ಬೆಂಗಳೂರು: ರಾಜ್ಯಾದ್ಯಂತ ಒಣಹವೆ (Dry weather) ಮುಂದುವರಿದಿದ್ದು, ಚಿಕ್ಕನಹಳ್ಳಿಯಲ್ಲಿ ಅತೀ ಕಡಿಮೆ ಕನಿಷ್ಠ ಉಷ್ಣಾಂಶ 11.3 ಡಿ.ಸೆ (Karnataka Weather Forecast) ದಾಖಲಾಗಿದೆ. ಇನ್ನೂ ಹಾಸನ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ 6 ಡಿಗ್ರಿ ಸೆಲ್ಸಿಯಸ್‌ನಿಂದ 9 ಡಿಗ್ರಿ ಸೆಲ್ಸಿಯಸ್‌ವರೆಗೆ ದಾಖಲಾಗಿದೆ. ಹಾವೇರಿ, ಉತ್ತರ ಕನ್ನಡ ಮತ್ತು ಬಳ್ಳಾರಿ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಗರಿಷ್ಠ ತಾಪಮಾನ 38 ಡಿ.ಸೆ ನಿಂದ 41 ಡಿ.ಸೆ ವರೆಗೆ ದಾಖಲಾಗಿದೆ.
ಮುಂದಿನ 24 ಗಂಟೆಯಲ್ಲಿ ರಾಜ್ಯದಲ್ಲಿ ಒಣ ಹವೆ ಇರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ಕರಾವಳಿ, ಮಲೆನಾಡು, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಲ್ಲಿ ಶುಷ್ಕ ವಾತಾವರಣವೇ ಇರಲಿದೆ.
ತಾಪಮಾನದ ಮುನ್ಸೂಚನೆ
ಕರಾವಳಿಯ ಕೆಲವು ಕಡೆಗಳಲ್ಲಿ ಹಾಗೂ ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-3 ಡಿ.ಸೆ ಹೆಚ್ಚಾಗುವ ಸಾಧ್ಯತೆ ಇದೆ. ಕರಾವಳಿ ಹಾಗೂ ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿರುವ ಸಾಧ್ಯತೆ ಇದೆ.
ಬೆಂಗಳೂರಲ್ಲಿ ಸಣ್ಣ ಚಳಿಯೊಂದಿಗೆ ಮಂಜು
ಬೆಂಗಳೂರು ನಗರದಲ್ಲಿ ಮುಖ್ಯವಾಗಿ ಬೆಳಗಿನ ಜಾವ ಮಂಜು ಮುಸುಕುವ ಸಾಧ್ಯತೆ ಇದೆ. ಕೆಲವು ಕಡೆಗಳಲ್ಲಿ ಬೆಳಗ್ಗೆ ಹಾಗೂ ರಾತ್ರಿಯಂದು ತಂಪು ಗಾಳಿಯು ಬೀಸಲಿದೆ. ಇದರ ಹೊರತಾಗಿಯೂ ಬಿಸಿಲ ಧಗೆ ಹೆಚ್ಚಾಗಿ ಇರಲಿದೆ. ಗರಿಷ್ಠ ಉಷ್ಣಾಂಶ 31 ಹಾಗೂ ಕನಿಷ್ಠ ಉಷ್ಣಾಂಶ 17 ಡಿ.ಸೆ ಇರಲಿದೆ.
ಇದನ್ನೂ ಓದಿ: Reels Tragedy : ʻಕರಿಮಣಿ ಮಾಲೀಕ ನೀನಲ್ಲʼ ಎಂದಳು ಪತ್ನಿ; ಬೇಸರದಿಂದ ಪತಿ ಆತ್ಮಹತ್ಯೆ
ಋತು ಬದಲಾವಣೆಯಲ್ಲಿ ಚರ್ಮದ ಆರೈಕೆ ಹೇಗಿರಬೇಕು?
ಚಳಿಗಾಲ ಮುಗಿಯಿತಲ್ಲ! ಚಳಿ ಹೋಗಿ ಬಿಸಿಲು ಬಂದಿದ್ದೇ ದೊಡ್ಡ ವಿಶೇಷ ಅಂತಲ್ಲ, ಅದರ ಪಾಡಿಗೆ ಅದು ಬಂದಿದ್ದು. ಆದರೆ ನಮ್ಮ ಚರ್ಮದ ಆರೈಕೆ ಅದರಷ್ಟಕ್ಕೆ ಅದೇ ಆಗುವಂಥದ್ದಲ್ಲ. ಇದಕ್ಕೆ ನಮ್ಮ ಪ್ರಯತ್ನ ಬೇಕೇಬೇಕಾಗುತ್ತದೆ. ಅಂದರೆ, ಚಳಿಗಾಲಕ್ಕೆಂದು ಅನುಸರಿಸುತ್ತಿದ್ದ ಚರ್ಮದ ಆರೈಕೆಯ ಕ್ರಮಗಳಲ್ಲಿ ಇನ್ನೀಗ ಬದಲಾವಣೆ ಅಗತ್ಯ. ಋತು ಬದಲಾವಣೆಯ ಈ ಸಮಯದಲ್ಲಿ ಚರ್ಮವನ್ನು (Skincare Tips for Spring) ನಯವಾಗಿಡುವುದಕ್ಕೆ ಏನು ಮಾಡಬೇಕು?
ಕ್ರೀಮ್ ಬದಲಿಸಿ
ಈವರೆಗೆ ಚಳಿಗಾಲಕ್ಕೆಂದು ಹೆಚ್ಚು ಜಿಡ್ಡಿನ ಕ್ರೀಮ್‌ಗಳನ್ನು ಬಳಸುತ್ತಿದ್ದರೆ, ಇನ್ನು ಅವುಗಳು ಬೇಕಾಗುವುದಿಲ್ಲ. ಹೆಚ್ಚು ಜಿಡ್ಡಿಲ್ಲದ, ಹಗುರವಾದ ಕ್ರೀಮ್ ಅಥವಾ ಲೋಶನ್‌ಗಳು ಸಾಕಾಗುತ್ತವೆ. ಹಾಗೆಂದು ಯಾವುದೇ ಮಾಯಿಶ್ಚರೈಸರ್ ಇಲ್ಲದೆ ಇದ್ದರೂ ಕಷ್ಟ. ಕಾರಣ, ಈ ದಿನಗಳಲ್ಲೂ ವಾತಾವರಣದಲ್ಲಿ ಸಾಕಷ್ಟು ಶುಷ್ಕತೆ ಇರುತ್ತದೆ. ಹಾಗಾಗಿ ಚರ್ಮವನ್ನು ಪೋಷಿಸುವಂಥ ಆದರೆ ತ್ವಚೆಯನ್ನು ಎಣ್ಣೆ ಮಾಡದಂಥ ಕ್ರೀಮ್‌ಗಳು ಬೇಕು. ಚರ್ಮದ ಮೇಲೆ ಎಣ್ಣೆ ಕುಳಿತರೆ ಮೊಡವೆಗಳ ಕಾಟ ಶುರುವಾದೀತು.
ಸನ್‌ಬ್ಲ್ಯಾಕ್
ಬೇಸಿಗೆಯಲ್ಲಿ ಬಿಸಿಲಿನ ಪ್ರಕೋಪದಿಂದ ಚರ್ಮ ಸುಟ್ಟಂತಾಗುತ್ತದೆ. ಹೆಚ್ಚು ಕಾಲ ಬಿಸಿಲಿಗೆ ಒಡ್ಡಿದ ಚರ್ಮ ಮೊದಲಿಗೆ ಕೆಂಪಾಗಿ ನಂತರ ಕಪ್ಪಾಗಿ, ಕ್ರಮೇಣ ಸುಲಿದಂತಾಗುತ್ತದೆ. ಇದಕ್ಕೂ ಆರೈಕೆ ಅಗತ್ಯ. ಹಾಗಾಗಿ 40 ಎಸ್‌ಎಫ್‌ಪಿಗಿಂತ ಹೆಚ್ಚಿರುವ ಯಾವುದಾದರೂ ಒಳ್ಳೆಯ ಸನ್‌ಸ್ಕ್ರೀನ್ ಬೇಕಾಗುತ್ತದೆ. ಮ್ಯಾಯಿಶ್ಚರೈಸರ್ ಜೊತೆಗೇ ಸನ್‌ಸ್ಕ್ರೀನ್ ಇರುವಂಥ ಕ್ರೀಮ್ ಬಳಸಿದರೂ ತೊಂದರೆಯಿಲ್ಲ. ಆದರೆ ಸೂರ್ಯನ ಪ್ರಕೋಪದಿಂದ ಪಾರಾಗುವುದು ಅಗತ್ಯ. ಹಾಗಾಗಿ ಬಿಸಿಲಿಗೆ ಒಡ್ಡಿಕೊಳ್ಳುವ ಮುಖ, ಕುತ್ತಿಗೆ, ಕೈ, ಕಾಲುಗಳಿಗೆಲ್ಲಾ ಇದು ಅಗತ್ಯ. ಕ್ಲೆನ್ಸರ್ ಮತ್ತು ಟೋನರ್‌ಗಳನ್ನು ಬಳಸುತ್ತಿದ್ದರೆ ಅದೂ ಲಘುವಾಗಿರಲಿ. ಚಳಿಗಾಲದಲ್ಲಿ ಜಿಡ್ಡಿರುವ ಕ್ಲೆನ್ಸರ್‌ಗಳನ್ನು ಬಳಸುತ್ತಿದ್ದರೆ ಅದನ್ನೂ ಈಗ ಬದಲಿಸುವ ಕಾಲ. ಫೋಮ್ ಬರುವಂಥ ಜೆಲ್ ಸ್ವರೂಪದ ಕ್ಲಿನ್ಸರ್‌ಗಳ ಬಳಕೆ ಸಾಕಾಗುತ್ತದೆ. ಸೆಕೆ ಹೆಚ್ಚುತ್ತಿದ್ದಂತೆ ಚರ್ಮವು ಬೆವರಿನ ಜೊತೆಗೆ ಎಣ್ಣೆವನ್ನೂ ಒಸರುತ್ತದೆ. ಇನ್ನು ತೇವಾಂಶ ಹಿಡಿಯುವಂಥ ಟೋನರ್‌ಗಳು ಇದ್ದರೆ ಒಳ್ಳೆಯದು.
ಹೊಳಪು ನೀಡಿ
ಚರ್ಮದ ಮೇಲ್ಪದರಲ್ಲಿರುವ ಒಣ ಮತ್ತು ಜಡ ಚರ್ಮವನ್ನು ತೆಗೆಯುವುದು ಸಹ ಮುಖ್ಯ. ಹಾಗೆಂದು ಚರ್ಮಕ್ಕೆ ಪೆಟ್ಟಾಗುವಂತೆ ಉಗ್ರವಾಗಿ ಎಕ್ಸ್‌ಫಾಲಿಯೇಟ್ ಮಾಡುವುದಲ್ಲ, ನಯವಾಗುವಷ್ಟು ಮಾತ್ರ ಉಜ್ಜಿದರೆ ಸಾಕಾಗುತ್ತದೆ. ಇದರಿಂದ ಚರ್ಮದ ಗ್ರಂಥಿಗಳು ತೆಗೆದುಕೊಂಡು, ತ್ವಚೆಯೂ ಸರಾಗ ಉಸಿರಾಡಬಹುದು. ಕಾಂತಿಯುಕ್ತವಾಗಬಹುದು. ಬಿಸಿ ನೀರಿನಿಂದ ಮುಖ ತೊಳೆಯುವುದು ಬೇಡ. ಬೆಚ್ಚಗಿನ ಅಥವಾ ತಂಪಾದ ನೀರಿನಿಂದ ಮುಖ ತೊಳೆದರೆ ಅನುಕೂಲ ಹೆಚ್ಚು ಈ ಋತುವಿನಲ್ಲಿ.
ಉತ್ಕರ್ಷಣ ನಿರೋಧಕಗಳು
ಇಂಥ ಸೌಂದರ್ಯವರ್ಧಕಗಳು ಎಲ್ಲಾ ಋತುವಿನಲ್ಲೂ ಬೇಕಾಗುತ್ತವೆ. ಉದಾಹರಣೆಗೆ, ವಿಟಮಿನ್ ಎ ಹೆಚ್ಚಿರುವ ಕ್ರೀಮುಗಳಿಂದ ತ್ವಚೆಯ ಸುಕ್ಕುಗಳು ನಿಯಂತ್ರಣಗೊಂಡರೆ, ವಿಟಮಿನ್ ಸಿ ಹೆಚ್ಚಿರುವ ಕ್ರೀಮುಗಳಿಂದ ತ್ವಚೆ ನಯವಾಗುತ್ತದೆ ಮತ್ತು ಕೊಲಾಜಿನ್ ಉತ್ಪಾದನೆಯೂ ಹೆಚ್ಚುತ್ತದೆ. ಹಾಗಾಗಿ, ವಿಟಮಿನ್ ಸಿ ಸೀರಂ ಬಳಕೆಯಿಂದ ಬಿಸಿಲಿನಲ್ಲಿ ಚರ್ಮದ ಮೇಲೆ ಪಿಗ್ಮೆಟೇಶನ್ (ಕಪ್ಪು ಚುಕ್ಕಿಗಳಂಥವು) ಬರುವುದನ್ನು ನಿಯಂತ್ರಿಸಬಹುದು ಮತ್ತು ಕೊಲಾಜಿನ್ ಸಹ ಹೆಚ್ಚಿಸಬಹುದು. ಆದರೆ ತೈಲಾಧಾರಿತ ಸೀರಂಗಳು ಇನ್ನೀಗ ಬೇಡ. ಹೆಚ್ಚು ಜಿಡ್ಡಿಲ್ಲದ ನೀರಿನಂಥ ತೆಳುವಾದ ಸೀರಂಗಳು ಸಾಕಾಗುತ್ತವೆ.
ಸ್ಯಾನಿಟೈಸ್ ಮಾಡಿ
ನಿಯಮಿತವಾಗಿ ಮೇಕಪ್ ಮಾಡುತ್ತೀರಿ ಎಂದಾದರೆ, ನಿಮ್ಮ ಮೇಕಪ್ ಉಪಕರಣಗಳನ್ನು ಈ ಸಮಯದಲ್ಲಿ ಒಮ್ಮೆ ಸ್ಯಾನಿಟೈಸ್ ಮಾಡಿಕೊಳ್ಳಬಹುದು. ಅಂದರೆ ಬ್ರಷ್‌ಗಳು, ಸ್ಪಾಂಜ್‌ಗಳು, ರೋಲರ್‌ಗಳು ಇತ್ಯಾದಿಗಳಲ್ಲಿ ದೀರ್ಘ ಉಪಯೋಗದ ನಂತರ ಬ್ಯಾಕ್ಟೀರಿಯ ಮನೆ ಮಾಡಿಕೊಂಡಿರಬಹುದು. ಇದಕ್ಕಾಗಿ ಬೆಚ್ಚಗಿನ ನೀರಿನ ಬೌಲ್‌ನಲ್ಲಿ ಕೆಲವು ಹನಿ ಬ್ರಷ್ ಕ್ಲೆನ್ಸರ್ ಅಥವಾ ಒಂದೆರಡು ತೊಟ್ಟು ಶಾಂಪೂ ಹಾಕಿ ಬೆರೆಸಿಕೊಳ್ಳಿ. ಇದರಲ್ಲಿ ಈ ಉಪಕರಣಗಳನ್ನು ಕೆಲಕಾಲ ನೆನೆಸಿಡಿ. ನಂತರ ಸ್ವಚ್ಛ ನೀರಲ್ಲಿ ಚೆನ್ನಾಗಿ ತೊಳೆಯಿರಿ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ