Site icon Vistara News

Rain News: ಬಿರುಗಾಳಿ ಸಹಿತ ಭಾರಿ ಮಳೆ; ಆಕಾಶದೆತ್ತರಕ್ಕೆ ಹಾರಿತು ಮನೆಗಳ ತಗಡು, ಮಳೆಯಲ್ಲೇ ಬೀಗರ ಊಟ

Rain News

ಬೆಂಗಳೂರು: ಬಿಸಿಲಿನಿಂದ ಕಂಗೆಟ್ಟ ಜನರಿಗೆ ಮಳೆಯು (Rain News) ಒಂದು ಕಡೆ ಸಂತಸವನ್ನು ಕೊಟ್ಟರೆ, ಮತ್ತೊಂದೆಡೆ ಸಂಕಷ್ಟಕ್ಕೆ ದೂಡುವಂತೆ ಮಾಡಿದೆ. ರಾಜ್ಯದ ಹಲವೆಡೆ ಶನಿವಾರ ಗುಡುಗು, ಸಿಡಿಲು ಸಹಿತ ಬಿರುಗಾಳಿ ಮಳೆ ಸುರಿಯುತ್ತಿದೆ.

ಹಾವೇರಿ ಜಿಲ್ಲೆಯ ಹಿರೆಕೇರೂರು ತಾಲೂಕಿನಲ್ಲಿ ಬಿರುಗಾಳಿ ಮಳೆಗೆ ಮನೆಗಳ ಚಾವಣಿಯ ತಗಡು ಹಾರಿ ಹೋಗಿವೆ. ಆಕಾಶದೆತ್ತರದಲ್ಲಿ ತೂರಾಡಿದ ತಗಡುಗಳ ದೃಶ್ಯವನ್ನು ಸ್ಥಳೀಯ ಯುವಕರು ಮೊಬೈಲ್‌ನಲ್ಲಿ ಸೆರೆಯಿಡಿದಿದ್ದಾರೆ.

ಮಳೆಯಲ್ಲೇ ಬೀಗರ ಊಟ ಸವಿದ ಸಂಬಂಧಿಕರು

ಚಿಕ್ಕಮಗಳೂರಲ್ಲಿ ಮೊದಲ ಮಳೆಗೆ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಯಿತು. ಮಳೆಯ ನಡುವೆಯೂ ಬೀಗರ ಊಟ ಸವಿದರು. ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಕೂವೆ ಗ್ರಾ.ಪಂ ಬೆರಗೂರು ಗ್ರಾಮದಲ್ಲಿ ಘಟನೆ ನಡೆದಿದೆ. ಎರಡು ಗಂಟೆಯಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಮಳೆಯನ್ನೇ ಸಂಭ್ರಮಿಸುತ್ತಾ ಬಾಡೂಟ ಸವಿದಿದ್ದಾರೆ.

ಚಿಕ್ಕಮಗಳೂರಿನಲ್ಲಿ ಗಾಳಿಯ ಜತೆಗೆ ಭಾರಿ ಮಳೆಯಾಗುತ್ತಿದೆ. ಚಿಕ್ಕಮಗಳೂರು ತಾಲೂಕಿನ ಶಿರವಾಸೆ, ಮುತ್ತೋಡಿ ಭಾಗದಲ್ಲಿ ಕಳೆದೊಂದು ಗಂಟೆಯಿಂದ ಮಳೆಯ ಅಬ್ಬರ ಜೋರಾಗಿದೆ. ಮಳೆ ಇಲ್ಲದೆ ಒಣಗುತ್ತಿದ್ದ ಕಾಫಿ ಬೆಳೆಗೆ ಮಳೆಯು ಆಸರೆಯಾಗಿದೆ. ಕಳಸ ಹಾಗೂ ಕೊಪ್ಪ ಭಾಗದಲ್ಲೂ ಮಳೆ ಶುರುವಾಗಿದ್ದು, ಕಾಫಿ ಬೆಳೆಗಾರರು ಹಾಗೂ ರೈತರಲ್ಲಿ ಸಂತಸ ಮೂಡಿದೆ. ಭಾರಿ ಮಳೆಯಿಂದಾಗಿ ಸಿರವಾಸೆ ಸುತ್ತಮುತ್ತಲ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

ಇದನ್ನೂ ಓದಿ: Rain News: ವಿಜಯಪುರದಲ್ಲಿ ಸಿಡಿಲಿಗೆ ಮತ್ತೊಂದು ಬಲಿ; ಬೀದರ್‌ನಲ್ಲಿ ಮಳೆಗೆ ಧರೆಗುರುಳಿದ ಬೃಹತ್‌ ಮರ

ಇನ್ನೂ ಕೊಡಗು ಜಿಲ್ಲೆಯ ಹಲವೆಡೆ ಮಳೆಯ ಸಿಂಚನವಾಗಿದೆ. ಮಳೆ ಬಾರದೆ ಕಂಗೆಟ್ಟಿದ್ದ ಬೆಳೆಗಾರರು, ಕೃಷಿಕರು, ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ. ಮಡಿಕೇರಿ ಹಾಗೂ ವಿರಾಜಪೇಟೆ ತಾಲೂಕಿನ ಕೆಲವೆಡೆ ಮಳೆಯಾಗಿದೆ. ಕಾಫಿ, ಕಾಳುಮೆಣಸು ಬೆಳೆಗೆ ಅಗತ್ಯವಾಗಿದ್ದ ಮಳೆಯಿಂದ ಸಂತಸಗೊಂಡಿದ್ದಾರೆ.

Rain News

ಇನ್ನೂ ಯಾದಗಿರಿ ಜಿಲ್ಲೆಯ ಗುರುಮಠಕಲ್ ಪಟ್ಟಣದಲ್ಲೂ ಬಿರುಗಾಳಿ ಸಹಿತ ವ್ಯಾಪಕ ಮಳೆಯಾಗಿದೆ. ಬಿಸಿಲಿಗೆ ತತ್ತರಿದ ಜನರಿಗೆ ಮಳೆರಾಯ ತಂಪೆರೆದಿದ್ದಾನೆ. ಕಾದ ಕಾವಲಿಯಾಗಿದ್ದ ಕಾವೇರಿ ತವರಿಗೆ ವರುಣ ದರ್ಶನ ಕೊಟ್ಟಿದ್ದಾನೆ. ಕೊಪ್ಪಳ‌ ಜಿಲ್ಲೆಯಲ್ಲೂ ಗಾಳಿ,ಗುಡುಗು, ಸಿಡಿಲು ಸಹಿತ‌ ಮಳೆಯಾಗಿದೆ. ಬಿಸಿಲಿನ ಝಳಕ್ಕೆ ಹೈರಾಣಾಗಿದ್ದ ಜನರು ಕೂಲ್‌ ಆಗಿದ್ದಾರೆ. ಗದಗ-ಬೆಟಗೇರಿ ಅವಳಿ ನಗರದಲ್ಲೂ ಗುಡುಗು, ಗಾಳಿ ಸಹಿತ ಮಳೆಯಾಗಿದೆ. ಕೆಂಡದಂಥ ಬಿಸಿಲಿಗೆ ಬಸವಳಿದ‌ ಜನ‌ ಕೂಲ್ ಕೂಲ್ ಆಗಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version