆ. ಬೀಜಗಳನ್ನಾದರೂ ನೆನೆಸಿ ತಿಂದರೆ,ಸತ್ವಗಳನ್ನು ಹೀರಿಕೊಳ್ಳುವುದಕ್ಕೆ ಸುಲಭವಾಗುತ್ತದೆ ದೇಹಕ್ಕೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version