ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಆರಂಭವಾಗಿದೆ. ಭಾರಿ ಮಳೆಯನ್ನು ನಿರೀಕ್ಷಿಸಲಾಗಿದೆ. ಪ್ರತಿ ಬಾರಿಯ ಮಳೆಗಾಲದಲ್ಲೂ ಸಿಡಿಲಿನಿಂದ ಹತ್ತಾರು ಜೀವಗಳು ಬಲಿಯಾಗುತ್ತವೆ. ಸಿಡಿಲಿನ (Protect From Lightning) ಹೊಡೆತದಿಂದ ನಾವು ಹೇಗೆ ರಕ್ಷಿಸಿಕೊಳ್ಳಬೇಕು? ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (NDMA Guidelines) ನೀಡಿರುವ ಮಾಹಿತಿ ಇಲ್ಲಿದೆ.ರಾಜ್ಯದಲ್ಲಿ ಮಳೆಗಾಲ ಶುರುವಾಗಿದೆ. ಗುಡುಗು, ಸಿಡಿಲಿನ ಸದ್ದು ಕೇಳಲಾರಂಭಿಸಿದೆ. ಸಿಡಿಲಿನ (Protect From Lightning) ಅಪಾಯದಿಂದ ಪಾರಾಗಲು ನಾವು ಏನೇನು ಎಚ್ಚರಿಕೆ ವಹಿಸಬೇಕು? ಇಲ್ಲಿದೆ ಉಪಯುಕ್ತ ಮಾಹಿತಿ.
ಏನೇನು ಮುನ್ನೆಚ್ಚರಿಕೆ ವಹಿಸಬೇಕು?
- ಸಾಮಾನ್ಯವಾಗಿ ಮಧ್ಯಾಹ್ನ ಅಥವಾ ಸಂಜೆ ಸಿಡಿಲು ಬಡಿಯುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ ಗುಡುಗು ಸಿಡಿಲಿನಿಂದಾಗುವ ಅಪಾಯಗಳನ್ನು ತಗ್ಗಿಸುವತ್ತ ಗಮನ ಕೊಡಬೇಕು.
- ಹೊರಗೆ ಹೋಗುವಾಗ ಹವಾಮಾನ ಮುನ್ಸೂಚನೆ ಸಂದೇಶಗಳನ್ನು ತಪ್ಪದೇ ಪರಿಶೀಲಿಸಬೇಕು.
- ಮಳೆ ಬೀಳುವಾಗ, ಮುಖ್ಯವಾಗಿ ಗುಡುಗು ಜೋರಾಗಿರುವಾಗ ಹೊಲ, ತೋಟದಲ್ಲಿ ಕೆಲಸ ಮಾಡಲು ಮನೆಯಿಂದ ಹೊರಗೆ ಹೋಗಬೇಡಿ.
- ಗುಡುಗು-ಸಿಡಿಲಿನ ಸಂದರ್ಭದಲ್ಲಿ ಲೋಹದ ತಗಡನ್ನು ಹೊದಿಸಿರುವ ಮನೆಗಳು ಸುರಕ್ಷಿತವಲ್ಲ, ಸುರಕ್ಷಿತವಾದ ಕಟ್ಟಡಗಳಲ್ಲಿ ಆಶ್ರಯ ಪಡೆಯಬೇಕು.
- ಬೆಟ್ಟಗಳು, ಪರ್ವತ ಶ್ರೇಣಿಗಳು ಅಥವಾ ಶಿಖರಗಳಂತಹ ಎತ್ತರದ ಪ್ರದೇಶಗಳಿಂದ ಕೆಳಗೆ ಪ್ರವಾಹ ಇಳಿದು ಬರದಂತಹ ತಗ್ಗು ಪ್ರದೇಶದಲ್ಲಿ ಆಶ್ರಯ ಪಡೆಯಿರಿ.
- ನೀರಿನ ಮೂಲಗಳಾದ ಕೆರೆ ಮತ್ತು ನದಿಗಳಿಂದ ದೂರವಿರಿ.
- ವಿದ್ಯುತ್ ಉಪಕರಣ, ವಿದ್ಯುತ್ ಲೈನ್ಗಳು, ದೂರವಾಣಿ ಸಂಪರ್ಕ, ಮೊಬೈಲ್ ಟವರ್, ಪವನ ವಿದ್ಯುತ್ ಗೋಪುರ ಹಾಗೂ ರೈಲು ಹಳಿಗಳಿಂದ ದೂರವಿರುವುದು ಕ್ಷೇಮಕರ.
- ವಾಹನ ಚಾಲನೆಯಲ್ಲಿದ್ದರೆ ತಕ್ಷಣವೇ ವಾಹನ ನಿಲ್ಲಿಸಿ ವಾಹನದಲ್ಲಿಯೇ ಆಶ್ರಯ ಪಡೆಯಿರಿ. ಗುಡುಗು ಸಿಡಿಲಿನ ಸಮಯದಲ್ಲಿ ಗುಂಪಿನಲ್ಲಿದ್ದರೆ, ಅಪಾಯವನ್ನು ಕಡಿಮೆ ಮಾಡಲು ಸಾಕಷ್ಟು ಅಂತರವನ್ನು ಕಾಯ್ದುಕೊಳ್ಳುವುದು ಉತ್ತಮ.
- ಗುಡುಗು ಮತ್ತು ಸಿಡಿಲು ಸಂದರ್ಭದಲ್ಲಿ ಹೊರಾಂಗಣದಲ್ಲಿ ಕೆಲಸ ಮಾಡುತ್ತಿದ್ದರೆ ಸುರಕ್ಷಿತ ಸ್ಥಳದಲ್ಲಿ ಆಶ್ರಯ ಪಡೆಯಬೇಕು.
- ವಿದ್ಯುತ್ ಅಥವಾ ಟೆಲಿಫೋನ್ ಕಂಬಗಳು ಅಥವಾ ಮರಗಳ ಕೆಳಗೆ ಆಶ್ರಯ ಪಡೆಯಬಾರದು. ಏಕೆಂದರೆ ಇವು ಮಿಂಚನ್ನು ಆಕರ್ಷಿಸುತ್ತವೆ.
- ಅರಣ್ಯ ಪ್ರದೇಶದಲ್ಲಿದ್ದರೆ ಸಣ್ಣ ಮರಗಳ ಕೆಳಗೆ ಆಶ್ರಯ ಪಡೆಯಿರಿ. ಲೋಹದ ವಸ್ತುಗಳನ್ನು ಬಳಸಬಾರದು. ಬೈಕುಗಳು, ವಿದ್ಯುತ್ ಅಥವಾ ದೂರವಾಣಿ ಕಂಬಗಳು, ತಂತಿ ಬೇಲಿ, ಯಂತ್ರಗಳು ಇತ್ಯಾದಿಗಳಿಂದ ದೂರವಿರಿ.
- ಸಿಡಿಲಿನ ಸಂದರ್ಭದಲ್ಲಿ ಮೊಬೈಲ್ ಫೋನ್ಗಳನ್ನು ಬಳಸಲೇಬಾರದು. ಇದರಿಂದ ಅಪಾಯ ಹೆಚ್ಚು.
- ಕಬ್ಬಿಣದ ಸರಳುಗಳಿಂದ ಮಾಡಿರುವ ಛತ್ರಿಗಳನ್ನು ಬಳಸದಿರುವುದು ಉತ್ತಮ.
- ಗುಡುಗು ಸಿಡಿಲಿನ ಸಮಯದಲ್ಲಿ ಕಿಟಕಿ, ಬಾಗಿಲುಗಳನ್ನು ಮುಚ್ಚಬೇಕು. ಬೆಂಕಿ ಮತ್ತು ವಿದ್ಯುತ್ ಸಂಪರ್ಕದಿಂದ ದೂರವಿರಬೇಕು.
ಇದನ್ನೂ ಓದಿ: Rain News : ಸಮುದ್ರದಲ್ಲಿ ರಕ್ಕಸ ಅಲೆಗಳು; ಸಿಡಿಲಿಗೆ ಇಬ್ಬರು ಬಲಿ, ಬೆಂಗಳೂರಲ್ಲೂ ಮಳೆ ಅಬ್ಬರ
- ಸಿಡಿಲಿನ ಸಂದರ್ಭದಲ್ಲಿ ಕಟ್ಟಡದ ಕೊಳಾಯಿ ಮತ್ತು ಲೋಹದ ಕೊಳವೆಗಳ ಮೂಲಕ ವಿದ್ಯುತ್ ಹರಿಯುವ ಸಾಧ್ಯತೆ ಇರುತ್ತದೆ. ಹೀಗಾಗಿ ಆ ಸಂದರ್ಭದಲ್ಲಿ ಸ್ನಾನ ಮಾಡಿದರೆ ಅಥವಾ ಪಾತ್ರೆ ತೊಳೆಯ ಹೋದರೆ ಅಪಾಯವಾಗಬಹುದು.
- ಗುಡುಗು ಸಿಡಿಲಿನ ಮುನ್ಸೂಚನೆ ಅಥವಾ ಮುನ್ನೆಚ್ಚರಿಕೆ ಇದ್ದಲ್ಲಿ ಪ್ರಯಾಣವನ್ನು ಆದಷ್ಟು ಮುಂದೂಡಿ.
- ಗುಡುಗು ಸಿಡಿಲಿನ ಸಮಯದಲ್ಲಿ ಮೋಟರ್ ಸೈಕಲ್ ಅಥವಾ ಇನ್ನಿತರೆ ಯಾವುದೇ ತೆರೆದ ವಾಹನದಲ್ಲಿ ಸಂಚಾರ ಬೇಡ.
- ಆಟದ ಮೈದಾನ, ಉದ್ಯಾನ, ಕಡಲ ತೀರಗಳಿಗೆ ಹೋಗುವುದನ್ನು ತಪ್ಪಿಸಿ. ದೋಣಿ ವಿಹಾರ ಅಥವಾ ಈಜುತ್ತಿದ್ದರೆ, ಸಾಧ್ಯವಾದಷ್ಟು ಸುರಕ್ಷಿತ ಸ್ಥಳದಲ್ಲಿ ಆಶ್ರಯ ಪಡೆಯಿರಿ.
- ಮಿಂಚು, ಸಿಡಿಲು ನಿರೋಧಕ ಸಾಧನಗಳನ್ನು ಮನೆ ಅಥವಾ ಕಟ್ಟದಕ್ಕೆ ಅಳವಡಿಸಿ.