ಬೀದರ್: ರಾಜ್ಯದ ಹಲವೆಡೆ ಮಳೆಯು (Rain news) ಅಬ್ಬರಿಸುತ್ತಿದ್ದು, ಸಾವು-ನೋವಿಗೆ ಕಾರಣವಾಗುತ್ತಿದೆ. ಯಾದಗಿರಿ ಜಿಲ್ಲೆಯ ಔರಾದ ತಾಲೂಕಿನ ಚಿಕ್ಲಿ (ಜೆ) ತಾಂಡದಲ್ಲಿ ಸಿಡಿಲು ಬಡಿದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಭೀಮಲಾ ಹೇಮಲು (60) ಮೃತ ದುರ್ದೈವಿ. ನಿನ್ನೆ ಶುಕ್ರವಾರ ಸಂಜೆ ಭೀಮಲಾ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದಿದೆ. ಸ್ಥಳಕ್ಕೆ ಔರಾದ ತಾಲೂಕಿನ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗದಗದಲ್ಲಿ ವರುಣಾರ್ಭಟಕ್ಕೆ ಜಾನುವಾರು ಬಲಿ
ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಕೆಲೂರು ಗ್ರಾಮದಲ್ಲಿ ಗುಡುಗು ಸಿಡಿಲು ಸಹಿತ ಮಳೆಯಾಗಿದೆ. ಸಿಡಿಲು ಬಡಿದು ಎತ್ತು ಹಾಗೂ ಎಮ್ಮೆ ಮೃತಪಟ್ಟಿವೆ. ರೈತ ಶಂಕ್ರಪ್ಪ ಸೋಂಪುರ ಅವರಿಗೆ ಸೇರಿದ ಎತ್ತು ಅನ್ನು ಮನೆ ಬಳಿ ಕಟ್ಟಿದ್ದರು. ಈ ವೇಳೆ ಸಿಡಿಲು ಬಡಿದು ಎತ್ತು ಜೀವ ಬಿಟ್ಟಿತ್ತು.
ಮತ್ತೊಬ್ಬ ರೈತ ಹನುಮಪ್ಪ ಕೊಂಚಿಗೇರಿ ಎಂಬುವವರ ಎಮ್ಮೆಯೂ ಗ್ರಾಮದ ಹೊರವಲಯದಲ್ಲಿ ಸಿಡಿಲು ಬಡಿದು ಮೃತಪಟ್ಟಿದೆ. ಹೆತ್ತ ಮಕ್ಕಳಂತೆ ಜಾನುವಾರುಗಳನ್ನು ಜೋಪಾನ ಮಾಡಿದ್ದ ರೈತ ಕುಟುಂಬಗಳು ಕಣ್ಣೀರು ಹಾಕಿದರು. ಸ್ಥಳಕ್ಕೆ ಬಾರದ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ಹೊರಹಾಕಿದರು.
ಇದನ್ನೂ ಓದಿ: Boat Capsizes: ಭಾರೀ ಗಾಳಿ ಮಳೆಗೆ ಅರಬ್ಬೀ ಸಮುದ್ರದಲ್ಲಿ ಬೋಟ್ ಮುಳುಗಡೆ, ನಾಲ್ವರ ರಕ್ಷಣೆ; ಇಲ್ಲಿದೆ ವಿಡಿಯೋ
ಹಾಸನದಲ್ಲಿ ಮೂರು ಮನೆಗಳಿಗೆ ಹಾನಿ
ಹಾಸನ ಜಿಲ್ಲೆಯ ವಿವಿಧೆಡೆ ನಿನ್ನೆ ಶುಕ್ರವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಅಪಾರ ಪ್ರಮಾಣದ ಹಾನಿಯಾಗಿದೆ. ಗುಡುಗು, ಸಿಡಿಲು, ಬಿರುಗಾಳಿ ಸಹಿತ ಸುರಿದ ವರ್ಷಧಾರೆಗೆ ಮೂರು ಮನೆಗಳಿಗೆ ಹಾನಿಯಾಗಿದೆ. ಸಕಲೇಶಪುರ ತಾಲೂಕಿನ ಬಿರಡಹಳ್ಳಿ ಗ್ರಾಮದಲ್ಲಿ ಭಾರಿ ಗಾಳಿಗೆ ವಾಸದ ಮನೆಯ ಹಂಚುಗಳು ಹಾರಿ ಹೋಗಿದ್ದವು. ಶೀಟ್‌ಗಳು ಮನೆಯ ಒಳಗೆ ಮುರಿದು ಬಿದ್ದಿತ್ತು. ಮನೆಯ ಮೇಲೆ ಮರ ಬಿದ್ದು ಒಂದು ಮನೆ ಜಖಂಗೊಂಡಿತ್ತು.
ಗ್ರಾಮದ ಸಲೀಂ, ಚಂದ್ರು ಎಂಬುವವರಿಗೆ ಸೇರಿದ ಮನೆಗಳು ಹಾನಿಯಾಗಿದ್ದರೆ, ಜಾಕೋಬ್ ಪಿಂಟೊ ಎಂಬುವವರ ಮನೆಯ ಮೇಲೆ ಮರ ಬಿದ್ದು ಮನೆ ಸಂಪೂರ್ಣ ಜಖಂಗೊಂಡಿತ್ತು. ಮನೆಯಲ್ಲಿದ್ದರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರು. ಸ್ಥಳಕ್ಕೆ ಅಧಿಕಾರಿಗಳು ಆಗಮಿಸಿ ಪರಿಶೀಲಿಸುವಂತೆ ಒತ್ತಾಯಿಸಿದರು. ಮಳೆಯಿಂದ ಆಗಿರುವ ನಷ್ಟಕ್ಕೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದರು.
ಕೆಲವೆಡೆ ಬಾರಿ ಗಾಳಿಗೆ ಬೃಹತ್ ಗಾತ್ರದ ಮರ ಉರುಳಿ ಬಿದ್ದಿತ್ತು. ಜನ್ನಾಪುರ-ಹಲಸುಲಿಗೆ ರಸ್ತೆ ಮಧ್ಯೆ ಮರ ಬಿದ್ದು, ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದವು. ಇದರಿಂದಾಗಿ ಜನ್ನಾಪುರ, ಹಲಸುಲಿಗೆ, ಮಾಗಡಿ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿ, ರಾತ್ರಿಯಿಂದ ವಿದ್ಯುತ್ ಇಲ್ಲದೆ ಗ್ರಾಮಸ್ಥರ ಪರದಾಡಿದರು.
ಜಲಾವೃತಗೊಂಡ ಬ್ರಿಡ್ಜ್
ಗದಗನಲ್ಲಿ ವರುಣದೇವನ ಆರ್ಭಟ ಜೋರಾಗಿದೆ. ಗುಡುಗು, ಸಿಡಿಲು ಸಹಿತ ಭಾರೀ ಮಳೆಗೆ ಗದಗನಿಂದ ಬೆಟಗೇರಿಗೆ ಸಂಪರ್ಕಿಸುವ ಬಳ್ಳಾರಿ ಗೇಟ್ ಅಂಡರ್ ಬ್ರಿಡ್ಜ್ ಸಂಪೂರ್ಣ ಜಲಾವೃತಗೊಂಡಿದೆ. ಸುಮಾರು 8 ಅಡಿಗಳಷ್ಟು ನೀರು ನಿಂತಿದ್ದು, ಸಂಚಾರ ಅಸ್ತವ್ಯಸ್ತಗೊಂಡು ವಾಹನ ಸವಾರರು ಪರದಾಡಿದರು. ಇತ್ತ ಬೆಟಗೇರಿ ಹಾಗೂ ಗದಗ ನಗರ ಸಂಪರ್ಕಿಸಬೇಕಾದರೆ ಸುತ್ತು ಹಾಕಿಕೊಂಡು ಹೋಗುವ ಪರಿಸ್ಥಿತಿ ಸೃಷ್ಟಿಯಾಗಿದೆ. ರಸ್ತೆ ಬದಿ ಪಾರ್ಕ್ ಮಾಡಿದ್ದ ಮಿನಿ ಬಸ್ ಜಲಾವೃತವಾಗಿತ್ತು. ನೀರಿನಲ್ಲಿಯೇ ಬಸ್ ಚಲಾಯಿಸಿಕೊಂಡು ಬರಲಾಯಿತು.
ಮುರಿದು ಬಿದ್ದ ಸಿಗ್ನಲ್ ಕಂಬ
ಧಾರವಾಡದಲ್ಲಿ ಜೋರಾಗಿ ಬೀಸಿದ ಗಾಳಿಗೆ ಸಿಗ್ನಲ್ ಕಂಬ ಮುರಿದು ಬಿದ್ದಿತ್ತು. ಧಾರವಾಡದ ಯುಬಿ ಹಿಲ್ ಸರ್ಕಲ್‌ನಲ್ಲಿದ್ದ ಕಂಬದ ಕೆಳಭಾಗದಲ್ಲಿ ತುಕ್ಕು ಹಿಡಿದಿತ್ತು. ರಭಸವಾಗಿ ಬೀಸಿದ ಗಾಳಿಗೆ ರಸ್ತೆ ಮೇಲೆಯೇ ಕಂಬ ಬಿದ್ದಿತ್ತು. ಅದೃಷ್ಟವಶಾತ್ ವಾಹನ ಸವಾರರು ಪಾರಾಗಿದ್ದರು. ವಿದ್ಯಾಗಿರಿ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ