ಗಂಗಾವತಿ: ತುಂಗಭದ್ರಾ ಜಲಾಶಯದಿಂದ ಅಪಾರ ಪ್ರಮಾಣ ನೀರು ನದಿಗೆ ಹರಿಸುತ್ತಿರುವ ಪರಿಣಾಮ ಕಂಪ್ಲಿ ಸೇತುವೆ ಮುಳಗಡೆಯಾಗಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಶುಕ್ರವಾರ ಭೇಟಿ ನೀಡಿ ಪರಿಶೀಲನೆ (Koppala News) ನಡೆಸಿದರು.
ಗಂಗಾವತಿ ತಾಲೂಕಿನ ಚಿಕ್ಕಜಂತಕಲ್ ಗ್ರಾಮದ ಬಳಿ ಹರಿಯುವ ತುಂಗಭದ್ರಾ ನದಿಯಿಂದ ಪಂಪ್ ಮೂಲಕ ಕನಕಗಿರಿ ಕ್ಷೇತ್ರದ ನಾನಾ ಗ್ರಾಮಗಳ ಕೆರೆ ತುಂಬಿಸುವ ಯೋಜನೆಯಡಿ ಕೈಗೊಂಡ ಕಾಮಗಾರಿಗೆ ನದಿಪ್ರವಾಹದಿಂದ ಏನಾದರೂ ಧಕ್ಕೆಯಾಗಿದೆಯೇ ಎಂದು ಸಚಿವ ಖುದ್ದು ನೀರಿನಲ್ಲಿ ಇಳಿದು ವೀಕ್ಷಣೆ ಮಾಡಿದರು.
ಸ್ಥಳದಲ್ಲಿದ್ದ ಗಂಗಾವತಿ ತಹಸೀಲ್ದಾರ್ ಯು. ನಾಗರಾಜ್ ಹಾಗೂ ಕಂದಾಯ ಅಧಿಕಾರಿಗಳಿಂದ, ನದಿಯಲ್ಲಿನ ಪ್ರವಾಹದಿಂದ ಜನರ ವಸತಿ, ಜಾನುವಾರು ಪ್ರಾಣಹಾನಿ, ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟ ಉಂಟಾಗಿದೆಯೇ ಎಂಬ ಮಾಹಿತಿ ಪಡೆದುಕೊಂಡರು.
ಇದನ್ನೂ ಓದಿ: Book Release: ಬೆಂಗಳೂರಿನಲ್ಲಿ ಆ.4ರಂದು ʼರಣಧುರಂಧರʼ ಗ್ರಂಥ ಲೋಕಾರ್ಪಣೆ
ನಿತ್ಯ ಕಂಪ್ಲಿ-ಗಂಗಾವತಿ ಮಧ್ಯೆ ಸಾವಿರಾರು ಜನ ಚಿಕಿತ್ಸೆ, ವ್ಯಾಪಾರ ವಹಿವಾಟು, ಮಕ್ಕಳು ಶಾಲಾ-ಕಾಲೇಜು ಸೇರಿದಂತೆ ನಾನಾ ಕಾರಣಕ್ಕೆ ಓಡಾಡುತ್ತಿದ್ದು, ಕಂಪ್ಲಿ ಸೇತುವೆ ಮುಳಗಡೆಯಿಂದಾಗಿ ಜನರಿಗೆ ಭಾರೀ ಸಮಸ್ಯೆಯಾಗಿದೆ ಎಂದು ಸ್ಥಳೀಯರು ತಿಳಿಸಿದರು.
ಅಲ್ಲದೇ ನದಿಯಲ್ಲಿ ಪ್ರವಾಹ ಉಂಟಾದ ಕಾರಣಕ್ಕೆ ನದಿ ಪಾತ್ರದ ಗ್ರಾಮಗಳ ಹೊಲ-ಗದ್ದೆ, ತೋಟಗಳಿಗೆ ಹಾನಿಯಾಗಿದೆ. ಭತ್ತದ ಗದ್ದೆಗಳು ಸಂಪೂರ್ಣ ಜಲಾವೃತವಾಗಿವೆ. ಅಧಿಕಾರಿಗಳು ಇದುವರೆಗೂ ಸಮೀಕ್ಷೆ ನಡೆಸಿಲ್ಲ ಎಂದು ಸ್ಥಳೀಯ ರೈತರು ಈ ಸಂದರ್ಭದಲ್ಲಿ ಸಚಿವರ ಬಳಿ ಅಳಲು ತೋಡಿಕೊಂಡರು.
ಈ ಬಗ್ಗೆ ಮಾತನಾಡಿದ ಸಚಿವ, ಶನಿವಾರ ಕೊಪ್ಪಳದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಲ್ಲಾ ತಾಲೂಕಿನ ತಹಸೀಲ್ದಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ, ಕೃಷಿ, ತೋಟಗಾರಿಕಾ ಇಲಾಖೆಯ ಅಧಿಕಾರಿಗಳ ಸಭೆ ನಡೆಸಲಿದ್ದೇನೆ. ಸಭೆಯಲ್ಲಿ ಮಳೆ ಕೊರತೆಯಿಂದ ಮಳೆಯಾಶ್ರಿತ ಪ್ರದೇಶದಲ್ಲಾದ ಹಾನಿಯ ಬಗ್ಗೆ ಚರ್ಚಿಸಲಾಗುವುದು. ಅಲ್ಲದೇ ನದಿಗೆ ಹೆಚ್ಚುವರಿ ನೀರು ಹರಿಸಿದ್ದರಿಂದ ಆಗಿರುವ ಹಾನಿಯ ಬಗ್ಗೆಯೂ ಚರ್ಚಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದರು.
ತುಂಗಭದ್ರಾ ಜಲಾಶಯದಿಂದ ನದಿಗೆ ನಿತ್ಯ ಎರಡು ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಹರಿಸಿದರೆ ನದಿಪಾತ್ರದ ಗ್ರಾಮಗಳಿಗೆ ಮತ್ತು ಹೊಲ-ಗದ್ದೆಗಳಿಗೆ ಹಾನಿಯಾಗಲಿದೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ಇದನ್ನೂ ಓದಿ: Workshop: ಬೆಂಗಳೂರಿನಲ್ಲಿ ಆ.10ರಂದು ಸಿನಿಮಾಸಕ್ತರಿಗೆ ಕಾರ್ಯಾಗಾರ
ಸೇತುವೆ ಬಗ್ಗೆ ಸಿಎಂ ಗಮನಕ್ಕೆ
ನದಿಗೆ ನೀರು ಬಿಟ್ಟಾಗಲೊಮ್ಮೆ ಕಂಪ್ಲಿ ಸೇತುವೆ ಮುಳಗಡೆಯಾಗಿ ಸಂಚಾರಕ್ಕೆ ತೊಂದರೆಯಾಗಿ ಎರಡು ಜಿಲ್ಲೆಯ ಜನ ಪರದಾಡುತ್ತಿರುವ ಬಗ್ಗೆ ಈಗಾಗಲೆ ಸಿಎಂ ಗಮನಕ್ಕೆ ತರಲಾಗಿದೆ. ಸೇತುವೆಯ ಎತ್ತರವನ್ನು ಇನ್ನಷ್ಟು ಹೆಚ್ಚಿಸಬೇಕಿದೆ. ಇಲ್ಲಿನ ಸಮಗ್ರ ಮಾಹಿತಿಯನ್ನು ವರದಿ ರೂಪದಲ್ಲಿ ಸಿಎಂ ಗಮನಕ್ಕೆ ತರಲಾಗುವುದು ಎಂದು ಸಚಿವ ಹೇಳಿದರು.