Site icon Vistara News

Karnataka Weather : ಬೆಂಗಳೂರಲ್ಲಿ ವೇಗವಾಗಿ ಬೀಸಲಿದೆ ಗಾಳಿ; ಕರಾವಳಿಯಲ್ಲಿ ತಾಪಮಾನ ಏರಿಕೆ

Wind speed in Bengaluru Minimum temperature rise in coastal areas

ಬೆಂಗಳೂರು: ಮುಂದಿನ 48 ಗಂಟೆಯೂ ರಾಜ್ಯಾದ್ಯಂತ ಶುಷ್ಕ ವಾತಾವರಣ (Dry Weather) ಇರಲಿದೆ ಎಂದು ಹವಾಮಾನ ಇಲಾಖೆ (karnataka weather Forecast) ಮುನ್ಸೂಚನೆಯನ್ನು ನೀಡಿದೆ. ಬೆಂಗಳೂರಲ್ಲಿ ಗಾಳಿಯು ಬಿರುಸಾಗಿ ಬೀಸಲಿದೆ. ಕರಾವಳಿಯಲ್ಲಿ ಕನಿಷ್ಠ ತಾಪಮಾನ ಏರಿಕೆ ಆಗಲಿದ್ದು, ಬಿಸಿಲ ಧಗೆ ಹೆಚ್ಚಿರಲಿದೆ.

ರಾಜ್ಯದಲ್ಲಿ ಭಾನುವಾರವೂ ಒಣ ಹವೆ ಮುಂದುವರಿದಿತ್ತು. ರಾಜ್ಯದ ಸಮತಟ್ಟಾದ ಪ್ರದೇಶಗಳಲ್ಲಿ ಅತೀ ಕಡಿಮೆ ಕನಿಷ್ಠ ಉಷ್ಣಾಂಶ 14.0 ಡಿ.ಸೆ. ವಿಜಯಪುರದಲ್ಲಿ ದಾಖಲಾಗಿತ್ತು.

ತಾಪಮಾನದ ಮುನ್ಸೂಚನೆ

ರಾಜ್ಯಾದ್ಯಂತ ಒಂದೆರಡು ಕಡೆಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್ ಹೆಚ್ಚಿರಲಿದೆ. ಕರಾವಳಿಯ ಕೆಲವು ಕಡೆಗಳಲ್ಲಿ ಮತ್ತು ಒಳನಾಡಿನ ಒಂದೆರಡು ಕಡೆಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್‌ ಹೆಚ್ಚಾಗಲಿದೆ ಎಂದು ಎಚ್ಚರಿಕೆಯನ್ನು ನೀಡಲಾಗಿದೆ.

ಬೆಂಗಳೂರಲ್ಲಿ ಮಂಜು ಮುಸುಕು ಜತೆಗೆ ಗಾಳಿ

ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಖ್ಯವಾಗಿ ನಿರ್ಮಲ ಆಕಾಶವಿರುತ್ತದೆ. ಕೆಲವು ಕಡೆಗಳಲ್ಲಿ ಬೆಳಗಿನ ಜಾವ ಮಂಜು ಮುಸುಕುವ ಸಾಧ್ಯತೆಗಳಿರುತ್ತದೆ. ಮೇಲ್ಮೈ ಮಾರುತಗಳು ಕೆಲವೊಮ್ಮೆ ಪ್ರಬಲವಾಗಿರುವ ಸಾಧ್ಯತೆಯಿದೆ. ಗರಿಷ್ಠ ಉಷ್ಣಾಂಶ 33 ಮತ್ತು ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್‌ ಹೆಚ್ಚಿರಲಿದೆ.

ಇದನ್ನೂ ಓದಿ: Road Accident : ತಿರುವಿನಲ್ಲಿ ಕಾದಿದ್ದ ಜವರಾಯ; ಬೈಕ್‌ಗೆ ಡಿಕ್ಕಿ ಹೊಡೆದ ಕಾರು, ದಂಪತಿ ಸಾವು

ನಿಮಗಿದು ಗೊತ್ತಿರಲಿ, ನಿಂಬೆ ಹುಲ್ಲು ತಿಂದು ತೂಕ ಇಳಿಸಲು ಸಾಧ್ಯ!

ತೂಕ ಇಳಿಸುವ ವಿಷಯ ಬಂದರೆ ಯಾರೇನು ಹೇಳಿದರೂ ಕಿವಿಗೊಡುವ ಮನಸ್ಥಿತಿಯಲ್ಲಿ ಇರುತ್ತಾರೆ ಹೆಚ್ಚಿವನರು. ನಮಗೆ ತಿಳಿಯದ ಯಾವುದೋ ಹುಲ್ಲು ಕಡ್ಡಿಯಿಂದಲಾದರೂ ತೂಕ ಇಳಿಯುವುದಿದ್ದರೆ ಯಾಕೆ ಬೇಡ ಎನಿಸಿದರೆ ಸಹಜ. ಹೌದು, ಹುಲ್ಲಾದರೂ ತೂಕ ಇಳಿಸುವುದಕ್ಕೆ ನೆರವು ನೀಡುವಂಥದ್ದು ನಿಂಬೆಹುಲ್ಲು. ಅದೊಂದೇ ಅಲ್ಲ, ಇನ್ನೂ ಬಹಳಷ್ಟು ಬಗೆಯ ಪ್ರಯೋಜನಗಳಿವೆ ಇದರಿಂದ. ಆದರೆ ತೂಕ ಇಳಿಕೆಯಲ್ಲಿ ಇದು ಹೇಗೆ ಸಹಕಾರಿ?
ಹಾಗೆ ಯಾವುದೋ ಒಂದು ವಸ್ತುವಿನಿಂದ ತೂಕ ಇಳಿಯುವುದು ಆಗದ ಮಾತು. ಇದಕ್ಕೆ ಸೂಕ್ತ ವ್ಯಾಯಾಮ, ಸಾಕಷ್ಟು ನಿದ್ದೆ, ಸರಿಯಾದ ಆಹಾರ ಪದ್ಧತಿಗಳೆಲ್ಲ ಇದ್ದರಷ್ಟೇ ಸಾಧ್ಯ. ಆದರೆ ಈ ನಿಟ್ಟಿನಲ್ಲಿ ತೃಣ ಸಹಾಯವನ್ನಂತೂ ನಿಂಬೆ ಹುಲ್ಲು ಖಂಡಿತ ಮಾಡಬಲ್ಲದು. ಅದರಲ್ಲೂ ಮುಂದಿರುವುದು ಬೇಸಿಗೆಯಾದ್ದರಿಂದ ದಾಹ ತಣಿಸಿಕೊಳ್ಳಲು, ಸಕ್ಕರೆಭರಿತ ಪೇಯಗಳ ಬದಲಿಗೆ ನಿಂಬೆಹುಲ್ಲಿನ ಪಾನೀಯಗಳು (Weight Loss with Lemongrass) ಖಂಡಿತಕ್ಕೂ ಆರೋಗ್ಯಕ್ಕೆ ಒಳಿತನ್ನು ಮಾಡಬಲ್ಲವು.

ಕಡಿಮೆ ಕ್ಯಾಲರಿ

ಹಲವು ರೀತಿಯ ಖನಿಜಗಳನ್ನು ಹೊಂದಿರುವ ಈ ಹುಲ್ಲಿನಲ್ಲಿ ನಾರು ಹೆಚ್ಚು, ಕ್ಯಾಲರಿ ಕಡಿಮೆ. ಇದನ್ನು ನೇರವಾಗಿ ಸಲಾಡ್‌ಗಳಲ್ಲಿ ಬಳಸಿ ಅಥವಾ ಉಳಿದ ಸೊಪ್ಪುಗಳಂತೆ ತಿನ್ನಲಾಗದು ಎನ್ನುವುದು ನಿಜ. ಆದರೆ ಇದರ ರಸವನ್ನು ಹಲವು ರೀತಿಗಳಲ್ಲಿ ಉಪಯೋಗಿಸಿಕೊಳ್ಳಬಹುದು. ಬಿಸಿಯಾಗಿ ಬೇಕಿದ್ದರೆ ನಿಂಬೆಹುಲ್ಲಿನ ಚಹಾ ರುಚಿಕಟ್ಟಾಗಿರುತ್ತದೆ. ತಂಪಾಗಿ ತಂಬುಳಿ ಸವಿಯಬಹುದು. ಹುಲ್ಲಿನ ರಸ ತೆಗೆದು ಮಜ್ಜಿಗೆಯೊಂದಿಗೆ ಸೇವಿಸಬಹುದು. ಇವೆಲ್ಲವೂ ಕಡಿಮೆ ಕ್ಯಾಲರಿಯ ಪೇಯಗಳೇ.

ಡೈಯುರೇಟಿಕ್‌ ತತ್ವಗಳು

ಅಂದರೆ ಹೆಚ್ಚು ಮೂತ್ರವನ್ನು ಉತ್ಪತ್ತಿ ಮಾಡುವಂಥ ಸತ್ವಗಳು ಇದರಲ್ಲಿವೆ. ತೂಕ ಇಳಿಕೆಯ ಹಾದಿಯಲ್ಲಿ ಇದೂ ಸಹ ನೆರವಾಗಬಲ್ಲದು. ಉಳಿದೆಲ್ಲ ಹರ್ಬಲ್‌ ಚಹಾ ಅಥವಾ ಗ್ರೀನ್‌ ಟೀ ಮಾದರಿಯಲ್ಲೇ ಲೆಮೆನ್‌ಗ್ರಾಸ್‌ ಚಹಾ ಸಹ ಕೆಲಸ ಮಾಡುತ್ತದೆ. ದೇಹದಲ್ಲಿ ಹೆಚ್ಚಿನ ಸೋಡಿಯಂ ಜಮೆಯಾಗಿ, ಅನಗತ್ಯ ನೀರಿನಂಶ ಉಳಿಯದಂತೆ ಕಾಪಾಡುವಲ್ಲಿ ಇದು ಸಹಕಾರಿ.

ಪಚನಕಾರಿ

ನಿಂಬೆ ಹುಲ್ಲಿನ ಸತ್ವಗಳು ಜೀರ್ಣಕ್ರಿಯೆಯನ್ನು ಚುರುಕಾಗಿಸುತ್ತವೆ. ಇದರಲ್ಲಿರುವ ನಾರಿನ ಸತ್ವಗಳು ಜೀರ್ಣಾಂಗಗಳಲ್ಲಿನ ಅನಗತ್ಯ ಅಂಶಗಳನ್ನು ಸ್ವಚ್ಛ ಮಾಡುವಲ್ಲಿ ನೆರಲಾಗುತ್ತವೆ. ಈ ಮೂಲಕ ಮಲಬದ್ಧತೆಯನ್ನು ನಿವಾರಿಸುತ್ತದೆ. ಅಜೀರ್ಣ ಮತ್ತು ಹೊಟ್ಟೆಯುಬ್ಬರದಂಥ ಸಮಸ್ಯೆಗಳ ನಿಯಂತ್ರಣಕ್ಕೂ ಇದರಿಂದ ಅನುಕೂಲವಾಗುತ್ತದೆ.

ಚಯಾಪಚಯ ಹೆಚ್ಚಳ

ದೇಹದ ಚಯಾಪಚಯ ಹೆಚ್ಚಿಸುವಂಥ, ಅಂದರೆ ಹೆಚ್ಚಿನ ಕ್ಯಾಲರಿ ಕರಗಿಸುವಂಥ ಸಾಧ್ಯತೆ ನಿಂಬೆಹುಲ್ಲಿಗೆ ಇದೆ ಎನ್ನುತ್ತವೆ ಕೆಲವು ಅಧ್ಯಯನಗಳು. ಇದರಲ್ಲಿರುವ ಸಿಟ್ರಾಲ್‌ ಅಂಶವು ಚಯಾಪಚಯ ಹೆಚ್ಚಿಸಿ, ಕೊಬ್ಬು ಕರಗಿಸುವಲ್ಲಿ ಪರಿಣಾಮಕಾರಿ ಎನ್ನುತ್ತಾರೆ ಅಧ್ಯಯನಕಾರರು. ಆದರೆ ಕೇವಲ ಇದೊಂದು ಹುಲ್ಲಿನ ಸೇವನೆಯಿಂದ ತೂಕ ಇಳಿಯುವುದಿಲ್ಲ. ಉಳಿದಂತೆ ತೂಕ ಇಳಿಕೆಗೆ ಪೂರಕವಾದ ಜೀವನಶೈಲಿಯನ್ನೂ ಅಳವಡಿಸಿಕೊಳ್ಳುವುದು ಅಗತ್ಯ.

ಉತ್ಕರ್ಷಣ ನಿರೋಧಕಗಳು

ತೂಕ ಇಳಿಸುವ ಪ್ರಕ್ರಿಯೆಯಲ್ಲಿ ದೇಹವನ್ನು ಬಳಲದಂತೆ ಕಾಪಾಡುವುದು ಸಣ್ಣ ವಿಷಯವಲ್ಲ. ಒಂದೊಂದು ದೇಹ ನಿಶ್ಶಕ್ತವಾದರೆ, ಪ್ರಯೋಜನಕ್ಕಿಂತ ಹಾನಿಯೇ ಹೆಚ್ಚು. ಇದಕ್ಕೆ ಸರಿಯಾದ ಆಹಾರಕ್ರಮವನ್ನು ಅಳವಡಿಸಿಕೊಳ್ಳುವುದು ಮುಖ್ಯ. ಇಂಥ ಆಹಾರಗಳಿಂದ ಸಾಕಷ್ಟು ಪ್ರಮಾಣದ ಉತ್ಕರ್ಷಣ ನಿರೋಧಕಗಳು ದೇಹಕ್ಕೆ ದೊರೆಯಬೇಕು. ಆಗ ಮಾತ್ರವೇ ಉರಿಯೂತವನ್ನು ತಡೆಯಬಹುದು. ನಿಂಬೆ ಹುಲ್ಲಿನಲ್ಲೂ ಹಲವು ರೀತಿಯ ಉತ್ಕರ್ಷಣ ನಿರೋಧಕಗಳಿದ್ದು, ದೇಹಕ್ಕೆ ಅಗತ್ಯ ಪೋಷಣೆಯನ್ನು ಒದಗಿಸುತ್ತವೆ. ದೇಹ ಸ್ವಾಸ್ಥ್ಯ ಕಾಪಾಡುವಲ್ಲಿ ನೆರವಾಗುತ್ತವೆ

ಒತ್ತಡ ಶಮನ

ದೇಹದ ತೂಕ ಹೆಚ್ಚುವಲ್ಲಿ ಮಾನಸಿಕ ಒತ್ತಡ ಮಹತ್ತರವಾದ ಪರಿಣಾಮ ಬೀರುತ್ತದೆ. ಕಾರಣ, ಮನಸ್ಸಿನ ಒತ್ತಡ ಹೆಚ್ಚಿದಂತೆ ನಮಗೇ ಅರಿವಿಲ್ಲದಂತೆ ತಿನ್ನುವ ಪ್ರಮಾಣವನ್ನು ಹೆಚ್ಚಿಸಿಕೊಂಡಿರುತ್ತೇವೆ. ಅದರಲ್ಲೂ ಸಿಹಿ ಮತ್ತು ಜಂಕ್‌ಫುಡ್‌ ತಿನ್ನಬೇಕೆಂಬ ಬಯಕೆಯೇ ಹೆಚ್ಚುತ್ತದೆ. ಇಂಥ ಆಹಾರಗಳಿಂದ ತೂಕ ಇಳಿಸುವುದು ಅಸಾಧ್ಯ. ಪರಿಮಳಭರಿತ ಮೂಲಿಕೆಗಳು ಮತ್ತದರ ತೈಲಗಳು ಒತ್ತಡ ನಿವಾರಣೆ ಮಾಡುವಲ್ಲಿ ಗಹನವಾದ ಪರಿಣಾಮವನ್ನು ಬೀರುತ್ತವೆ. ನಿಂಬೆ ಹುಲ್ಲೂ ತನ್ನ ಸುವಾಸನೆಯಿಂದ ಒತ್ತಡವನ್ನು ನಿವಾರಣೆ ಮಾಡಬಲ್ಲದು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version