Site icon Vistara News

Karnataka weather : ಮತ್ತೆ ಶುರುವಾಗುತ್ತಾ ಮಳೆ ಅಬ್ಬರ? ವಾರಾಂತ್ಯದಲ್ಲಿ ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

Karnataka weather Forecast

ಬೆಂಗಳೂರು: ಮುಂದಿನ 48 ಗಂಟೆಯಲ್ಲಿ ರಾಜ್ಯಾದ್ಯಂತ ಒಣ ಹವೆ (Dry Weather) ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ (Karnataka weather Forecast) ಮುನ್ಸೂಚನೆಯನ್ನು ನೀಡಿದೆ. ಪೂರ್ವ ದಿಕ್ಕಿನಿಂದ ಬೀಸುತ್ತಿರುವ ಗಾಳಿಯಲ್ಲಿ ಟ್ರಫ್‌ವೊಂದು ಎದ್ದಿದೆ. ಇದರ ಪ್ರಭಾವ ಇದ್ದರೂ ರಾಜ್ಯದಲ್ಲಿ ಯಾವುದೇ ಮಳೆಯಾಗುವ ಸಾಧ್ಯತೆ (Rain News) ಇಲ್ಲ. ಬದಲಿಗೆ ಮುಂದಿನ ದಿನಗಳು ಶುಷ್ಕ ವಾತಾವರಣವೇ ಇರಲಿದೆ ಎಂದು ತಜ್ಞರು ಮಾಹಿತಿ ನೀಡಿದ್ದಾರೆ.

ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ರಾಜಧಾನಿ ಬೆಂಗಳೂರಲ್ಲಿ ಇನ್ನೆರಡು ದಿನಗಳು ಮೋಡ ಕವಿದ ವಾತಾವರಣ ಇರಲಿದೆ. ಮುಂಜಾನೆ ಸಮಯ ದಟ್ಟ ಮಂಜು ಆವರಿಸಲಿದೆ. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಜು ಬೀಳಲಿದೆ. ಗರಿಷ್ಠ ಉಷ್ಣಾಂಶ 29 ಹಾಗೂ ಕನಿಷ್ಠ ಉಷ್ಣಾಂಶ 17 ಡಿ.ಸೆ ಇರಲಿದೆ.

ಕಾರವಾರದಲ್ಲಿ ತಾಪಮಾನ ಏರಿಕೆ

ರಾಜ್ಯದಲ್ಲಿ ಶುಕ್ರವಾರದಂದು ಒಣ ಹವೆ ಮೇಲುಗೈ ಸಾಧಿಸಿತ್ತು. ಕನಿಷ್ಠ ಉಷ್ಣಾಂಶವು ವಿಜಯಪುರದಲ್ಲಿ 12.2 ಡಿ.ಸೆ ಹಾಗೂ ಧಾರವಾಡದಲ್ಲಿ 27.2 ಡಿ.ಸೆ ದಾಖಲಾಗಿತ್ತು. ಗರಿಷ್ಠ ಉಷ್ಣಾಂಶವು ಕಾರವಾರದಲ್ಲಿ 34.2 ಡಿ.ಸೆ ದಾಖಲಾಗಿತ್ತು.

ಇದನ್ನೂ ಓದಿ: JSS Hospital : ಅಯೋಧ್ಯಾ ಸಂಭ್ರಮೋತ್ಸವ; ಜೆಎಸ್‌ಎಸ್‌ ಆಸ್ಪತ್ರೆಯಲ್ಲಿ ಗರ್ಭಿಣಿಯರಿಗೆ ಫ್ರೀ ಟ್ರೀಟ್ಮೆಂಟ್‌

ಚಳಿಗಾಲದಲ್ಲಿ ದೊರೆಯುವ ಕಿವಿ ಹಣ್ಣನ್ನು ಏಕೆ ತಿನ್ನಬೇಕೆಂದರೆ…

ಮೈಯೆಲ್ಲಾ ರೋಮವಿರುವಂತೆ ಕಾಣುವ, ಕಂದು ಬಣ್ಣದ ಪುಟ್ಟ ಹಣ್ಣು ಕಿವಿ. ಚಳಿಗಾಲದ ಋತುವಿನಲ್ಲಿ ದೊರೆಯುವ ಈ ಹಣ್ಣನ್ನು ಒಳಗೆ ಕತ್ತರಿಸಿದರೆ, ಕಡು ಹಸಿರು ಬಣ್ಣದ ತಿರುಳು ದೊರೆಯುತ್ತದೆ. ಇದರಲ್ಲೇ ಪುಟ್ಟ ಕಪ್ಪುವರ್ಣದ ಬೀಜಗಳನ್ನು ಕಾಣಬಹುದು. ಪೂರ್ಣ ಕಳಿತು ಹಣ್ಣಾದರೆ ಸಕ್ಕರೆಯಂಥ ಸಿಹಿ, ಇಲ್ಲದಿದ್ದರೆ ಹುಚ್ಚು ಹುಳಿ! ಹಾಗಾಗಿ ಕಿವಿ ಹಣ್ಣುಗಳನ್ನು ಚೆನ್ನಾಗಿ ಮಾಗಿಸಿಕೊಂಡು ತಿಂದವರಷ್ಟೇ ಬಲ್ಲರು ಅದರ ಸವಿಯ. ಹೆಚ್ಚಿನವರಿಗೆ ಕಿವಿಯೆಂದರೆ ಹುಳಿ ಹಣ್ಣೆಂದೇ ಮುಖ ಕಿವುಚುವಂತಾಗುತ್ತದೆ. ಚಳಿಗಾಲದಲ್ಲಿ ಈ ಹಣ್ಣನ್ನು ತಿನ್ನಲೇಬೇಕೆನ್ನುವುದಕ್ಕೆ ಕಾರಣ ಇದರಲ್ಲಿರುವ ಸತ್ವಗಳು. ವಿಟಮಿನ್‌ ಸಿ ಭರಪೂರ ಇರುವ ಈ ಹಣ್ಣಿನಲ್ಲಿ ಉತ್ಕರ್ಷಣ ನಿರೋಧಕಗಳು ಸಾಂದ್ರವಾಗಿವೆ. ನಾರು ಸಹ ಹೇರಳವಾಗಿದ್ದು ಹೊಟ್ಟೆಯ ಆರೋಗ್ಯವನ್ನು ಚೆನ್ನಾಗಿಡುತ್ತದೆ. ಮಾಗಿದ ಹಣ್ಣಿನ ರುಚಿ ಸಿಹಿಯೇ ಇದ್ದರೂ, ಮಧುಮೇಹಿಗಳಿಗೆ ಪೂರಕವಾದ ಆಹಾರವಿದು. ಡೆಂಗೂ ರೋಗಿಗಳಿಗೆ ನೀಡಲೇಬೇಕಾದ ಆಹಾರವಿದು. ಹಾಗಾದರೆ ಏನಿದರ ವೈಶಿಷ್ಟ್ಯಗಳು (Kiwi Benefits) ಎಂಬುದನ್ನು ತಿಳಿಯೋಣ ಈಗ.

ವಿಟಮಿನ್‌ ಸಿ ಖಜಾನೆ

ಸಿ ಜೀವಸತ್ವ ಹೇರಳವಾಗಿರುವ ಈ ಹಣ್ಣು ದೇಹದ ಪ್ರತಿರೋಧಕ ಶಕ್ತಿಗೆ ಭೀಮಬಲ ನೀಡುತ್ತದೆ. ಒಂದು ದೊಡ್ಡ ಕಿವಿಹಣ್ಣು ಒಂದಿಡೀ ದಿನಕ್ಕೆ ದೇಹಕ್ಕೆ ಅಗತ್ಯವಾದ ವಿಟಮಿನ್‌ ಸಿ ಪ್ರಮಾಣವನ್ನು ಶರೀರಕ್ಕೆ ಒದಗಿಸುತ್ತದೆ ಎಂದರೆ ಅದಿನ್ನೆಂಥ ಖಜಾನೆಯಾಗಿರಬಹುದು ಇದು ಸಿ ಜೀವಸತ್ವದ್ದು! ಇದಕ್ಕಾಗಿಯೇ ಚಳಿಗಾಲದಲ್ಲಿ ಕಿವಿ ಹಣ್ಣು ಅಗತ್ಯವಾಗಿ ಬೇಕು ಎನ್ನುವುದು. ದೇಹದ ರೋಗ ನಿರೋಧಕ ಶಕ್ತಿಯನ್ನು ಕುಗ್ಗದಂತೆ ಕಾಯ್ದಿರಿಸುತ್ತದೆ ಇದು.

ಉತ್ಕರ್ಷಣ ನಿರೋಧಕಗಳು

ಹಲವು ರೀತಿಯ ಪಾಲಿಫೆನಾಲ್‌ಗಳು ಮತ್ತು ಕೆರೊಟಿನಾಯ್ಡ್‌ಗಳಿರುವ ಈ ಹಣ್ಣು ಶರೀರದಲ್ಲಿ ಮುಕ್ತ ಕಣಗಳ ಹಾವಳಿಯನ್ನು ತಗ್ಗಿಸುತ್ತದೆ. ಇದರಿಂದ ಉರಿಯೂತ-ಜನ್ಯ ಹಲವು ರೋಗಗಳನ್ನು ದೂರ ಇರಿಸಬಹುದು. ಮಾತ್ರವಲ್ಲ, ಕ್ಯಾನ್ಸರ್‌ನಂಥ ಮಾರಕ ರೋಗಗಳ ಭೀತಿ ಕಡಿಮೆಯಾಗುತ್ತದೆ.

ತೂಕ ಇಳಿಕೆ

ಹಣ್ಣಿನ ರುಚಿ ಸಿಹಿಯೇ ಆದರೂ, ಇದರಲ್ಲಿ ಅತಿ ಹೆಚ್ಚಿನ ಪಿಷ್ಟವಿಲ್ಲ, ಕೊಬ್ಬೂ ಕಡಿಮೆಯೇ, ಆದರೆ ನಾರು ಹೆಚ್ಚು. ಇವೆಲ್ಲವುಗಳ ಫಲವೆಂದರೆ ತೂಕ ಇಳಿಸುವವರಿಗೆ ಇದು ಸೂಕ್ತ. ತಿಂದಿದ್ದು ಹೆಚ್ಚು ತೃಪ್ತಿ ನೀಡಿ, ಪಚನವಾಗುವುದಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳುವುದರ ಪರಿಣಾಮ, ಹಸಿವನ್ನು ಮುಂದೂಡುತ್ತದೆ. ಹಾಗಾಗಿ ಕಿವಿ ಹಣ್ಣು ತೂಕ ಇಳಿಸುವವರಿಗೆ ಹೇಳಿ ಮಾಡಿಸಿದ್ದು.

ಜೀರ್ಣಕಾರಿ

ಜೀರ್ಣಾಂಗಗಳ ಆರೋಗ್ಯ ವೃದ್ಧಿಯಾಗಬೇಕೆಂದರೆ ಆಹಾರದಲ್ಲಿ ಸೂಕ್ತ ಪ್ರಮಾಣದಲ್ಲಿ ನಾರು ಇರಬೇಕು. ಕಿವಿಯಲ್ಲಿರುವ ಕರಗಬಲ್ಲ ನಾರುಗಳು ದೇಹದಲ್ಲಿ ಜಮೆಯಾಗುವ ಕೊಬ್ಬು ಕಡಿಮೆ ಮಾಡಿದರೆ, ಕರಗದಿರುವಂಥ ನಾರುಗಳು ಜೀರ್ಣಾಂಗವನ್ನು ಶುದ್ಧಗೊಳಿಸುವ ಕೆಲಸ ಮಾಡುತ್ತವೆ. ಇದರಿಂದ ಮಲಬದ್ಧತೆಯನ್ನು ನಿವಾರಿಸಿಕೊಳ್ಳಬಹುದು.

ಚರ್ಮಕ್ಕೆ ಹೊಳಪು

ಚರ್ಮದ ಹೊಳಪು, ನುಣುಪುಗಳು ಮಾಸಬಾರದೆಂದರೆ ತ್ವಚೆಯಲ್ಲಿ ಅಗತ್ಯ ಪ್ರಮಾಣದ ಕೊಲಾಜಿನ್‌ ಬೇಕು. ಕಿವಿ ಹಣ್ಣಿನಲ್ಲಿರುವ ಸತ್ವಗಳು ಕೊಲಾಜಿನ್‌ ಉತ್ಪತ್ತಿಯನ್ನು ಪ್ರಚೋದಿಸುತ್ತವೆ. ಹಾಗಾಗಿ ನಿಯಮಿತವಾಗಿ ಕಿವಿ ಹಣ್ಣು ಸೇವಿಸುವುದರಿಂದ ತಾರುಣ್ಯಭರಿತ ತ್ವಚೆಯನ್ನು ಹೊಂದುವುದಕ್ಕೆ ಸಾಧ್ಯವಿದೆ.

ಹೃದಯಕ್ಕೆ ಪೂರಕ

ಇದರಲ್ಲಿರುವ ಪೊಟಾಶಿಯಂ ಸತ್ವಗಳು ರಕ್ತದೊತ್ತಡ ನಿಯಂತ್ರಿಸುವಲ್ಲಿ ಹೆಚ್ಚಿನ ಕೆಲಸ ಮಾಡುತ್ತವೆ. ಜೊತೆಗೆ ರಕ್ತದಲ್ಲಿನ ಪ್ಲೇಟ್‌ಲೆಟ್‌ ಸಂಖ್ಯೆಯನ್ನು ವೃದ್ಧಿಸುವಲ್ಲಿ ಇದರ ಸಾಮರ್ಥ್ಯ ಅಧ್ಯಯನಗಳ ಮೂಲಕ ಸಾಬೀತಾಗಿದೆ. ಇದಲ್ಲದೆ, ಮಧುಮೇಹ ನಿಯಂತ್ರಿಸಿ, ಕೊಲೆಸ್ಟ್ರಾಲ್‌ ಕಡಿಮೆ ಮಾಡುವಲ್ಲೂ ಕಿವಿ ಹಣ್ಣು ಫಲಕಾರಿ ಆಗಿರುವುದರಿಂದ, ಹೃದಯದ ಆರೋಗ್ಯ ಕಾಪಾಡುವಲ್ಲಿ ಕಿವಿ ಹಣ್ಣಿನ ಸೇವನೆ ನೆರವಾಗುತ್ತದೆ.

ಕಣ್ತುಂಬಾ ನಿದ್ದೆ

ಕಿವಿಯಲ್ಲಿ ಸೆರೋಟೋನಿನ್‌ ಅಂಶವಿದ್ದು, ಇದರಿಂದ ಮೂಡ್‌ ಸುಧಾರಿಸುತ್ತದೆ ಮತ್ತು ಕಣ್ತುಂಬಾ ನಿದ್ದೆ ತರಿಸುತ್ತದೆ. ನಿದ್ರಾಹೀನತೆಯ ಸಮಸ್ಯೆ ಇರುವವರು ರಾತ್ರಿಯೂಟದಲ್ಲಿ ಕಿವಿ ಹಣ್ಣನ್ನು ಸೇರಿಸಿಕೊಂಡರೆ, ನಿದ್ದೆ ಗಾಢವೂ, ದೀರ್ಘವೂ ಆಗಬಹುದು ಎನ್ನುತ್ತವೆ ಅಧ್ಯಯನಗಳು.

ಅರ್ಥರೈಟಿಸ್ ಶಮನ

ಮೂಳೆಯ ಆರೋಗ್ಯಕ್ಕೆ ಬೇಕಾದ ವಿಟಮಿನ್‌ ಕೆ ಸತ್ವ ಕಿವಿಯಲ್ಲಿದೆ. ಇದು ಕ್ಯಾಲ್ಶಿಯಂ ಖನಿಜವನ್ನು ಹೀರಿಕೊಳ್ಳುವುದಕ್ಕೆ ದೇಹಕ್ಕೆ ನೆರವು ನೀಡುತ್ತದೆ. ಇದರಿಂದ ಆಸ್ಟಿಯೊ ಆರ್ಥರೈಟಿಸ್‌ನಂಥ ಸಮಸ್ಯೆ ಇರುವವರಿಗೆ ಸಹಾಯವಾಗುವ ಸಾಧ್ಯತೆಯಿದೆ. ಯಾವುದೇ ಸಮಸ್ಯೆ ಇಲ್ಲದ ಆರೋಗ್ಯವಂತರೂ ತಮ್ಮ ಮೂಳೆಗಳನ್ನು ಸಬಲ ಮಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version